ಮುಖ್ಯಮಂತ್ರಿ ಬದಲಾವಣೆ ವಿಚಾರದ ಬಗ್ಗೆ ಕಾಂಗ್ರೆಸ್‌ನೊಳಗೆ ಯಾರೂ ಮಾತನಾಡಬಾರದು ಎಂದು ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಹೇಳುತ್ತಿದ್ದರೂ ಅವರವರ ಬೆಂಬಲಿಗರು ಮಾತ್ರ ಸೂಚನೆ ಲೆಕ್ಕಿಸದೇ ತಮ್ಮ ಇಷ್ಟ ಬಂದಂತೆ ಮಾತನಾಡುವ ಸಂಪ್ರದಾಯ ಯಥಾಸ್ಥಿತಿಯಲ್ಲಿ ಮುಂದುವರಿದಿದೆ.
ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಆಪ್ತ, ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಈ ಬಗ್ಗೆ ಶುಕ್ರವಾರ ಮಾತನಾಡಿದ್ದು, “ಸಂಕ್ರಾಂತಿಯಲ್ಲ, ಅಧಿವೇಶನ ಮುಗಿದ ತಕ್ಷಣ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುತ್ತಾರೆ” ಎಂದಿದ್ದಾರೆ.
“ಗುರುವಾರ ರಾತ್ರಿ ನಾವು 55 ಜನ ಶಾಸಕರು ಊಟಕ್ಕೆ ಸೇರಿದ್ದೆವು. ಊಟ ಮಾಡಿದ್ದೇವೆ. ನಮಗೆ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು, ಆಗುತ್ತಾರೆ. ನನ್ನ ಹಣೆಯಲ್ಲಿ ಬರೆದಿದ್ದಕ್ಕೆ ನಾನು ಶಾಸಕ ಆಗಿಲ್ಲವೇ, ಹಾಗೇ ಡಿ.ಕೆ .ಶಿವಕುಮಾರ್ ಅವರ ಹಣೆಯಲ್ಲಿ ಬರೆದಿದೆ ಅವರು ಮುಖ್ಯಮಂತ್ರಿ ಆಗುತ್ತಾರೆ” ಎಂದು ಹೇಳಿದರು.
“ಔತಣಕೂಟದಲ್ಲಿ 50-60 ಜನರು ಸೇರಿದ್ದರು. ರಾಜಕೀಯ ಚರ್ಚೆ ಏನೂ ಆಗಿಲ್ಲ. ಡಿ.ಕೆ.ಶಿವಕುಮಾರ್ ಕರೆದರೆ ಎಲ್ಲ 224 ಜನ ಶಾಸಕರೂ ಕರೆದರೆ ಊಟಕ್ಕೆ ಬರುತ್ತಾರೆ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಎಂದಲ್ಲ. ವಿಶ್ವಾಸ, ಪ್ರೀತಿ ಒಂದು ಬಾಂಧವ್ಯ. ಎಲ್ಲರೂ ಡಿ.ಕೆ. ಶಿವಕುಮಾರ್ ಅವರಿಗೆ ಆತ್ಮೀಯರೇ” ಎಂದು ತಿಳಿಸಿದರು.
“ಅಧಿವೇಶನ ಮುಗಿದ ಬಳಿಕ ಡಿ ಕೆ ಶಿವಕುಮಾರ್ ಅವರಿಗೆ ಬೇಗ ಫಲ ಸಿಗುತ್ತದೆ. ಪಕ್ಷ ಕಟ್ಟಲು ಸಾಕಷ್ಟು ಕಷ್ಟಪಟ್ಟಿದ್ದಾರೆ. ನಂಬರ್ ಮುಖ್ಯ ಅಲ್ಲ, ಹೈಕಮಾಂಡ್‌ನ ನಿರ್ದೇಶನ ಮುಖ್ಯ. ಹೈಕಮಾಂಡ್ ಎಲ್ಲವನ್ನೂ ತೀರ್ಮಾನಿಸುತ್ತದೆ. ಶಾಸಕರ ಸಂಖ್ಯಾಬಲ ಮುಖ್ಯ ಅಲ್ಲವೇ ಅಲ್ಲ” ಎಂದು ಹೇಳಿದರು.
ಬೆಳಗಾವಿಯ ಸುವರ್ಣ ಸೌಧದಲ್ಲಿ ವಿಧಾನ ಮಂಡಲ ಚಳಿಗಾಲ ಅಧಿವೇಶನ ಮಧ್ಯೆ ಸಿಎಂ ಹುದ್ದೆ ಬದಲಾವಣೆ ವಿಷಯ ಚರ್ಚೆಯಾಗುತ್ತಲೇ ಇದೆ. ಬೆಳಗಾವಿಯಲ್ಲಿ ಮಾತನಾಡಿದ ಸಿಎಂ ಪುತ್ರ ಯತೀಂದ್ರ ಅವರು, “ಮುಖ್ಯಮಂತ್ರಿ ಹುದ್ದೆಯಲ್ಲಿ ಯಾವುದೇ ಗೊಂದಲವಾಗಲಿ, ಭಿನ್ನಾಭಿಪ್ರಾಯವಾಗಲಿ ಇಲ್ಲ. ಎಲ್ಲವೂ ಸ್ಪಷ್ಟವಾಗಿದೆ. ನಾಯಕತ್ವದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಹೈಕಮಾಂಡ್ ಸ್ಪಷ್ಟವಾಗಿ ಹೇಳಿದೆ. ನನ್ನ ತಂದೆಯೇ 5 ವರ್ಷ ಸಿಎಂ ಆಗಿ ಇರುತ್ತಾರೆ” ಎಂದಿದ್ದರು.





