ಬಿ.ಎಂ.ಶ್ರೀ. ಪ್ರತಿಷ್ಠಾನ ಕೊಡಮಾಡುವ ‘ಶಾ.ಬಾಲುರಾವ್ಅನುವಾದ ಪ್ರಶಸ್ತಿ’ಗೆ ನಟರಾಜ್ ಹೊನ್ನವಳ್ಳಿ ಅವರ ‘ಆ ಲಯ ಈ ಲಯ’ ನಾಟಕ ಆಯ್ಕೆಯಾಗಿದೆ ಎಂದು ಪ್ರತಿಷ್ಠಾನದ ಗೌರವಾಧ್ಯಕ್ಷ ಡಾ. ಶಾಂತರಾಜು ತಿಳಿಸಿದ್ದಾರೆ.
ಬಿ.ಎಂ.ಶ್ರೀ ಪ್ರತಿಷ್ಠಾನ ನೀಡುವ ಪ್ರಶಸ್ತಿ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, “ಬಿ.ಎಂ.ಶ್ರೀ. ಪ್ರತಿಷ್ಠಾನದಿಂದ ಅತ್ಯುತ್ತಮ ಅನುವಾದಿತ ಕೃತಿಗಳಿಗೆ ‘ಶಾ.ಬಾಲುರಾವ್ ಅನುವಾದ ಪ್ರಶಸ್ತಿ’ ಮತ್ತು ಯುವ ಲೇಖಕರ ಅತ್ಯುತ್ತಮ ಕೃತಿಗೆ ‘ಶಾ.ಬಾಲುರಾವ್ ಯುವ ಬರಹಗಾರ’ ಪ್ರಶಸ್ತಿಯನ್ನು ಕೊಟ್ಟು ಗೌರವಿಸಲಾಗುತ್ತದೆ” ಎಂದು ತಿಳಿಸಿದ್ದಾರೆ.
“ಪ್ರತಿಷ್ಠಾನದಿಂದ 2024ರ ಶಾ.ಬಾಲುರಾವ್ಅನುವಾದ ಪ್ರಶಸ್ತಿಗೆ ನಟರಾಜ್ ಹೊನ್ನವಳ್ಳಿ ಅವರನ್ನು ಮತ್ತು ಶಾ.ಬಾಲುರಾವ್ ಯುವ ಬರಹಗಾರ ಪ್ರಶಸ್ತಿಗೆ ಆರ್. ದಿಲೀಪ್ ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ. ದಿಲೀಪ್ ಕುಮಾರ್ ಅವರ ‘ಶಬ್ದ ಸೋಪಾನ’ ಕೃತಿಗೆ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿಗಳು ತಲಾ 25,000 ರೂ. ನಗದು ಮತ್ತು ಸ್ಮರಣಿಕೆಯನ್ನು ಒಳಗೊಂಡಿರುತ್ತವೆ” ಎಂದು ಮಾಹಿತಿ ನೀಡಿದ್ದಾರೆ.
“ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಅಕ್ಟೋಬರ್ 26ರಂದು ಬೆಂಗಳೂರಿನಲ್ಲಿರುವ ಬಿ.ಎಂ.ಶ್ರೀ ಪ್ರತಿಷ್ಠಾನ ಸಭಾಂಗಣದಲ್ಲಿ ನಡೆಯಲಿದೆ. ನಿವೃತ್ತ ಪ್ರಾಂಶುಪಾಲರು ಹಾಗೂ ಅನುವಾದಕರು ಆದ ವಿ. ಕೃಷ್ಣಮೂರ್ತಿರಾವ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಡಾ. ಬಸವರಾಜ ಕಲ್ಗುಡಿ, ಕಮಲಿನಿ ಶಾ. ಬಾಲುರಾವ್ ಅವರು ಭಾಗಿಯಾಗಲಿದ್ದಾರೆ” ಎಂದು ತಿಳಿಸಿದ್ದಾರೆ.
“ಅನುವಾದ ಪ್ರಶಸ್ತಿಯ ಆಯ್ಕೆ ಸಮಿತಿಯಲ್ಲಿ ಡಾ. ಡಾ.ಬಸವರಾಜ ಕಲ್ಗುಡಿ, ಪ್ರೊ. ಕೃಷ್ಣಮೂರ್ತಿರಾವ್ ವಿ ಹಾಗೂ ಯುವ ಬರಹಗಾರ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಡಾ.ಪದ್ಮನಿ ನಾಗರಾಜು ಹಾಗೂ ಡಾ. ಡಿ. ಭರತ್ ಇದ್ದರು” ಎಂದು ಹೇಳಿದ್ದಾರೆ.




