“ಹಲವು ಮಾಧ್ಯಮಗಳು ಗಾಸಿಪ್, ವಿವಾದಗಳ ಕುರಿತೇ ಹೆಚ್ಚು ಮಾತನಾಡುತ್ತವೆ. ಜನರ ಅಳಲಿಗೆ ಕಿವಿಗೊಡುವುದಿಲ್ಲ. ಇಂತಹ ಸಮಯದಲ್ಲಿ ಜನರದನಿಯಾಗಿ ಕೆಲಸ ಮಾಡಲು ರೂಪುಗೊಂಡಿರುವ ಈದಿನ.ಕಾಮ್ ಮೇಲೆ ಜನರ ನಂಬಿಕೆ ಮೂಡಿದೆ. ರಾಜ್ಯದ ಹಿಂದುಳಿದ ಸಮುದಾಯಗಳು ಮತ್ತು ಪ್ರದೇಶಗಳ ದನಿಯಾಗಿರುವುದು ಸ್ವಾಗತಾರ್ಹ” ಎಂದು ಆಳಂದ ಶಾಸಕ ಬಿ.ಆರ್ ಪಾಟೀಲ್ ಹೇಳಿದರು.
ಕಲಬುರಗಿಯಲ್ಲಿ ನಡೆದ ಈದಿನ.ಕಾಮ್ ‘ಓದುಗರ ಸಮಾವೇಶ’ದಲ್ಲಿ ‘ಜೈ ಹಿಂದ್ – ಜಯ ಕರ್ನಾಟಕ’ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
“ಕರ್ನಾಟಕದಲ್ಲಿ ಲಂಕೇಶ್ ಪತ್ರಿಕೆ ತನ್ನದೇ ಛಾಪು ಮೂಡಿಸಿದೆ. ಜನರನ್ನು ಜಾಗೃತಿಗೊಳಿಸಿದೆ. ಅಂತೆಯೇ ಕೆಲವು ಪತ್ರಿಕೆಗಳು ಕಾರ್ಟೂನ್‌ಗಳ ಮೂಲಕವೂ ಜನರನ್ನು ಎಚ್ಚರಿಸುವ ಕೆಲಸ ಮಾಡಿದೆ. ಅದೇ ಹಾದಿಯಲ್ಲಿ ಈದಿನ.ಕಾಮ್ ಸಾಗುತ್ತಿದೆ. ಲಂಕೇಶ್ ಪತ್ರಿಕೆಯಂತೆ ಈದಿನ.ಕಾಮ್ ಕೂಡ ಜನರ ದನಿಯಾಗಿ ಬೆಳೆಯುವ ವಿಶ್ವಾಸವಿದೆ” ಎಂದರು.
“ರಾಜ್ಯದ ಹಲವು ಮಂತ್ರಿಗಳಿಗೆ ಔರಾದ, ಶಹಾಪುರ ಎಲ್ಲಿದೆ ಎಂಬುದೇ ಗೊತ್ತಿಲ್ಲ. ಅವರಿಗೆ ಯಾವ ಪ್ರದೇಶದಲ್ಲಿ ಏನಿದೆ ಎಂಬುದರ ಅರಿವಿಲ್ಲ. ಕಲ್ಯಾಣ ಕರ್ನಾಟಕಕ್ಕೆ ಬಹಳ ಅನ್ಯಾಯವಾಗಿದೆ. ಈ ಭಾಗದ ಹಲವು ಪ್ರದೇಶಗಳಿಗೆ ಹೆದ್ದಾರಿಗಳೇ ಇಲ್ಲ. ಸುತ್ತಿ-ಬಳಸಿ ಹೋಗಬೇಕು. ಹಿಂದುಳಿದ ಪ್ರದೇಶಗಳ ಸಮಸ್ಯೆ ಕುರಿತು ಸದನದಲ್ಲೂ ಚರ್ಚೆಗೆ ಹೆಚ್ಚು ಅವಕಾಶ ದೊರೆಯುತ್ತಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಈದಿನ.ಕಾಮ್ ದುಡಿವ, ತಳ ಸಮುದಾಯಗಳ ಹಾಗೂ ಹಿಂದುಳಿದ ಪ್ರದೇಶಗಳಿಗಾಗಿ ಇರುವ ಪಕ್ಷಪಾತಿ ಮಾಧ್ಯಮ: ಡಾ. ಎಚ್.ವಿ ವಾಸು
“ಕನಿಷ್ಟ 100 ದಿನವಾದರೂ ಸದನ ನಡೆಯಬೇಕೆಂದು ನಾವು ನಿರ್ಣಯ ಮಾಡಿದ್ದೆವು. ಆದರೆ, ರಾಜ್ಯದಲ್ಲಿ ಕೇವಲ 35 ದಿನ ಸದನ ನಡೆಯುತ್ತದೆ. ಉತ್ತರ ಪ್ರದೇಶದಂತಹ ಬೃಹತ್ ರಾಜ್ಯದಲ್ಲಿ ಬರೀ 17 ದಿನ ಮಾತ್ರವೇ ಅಧಿವೇಶನ ನಡೆಯುತ್ತದೆ. ಸಂಸತ್ ಅಧಿವೇಶನ ನಡೆಯುವ ದಿನಗಳೂ ಕಡಿಮೆಯಾಗಿವೆ. ಕರ್ನಾಟಕದ ಸದನದಲ್ಲಿಕಲ್ಯಾಣ ಕರ್ನಾಟಕ ಬಹುತೇಕ ಶಾಸಕರು ಭಾಗಿಯಾಗುವುದೇ ಇಲ್ಲ. ಈ ಭಾಗದ ಜನರ ಸಮಸ್ಯೆಗಳ ಕುರಿತು ಪ್ರಶ್ನೆ ಎತ್ತುವುದೇ ಇಲ್ಲ. ಸದನವು ಬಹುತೇಕ ಕರಾವಳಿ, ಮಲೆನಾಡು ಹಾಗೂ ಮೈಸೂರು ಭಾಗದ ಚರ್ಚೆಗೆ ಸೀಮಿತವಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.





