ಹವಾಮಾನ ಬದಲಾವಣೆ, ಭೂಮಿ, ಶಾಶ್ವತ ಜಲಾನಯನ ನಿರ್ವಹಣೆಗೆ ಸಂಬಂಧಿಸಿದ ಜ್ಞಾನ ಮತ್ತು ಅನುಭವ ವಿನಿಮಯಕ್ಕೆ ಜಾಗತಿಕ ತಜ್ಞರು, ಸಂಶೋಧಕರು ಹಾಗೂ ವಿಜ್ಞಾನಿಗಳನ್ನು ಒಂದೇ ವೇದಿಕೆಯಲ್ಲಿ ತರಲಾಗುವುದು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಜಲಾನಯನ ಅಭಿವೃದ್ಧಿ ಇಲಾಖೆ, ಕೇಂದ್ರದ ಭೂ ಸಂಪನ್ಮೂಲ ಇಲಾಖೆ, ವಿಶ್ವ ಬ್ಯಾಂಕ್ ಹಾಗೂ ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ, ಮೂರು ದಿನಗಳ ಜಲಾನಯನ ಸ್ಥಿತಿಸ್ಥಾಪಕತ್ವ, ವಿಜ್ಞಾನ ಸುಸ್ಥಿರತೆ ಮತ್ತುಸಮಾಜವನ್ನು ಸಂಯೋಜಿಸುವ ಕುರಿತು ಅಂತರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
“ನಾಲ್ಕು ದಶಕಗಳಿಂದ ಜಲಾನಯನ ಅಭಿವೃದ್ಧಿಯಲ್ಲಿ ಕರ್ನಾಟಕ ರಾಜ್ಯ ಮುಂಚೂಣಿಯಲ್ಲಿದೆ. ವಿಶ್ವಬ್ಯಾಂಕ್ REWARD ಕಾರ್ಯಕ್ರಮದಡಿ ನಡೆಯುತ್ತಿರುವ LRI ಆಧಾರಿತ ಜಲಾನಯನ ಅಭಿವೃದ್ಧಿಯಿಂದ ರಾಜ್ಯದ ಸ್ಥೈರ್ಯವನ್ನು ಹೆಚ್ಚಿಸಿದೆ” ಎಂದರು.
ಭೂಸಂಪನ್ಮೂಲ ಇಲಾಖೆ, ಭಾರತ ಸರ್ಕಾರದ ಜಂಟಿ ಕಾರ್ಯದರ್ಶಿ ನಿತಿನ್ ಕಾಡೆ ಮಾತನಾಡಿ, “ಯಶಸ್ವಿ ಜಲಾನಯನ ಅಭಿವೃದ್ಧಿಯ ಎರಡುಸ್ತಂಭಗಳು ತಾಂತ್ರಿಕ ಸಾಮರ್ಥ್ಯ ಮತ್ತು ಬಲವಾದ ಆಡಳಿತವಾಗಿದೆ. REWARD ಕಾರ್ಯಕ್ರಮವು ದೇಶವ್ಯಾಪಿ PMKSY ಕಾರ್ಯಕ್ರಮದಲ್ಲಿ ವಿಸ್ತರಿಸಲು ಅಗತ್ಯವಾದ ತಾಂತ್ರಿಕ ಬಲವನ್ನು ಒದಗಿಸುತ್ತದೆ ಎಂದು ಅವರು ತಿಳಿಸಿದರು. ಸ್ಥಳೀಯ ಸಮುದಾಯಗಳು ಮತ್ತು ಸಂಸ್ಥೆಗಳನ್ನು ಬಲಪಡಿಸು ಮೂಲಕ ಅಭಿವೃದ್ಧಿಗೆ ಒತ್ತು ನೀಡುವ ಅಗತ್ಯವಿದೆ” ಎಂದು ಹೇಳಿದರು.
ವಿಶ್ವ ಬ್ಯಾಂಕಿನ ಮುಖ್ಯ ಕೃಷಿ ತಜ್ಞ ಆಂಡ್ರೂ ವುಡ್ ಲ್ಯಾಂಡ್ ಮಾತನಾಡಿ, “ಕರ್ನಾಟಕದಲ್ಲಿ REWARD ಕಾರ್ಯಕ್ರಮವು ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿರುವುದಕ್ಕೆ ಮೆಚ್ಚಿ, ಇತರ ರಾಜ್ಯಗಳಿಗೆ ಕರ್ನಾಟಕ ಮಾದರಿಯಾಗಿದೆ” ಎಂದು ಹೇಳಿದರು.
ಸಮ್ಮೇಳನದಲ್ಲಿ ಇಥಿಯೋಪಿಯಾ, ನೈಜೀರಿಯಾ, ಕಾಂಗೋ, ಕೆನಡಾ, ನೈರೋಬಿ, ಪ್ರಾನ್ಸ್, ಸೇರಿದಂತೆ ಹಲವು ದೇಶಗಳ ಪ್ರತಿನಿಧಿಗಳು, ದೇಶದ 24 ರಾಜ್ಯಗಳ ಜಲಾನಯನ ಅಭಿವೃದ್ಧಿ ಕಾರ್ಯಕ್ರಮಗಳ ನೋಡಲ್ ಎಜೆನ್ಸಿಗಳ ಮುಖ್ಯ ಕಾರ್ಯನಿರ್ವಹಕರು,ಮತ್ತು ನಿರ್ದೇಶಕರು, ಕರ್ನಾಟಕ ಜಲ ಸಂರಕ್ಷಣಾ ಮತ್ತು ಕೃಷಿ ಇಲಾಖೆ ಹಿರಿಯ ಅಧಿಕಾರಿಗಳು ಬೆಂಗಳೂರು ಕೃಷಿ ವಿವಿ ಕುಲಪತಿ ಡಾ.ಸುರೇಶ್, ಸೇರಿದಂತೆ ಇತರೆ ಗಣ್ಯರು ಭಾಗವಹಿಸಿದ್ದರು.





