ಸರ್ಕಾರದ ಭರವಸೆಗಳನ್ನು ನಂಬಿ ಮುಖ್ಯವಾಹಿನಿಗೆ ಬಂದ 7 ಮಂದಿ ನಕ್ಸಲ್ ಕಾರ್ಯಕರ್ತರು ಇನ್ನೂ ಜೈಲಿನಲ್ಲಿಯೇ ಇದ್ದಾರೆ. ಅವರೆಲ್ಲರೂ ತೀವ್ರ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಜೈಲಿನಲ್ಲಿ ಕಾಣುವುದೇ ದುಃಖಕರವಾಗಿದೆ. ನಿಮ್ಮನ್ನು ನಂಬಿ ಬಂದಿರುವ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ‘ಶಾಂತಿಗಾಗಿ ನಾಗರಿಕ ವೇದಿಕೆ’ ಮುಖಂಡರು ಒತ್ತಾಯಿಸಿದ್ದಾರೆ.
ಗುರುವಾರ, ಬೆಂಗಳೂರಿನ ಪ್ರಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ವೇದಿಕೆ ಮುಖಂಡರು, “ಮುಖ್ಯವಾಹಿನಿಗೆ ಬರುವ ನಕ್ಸಲ್ ಕಾರ್ಯಕರ್ತರ ಮೇಲಿನ ಮೊಕದ್ದಮೆಗಳನ್ನು ಹಿಂಪಡೆದು, ಪುನರ್ವಸತಿ ಒದಗಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು. ಅದರಂದ 7 ಮಂದಿ ನಕ್ಸಲ್ ಕಾರ್ಯಕರ್ತರು ಮುಖ್ಯವಾಹಿನಿಗೆ ಬಂದಿದ್ದಾರೆ. ಕರ್ನಾಟಕ, ಕೇರಳ ಹಾಗೂ ತಮಿಳುನಾಡು ನಕ್ಸಲ್ ಹೋರಾಟ ಮುಕ್ತಗೊಂಡು ನಾಳೆಗೆ (ಜ.9) ಒಂದು ವರ್ಷವಾಗಲಿದೆ. ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಈ ಮಹತ್ಕಾರ್ಯ ನಡೆದಿದೆ. ಈ ಕಾರ್ಯವನ್ನು ಸಾಕಾರಗೊಳಿಸಲು ‘ಶಾಂತಿಗಾಗಿ ನಾಗರಿಕ ವೇದಿಕೆ’ ಶ್ರಮಿಸಿತು. ಒಂದು ವರ್ಷದ ಹಿಂದೆ ಈ ದಿನವು (ಜ.8) ನಮ್ಮ ಮನಸ್ಸು ಸಂತೋಷ ಹಾಗೂ ಹೆಮ್ಮೆಯಿಂದ ಕೂಡಿತ್ತು. ಆದರೆ, ಒಂದು ವರ್ಷದ ನಂತರದ ಇಂದು ನಮ್ಮ ಮನಸ್ಸಿನ ತುಂಬ ನೋವು, ದುಗುಡ ಹಾಗೂ ಪಾಪ ಪ್ರಜ್ಞೆ ತುಂಬಿಕೊಂಡಿದೆ” ಎಂದು ಹೇಳಿದ್ದಾರೆ.
