ಅಪರಾಧ ಚಟುವಟಿಕೆಗಳಲ್ಲಿ ಪೊಲೀಸರು ಭಾಗಿಯಾಗುವುದು ಕಂಡು ಬಂದರೆ, ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು. ಇಲಾಖೆಯ ಸೇವೆಯಿಂದ ವಜಾಗೊಳಿಸುವುದು ಸೇರಿದಂತೆ ಮುಲಾಜಿಲ್ಲದೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಗೃಹಸಚಿವ ಡಾ. ಜಿ ಪರಮೇಶ್ವರ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. “ಎಟಿಎಂ ದರೋಡೆ ಪ್ರಕರಣದಲ್ಲಿ ಏಳು ಆರೋಪಿಗಳನ್ನು ಬೆಂಗಳೂರು ನಗರ ಪೊಲೀಸರು ಹಿಡಿದಿದ್ದಾರೆ. ಇನ್ನು ಕೆಲವರು ಸಿಗಬೇಕಿದೆ. ಪ್ರಕರಣದಲ್ಲಿ ಇಲಾಖೆಯ ಒಬ್ಬ ವ್ಯಕ್ತಿ ಭಾಗಿಯಾಗಿದ್ದ. ಮೂರು ವಿಶೇಷ ತಂಡಗಳು ತನಿಖೆ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ. ನಗರ ಪೊಲೀಸ್ ಆಯುಕ್ತರು ಸೇರಿದಂತೆ ಪ್ರಕರಣದ ಜವಾಬ್ದಾರಿ ವಹಿಸಿಕೊಂಡ ಇಬ್ಬರು ಜಂಟಿ ಪೊಲೀಸ್ ಆಯುಕ್ತರಿಗೆ, ಇಬ್ಬರು ಡಿಸಿಪಿಗಳು ಮತ್ತು 200ಕ್ಕೂ ಹೆಚ್ಚು ಸಿಬ್ಬಂದಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ” ಎಂದು ಹೇಳಿದ್ದಾರೆ.
“ಈ ಘಟನೆ ಪೊಲೀಸ್ ಇಲಾಖೆಗೂ ಸವಾಲಾಗಿತ್ತು. ಬಹಳ ಎಚ್ಚರಿಕೆಯಿಂದ ಬುದ್ಧಿ ಉಪಯೋಗಿಸಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಕೆಲಸ ಮಾಡಿ ಪ್ರಕರಣವನ್ನು ಭೇದಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಇನ್ನುಮುಂದೆ ಇಲಾಖೆಯಲ್ಲಿ ಎಚ್ಚರಿಕೆಯಿಂದ ಇರಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಈ ರೀತಿಯ ಕೃತ್ಯದಲ್ಲಿ ಯಾರಾದರು ಭಾಗಿಯಾಗುವುದು ಕಂಡು ಬಂದರೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು. ಇಲಾಖೆಯ ಸೇವೆಯಿಂದ ವಜಾಗೊಳಿಸುವುದು ಸೇರಿದಂತೆ ಮುಲಾಜಿಲ್ಲದೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ನಿನ್ನೆ ಕೋರಮಂಗಲದಲ್ಲಿಯೂ ಘಟನೆ ನಡೆದಿದೆ. ಅರೆಸ್ಟ್ ಮಾಡಿದ್ದಾರೆ” ಎಂದು ಹೇಳಿದ್ದಾರೆ.




