ವಿಧವಾ ಮಹಿಳಾ ಕಾರ್ಮಿಕರಿಗಾಗಿ ಹೊಸ ಮಸೂದೆ; ದೇಶದಲ್ಲೇ ರಾಜ್ಯ ಸರ್ಕಾರದ ಮೊದಲ ಹೆಜ್ಜೆ

Date:

ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ನಿರ್ಗತಿಕ ವಿಧವಾ ಮಹಿಳಾ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಕರ್ನಾಟಕ ಕಾರ್ಮಿಕ ಇಲಾಖೆ ಹೊಸ ಕಾನೂನು ರೂಪಿಸಲು ಮುಂದಾಗಿದೆ.

ಇದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ‘ಕರ್ನಾಟಕ ನಿರ್ಗತಿಕ ವಿಧವಾ ಮಹಿಳಾ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) ಮಸೂದೆ–2026’ ಎಂಬ ಕರಡನ್ನು ಇಲಾಖೆ ಸಿದ್ಧಪಡಿಸಿದೆ.

ಮಸೂದೆ ಪ್ರಕಾರ, ಪತಿ ನಿಧನರಾಗಿರುವ, ಈಗಾಗಲೇ ಕೆಲಸದಲ್ಲಿ ತೊಡಗಿರುವ ಅಥವಾ ಕೆಲಸ ಮಾಡಲು ಸಮರ್ಥವಾಗಿರುವ ಹಾಗೂ ಜೀವನ ನಿರ್ವಹಣೆಗೆ ಸಾಕಷ್ಟು ಆದಾಯವಿಲ್ಲದೆ ಬಡತನ, ನಿರ್ಲಕ್ಷ್ಯಕ್ಕೊಳಗಾದ, ಸೂರಿಲ್ಲದ ಅಥವಾ ಆರ್ಥಿಕ ಸಂಕಷ್ಟದಲ್ಲಿರುವ ಮಹಿಳೆಯನ್ನು ‘ನಿರ್ಗತಿಕ ವಿಧವಾ ಮಹಿಳಾ ಕಾರ್ಮಿಕರು’ ಎಂದು ವ್ಯಾಖ್ಯಾನಿಸಲಾಗಿದ್ದು, ನಿರ್ಗತಿಕರೆಂದು ಪರಿಗಣಿಸಲು ಯಾವುದೇ ನಿರ್ದಿಷ್ಟ ಆದಾಯ ಮಿತಿ ನಿಗದಿಪಡಿಸಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಪ್ರಸ್ತುತ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ವಿಧವೆಯರಿಗೆ ಪಿಂಚಣಿ ಮತ್ತು ಆರ್ಥಿಕ ನೆರವು ಯೋಜನೆಗಳಿದ್ದರೂ, ಈ ಮಸೂದೆ ಕೇವಲ ಪಿಂಚಣಿಯಲ್ಲದೆ ಉದ್ಯೋಗ, ಜೀವನೋಪಾಯ ಹಾಗೂ ಕೌಶಲಾಭಿವೃದ್ಧಿ ಅವಕಾಶಗಳನ್ನು ಒದಗಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.

ವಿಶೇಷ ಮಂಡಳಿ ರಚನೆ ಪ್ರಸ್ತಾವ:

ಹೊಸ ಮಸೂದೆಯನ್ನು ನಿರ್ವಹಿಸಲು ವಿಶೇಷ ಮಂಡಳಿಯನ್ನು ರಚಿಸಲಾಗುವುದು ಎಂದು ಪ್ರಸ್ತಾವಿಸಲಾಗಿದೆ. ಪ್ರಸ್ತಾವನೆಯ ಮುಖ್ಯಾಂಶಗಳಲ್ಲಿ, ʼಕರ್ನಾಟಕ ರಾಜ್ಯ ನಿರ್ಗತಿಕ ವಿಧವಾ ಮಹಿಳಾ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಮಂಡಳಿʼ ರಚಿಸಲಾಗುವುದು. ಈ ಮಂಡಳಿಯು, ನೋಂದಾಯಿತ ವಿಧವಾ ಮಹಿಳಾ ಕಾರ್ಮಿಕರು ಹಾಗೂ ಅವರ ಕುಟುಂಬಗಳಿಗೆ ವಿವಿಧ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಲಿದೆ. ಜೊತೆಗೆ ಕೌಶಲಾಭಿವೃದ್ಧಿ ತರಬೇತಿಗಳನ್ನು ನೀಡುವ ಜವಾಬ್ದಾರಿಯನ್ನೂ  ಮಂಡಳಿ ಹೊಂದಿರಲಿದೆ ಸೇರಿದಂತೆ ಇತರೆ ಅಂಶಗಳು ಸೇರಿವೆ.