“2025 ಜನವರಿ 8 ರಂದು ನಿಮ್ಮ (ಸಿದ್ದರಾಮಯ್ಯ) ಕಚೇರಿಯಲ್ಲಿ, ನೂರಾರು ಮೀಡಿಯಾ ಕ್ಯಾಮರಾಗಳ ಎದುರು, ಅವರನ್ನು ಬರಮಾಡಿಕೊಳ್ಳುತ್ತಾ ತಾವು ಆಡಿದ ಮಾತು – “ಇಂದು ಅವರು ಕಾಡಿನಿಂದ ಜೈಲಿಗೆ ಬಂದಿದ್ದಾರೆ, ಆದಷ್ಟು ಬೇಗ ಜೈಲಿಂದ ನಾಡಿಗೆ ಬರುವಂತೆ ಮಾಡುವ ಜವಬ್ದಾರಿ ನಮ್ಮ ಸರ್ಕಾರ ಮೇಲಿದೆ. ಅದನ್ನು ನಿರ್ವಹಿಸುತ್ತೇವೆ”. ಆದರೆ ತಾವು ಕೊಟ್ಟ ಈ ಆಶ್ವಾಸನೆ ಇನ್ನೂ ಆಶ್ವಾಸನೆಯಾಗಷ್ಟೇ ಉಳಿದಿದೆ. ಈ ಸಂದರ್ಭದಲ್ಲಿ ಕೆಲವು ಕಠೋರ ವಾಸ್ತವಗಳನ್ನು ತಮ್ಮ ಗಮನಕ್ಕೆ ತರಲು ಬಯಸುತ್ತಿದ್ದೇವೆ” ಎಂದು ಶಾಂತಿಗಾಗಿ ನಾಗರೀಕ ವೇದಿಕೆಯ ಮುಖ್ಯಸ್ಥರು ಮುಖ್ಯವಾಹಿನಿಗೆ ಬಂದ ನಕ್ಸಲ್ ಕಾರ್ಯಕರ್ತರು ಎದುರಿಸುತ್ತಿರುವ ಸವಾಲುಗಳನ್ನು ವಿವರಿಸಿದ್ದಾರೆ.
“ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು [ಲತಾ, ಸುಂದರಿ, ವನಜಾಕ್ಷಿ ರಮೇಶ್, ವಸಂತ್, ರವೀಂದ್ರ] ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ. ಅವರ ಕಾನೂನು ಪ್ರಕ್ರಿಯೆ ಒಂದು ಇಂಚು ಸಹ ಮುಂದಕ್ಕೆ ಹೋಗಿಲ್ಲ. ತ್ವರಿತ ವಿಚಾರಣೆಗಾಗಿ ಸರ್ಕಾರ ಪ್ರಸ್ತಾಪಿಸಿದ್ದ ವಿಶೇಷ ನ್ಯಾಯಲಯ ಕಾರ್ಯರೂಪಕ್ಕೆ ಬಂದಿಲ್ಲ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
“ಇದಕ್ಕೂ ಮೊದಲು ಮುಖ್ಯವಾಹಿನಿಗೆ ಬಂದಿದ್ದ ಕನ್ಯಾಕುಮಾರಿ ಕಳೆದ 9 ವರ್ಷಗಳಿಂದ ಜೈಲಿನಲ್ಲೇ ಇದ್ದಾರೆ. ಆಕೆಯ ಮಗು ಐದು ವರ್ಷ ಜೈಲಿನಲ್ಲೇ ಇತ್ತು, ಈಗ ಹೊರಗಿದೆ. ಕಂಬಿಗಳ ಹಿಂದಿನಿಂದಲೇ ಅಮ್ಮನನ್ನು ಆಗಾಗ ಕಂಡು ಬರುತ್ತಿದೆ. ಇವರೆಲ್ಲರ ಮೇಲೆ ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲೂ ಅನೇಕ ಕೇಸುಗಳಿವೆ. ನೀವು ಅಲ್ಲಿನ ಮುಖ್ಯಮಂತ್ರಿಗಳಿಗೆ ಒಂದು ಪತ್ರ ಬರೆದಿದ್ದೀರಿ. ಅದು ಅಲ್ಲಿಗೇ ಮುಗಿಯಿತು. ಅಲ್ಲಿಂದಲೂ ಯಾವುದೇ ರೀತಿಯ ನೆರವು ಸರ್ಕಾರವನ್ನು ಮತ್ತು ನಮ್ಮನ್ನು ನಂಬಿ ಬಂದ ಈ ಆದಿವಾಸಿ, ದಲಿತ ಕಾರ್ಯಕರ್ತರುಗಳಿಗೆ ಸಿಕ್ಕಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಈ ಹಿಂದೆ ಮುಖ್ಯವಾಹಿನಿಗೆ ಬಂದಿದ್ದ ಪದ್ಮನಾಭ, ರೇಣುಕಾ, ರಿಜ್ವಾನಾ, ಚೆನ್ನಮ್ಮ, ಜ್ಞಾನದೇವ, ಪರಶುರಾಮ ಎಲ್ಲರೂ ಕಡುಕಷ್ಟಗಳ ನಡುವೆ ಬದುಕು ನೂಕುತ್ತಿದ್ದಾರೆ. ಪರಿಹಾರವಾಗಿ ಬಂದ ಹಣ ಮಾಡಿಕೊಂಡಿದ್ದ ಸಾಲ ಮತ್ತು ಕೋರ್ಟು ಖರ್ಚುಗಳಿಗೇ ಸಾಲಲಿಲ್ಲ. ಪುನರ್ವಸತಿ ಸಂಬಂಧಿತ [ಸ್ವಯಂ ಉದ್ಯೋಗಕ್ಕೆ ನೆರವು ಮತ್ತು ವಸತಿ] ನಿರ್ಣಯಗಳು ಕಾಗದದ ಮೇಲಷ್ಟೇ ಉಳಿದಿವೆ” ಎಂದು ವಿವರಿಸಿದ್ದಾರೆ.
“ನಕ್ಸಲರು ಮುಖ್ಯವಾಹಿನಿಗೆ ಬರುವಾಗ ಮಲೆನಾಡಿನ ಬಡಜನರ ಬದುಕನ್ನು ಬಾಧಿಸುತ್ತಿರುವ 18 ಸಮಸ್ಯೆಗಳನ್ನು ತಮ್ಮ ಗಮನಕ್ಕೆ ತಂದು ಅವನ್ನು ಸಹನೀಯಗೊಳಿಸುವ ಮಟ್ಟದ ಕ್ರಮಗಳನ್ನಾದರೂ ತೆಗೆದುಕೊಳ್ಳುವಂತೆ ತಮಗೆ ಮನವಿ ಮಾಡಿದ್ದರು. ಈ ಸಮಸ್ಯೆಗಳ ಅಧ್ಯಯನ ಮತ್ತು ಯೋಜಿತ ಪರಿಹಾರ ಕ್ರಮಗಳನ್ನು ರೂಪಿಸಲು ಕಳೆದ ಬಜೆಟ್ಟಿನಲ್ಲಿ ತಾವು 10 ಕೋಟಿ ಹಣವನ್ನು ಎತ್ತಿಟ್ಟಿದ್ದೀರಿ. ಆದರೆ ಆ ಹಣ ಮೂಲ ಉದ್ದೇಶದ ಜೊತೆ ಸಂಬಂಧವನ್ನೇ ಇಟ್ಟುಕೊಳ್ಳದೆ ಖರ್ಚಾಗಿದೆ. ಇದಕ್ಕಾಗಿ ವಿಶೇಷ ಅಧಿಕಾರಿಯನ್ನು ನೇಮಿಸಬೇಕು ಎಂದು ಆಗಿದ್ದ ತೀರ್ಮಾನವೂ ಜಾರಿಯಾಗಿಲ್ಲ. ನಕ್ಸಲೀಯರನ್ನು ಮನವೊಲಿಸಿ ಮುಖ್ಯವಾಹಿನಿಗೆ ತರುವುದರಲ್ಲಿ ಕರ್ನಾಟಕ ಮೇಲ್ಪಂಕ್ತಿ ಹಾಕಿಕೊಟ್ಟಿತು. ಆದರೆ ಕಾನೂನಿನ ನೆರವು ನೀಡುವುದರಲ್ಲಿ ಹಾಗೂ ಬದುಕು ಕಟ್ಟಿ ಕೊಡುವುದರಲ್ಲಿ ಸಂಪೂರ್ಣವಾಗಿ ಸೋತಿದೆ ಎಂದೇ ಹೇಳಬೇಕು” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
“ಇಂದು ಉಪವಾಸ ಸತ್ಯಾಗ್ರಹ ನಡೆಸಬೇಕು ಎಂದುಕೊಂಡಿದ್ದೆವು ಆದರೂ ಕೊನೆ ಪ್ರಯತ್ನವೆಂದು ತಮ್ಮಲ್ಲಿ ಈ ಒತ್ತಾಯಪೂರ್ವಕ ಮನವಿಯನ್ನು ಮಾಡುತ್ತಿದ್ದೇವೆ” ಎಂದು ಹೇಳಿರುವ ಮುಖಂಡರು ಹಲವು ಹಕ್ಕೊತ್ತಾಯಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ.
