ಕಾಂಗ್ರೆಸ್ ಸರ್ಕಾರದ ಐದು ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಜಾರಿಯಾಗಿ ವರ್ಷ ಪೂರೈಸಿದೆ. ಈ ಹಿನ್ನೆಲೆ ಸಂತಸ ಹಂಚಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಯೋಜನೆಯ ಫಲಾನುಭವಿಗಳ ಕಥೆಗಳನ್ನು ಹಂಚಿಕೊಂಡಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ‘ನಾಡಿನ ನನ್ನ ಅಕ್ಕತಂಗಿಯರ, ತಾಯಂದಿರ ಕುಟುಂಬ ನಿರ್ವಹಣೆಯ ಹೊರೆಯನ್ನು ತಗ್ಗಿಸಿ, ಅವರಿಗೆ ನೆಮ್ಮದಿಯ ಬದುಕು ಕಟ್ಟಿಕೊಡಲು ರೂಪಿಸಿದ ಗೃಹಲಕ್ಷ್ಮಿ ಯೋಜನೆ ವರ್ಷ ಪೂರೈಸಿದೆ. ಈ ಸಂದರ್ಭದಲ್ಲಿ ಯೋಜನೆಯ ಪೂರ್ಣ ಸದುಪಯೋಗ ಪಡೆದು ನವ ಉತ್ಸಾಹದಿಂದ ಹೊಸ ಬದುಕಿನತ್ತ ಹೆಜ್ಜೆಹಾಕುತ್ತಿರುವ ಫಲಾನುಭವಿ ಮಹಿಳೆಯರ ಯಶೋಗಾಥೆಯಿವು. ಬೆರಳೆಣಿಕೆಯಷ್ಟು ಮಾತ್ರ ಬೆಳೆಕಿಗೆ ಬಂದಿವೆ, ಸುದ್ದಿಯಾಗದ ಲಕ್ಷಾಂತರ ಕತೆಗಳಿವೆ. ಈ ಎಲ್ಲವೂ ಯೋಜನೆಯ ಯಶಸ್ಸಿಗೆ ಹಿಡಿದ ಕನ್ನಡಿಯಾಗಿದೆ’ ಎಂದು ಬರೆದುಕೊಂಡಿದ್ದಾರೆ.
ವಿದ್ಯಾಭ್ಯಾಸಕ್ಕೆ ನೆರವಾದ ಗೃಹಲಕ್ಷ್ಮಿ ಹಣ, ಹಾವೇರಿಯ ಮಹಿಳೆಯೊಬ್ಬರು ಸೊಸೆಗೆ ಫ್ಯಾನ್ಸಿ ಸ್ಟೋರ್ ತೆರೆದ ಕಥೆ, ವೃದ್ದೆಯೊಬ್ಬರು ಗೃಹಲಕ್ಷ್ಮಿ ಹಣದಿಂದ ಹೋಳಿಗೆ ಊಟ ಹಾಕಿಸಿದ ಸಂದರ್ಭ … ಹೀಗೆ ಹಣ ಸದುಪಯೋಗವಾದ ಕುರಿತ ಉದಾಹರಣೆಗಳನ್ನು ಹಂಚಿಕೊಂಡಿದ್ದಾರೆ.
2023ರ ಆ.30 ರಂದು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಗೃಹಲಕ್ಷ್ಮಿ ಯೋಜನೆಗೆ ಚಾಲನೆ
ನೀಡಿತ್ತು. ಪ್ರತಿ ತಿಂಗಳು ₹2 ಸಾವಿರ ಹಣವನ್ನು ಕುಟುಂಬದ ಯಜಮಾನಿಗೆ ನೀಡುವ ಯೋಜನೆ ಇದಾಗಿದೆ. ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಈ ಯೋಜನೆ ಜಾರಿಗೆ ತಂದಿರುವುದಾಗಿ ಸರ್ಕಾರ ಹೇಳಿದೆ.