ಕಲ್ಯಾಣ ನಿಧಿ ಸ್ಥಾಪನೆ:

ನಿರ್ಗತಿಕ ವಿಧವಾ ಮಹಿಳಾ ಕಾರ್ಮಿಕರಿಗಾಗಿ ಪ್ರತ್ಯೇಕ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣನಿಧಿ ಸ್ಥಾಪಿಸುವುದಾಗಿ ಮಸೂದೆ ತಿಳಿಸಿದೆ. ಈ ನಿಧಿಗೆ ಪೆಟ್ರೋಲಿಯಂ ಉತ್ಪನ್ನಗಳ ಮಾರಾಟದ ಮೇಲೆ ವಿಧಿಸಲಿರುವ ಸೆಸ್‌, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಅನುದಾನ, CSR ನಿಧಿಗಳ ಕೊಡುಗೆ, ನೋಂದಾಯಿತ ಕಾರ್ಮಿಕರ ಕೊಡುಗೆ ಹಾಗೂ ಮಂಡಳಿಯ ಹೂಡಿಕೆಗಳಿಂದ ಬಂದ ಹಣ ಸೇರಲಿದೆ. ನಿಧಿಗೆ ಹೆಚ್ಚಿನ ಹಣ CSR ಕೊಡುಗೆಗಳು ಮತ್ತು ಸರ್ಕಾರದ ಬಜೆಟ್ ಅನುದಾನಗಳಿಂದ ಬರಲಿದೆ. ಈ ಹಣವನ್ನು ಎನ್‌ಜಿಒಗಳ ಸಹಕಾರದೊಂದಿಗೆ ಸಣ್ಣ ಉದ್ಯಮಗಳು (ಮೈಕ್ರೋ ಎಂಟರ್‌ಪ್ರೈಸಸ್) ಅಭಿವೃದ್ಧಿಗೆ ಬಳಸುವ ಯೋಜನೆ ಇದೆ. ಕೇಂದ್ರ ಸರ್ಕಾರದ ಅನುದಾನ ಪಡೆಯುವ ಸಾಧ್ಯತೆಗಳನ್ನೂ ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೋಂದಣಿ ಕಡ್ಡಾಯ:

ಮಸೂದೆ ಪ್ರಕಾರ, ಪ್ರಯೋಜನ ಪಡೆಯಲು ವಿಧವಾ ಮಹಿಳಾ ಕಾರ್ಮಿಕರು ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯ. ನೋಂದಣಿ ಪ್ರಮಾಣಪತ್ರದ ಅವಧಿ ಮೂರು ವರ್ಷಗಳಾಗಿದ್ದು, ಮಾನ್ಯ ಪ್ರಮಾಣಪತ್ರ ಹೊಂದಿರುವವರಿಗೆ ಮಾತ್ರ ಕಲ್ಯಾಣ ಸೌಲಭ್ಯಗಳು ಲಭ್ಯವಾಗಲಿವೆ. ಮಂಡಳಿಯು ಎಲ್ಲಾ ನೋಂದಾಯಿತ ಕಾರ್ಮಿಕರ ಮಾಹಿತಿಯ ಡಿಜಿಟಲ್ ಡೇಟಾಬೇಸ್‌ ನಿರ್ವಹಿಸಬೇಕು. ಪ್ರತಿ ಕಾರ್ಮಿಕೆಗೆ e-Shram, ಸೇವಾ ಸಿಂಧು ಅಥವಾ ಅಂಬೇಡ್ಕರ್ ಸಹಾಯಹಸ್ತಾ ಪೋರ್ಟಲ್‌ಗಳ ಮೂಲಕ ವಿಶಿಷ್ಟ ಗುರುತು ಸಂಖ್ಯೆ ನೀಡಲಾಗುತ್ತದೆ.

“ಈ ಮಸೂದೆ ಕೇವಲ ಪಿಂಚಣಿ ನೀಡುವ ಮಟ್ಟಕ್ಕೆ ಸೀಮಿತವವಾಗಿಲ್ಲ. ನಿರ್ಗತಿಕ ವಿಧವಾ ಮಹಿಳೆಯರಿಗೆ ಉದ್ಯೋಗಾವಕಾಶ ಒದಗಿಸಿ, ಸಮಾಜದಲ್ಲಿರುವ ಅವಮಾನ ಮತ್ತು ಅಡೆತಡೆಗಳನ್ನು ನಿವಾರಿಸುವ ಉದ್ದೇಶ ಹೊಂದಿದೆ. ಅವರ ಸಾಮಾಜಿಕ ಸ್ಥಾನಮಾನವನ್ನು ಬಲಪಡಿಸುವುದು ನಮ್ಮ ಗುರಿ. ಶೀಘ್ರದಲ್ಲೇ ಮಸೂದೆ ಕುರಿತಾಗಿ ಪೂರ್ವ-ವಿಧಾನಾತ್ಮಕ ಸಮಾಲೋಚನೆಗಳನ್ನು ನಡೆಸಲಾಗುವುದು” ಎಂದು ಹೆಚ್ಚುವರಿ ಕಾರ್ಮಿಕ ಆಯುಕ್ತ ಜಿ. ಮಂಜುನಾಥ್ ತಿಳಿಸಿದ್ದಾರೆ. ಇತ್ತ, ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ (AICCTU) ರಾಜ್ಯ ಕಾರ್ಯದರ್ಶಿ ಮೈತ್ರೇಯಿ ಕೃಷ್ಣನ್ ಅವರು ಇಲಾಖೆಯ ಈ ನಡೆಯನ್ನು ಸ್ವಾಗತಿಸಿದ್ದು, ನಗರ ಉದ್ಯೋಗ ಭರವಸೆ ಕಾಯ್ದೆಯ ಅಗತ್ಯವನ್ನೂ ಒತ್ತಿಹೇಳಿರುವುದಾಗಿ ಡೆಕ್ಕನ್‌ ಹೆರಾಲ್ಡ್‌ ವರದಿ ಮಾಡಿದೆ.

