ಆಸ್ಟ್ರೇಲಿಯಾ, ಅಮೇರಿಕ ಹಾಗೂ ಸೌದಿ ಅರೇಬಿಯಾ ದೇಶಗಳಿಗೆ ಕರ್ನಾಟಕದ ನಂದಿನಿ ತುಪ್ಪವನ್ನು ರಫ್ತು ಮಾಡಲಾಗುತ್ತಿದೆ. ತುಪ್ಪದ ಬೇಡಿಕೆ ಹೆಚ್ಚಾಗುತ್ತಿದ್ದು, ದೇಶ ವಿದೇಶಗಳಲ್ಲಿಯೂ ಕರ್ನಾಟಕದ ನಂದಿನಿ ತುಪ್ಪಕ್ಕೆ ಬೇಡಿಕೆಯಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಸೌದಿ, ಯುಎಸ್‌ಎ, ಆಸ್ಟ್ರೇಲಿಯಾಗೆ ಪ್ರಪ್ರಥಮ ಬಾರಿಗೆ ನಂದಿನಿ ತುಪ್ಪ ರಫ್ತು ಯೋಜನೆಗೆ ಬೆಂಗಳೂರಿನಲ್ಲಿ ಮಂಗಳವಾರ ಚಾಲನೆ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
ಮೂಲತಃ ಮೈಸೂರು ಜಿಲ್ಲೆಯವರಾದ ಕುಮಾರ್ ಎಂಬುವರು ಅಮೆರಿಕದಲ್ಲಿ ನೆಲೆಸಿದ್ದು, ಇದರ ಏಜೆನ್ಸಿ ಪಡೆದಿದ್ದಾರೆ. ಕೆಎಂಎಫ್ ಹಾಗೂ ಕುಮಾರ್ ಅವರಿಗೆ ಶುಭವಾಗಲಿ ಎಂದು ಹಾರೈಸಿದರು.
ಬಳಿಕ ಮಾಧ್ಯಮವರೊಂದಿಗೆ ಮಾತನಾಡಿದ ಪಶು ಸಂಗೋಪನಾ ಸಚಿವರಾದ ಕೆ.ವೆಂಕಟೇಶ್, ನಂದಿನಿಯ ತುಪ್ಪಕ್ಕೆ ಹಾಗೂ ಎಲ್ಲ ಉತ್ಪನ್ನಗಳಿಗೆ ದಿನೇ ದಿನೇ ಹೆಚ್ಚು ಬೇಡಿಕೆ ಬರುತ್ತಿದೆ. ನಂದಿನಿಯನ್ನು ಜಗತ್ತಿಗೆ ಹೊರದೇಶಗಳಿಗೆ ವಿಸ್ತರಣೆ ಮಾಡುತ್ತಿದೆ. ಗ್ರಾಹಕರ ಬೇಡಿಕೆಗಳನ್ನು ನೋಡಿಕೊಂಡು ಎಲ್ಲವನ್ನೂ ಕೆಎಂಎಫ್ ಪೂರೈಸುತ್ತಿದೆ. ನಂದಿನಿಯ ಉತ್ಪನ್ನಗಳನ್ನು ನಕಲಿ ಮಾಡಿ, ಮಾರಾಟ ಮಾಡುವ ಬಗ್ಗೆ ದೂರುಗಳು ಬರುತ್ತಿದೆ. ಅದರ ಬಗ್ಗೆಯೂ ಕೆಎಂಎಫ್ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿದೆ. ನಕಲಿ ದಂಧೆಯ ಬಗ್ಗೆ ಜನರು ಜಾಗರೂಕರಾಗಿರಬೇಕು” ಎಂದು ತಿಳಿಸಿದರು.
