2025ರಲ್ಲಿ ಯುಜಿ ನೀಟ್ ಪರೀಕ್ಷೆ ಬರೆದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆನ್‌ಲೈನ್ ಕೌನ್ಸಿಲಿಂಗ್ ಮೂಲಕ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ (ಆಯುರ್ವೇದ, ಯುನಾನಿ ಮತ್ತು ಹೋಮಿಯೋಪಥಿ)ನ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಇಚ್ಚಿಸುವ ಅಭ್ಯರ್ಥಿಗಳಿಗೆ ಪ್ರಾಧಿಕಾರವು ನಿನ್ನೆ(ಜುಲೈ 5) ಅಧಿಸೂಚನೆಯೊಂದನ್ನು ಪ್ರಕಟಿಸಿದೆ.
ಈಗಾಗಲೇ ಯುಜಿಸಿಇಟಿ 2025 ಪರೀಕ್ಷೆ ಬರೆದು ಅಥವಾ ನೋಂದಣಿ ಮಾಡಿ, ದಾಖಲೆಗಳ ಪರಿಶೀಲನಾ ಚೀಟಿ ಡೌನ್‌ಲೋಡ್ ಮಾಡಿರುವ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿರುವ ‘ನೀಟ್ ರೋಲ್ ನಂಬರ್ ದಾಖಲಾತಿ’ ಲಿಂಕ್ ಬಳಸಿ, ಯುಜಿ ನೀಟ್ ರೋಲ್ ಸಂಖ್ಯೆಯನ್ನು ನಮೂದಿಸಿ, ಯುಜಿ ನೀಟ್ ಕೌನ್ಸಿಲಿಂಗ್‌ಗೆ ನೋಂದಣಿ ಮಾಡಿಕೊಳ್ಳಬಹುದು. ನೋಂದಣಿ ಪ್ರಕ್ರಿಯೆಯು ಈಗಾಗಲೇ ಆರಂಭಗೊಂಡಿದ್ದು, ಜುಲೈ 8ರ ಬೆಳಿಗ್ಗೆ 11.00ವರೆಗೆ ನೋಂದಣಿಗೆ ಅವಕಾಶವಿದೆ.
ಇದನ್ನು ಓದಿದ್ದೀರಾ? ನೀಟ್-ಯುಜಿ 2024 | ವಿವಾದ ನಡುವೆಯೇ ಆಗಸ್ಟ್ 14ರಿಂದ ಕೌನ್ಸೆಲಿಂಗ್
ಯುಜಿಸಿಇಟಿ-2025ಕ್ಕೆ ಈಗಾಗಲೇ ನೋಂದಣಿ ಮಾಡಿರುವ ಅರ್ಹ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ನಿಗದಿತ ಲಿಂಕ್‌ನಲ್ಲಿ ನೀಟ್ ರೋಲ್ ಸಂಖ್ಯೆಯನ್ನು ನಮೂದಿಸಿದ ನಂತರ ಅರ್ಜಿಯನ್ನು ಡೌನ್‌ಲೋಡ್ ಮಾಡಿ, ಮುದ್ರಿತವಾಗಿರುವ ನೀಟ್ ರೋಲ್ ಸಂಖ್ಯೆಯನ್ನು ಪರಿಶೀಲಿಸಿಕೊಳ್ಳಬೇಕು. ಬಳಿಕ ಯುಜಿ ನೀಟ್ ವೆರಿಫಿಕೇಶನ್ ಸ್ಲಿಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಈಗಾಗಲೇ ಆನ್‌ಲೈನ್ ಮುಖಾಂತರ ಪರಿಶೀಲನೆ ಮಾಡಿರುವ ಹಿನ್ನಲೆಯಲ್ಲಿ ಯುಜಿ ನೀಟ್‌ಗೆ ಪ್ರತ್ಯೇಕ ದಾಖಲೆಗಳ ಪರಿಶೀಲನೆ ಇರುವುದಿಲ್ಲ ಹಾಗೂ ಹೊಸದಾಗಿ ಕ್ಲೇಮ್ ಮಾಡಲು ಅವಕಾಶವಿರುವುದಿಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.
ಎನ್‌ಆರ್‌ಐ ವಾರ್ಡ್ ಅಭ್ಯರ್ಥಿಗಳಿಗೆ ಸೂಚನೆ:
ಯುಜಿ ಸಿಇಟಿ-2025ರ ಅರ್ಜಿಯಲ್ಲಿ ಎನ್‌ಆರ್‌ಐ ವಾರ್ಡ್ ಕ್ಲೇಮ್ಸ್ ಇರುವ ಎಲ್ಲಾ ಅಭ್ಯರ್ಥಿಗಳು, ಪ್ರಾಧಿಕಾರದ ವೆಬ್ಸೈಟ್‌ನ ನಿಗದಿತ ಲಿಂಕ್ ಬಳಸಿ, ನೀಟ್ ರೋಲ್ ನಂಬರ್ ನಮೂದಿಸಿದ ನಂತರ ಕ್ಲೇಮ್‌ಗೆ ಸಂಬಂಧಿಸಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಮಲ್ಲೇಶ್ವರಂ, ಬೆಂಗಳೂರು ಇಲ್ಲಿ ಆಫ್‌ಲೈನ್ ವೆರಿಫಿಕೇಶನ್‌ಗೆ ಎಲ್ಲಾ ಮೂಲ ದಾಖಲೆಗಳೊಂದಿಗೆ(ಎರಡು ಸೆಟ್ ಜೆರಾಕ್ಸ್ ಪ್ರತಿಗಳೊಂದಿಗೆ) ದಾಖಲಾತಿ ಪರಿಶೀಲನೆಗೆ ಖುದ್ದಾಗಿ ಹಾಜರಾಗಬೇಕು. ಎನ್‌ಆರ್‌ಐ ವಾರ್ಡ್ ದಾಖಲೆಗಳ ಪರಿಶೀಲನೆಯು ಜುಲೈ 8ರಿಂದ ಜುಲೈ 10ರ ತನಕ ನಡೆಯಲಿರುವುದು.