ಈ ಕುರಿತು ಸಾಮಾಜಿಕ ಹೋರಾಟಗಾರ್ತಿ ಹಾಗೂ ಗ್ರಾಕೂಸ ಮುಖಂಡರಾದ ಸ್ವರ್ಣ ಭಟ್‌ ಪ್ರತಿಕ್ರಿಯಿಸಿ, “ಹೊಸ ಮಸೂದೆ ತರುತ್ತಿರುವುದು ಸ್ವಾಗತಾರ್ಹ. ಇಲ್ಲಿ ವಿಧವೆ ಎಂಬ ಪದ ಬಳಕೆಗಿಂತ ಒಂಟಿ ಮಹಿಳೆ ಎಂದು ಬಳಸುವುದು ಸೂಕ್ತ ಎನಿಸುತ್ತದೆ. ಅಧಿಕೃತವಾಗಿ ಪತಿ ತೀರಿ ಹೋಗಿರುವವರನ್ನು ವಿಧವೆಯರು ಎನ್ನಬಹುದಾದರೂ ಇಂದಿಗೂ ಗ್ರಾಮೀಣ ಭಾಗಗಳಲ್ಲಿ ಗಂಡ ಇದ್ದೂ ಕೂಡ ಇಲ್ಲದಂತೆ ನಿರ್ಗತಿಕರಾಗಿ ಬಾಳುತ್ತಿರುವ ಸಾಕಷ್ಟು ಮಂದಿ ಮಹಿಳೆಯರಿದ್ದಾರೆ. ನ್ಯಾಯಾಲಯದ ಮೂಲಕವೂ ಸಮಸ್ಯೆ ಬಗೆಹರಿದಿರುವುದಿಲ್ಲ. ಹೀಗೆ ಗಂಡನಿಂದ ದೂರವಾದ ಮಹಿಳೆ ತಾಯಿ ಮನೆಗೆ ಬಂದರೆ ಆಕೆಯನ್ನು ಕುಟುಂಬ ಸಮೇತ ಸಮಾಜವೂ ಯಾವ ದೃಷ್ಟಿಯಿಂದ ನೋಡುತ್ತದೆ, ಹೇಗೆ ನಡೆಸಿಕೊಳ್ಳುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಸಾಮಾಜಿಕ ರಕ್ಷಣೆ ಇರುವುದಿಲ್ಲ, ಆರ್ಥಿಕವಾಗಿಯೂ ಸಬಲರಾಗಿರುವುದಿಲ್ಲ. ಶಿಕ್ಷಣದ ಕೊರತೆಯೂ ಇರುವ ದುರಂತ ನೋಡಬಹುದು. ಇಂತಹ ಮಹಿಳೆಯರನ್ನು ವಿಧವಾ ವೇತನಕ್ಕಾಗಲೀ, ಮನಸ್ವಿನಿ ಯೋಜನೆಗಾಗಲೀ ಪರಿಗಣಿಸಿರುವುದಿಲ್ಲ. ಅತ್ತ ಮದುವೆಯಾದವನ ಆಸರೆಯೂ ಇರುವುದಿಲ್ಲ. ಇವರಿಗೆ ರಕ್ಷಣೆ, ಬಲ ಎಲ್ಲಿಂದ ಬರಬೇಕು?”