ರಫ್ತು ಯೋಜನೆಯ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಕೆಎಂಎಫ್‌ನ ವ್ಯವಸ್ಥಾಪಕ ನಿರ್ದೇಶಕರಾದ ಬಿ ಶಿವಸ್ವಾಮಿ, ಕರ್ನಾಟಕದ ಹೆಮ್ಮೆಯ ನಂದಿನಿ ಬ್ರ್ಯಾಂಡ್‌ನ ತುಪ್ಪವನ್ನು ಆಸ್ಟ್ರೇಲಿಯಾ, ಅಮೇರಿಕ ಹಾಗೂ ಸೌದಿ ಅರೇಬಿಯಾ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಇದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ. ನಂದಿನಿಯ ಮಾರುಕಟ್ಟೆಯನ್ನು ವಿಶ್ವಾದ್ಯಂತ ವಿಸ್ತರಣೆ ಮಾಡಲಾಗುತ್ತಿದೆ. ಆಸ್ಟ್ರೇಲಿಯಾ ಮತ್ತು ಅಮೇರಿಕಾಕ್ಕೆ ಕೂಲೂ ಸೂಪರ್ ಫುಡ್ ಹಾಗೂ ಸೌದಿ ಅರೇಬಿಯಾಕ್ಕೆ ಈಸ್ಟ್ ಎಂಡ್ ಎಂಬ ಏಜೆನ್ಸಿಯ ಮೂಲಕ ರಫ್ತು ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಇದನ್ನು ಓದಿದ್ದೀರಾ? ‘ಬ್ರಾಹ್ಮಣನೊಬ್ಬ ತನ್ನ ಮಗಳನ್ನು ಮಗನಿಗೆ ದಾನ ಮಾಡುವವರೆಗೆ ಮೀಸಲಾತಿ ಮುಂದುವರಿಯಲಿ; ವಿವಾದಕ್ಕೀಡಾದ ಐಎಎಸ್ ಅಧಿಕಾರಿ ಹೇಳಿಕೆ
“ಮೊದಲ ಹಂತದಲ್ಲಿ 13 ಮೆಟ್ರಿಕ್ ಟನ್ ತುಪ್ಪವನ್ನು ಮೂರು ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಸೌದಿ ಅರೇಬಿಯಾಕ್ಕೆ ಕೇರಳದ ಕೊಚ್ಚಿನ್ ಶಿಪ್ ಯಾರ್ಡ್ ಮೂಲಕ ಮತ್ತು ಆಸ್ಟ್ರೇಲಿಯಾ, ಅಮೇರಿಕಕ್ಕೆ ಚೆನ್ನೈಯಿಂದ ಹಡಗಿನಲ್ಲಿ ರಫ್ತಾಗಲಿದೆ. ಇನ್ನೂ ಹೆಚ್ಚಿನ ಬೇಡಿಕೆ ಬಂದಲ್ಲಿ ಮತ್ತಷ್ಟು ತುಪ್ಪವನ್ನು ಕಳುಹಿಸಿಕೊಡುತ್ತೇವೆ. ಈಗಾಗಲೇ ಟೆಟ್ರಾಪ್ಯಾಕ್ ಹಾಲು, ತುಪ್ಪ, ಚೀಸ್, ಡೇರಿ ವೈಟ್ನರ್, ಬೆಣ್ಣೆ, ಐಸ್‌ಕ್ರೀಂ, ಪೆಟ್ ಬಾಟಲ್ ಉತ್ಪನ್ನಗಳು, ಸಿಹಿ ಉತ್ಪನ್ನ ಸೇವರೀಸ್ ಅನ್ನು ರಫ್ತು ಮಾಡಲಾಗುತ್ತಿದೆ. ತುಪ್ಪದ ಸ್ಟಾಂಡರ್ಡ್ ಅನ್ನು ಅಲ್ಲಿನ ನಿಯಮಗಳಿಗೆ ಅನುಗುಣವಾಗಿ ತಯಾರಿಸಿ ರಫ್ತು ಮಾಡುತ್ತಿದ್ದೇವೆ” ಎಂದು ಕೆಎಂಎಫ್‌ನ ಎಂಡಿ ಬಿ ಶಿವಸ್ವಾಮಿ ತಿಳಿಸಿದರು.

ಈ ಸಂದರ್ಭದಲ್ಲಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್, ಕೆಎಂಎಫ್‌ನ ಆಡಳಿತಾಧಿಕಾರಿಗಳು, ಮದರ್ ಡೇರಿ ನಿರ್ದೇಶಕರು, ಆಸ್ಟ್ರೇಲಿಯಾ-ಅಮೇರಿಕಕ್ಕೆ ಏಜೆನ್ಸಿ ಪಡೆದಿರುವ ಕುಮಾರ್, ಸೌದಿ ಅರೇಬಿಯಾಕ್ಕೆ ಏಜೆನ್ಸಿ ಪಡೆದಿರುವ ತೌಫೀಕ್ ಕೋಝಿಕ್ಕೋಡ್ ಹಾಗೂ ಕೆಎಂಎಫ್ ನ ಮಾರುಕಟ್ಟೆ ವಿಭಾಗದ ರಘುನಂದನ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.









