ಓಲಾ ಕಂಪನಿಯ ಸಂಸ್ಥಾಪಕ ಮತ್ತು ಸಿಇಒ ಭವೀಶ್ ಅಗರ್‌ವಾಲ್ ಮತ್ತು ಹಿರಿಯ ಅಧಿಕಾರಿ ಸುಬ್ರತ್ ಕುಮಾರ್ ದಾಸ್ ಅವರ ವಿರುದ್ಧ ಆತ್ಮಹತ್ಯೆಗೆ ಪ್ರೇರೇಪಣೆ ಮಾಡಿದ ಆರೋಪದ ಮೇಲೆ ಬೆಂಗಳೂರು ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. 38 ವರ್ಷದ ಓಲಾ ಎಂಜಿನಿಯರ್ ಕೆ ಅರವಿಂದ್ ಅವರು ಕೆಲಸದ ಸ್ಥಳದಲ್ಲಿ ನಿರಂತರ ಕಿರುಕುಳಕ್ಕೊಳಗಾಗಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು 28 ಪುಟಗಳ ಮರಣ ಪತ್ರದಲ್ಲಿ ಆರೋಪಿಸಿದ್ದಾರೆ.
ಅರವಿಂದ್ ಅವರ ಸಹೋದರ ಅಶ್ವಿನ್ ಕಣ್ಣನ್ ದಾಖಲಿಸಿದ ದೂರಿನ ಆಧಾರದಲ್ಲಿ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) 108ನೇ ಕಲಂನಡಿ ಪ್ರಕರಣ ದಾಖಲಿಸಲಾಗಿದೆ. ದೂರದಾರರ ಪ್ರಕಾರ, ಅರವಿಂದ್ ಅವರ ವೇತನ ಮತ್ತು ಭತ್ಯೆಗಳನ್ನು ಕಂಪನಿ ನಿರ್ಬಂಧಿಸಿಟ್ಟುಕೊಂಡಿತು. ಅವರ ಮರಣದ ನಂತರ ಕಂಪನಿಯಿಂದ ಅರವಿಂದ್ ಅವರ ಖಾತೆಗೆ ಅಕ್ರಮವಾಗಿ ₹17.46 ಲಕ್ಷ ರೂಪಾಯಿ ವರ್ಗಾಯಿಸಲಾಗಿದೆ ಎಂದು ಆರೋಪಿಸಲಾಗಿದೆ.
ಸೆಪ್ಟೆಂಬರ್ 28ರಂದು ಚಿಕ್ಕಲಸಂದ್ರದಲ್ಲಿರುವ ತನ್ನ ಮನೆಯಲ್ಲಿ ಅರವಿಂದ್ ಅವರು ವಿಷ ಸೇವಿಸಿದ್ದಾರೆ. ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ದೊರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕುಟುಂಬಸ್ಥರು ಮರಣ ಪತ್ರವನ್ನು ಪತ್ತೆ ಮಾಡಿ, ಓಲಾ ಹಿರಿಯ ನಿರ್ವಾಹಕರಾದ ಸುಬ್ರತ್ ಕುಮಾರ್ ದಾಸ್ ಮತ್ತು ಭವೀಶ್ ಅಗರ್‌ವಾಲ್ ಅವರ ವಿರುದ್ಧ ಕೆಲಸದ ಸ್ಥಳದಲ್ಲಿ ಕಿರುಕುಳ ನೀಡಿದ್ದಕ್ಕೆ ದೂರು ದಾಖಲಿಸಿದ್ದಾರೆ. ಕಂಪನಿಯ ಎಚ್‌ಆರ್ ವಿಭಾಗವು ಅರವಿಂದ್‌ರ ಖಾತೆಗೆ ಮಾಡಿದ ಹಣದ ವರ್ಗಾವಣೆಯ ಬಗ್ಗೆ ಸ್ಪಷ್ಟ ಮಾಹಿತಿ ನೀಡಲು ವಿಫಲವಾಗಿದೆ ಎಂದು ದೂರದಾರರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಜಾತಿ ವ್ಯವಸ್ಥೆಯ ಕ್ರೂರತೆಗೆ ಸಾಮರಸ್ಯದ ಬಣ್ಣ; ಮಧ್ಯಪ್ರದೇಶ ಸರ್ಕಾರದ ಬೌದ್ಧಿಕ ದಾರಿದ್ರ್ಯ
ಹಿರಿಯ ಪೊಲೀಸ್ ಅಧಿಕಾರಿ ಅವರ ಪ್ರಕಾರ, ದೂರು ಸಲ್ಲಿಕೆಯ ನಂತರ ಎಫ್‌ಐಆರ್‌ನಲ್ಲಿ ನಮೂದಿಸಲಾಗಿರುವವರಿಗೆ ನೋಟಿಸ್‌ಗಳನ್ನು ಜಾರಿ ಮಾಡಲಾಗಿದ್ದು, ತನಿಖೆಯು ಮುಂದುವರಿದಿದೆ ಎಂದರು.
ಈ ನಡುವೆ ಓಲಾ ಸಂಸ್ಥೆಯು ಕರ್ನಾಟಕ ಹೈಕೋರ್ಟ್‌ನಲ್ಲಿ ಎಫ್‌ಐಆರ್‌ನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದು, ತಾತ್ಕಾಲಿಕ ರಕ್ಷಣಾ ಆದೇಶಗಳನ್ನು ಪಡೆದಿರುವುದಾಗಿ ತಿಳಿಸಿದೆ.
“ಅರವಿಂದ್ ಅವರು ತಮ್ಮ ಸೇವಾ ಅವಧಿಯಲ್ಲಿ ಯಾವುದೇ ರೀತಿಯ ಹಿಂಸೆ ಅಥವಾ ಅಸಮಾಧಾನವನ್ನು ಕಂಪನಿಗೆ ತಿಳಿಸಿರಲಿಲ್ಲ. ಅವರ ಹುದ್ದೆಗೂ ಉನ್ನತ ನಿರ್ವಾಹಕ ಮಂಡಳಿಯೊಂದಿಗೆ ನೇರ ಸಂಪರ್ಕವಿರಲಿಲ್ಲ” ಎಂದು ಕಂಪನಿಯ ವಕ್ತಾರರು ಸ್ಪಷ್ಟಪಡಿಸಿದ್ದಾರೆ.