ಇದನ್ನೂ ಓದಿ: ವೆನೆಜುವೆಲಾ ಬಿಕ್ಕಟ್ಟು | ಹಸಿದ ಹೊಟ್ಟೆ ಮತ್ತು ಬಲಾಢ್ಯರ ಜೂಜಾಟ

“ನಮ್ಮಲ್ಲಿ ಈಗಾಗಲೇ ಸಾಕಷ್ಟು ಕಾನೂನು ಕಟ್ಟಳೆಗಳಿದ್ದರೂ ಮಹಿಳೆ ಮೇಲಿನ ದೌರ್ಜನ್ಯ ಕಡಿಮೆಯಾಗಿಲ್ಲ.  ಮೇಲಾಗಿ ಅತ್ಯಾಚಾರಕ್ಕೊಳಗಾದ ಮಹಿಳೆಯನ್ನು ಸಮಾಜ ಅತೀ ನಿಕೃಷ್ಟವಾಗಿ ಕಾಣುತ್ತದೆ. ಕುಟುಂಬವಂತೂ ಆಕೆಯನ್ನು ಹೊರೆಯಂತೆಯೇ ಭಾವಿಸುತ್ತದೆ. ಈ ತಾರತಮ್ಯಕ್ಕೆ ನಗರ, ಗ್ರಾಮೀಣ, ಶಿಕ್ಷಿತರು, ಅಶಿಕ್ಷಿತರು ಎಂಬ ಬೇಧವಿಲ್ಲ. ಪ್ರತಿ ಯೋಜನೆಗೂ ನಿಖರ ವಿಳಾಸವನ್ನು ಮಾನದಂಡವಾಗಿ ಪರಿಗಣಿಸಲಾಗುತ್ತದೆ. ಹಲವು ಪ್ರಕರಣಗಳಲ್ಲಿ ಪತಿಯಿಂದ ದೂರವಾದ ಮಹಿಳೆಗೆ ನಿರ್ದಿಷ್ಟ ವಿಳಾಸವೂ ಇರುವುದಿಲ್ಲ. ಎಲ್ಲ ಕಡೆಗಳಿಂದ ಆಚೆ ದೂಡಲ್ಪಟ್ಟವರಿಗೆ ವಿಳಾಸ ಕೊಡುವವರಾರು? ಸರ್ಕಾರದ ಮುಂದೆ ಇಷ್ಟೆಲ್ಲಾ ಸವಾಲುಗಳಿವೆ. ಇವನ್ನೆಲ್ಲಾ ಸಮರ್ಥವಾಗಿ ನಿಭಾಯಿಸಿ ಹೊಸ ಯೋಜನೆಯನ್ನು ಅನುಷ್ಠಾನಗೊಳಿಸುವುದು ಸದ್ಯಕ್ಕೆ ಕಷ್ಟ ಸಾಧ್ಯವೆನಿಸಬಹುದು. ಮುಂದಿನ ದಿನಗಳಲ್ಲಾದರೂ ಈ ರೀತಿ ಅಂಚಿಗೆ ತಳ್ಳಲ್ಪಟ್ಟ ಮಹಿಳೆಯನ್ನು ಪರಿಗಣಿಸಿ, ಅವರಿಗಾಗಿ ಕಲ್ಯಾಣ ಸೌಲಭ್ಯಗಳನ್ನು ನೀಡಲೇಬೇಕು” ಎಂದು ಆಗ್ರಹಿಸಿದರು.

ನಿರ್ಗತಿಕ ವಿಧವಾ ಮಹಿಳಾ ಕಾರ್ಮಿಕರ ಬದುಕನ್ನು ಕೇವಲ ಪಿಂಚಣಿಗೆ ಸೀಮಿತಗೊಳಿಸದೆ, ಉದ್ಯೋಗ, ಕೌಶಲ್ಯಾಭಿವೃದ್ಧಿ ಹಾಗೂ ಸಾಮಾಜಿಕ ಗೌರವದೊಂದಿಗೆ ಬದುಕುವ ಹಕ್ಕನ್ನು ನೀಡುವ ಉದ್ದೇಶದಿಂದ ಕರ್ನಾಟಕ ಸರ್ಕಾರ ರೂಪಿಸುತ್ತಿರುವ ಈ ಮಸೂದೆ ಮಹತ್ವದ ಹೆಜ್ಜೆಯಾಗಿದೆ. ಆದರೆ, ʼವಿಧವೆʼ ಎಂಬ ವ್ಯಾಖ್ಯಾನದ ಮಿತಿಗಳು, ಒಂಟಿ ಹಾಗೂ ನಿರ್ಲಕ್ಷಿತ ಮಹಿಳೆಯರ ಒಳಗೊಳ್ಳುವಿಕೆ, ವಿಳಾಸ ಮತ್ತು ಗುರುತು ಸಂಬಂಧಿತ ಸವಾಲುಗಳು ಸೇರಿದಂತೆ ಹಲವಾರು ಸಾಮಾಜಿಕ ವಾಸ್ತವಗಳನ್ನು ಸಮರ್ಥವಾಗಿ ಎದುರಿಸಬೇಕಾದ ಸವಾಲೂ ಸದ್ಯ ಸರ್ಕಾರದ ಮುಂದಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...