- ಜೈಲಲ್ಲಿರುವವರನ್ನು ಇನ್ನೂ ಕಾಯಿಸುವುದು, ಮತ್ತೆ ಕೋರ್ಟಿಗೆ ಅಲೆಸುವುದು ಸರಿಯಲ್ಲ. ಹಾಗಾಗಿ ಛತ್ತೀಸ್ ಘಡ ಸರ್ಕಾರದ ಮಾದರಿಯಲ್ಲಿ ಅವರ ಮೇಲಿನ ಎಲ್ಲಾ ಕೇಸುಗಳನ್ನು ಹಿಂಪಡೆಯಲು ಸರ್ಕಾರ ತೀರ್ಮಾನ ತೆಗೆದುಕೊಳ್ಳಬೇಕು.
- ಒಂಭತ್ತು ವರ್ಷದಿಂದ ಜೈಲಲ್ಲಿರುವ ಕನ್ಯಾಕುಮಾರಿಯ ಬಿಡುಗಡೆಗೆ ಆಧ್ಯತೆಯ ಮೇರೆಗೆ ಕ್ರಮ ತೆಗೆದುಕೊಳ್ಳಬೇಕು.
- ಹೊರಗಿರುವ ಎಲ್ಲಾ ಮಾಜಿ ನಕ್ಸಲೀಯರ ಪುನರ್ವಸತಿಗೆ ಸಂಬಂಧಿಸಿದ ತೀರ್ಮಾನಗಳು ಕೂಡಲೇ ಜಾರಿಯಾಗುವಂತೆ ತಾವು ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು.
- ನಕ್ಸಲ್ ಪ್ರದೇಶದ ಅಭಿವೃದ್ಧಿಗಾಗಿ ಮಂಜೂರಾಗಿರುವ ಹಣವನ್ನು ಮೂಲ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು ಜಾರಿಯಾಗುವಂತೆ ಮಾಡಲು ವಿಶೇಷ ಅಧಿಕಾರಿಯನ್ನು ನಿಯೋಜಿಸಿ ಸದ್ಬಳಕೆ ಮಾಡುವಂತೆ ಆದೇಶಿಸಬೇಕು.
ಪತ್ರಿಕಾಗೋಷ್ಠಿಯಲ್ಲಿ ಶಾಂತಿಗಾಗಿ ನಾಗರೀಕ ವೇದಿಕೆಯ ನಗರಗೆರೆ ರಮೇಶ್, ವಿ.ಎಸ್. ಶ್ರೀಧರ್, ತಾರಾ ರಾವ್, ಬಿ.ಟಿ. ಲಲಿತಾ ನಾಯ್, ನೂರ್ ಶ್ರೀಧರ್ ಹಾಗೂ ವೀರಸಂಗಯ್ಯ ಉಪಸ್ಥಿತರಿದ್ದರು.




