ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ದಿತ್ವಾ ಚಂಡಮಾರುತ ಅಬ್ಬರಿಸುತ್ತಿದೆ. ಚಂಡಮಾರುತದಿಂದ ಮಳೆ ಆರ್ಭಟ ಹೆಚ್ಚಾಗಿದ್ದು, ಶ್ರೀಲಂಕಾ ಮತ್ತು ತಮಿಳುನಾಡು ತತ್ತರಿಸಿವೆ. ಕರ್ನಾಟಕದಲ್ಲಿಯೂ 12 ಜಿಲ್ಲೆಗಳಲ್ಲಿ ಡಿ.3ರಿಂದ ಧಾರಾಕಾರ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈಗಾಗಲೇ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ನಾನಾ ಭಾಗಗಳಲ್ಲಿ ಮಂಗಳವಾರ ಮಳೆಯಾಗಿದೆ. ಬುಧವಾರದಿಂದ ಮಳೆ ಮತ್ತಷ್ಟು ಬಿರುಸು ಪಡೆದುಕೊಳ್ಳಲಿದೆ ರಂದು ಇಲಾಖೆ ತಿಳಿಸಿದೆ.
ಕರ್ನಾಟಕದ ಹಾಸನ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಕೊಡಗು, ಮಂಡ್ಯ, ರಾಮನಗರ, ತುಮಕೂರು, ಕೋಲಾರ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.
ಇನ್ನು ತಮಿಳುನಾಡಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವೆಡೆ ಪ್ರವಾಹ ಉಂಟಾಗಿದೆ. ಚೆನ್ನೈ ಸೇರಿದಂತೆ ಒಟ್ಟು 5 ಜಿಲ್ಲೆಗಳಲ್ಲಿ ಶಾಲೆ ಮತ್ತು ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಚೆನ್ನೈ, ಕಾಂಚೀಪುರಂ ಮತ್ತು ತಿರುವಳ್ಳೂರು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದ್ದರೆ, ಚೆಂಗಲ್ಪಟ್ಟು, ವಿಲುಪ್ಪುರಂ ಹಾಗೂ ಕಳ್ಳಕುರಿಚ್ಚಿ ಜಿಲ್ಲೆಗಳಲ್ಲಿ ಶಾಲೆಗಳಿಗೆ ಮಾತ್ರ ರಜೆ ಘೋಷಿಸಲಾಗಿದೆ. ಪುದುಚೇರಿಯಲ್ಲೂ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಚೆನ್ನೈನ ಅಣ್ಣಾ ವಿಶ್ವವಿದ್ಯಾಲಯದ ಸೆಮಿಸ್ಟರ್ ಪರೀಕ್ಷೆಗಳನ್ನು ಸಹ ಮುಂದೂಡಲಾಗಿದೆ.
ತಮಿಳುನಾಡಿನ ನಾಗಪಟ್ಟಣಂ, ರಾಮನಾಥಪುರಂ, ಚೆನ್ನೈ, ತಿರುವಳ್ಳೂರು, ಕಾಂಚೀಪುರಂ, ಚೆಂಗಲ್ಪಟ್ಟು, ತೂತುಕುಡಿ ಮತ್ತು ತಿರುನೆಲ್ವೇಲಿ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಅತಿಯಾದ ಮಳೆಯಾಗಿದ್ದು, ಹಲವು ಜಲಾವೃತವಾಗಿವೆ. ಜನಜೀವನ ಅಸ್ತವ್ಯಸ್ತವಾಗಿದೆ.
ಕೇರಳದಲ್ಲೂ ವ್ಯಾಪಕ ಮಳೆಯಾಗಲಿದೆ. ಈ ಹಿನ್ನೆಲೆ, ಕೇರಳದ ತಿರುವನಂತಪುರಂ, ಕೊಲ್ಲಂ. ಪಯತ್ತನಂತಿಟ್ಟ, ಕೊಟ್ಟಾಯಂ, ಇಡುಕ್ಕಿ, ಪಾಲಕ್ಕಾಡ್ ಮತ್ತು ಮಲಪ್ಪುರಂ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಈ ಜಿಲ್ಲೆಗಳಲ್ಲಿ ವ್ಯಾಪ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.




