ಅಕ್ರಮ ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ಹಗರಣ ಸಂಬಂಧ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಹಾಗೂ ಉದ್ಯಮಿ ಕೆ.ಸಿ.ವೀರೇಂದ್ರ ಅಲಿಯಾಸ್ ಪಪ್ಪಿ ಅವರನ್ನು ಮತ್ತೆ ನಾಲ್ಕು ದಿನ ಕಾಲ ಜಾರಿ ನಿರ್ದೇಶನಾಲಯದ (ಇ.ಡಿ) ವಶಕ್ಕೆ ನೀಡಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಗುರುವಾರ ಆದೇಶಿಸಿದೆ.
ಆನ್‌ಲೈನ್ ಮತ್ತು ಆಫ್‌ಲೈನ್ ಬೆಟ್ಟಿಂಗ್ ನಡೆಸುತ್ತಿದ್ದ ಅಕ್ರಮ ಚಟುವಟಿಕೆ ಆರೋಪದಡಿ ಸದ್ಯ ಜಾರಿ ನಿರ್ದೇಶನಾಲಯದ (ಇ ಡಿ) ವಶದಲ್ಲಿರುವ ವೀರೇಂದ್ರ ಪಪ್ಪಿ ಅವರ ಕಸ್ಟಡಿ ಅವಧಿ ಗುರುವಾರಕ್ಕೆ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಅವರನ್ನು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್ ಅವರ ಮುಂದೆ ಮಧ್ಯಾಹ್ನ ಹಾಜರುಪಡಿಸಲಾಯಿತು.
ವಿಚಾರಣೆ ವೇಳೆ ಇ ಡಿ ಪರ ವಿಶೇಷ ಸರ್ಕಾರಿ ಅಭಿಯೋಜಕ ಐ ಎಸ್ ಪ್ರಮೋದ್ ಚಂದ್ರ ಅವರು “ಆರೋಪಿ ವೀರೇಂದ್ರ ಅವರ ಕಸ್ಟಡಿ ಅವಧಿಯನ್ನು ಪುನಾ 15 ದಿನಗಳ ಕಾಲ ಮುಂದುವರಿಸಿ ಆದೇಶಿಸಬೇಕು” ಎಂದು ಪೀಠಕ್ಕೆ ಮನವರಿಕೆ ಮಾಡಿಕೊಟ್ಟರು. ಈ ವೇಳೆ ಪ್ರಕರಣದ ಹೆಚ್ಚಿನ ತನಿಖೆ ಸಲುವಾಗಿ ಆರೋಪಿಯನ್ನು ಮತ್ತೆ ವಶಕ್ಕೆ ನೀಡುವಂತೆ ಇ.ಡಿ ಸಲ್ಲಿಸಿದ ಮನವಿ ಪುರಸ್ಕರಿಸಿದ ನ್ಯಾಯಾಲಯ, ನಾಲ್ಕು ದಿನಗಳ ಕಾಲ ಪಪ್ಪಿ ಅವರನ್ನು ವಶಕ್ಕೆ ನೀಡಿತು.
“ನಮಗೆ ಲಭ್ಯವಿರುವ ಡಿಜಿಟಲ್ ಸಾಕ್ಷ್ಯ ಮತ್ತು ವೆಬ್‌ಸೈಟ್‌ಗಳಲ್ಲಿ ದೊರಕುತ್ತಿರುವ ಬೆಟ್ಟಿಂಗ್ ಪುರಾವೆಗಳ ಬಗ್ಗೆ ವಿವರಣೆ ಪಡೆಯಲು ಆರೋಪಿಯನ್ನು ಮುಖಾಮುಖಿಯಾಗಿ ಇರಿಸಿಕೊಂಡು ವಿಚಾರಣೆ ಮಾಡಬೇಕಿದೆ. ಆದ್ದರಿಂದ, ಕಸ್ಟಡಿ ಅವಧಿ ವಿಸ್ತರಿಸಬೇಕು” ಎಂದು ಮನವಿ ಮಾಡಿದರು.
ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ವೀರೇಂದ್ರ ಪರ ವಾದಿಸಿದ ಹಿರಿಯ ವಕೀಲರಾದ ಎಚ್ ಎಸ್ ಚಂದ್ರಮೌಳಿ ಮತ್ತು ಕಿರಣ್ ಜವಳಿ ಅವರು “ಈಗಾಗಲೇ ವೀರೇಂದ್ರ ಅವರು ತನಿಖೆಗೆ ಸಂಪೂರ್ಣವಾಗಿ ಸಹಕರಿಸುತ್ತಿದ್ದಾರೆ. ಹೀಗಿರುವಾಗ ಅವರನ್ನು ಮತ್ತೆ ಕಸ್ಟಡಿಗೆ ಕೇಳುವುದು ಉಚಿತವಲ್ಲ” ಎಂದು ಪ್ರತಿಪಾದಿಸಿದರು. ಅಂತಿಮವಾಗಿ ನ್ಯಾಯಾಧೀಶರು ಆರೋಪಿಯನ್ನು ಮತ್ತೆ ನಾಲ್ಕು ದಿನಗಳ ಕಾಲ ಇ ಡಿ ಕಸ್ಟಡಿಗೆ ಒಪ್ಪಿಸಿ ಆದೇಶಿಸಿದರು.
ಅಕ್ರಮವಾಗಿ ಆನ್‌ಲೈನ್ ಬೆಟ್ಟಿಂಗ್ ಆ್ಯಪ್‌ಗಳನ್ನು ನಡೆಸಿ ಬಹುಕೋಟಿ ಹಣ ಗಳಿಸಿರುವ ಬಗ್ಗೆ ಶಾಸಕ ವೀರೇಂದ್ರ ವಿರುದ್ಧ ಆರೋಪ ಕೇಳಿ ಬಂದಿದೆ. ಪ್ರಕರಣ ಸಂಬಂಧ ಆ.23 ರಂದು ವೀರೇಂದ್ರ ಅವರನ್ನು ಇ.ಡಿ ಬಂಧಿಸಿತ್ತು. ಇದಕ್ಕೂ ಮುನ್ನ ವೀರೇಂದ್ರ ಅವರ ಮನೆ, ಕಚೇರಿ ಹಾಗೂ ಅವರ ಸಂಬಂಧಿಕರ ಮನೆಗಳನ್ನು ಇ.ಡಿ ಶೋಧಿಸಿತ್ತು. ಈ ವೇಳೆ ಐಷಾರಾಮಿ ಕಾರುಗಳು, ಕೆ.ಜಿ. ಗಟ್ಟಲೆ ಚಿನ್ನ ಹಾಗೂ ಕೋಟ್ಯಂತರ ರು. ನಗದು ಜಪ್ತಿಯಾಗಿತ್ತು. ಬೆಟ್ಟಿಂಗ್ ಆ್ಯಪ್‌ಗಳಿಂದ ಕಡಿಮೆ ಅವಧಿಯಲ್ಲಿ ಸುಮಾರು 2000 ಕೋಟಿ ರು. ಗಳಿಸಿದ್ದಾರೆ ಎಂದು ತನಿಖೆ ವೇಳೆ ಪತ್ತೆಯಾಗಿರುವುದಾಗಿ ಇ.ಡಿ ಹೇಳಿದೆ.





