ವಿಧಾನಸಭೆ, ಲೋಕಸಭೆಯಲ್ಲಿ ಒಬಿಸಿಗಳಿಗೆ ಮೀಸಲಾತಿ ಬೇಕೇಬೇಕು: ಎ.ನಾರಾಯಣ

Date:

"ರಾಜಕೀಯದ ಲೆಕ್ಕಾಚಾರ ಬೇರೆ ರೀತಿಯಲ್ಲೇ ಆಪರೇಟ್ ಆಗುತ್ತದೆ. ಸಾಮಾಜಿಕ ನ್ಯಾಯದ ಸುತ್ತ ರಾಜಕೀಯ ಶಕ್ತಿ ರೂಪುಗೊಳ್ಳಬೇಕಾದರೆ ಹಿಂದುಳಿದ ವರ್ಗಗಳ ಜೊತೆಗೆ ಅಲ್ಪಸಂಖ್ಯಾತರು ಮತ್ತು ದಲಿತರು ಸೇರಬೇಕಾಗುತ್ತದೆ."

ವಿಧಾನಸಭೆ, ಲೋಕಸಭಾ ಕ್ಷೇತ್ರಗಳಲ್ಲಿ ಇತರೆ ಹಿಂದುಳಿದ ವರ್ಗಗಳಿಗೆ (ಒಬಿಸಿಗಳಿಗೆ) ಮೀಸಲಾತಿ ಜಾರಿಗೆ ತರಲು ಹೋರಾಡಬೇಕು. ರಾಜ್ಯ ಸರ್ಕಾರ ಮಾಡಲಿರುವ 2ನೇ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯು ರಾಜಕೀಯ ಮತ್ತು ಸಾಮಾಜಿಕ ಕ್ರಾಂತಿಗೆ ನಾಂದಿಯಾಗಬೇಕು ಎಂದು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಎ.ನಾರಾಯಣ ಹೇಳಿದರು.

‘ಕರ್ನಾಟಕ ದಮನಿತ ಹಿಂದುಳಿದ ಸಮುದಾಯಗಳ ಸಂಘಟನೆ’, ‘ಕರ್ನಾಟಕ ಸರ್ವ ಸಮುದಾಯಗಳ ಸಾಮಾಜಿಕ ನ್ಯಾಯ ಸಂರಕ್ಷಣಾ ಅಭಿಯಾನ’ದ ಸಹಯೋಗದಲ್ಲಿ ‘ಜಾಗೃತ ಕರ್ನಾಟಕ’ ರಾಜಕೀಯ ಸಂಘಟನೆಯು ಬೆಂಗಳೂರಿನ ಗಾಂಧಿಭವನದಲ್ಲಿ ಇಂದು (ಶನಿವಾರ) ಹಮ್ಮಿಕೊಂಡಿರುವ ‘ಕರ್ನಾಟಕ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2: ಈಡೇರುವುದೇ ಸರ್ವ ಸಮುದಾಯಗಳ ನಿರೀಕ್ಷೆ’ ವಿಚಾರ ಸಂಕಿರಣದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.

ಕೇಂದ್ರ ಸರ್ಕಾರ ಮಾಡಲಿರುವ ಕ್ಷೇತ್ರಗಳ ಪುನರ್ ವಿಂಗಡನೆಯಿಂದ ಲೋಕಸಭಾ ಸದಸ್ಯರ ಸಂಖ್ಯೆ ಹೆಚ್ಚಾಗಲಿದೆ. ಆಗ ನಮಗೆ ಒಬಿಸಿ ಮೀಸಲಾತಿ ಬೇಕೇಬೇಕು. ಕರ್ನಾಟಕದಲ್ಲಿ 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಒಬ್ಬನೇ ಒಬ್ಬ ಒಬಿಸಿ ಎಂ.ಪಿ. ಆಗಲಿಲ್ಲ. 25 ಕ್ಷೇತ್ರಗಳಲ್ಲಿ ಗೆದ್ದ ಬಿಜೆಪಿಯಲ್ಲಿ ಒಬ್ಬನೇ ಒಬ್ಬ ಒಬಿಸಿ ಇರಲಿಲ್ಲ. ಎಸ್‌ಸಿ, ಎಸ್‌ಟಿಗಳು ಬಾಬಾಸಾಹೇಬರ ದೂರದರ್ಶಿತ್ವದ ಫಲವಾಗಿ ಮೀಸಲು ಕ್ಷೇತ್ರಗಳನ್ನು ಪಡೆಯದೇ ಹೋಗಿದ್ದರೆ ಒಬ್ಬನೇ ಒಬ್ಬ ಎಸ್‌ಸಿ, ಎಸ್‌ಟಿಯೂ ಎಂ.ಪಿ ಆಗುತ್ತಿರಲಿಲ್ಲ. ಹೀಗಾಗಿ ನಾವು ಒಬಿಸಿ ಮೀಸಲಾತಿ ಜಾರಿಗಾಗಿ ಹೋರಾಡಬೇಕು ಎಂದು ಆಶಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಪಂಚಾಯಿತಿ ಹಾಗೂ ನಗರಸಭೆಯಲ್ಲಿ ಒಬಿಸಿ ಮೀಸಲಾತಿ ಸಿಗುವಂತೆಯೇ ವಿಧಾನಸಭೆ ಮತ್ತು ಸಂಸತ್ತಿನಲ್ಲಿ ನಮಗೆ ಒಬಿಸಿ ರಿಸರ್ವೇಷನ್ ಬೇಕು. ಪಂಚಾಯಿತಿ, ನಗರಸಭೆಗಳ ಚುನಾವಣೆಗಳು ನಡೆಯುತ್ತಿಲ್ಲ. ಯಾಕೆಂದರೆ ಅಲ್ಲಿ ಒಬಿಸಿ ರಿಸರ್ವೇಷನ್ ಇದೆ. ಯಾವುದಾದರೂ ಒಬಿಸಿ ಸಂಘಟನೆ ಈ ಬಗ್ಗೆ ಪ್ರಶ್ನೆ ಮಾಡಲಿಲ್ಲ. ನಮಗೆ ಸಿಕ್ಕಿರುವ ಅವಕಾಶಗಳ ಬಗ್ಗೆಯೂ ನಮಗೆ ನಿರ್ಲಕ್ಷ್ಯವಿದೆ. ಈ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಬೇಕು ಎಂಬ ಆಗ್ರಹ ