ಏಳು ವರ್ಷಕ್ಕೆ 613 ಕೋಟಿ ಖರ್ಚು ಮಾಡುವ ಬದಲು ಒಂದು ಯಂತ್ರವನ್ನು 1.33 ಕೋಟಿಗೆ ನೇರವಾಗಿ ಖರೀದಿ ಮಾಡಬಹುದಾಗಿದೆ. ನಿಮ್ಮ ಗಣಿತ ನಮಗೆ ಅರ್ಥವಾಗುತ್ತಿಲ್ಲ ದಯವಿಟ್ಟು ರಾಜ್ಯದ ಜನತೆಗೆ ಉತ್ತರ ನೀಡಿ ಬೆಂಗಳೂರು ಉಸ್ತುವಾರಿ ಸಚಿವರೇ ಎಂದು ನಿಖಿಲ್ ಕುಮಾರಸ್ವಾಮಿ ವ್ಯಂಗ್ಯವಾಗಿ ಆಗ್ರಹಿಸಿದರು.
ಈ ಬಗ್ಗೆ ಬೆಂಗಳೂರಿನ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, “ಬೆಂಗಳೂರು ಉಸ್ತುವಾರಿ ಸಚಿವರೇ. ನಿಮ್ಮ ಉದ್ದೇಶ ಏನು.? ಕಸ ಗುಡಿಸುವ ಯಂತ್ರಗಳನ್ನು ಗುತ್ತಿಗೆ ಪಡೆದು ನೀವು ಬೆಂಗಳೂರು ನಗರವನ್ನು ಏನು ಮಾಡಲು ಹೋರಟಿದ್ದೀರಿ? ಎಂದು ತೀವ್ರವಾಗಿ ವಾಗ್ದಾಳಿ ನಡೆಸಿದರು.
ಬಾಡಿಗೆ ನೆನಪದಲ್ಲಿ ಕಮಿಷನ್ ಗೋಲ್ಮಾಲ್ ನಡೆಸಲು ಇದು ದೊಡ್ಡ ಹುನ್ನಾರ. ಜಿಬಿಎ ವಾರ್ಡ್‌ಗಳಲ್ಲಿ ಕಸ ಗುಡಿಸುವ 26 ಯಂತ್ರಗಳು ಬಳಕೆಯಾಗದೆ ಬಿದ್ದಿವೆ. ಆದರೂ ಸರ್ಕಾರ 613 ಕೋಟಿ ಖರ್ಚು ಮಾಡಿ, 46 ವಾಹನಗಳನ್ನು ಖರೀದಿಸಲು ಹೊರಟಿದೆ, ಇದರ ಬದಲು ಯಂತ್ರಗಳನ್ನ ಖರೀದಿಸಿದರೆ ಕಡಿಮೆ ವೆಚ್ಚವಾಗುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
“ಬೆಂಗಳೂರಿಗೆ ಸಂಬಂಧಿಸಿದಂತೆ ನನ್ನ ಖಾತೆಯಿಂದ ಟ್ವೀಟ್ ಮಾಡಿದ್ದೆ. ಅದಕ್ಕೆ ಬುದ್ದಿಜೀವಿಗಳು ಒಂದಷ್ಟು ಸಂಶಯ ವ್ಯಕ್ತಪಡಿಸಿದ್ದಾರೆ. ಯಂತ್ರಗಳನ್ನ ಬಾಡಿಗೆಗೆ ಪಡೆಯೋದು ಸೂಕ್ತವಲ್ಲ. ಹೊಸ ಯಂತ್ರ ಖರೀದಿಯೇ ಸೂಕ್ತ ಎಂದು ಬಿಸಿಜಿ ವರದಿ ಕೊಟ್ಟಿದೆ. ಸರ್ಕಾರ ಅದೆಲ್ಲವನ್ನ ಗಾಳಿಗೆ ತೂರಿದೆ. ಆರ್ಥಿಕ ಹೊರ ಬಗ್ಗೆ ಯೋಚಿಸಿಲ್ಲ” ಎಂದು ಕಿಡಿಕಾರಿದರು.
“150 ಕೋಟಿ ರೂ. ಒಳಗೆ ಖರೀದಿಗೆ ಅವಕಾಶ ಇದೆ. ಅದನ್ನ ಹೊರತುಪಡಿಸಿ ಸರ್ಕಾರ ಬಾಡಿಗೆಗೆ ಪಡೆಯುವ ಉದ್ದೇಶವೇನು ? ಬೆಂಗಳೂರು ಉಸ್ತುವಾರಿ ಮಂತ್ರಿಗಳು ಒನ್ ಟೈಂ ಸೆಟಲ್ಮೆಂಟ್ ಮಾಡಿದಾರೆ. ಅದಕ್ಕೆ 7 ವರ್ಷಕ್ಕೆ ಬಾಡಿಗೆಗೆ ಗುತ್ತಿಗೆ ಕೊಡ್ತಿದಾರಲ್ಲ ಎಂದು ಸಾಮಾನ್ಯ ಜನ ಈ ಬಗ್ಗೆ ಪ್ರಶ್ನೆ ಮಾಡ್ತಿದಾರೆ” ಎಂದು ಹೇಳಿದರು.
“ಉಪ ಮುಖ್ಯಮಂತ್ರಿಗಳೇ ನಿಮ್ಮ ಉದ್ದೇಶವೇನು? ಸಾರ್ವಜನಿಕರ ಹಣಕ್ಕೆ ಬೆಲೆ ಇಲ್ವಾ? ಇದರ ಹಿಡನ್ ಅಜೆಂಡಾ ಏನು? ಬೆಂಗಳೂರಿನ ರಸ್ತೆ ಗುಂಡಿಗಳು ಹಾಗೆ ಇದೆ. ಫ್ಲೈ ಓವರ್ ಅಪೂರ್ಣವಾಗಿದೆ. ಎಲ್ಲಂದರಲ್ಲಿ ಕಸದ ರಾಶಿ ಬಿದ್ದಿದೆ. ಮೆಟ್ರೋದರ ಎಲ್ಲಿಗೆ ತಲುಪಿದೆ. ಸಾರ್ವಜನಿಕರು ಸ್ವಂತ ವಾಹನದಲ್ಲಿ ಓಡಾಡುವಂತೆ ಮಾಡಿದ್ದೀರಿ” ಎಂದು ಕಿಡಿಕಾರಿದರು.
ಸರ್ಕಾರ ಪ್ರತಿನಿತ್ಯ ಹಗರಣದಲ್ಲೆ ಮುಳುಗಿದ್ರೆ ನಾಗರಿಕರ ಸ್ಥಿತಿ ಏನು ? ಗುಂಡಿ ಮುಚ್ಚಿಸಲೂ ಕುಮಾರಣ್ಣ ಅವರಿಂದ ಕೇಂದ್ರಕ್ಕೆ ಪತ್ರ ಬರೆಸಬೇಕಾ ? 613 ಕೋಟಿ ರೂ. ಯಾರ ಮನೆ ದುಡ್ಡು, ನಮ್ಮ ಹಣವಾಗಿದ್ರೆ ಈಗ ದುಂದುವೆಚ್ಚ ಮಾಡ್ತಿಡ್ವಾ.? ಸರ್ಕಾರ ಏನು ಮಾಡಲು ಹೊರಟಿದೆ ಸ್ಪಷ್ಟನೆ ನೀಡಬೇಕು ಎಂದು ಅವರ ಆಗ್ರಹಿಸಿದರು.
“ಇದರಲ್ಲಿ ಕಮಿಷನ್ ಸಂಶಯ ಸಾರ್ವಜನಿಕ ವಲಯದಲ್ಲಿ ಚರ್ಚೆ ಆಗ್ತಿದೆ. ಇದಕ್ಕೆ ಉತ್ತರ ಸರ್ಕಾರನೇ ಕೊಡಬೇಕು. ಇದನ್ನ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗ್ತಿವಿ. 5 ಕಾರ್ಪೋರೇಷನ್ ಮಾಡಿಕೊಂಡಿದ್ದಾರೆ. ಇದರಿಂದ ಅಭಿವೃದ್ಧಿ ಆಗಲ್ಲ. ಸರ್ಕಾರದಲ್ಲಿರುವ ನಾಯಕರ ಮನಸ್ಥಿತಿ ಹೇಗಿದೆ ಅನ್ನೋದನ್ನು ತಿಳಿದುಕೊಳ್ಳಬೇಕು. 136 ಶಾಸಕರಿದ್ದಾರೆ, ಸರ್ಕಾರದಲ್ಲಿ ಬೇಕಾಂದಂತಹ ತೀರ್ಮಾನ ತೆಗೆದುಕೊಳ್ಳಬಹುದು. ಬೆಂಗಳೂರು ನಗರದ ಅಭಿವೃದ್ಧಿಗೆ ಹೆಚ್ಚಾಗಿ ಸಮಯಕೊಡಬೇಕು” ಎಂದು ಒತ್ತಾಹಿಸಿದರು.
“ಉಪಮುಖ್ಯಮಂತ್ರಿಗಳೇ ಬೆಂಗಳೂರಿನ ನಾಗರಿಕರಿಗೆ ಉತ್ತರ ಕೊಡಲೇಬೇಕು. ಆಟಿಟ್ಯೂಡ್ ನಿಂದ ಹೊರಬರಬೇಕು. ಎಲ್ಲವು ಮತದಾರನ ಕೈಯಲ್ಲಿದೆ. ದುರಂಕಾರಬೇಡ, ಇದು ಪ್ರಜಾಪ್ರಭುತ್ವ ಬೆಂಗಳೂರು ನಾಗರೀಕರಿಗೆ ಸ್ಪಷ್ಟನೆ ನೀಡಿ” ಎಂದು ಎಲ್ಲೂ ಡಿ ಕೆ ಶಿವಕುಮಾರ್ ಹೆಸರು ಹೇಳದೇ ನಿಖಿಲ್ ಕುಮಾರಸ್ವಾಮಿ ಲೇವಡಿ ಧ್ವನಿಯಲ್ಲೇ ಮಾತನಾಡಿದರು.





