ಆರೆಸ್ಸೆಸ್‌ನವರು ಪಥಸಂಚಲನೆ ವಿಚಾರ ಕುರಿತು ಪ್ರತಿಷ್ಠೆಯನ್ನಾಗಿ ಮಾಡಿಕೊಂಡಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಕಲಬುರಗಿಯಲ್ಲಿ ವರದಿಗಾರರೊಂದಿಗೆ ಮಾತನಾಡಿ, “ಅದೇ ದಿನದಂತೆ ಅಲ್ಲೇ ಪಥಸಂಚಲನ ಮಾಡುತ್ತೇವೆ ಎಂದು ಆರೆಸ್ಸೆಸ್ ಹೇಳಿದೆ. ಈ ಬಗ್ಗೆ ಕೆಲವು ಸಂಘಟನೆಗಳು ಕೂಡಾ ಅದೇ ದಿನ ಪಥಸಂಚಲನ ಮಾಡುವುದಾಗಿ ಅರ್ಜಿ ಸಲ್ಲಿಸಿವೆ. ಪ್ರಸ್ತುತ ಈ ವಿಚಾರ ಹೈಕೋರ್ಟ್‌ನಲ್ಲಿದೆ. ಹೈಕೋರ್ಟ್ ತಿರ್ಮಾನ ಏನು ಬರುತ್ತದೆಯೋ ಅದನ್ನು ಎಲ್ಲರೂ ಪಾಲಿಸಬೇಕಾಗುತ್ತದೆ” ಎಂದರು.
“ಪಥಸಂಚಲನದಲ್ಲಿ ಭಾಗವಹಿಸಲು ಕೆಲವರಿಗೆ ಕರೆ ನೀಡಲಾಗಿದೆ. ಅದರಲ್ಲೂ ವಿದ್ಯಾರ್ಥಿಗಳಿಗೆ ಕಾಲ್ ಮಾಡಿದ್ದಾರೆ. ಆ ಬಗ್ಗೆ ವಿಚಾರಿಸಲಾಗಿ , ಅವರಿಗೆ ದೇಶಭಕ್ತಿ ಇತ್ಯಾದಿ ಕುರಿತು ಹೇಳಲಾಗುತ್ತಿದೆ ಎನ್ನುವುದನ್ನು ಹೊರತುಪಡಿಸಿ ಬೇರೆ ಹೇಳಿರಲಿಲ್ಲ ಎನ್ನುವ ಮಾಹಿತಿ ಬಂದಿದೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಠಿಯಿಂದ ಹಾಗೂ ಸಮಾಜದ ಶಾಂತಿ ಕಾಪಾಡಲು ಆರೆಸ್ಸೆಸ್
ಅಷ್ಟೇ ಅಲ್ಲ ಬೇರೆ ಯಾವುದೇ ಸಂಘಟನೆಗಳಿಗೂ ಸರ್ಕಾರಿ ಜಾಗ ಬಳಸಿಕೊಳ್ಳದಂತೆ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಅದರಲ್ಲೇನು ತಪ್ಪಿದೆ” ಎಂದು ಪ್ರಶ್ನಿಸಿದರು.
“ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಕಾರ್ಯಕ್ರಮ ನಡೆಸದಂತೆ ಹೈಕೋರ್ಟ್ ಆದೇಶ ಇದೆ. ಆದರೆ, ಬೆಂಗಳೂರಿನಲ್ಲಿ ಆರೆಸ್ಸೆಸ್‌ನವರು ಪೊಲೀಸರ ಅನುಮತಿ ಪಡೆಯದೆ ಕೇವಲ ಮಾಹಿತಿಗಾಗಿ ಎಂದು ಬರೆದಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಆಕ್ಷೇಪಿಸಿದ್ದಾರೆ. ಯಾರಾದರೂ ಸಾವಿರಾರು ಜನರು ಸೇರಬೇಕಾದರೆ ಪೊಲೀಸ್ ಇಲಾಖೆ ಅನುಮತಿ ಪಡೆಯಬೇಕೇ ಹೊರತು ಮಾಹಿತಿ ನೀಡುವಂತಿಲ್ಲ. ಆರೆಸ್ಸೆಸ್ ಇದನ್ನು ಅನುಸರಿಸುವುದಾದರೆ, ನಾವೂ ಅನುಸರಿಸುತ್ತೇವೆ ಎಂದು ಇತರರು ಪ್ರಶ್ನೆ ಮಾಡಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
“ಸರ್ಕಾರದ ಆದೇಶದ ನಂತರ ಆರೆಸ್ಸೆಸ್ ಹಾಗೂ ಬಿಜೆಪಿಯವರು ನನ್ನ ಮೇಲೆ ಮುಗಿಬಿದ್ದರು. ಬಿಜೆಪಿಗೂ ಆರೆಸ್ಸೆಸ್‌ಗೂ ಏನು ಸಂಬಂಧ? ನಾನು ಪತ್ರ ಬರೆದ ನಂತರ ಸಾವಿರಾರು ಕರೆಗಳು ಬಂದವು. ಖರ್ಗೆ ಇದನ್ನು ಬಿಜೆಪಿಯವರು ಪ್ರಚಾರಕ್ಕೆ ಮಾಡುತ್ತಿದ್ದಾರೆ ಎಂದರು. ನಾನು ಸರ್ಕಾರದಲ್ಲಿ ಸಚಿವನಾಗಿದ್ದೇನೆ. ನನಗೆ ಯಾಕೆ ಪ್ರಚಾರ? ಒಬ್ಬ ಕಾಲ್ ಮಾಡಿ ನನಗೆ ಜೀವ ಬೆದರಿಕೆ ಹಾಕಿದ್ದಾನೆ. ನನ್ನ ಕುಟುಂಬ ವರ್ಗದವರನ್ನು ಕೂಡಾ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಇದನ್ನು ಬಿಜೆಪಿಯ ಯಾರೊಬ್ಬರೂ ಖಂಡಿಸಲಿಲ್ಲ. ಪೊಲೀಸರು ಸ್ವಯಂ ಪ್ರೇರಣೆಯಿಂದ ದೂರು ದಾಖಲಿಸಿಕೊಂಡು ಅವನನ್ನು ಅರೆಸ್ಟ್ ಮಾಡಿದ್ದಾರೆ. ನನಗೆ ಕರೆ ಮಾಡಿದ ವ್ಯಕ್ತಿ ತನ್ನ ಕಣಕಣದಲ್ಲಿಯೂ ಆರೆಸ್ಸೆಸ್ ಇದೆ ಅಂದಿದ್ದಾನೆ. ತನಿಖೆ ನಡೆಯುತ್ತಿದೆ. ಅರೆಸ್ಟ್ ಆದ ವ್ಯಕ್ತಿ ಬಡ ಕುಟುಂಬದವನು. ಆತನನ್ನು ಪ್ರಚೋದಿಸಿದವರು ಯಾರು? ಅವರಿಗೂ ಶಿಕ್ಷೆಯಾಗಬೇಕಲ್ಲವೇ” ಎಂದು ಪ್ರಶ್ನಿಸಿದರು.
ಈ ಸದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ನಿತೀಶ್ ಕುಮಾರ್ ಮುಖ್ಯಮಂತ್ರಿ ಎಂದು ಹೇಳುತ್ತಿಲ್ಲವೇಕೆ ಮೋದಿ-ಶಾ?