#UGNEET-25 ಈಗಾಗಲೇ ಅರ್ಜಿ ಸಲ್ಲಿಸಿರುವ ಹಾಗೂ ನೀಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆದಿರುವ ಅಭ್ಯರ್ಥಿಗಳು ತಮ್ಮ ನೀಟ್ ರೋಲ್ ನಂಬರ್ ಅನ್ನು ದಾಖಲಿಸಲು #KEA ತನ್ನ ವೆಬ್ ಸೈಟ್ ನಲ್ಲಿ ಲಿಂಕ್ ಬಿಡುಗಡೆ ಮಾಡಿದೆ.
— ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA (@KEA_karnataka) July 5, 2025
ಜು.8ರಂದು ಬೆಳಿಗ್ಗೆ 11ರವರೆಗೆ ರೋಲ್ ನಂಬರ್ ದಾಖಲಿಸಲು ಅವಕಾಶ ಇರುತ್ತದೆ. ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಕೋರ್ಸ್… pic.twitter.com/UROPMKgKGZ
ಸೈಂಟ್ ಜಾನ್ಸ್ ಮೆಡಿಕಲ್ ಕಾಲೇಜು ಮೀಸಲಾತಿ ಪರಿಶೀಲನೆ:
ಸೈಂಟ್ ಜಾನ್ಸ್ ಮೆಡಿಕಲ್ ಕಾಲೇಜಿನಲ್ಲಿ ಕ್ಯಾಟಗರಿ 2ರಿಂದ 8 ರ ತನಕ ಕ್ಲೇಮ್ ಮಾಡಿ, ಮೀಸಲಾತಿ ಬಯಸುವ ಯುಜಿ ನೀಟ್ ಅಭ್ಯರ್ಥಿಗಳು ದಾಖಲೆಗಳ ಪರಿಶೀಲನೆಗಾಗಿ ಮೆಡಿಕಲ್ ಕಾಲೇಜು ಕೌನ್ಸಿಲ್ ಕೊಠಡಿ, ನೆಲ ಅಂತಸ್ತು, ಸೈಂಟ್ ಜಾನ್ಸ್ ಮೆಡಿಕಲ್ ಕಾಲೇಜು, ಕೋರಮಂಗಲ, ಬೆಂಗಳೂರು ಇಲ್ಲಿಗೆ ಜುಲೈ 9 ಅಥವಾ 10ರಂದು ಎಲ್ಲ ಅಗತ್ಯ ಮೂಲ ದಾಖಲೆಗಳೊಂದಿಗೆ ಖುದ್ದಾಗಿ ಹಾಜರಾಗಬೇಕು. ಕ್ಯಾಟಗರಿ 1 ಮತ್ತು 9 ಅಭ್ಯರ್ಥಿಗಳು ಪರಿಶೀಲನೆಗೆ ಹಾಜರಾಗಬೇಕಾಗಿಲ್ಲ.
ಹೊಸದಾಗಿ ನೋಂದಣಿ ಮಾಡಿಸಿಕೊಳ್ಳಲು ಅವಕಾಶ:
ಯುಜಿ ಸಿಇಟಿ ನೋಂದಣಿ ಮಾಡದಿರುವ ಯುಜಿ ನೀಟ್ ಅಭ್ಯರ್ಥಿಗಳು ಹೊಸದಾಗಿ ಅರ್ಜಿ ಸಲ್ಲಿಸಬೇಕು. ಹೊಸದಾಗಿ ನೋಂದಣಿ ಮಾಡುವ ವಿಧಾನ, ಯಾವ ಅಭ್ಯರ್ಥಿಗಳು ದಾಖಲೆಗಳ ಪರಿಶೀಲನೆಗೆ ಹಾಜರಾಗಬೇಕು ಮತ್ತು ಇತರೆ ವಿವರವಾದ ಸೂಚನೆಗಳನ್ನು ಸದ್ಯದಲ್ಲಿಯೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ. ಯುಜಿ ಸಿಇಟಿ ಮತ್ತು ಯುಜಿ ನೀಟ್ ವಿದ್ಯಾರ್ಥಿಗಳು ಪ್ರತಿ ಕ್ಷಣದ ಮಾಹಿತಿಗಳಿಗಾಗಿ ಪ್ರಾಧಿಕಾರದ ವೆಬ್‌ಸೈಟ್ ಅನ್ನು ಕನಿಷ್ಟ ದಿನಕ್ಕೆರಡು ಬಾರಿ ನೋಡಬಹುದು.