“ಕಲಬುರಗಿ ಸೇರಿದಂತೆ ಎಲ್ಲ ಕಡೆ ಮಾಹಿತಿ ನೀಡಿದ್ದಾರೆ ಹೊರತು ಅನುಮತಿ ಕೇಳಿಲ್ಲ. ಇವರು ಕೇಳಿದ ತಕ್ಷಣ ಭದ್ರತೆ ಕೊಡಲು ಪೊಲೀಸರಿಗೇನು ಕೆಲಸ ಇಲ್ಲವಾ? ಚಿತ್ತಾಪುರದಲ್ಲಿ ಅನುಮತಿ ನಿರಾಕರಿಸಿದ್ದರಿಂದ ಹೈಕೋರ್ಟ್ ಗೆ ಹೋದರು. ಇತರರು ಕೂಡಾ ನಮಗೂ ಅನುಮತಿ ಕೊಡಿ ಎಂದರು. ನೋಂದಣಿಯಾಗದ ಒಂದು ಸಂಸ್ಥೆಯ ಕಾರ್ಯಕರ್ತರು ಕೈಯಲ್ಲಿ ದೊಣ್ಣೆ ಹಿಡಿದು ಪಥಸಂಚಲನ ಮಾಡಿದರೆ, ಸಾರ್ವಜನಿಕರಿಗೆ ಭೀತಿ ಆಗುವುದಿಲ್ಲವಾ? ಏನಾದರೂ ಹೆಚ್ಚುಕಮ್ಮಿಯಾದರೆ ಯಾರು ಜವಾಬ್ದಾರರು? ಎಂದು ಕೇಳಿದರು.
ಆರೆಸ್ಸೆಸ್ ನೋಂದಣಿ ಪತ್ರದ ವಿಚಾರ ಕುರಿತಂತೆ ಹೈಕೋರ್ಟ್ ನಲ್ಲಿ ಸರಿಯಾದ ಸಮಯದಲ್ಲಿ ಪ್ರಶ್ನೆ ಮಾಡಲಾಗುವುದು. ಈಗ ಪಥಸಂಚಲನದ ವಿಚಾರ ಮಾತ್ರ ಬಂದಿದೆ. ಅನುಮತಿ ಸಿಕ್ಕರೆ ನೋಂದಣಿ ವಿಚಾರದಲ್ಲಿಯೂ ಕಾನೂನು ಪ್ರಕಾರ ನೋಡಿಕೊಳ್ಳಲಾಗುವುದು” ಎಂದರು.
“ನವೆಂಬರ್ ಕ್ರಾಂತಿ ಏನೂ ನಡೆಯಲ್ಲ. ಉತ್ತರಾಧಿಕಾರಿ ವಿಚಾರದಲ್ಲಿ ಯತೀಂದ್ರ ಅವರ ಹೇಳಿಕೆ ಅದು ಅವರು ವೈಯಕ್ತಿಕ ವಿಚಾರ. ಸಿಎಂ ಮುಂದಿನ ಚುನಾವಣೆ ನಿಲ್ಲುವ ವಿಚಾರ ಅದು ಅವರು ವೈಯಕ್ತಿಕ ವಿಚಾರ. ಎಲ್ಲಾ ಸಮಾಜದವರು ಸಿಎಂ ಆಗಬೇಕು ಎಂದು ಬಯಸುತ್ತಾರೆ. ದಲಿತ ಸಿಎಂ ವಿಚಾರ ಕೂಡಾ ಹಾಗೆ. ಅದನ್ನು ಎಲ್ಲಿ ಚರ್ಚೆ ನಡೆಸಬೇಕೋ ಅಲ್ಲೇ ನಡೆಸಬೇಕು” ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
“ಬೀದಿನಾಯಿಗಳ ಹಾವಳಿ ತಪ್ಪಿಸಲು ಕ್ರಮವಹಿಸಲಾಗುತ್ತಿದೆ. ಇದಕ್ಕಾಗಿ ರೂ 5 ಕೋಟಿ ಅನುದಾನ ನೀಡಲಾಗುತ್ತಿದೆ. ನಾಯಿಗಳ ಸೆಡ್ ನಿರ್ಮಾಣ ಮಾಡಿ ಅವುಗಳನ್ನು ಸುಸ್ಥಿತವಾಗಿ ಇರಿಸಲಾಗುವುದು” ಎಂದು ಸಚಿವರು ಹೇಳಿದರು.

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.




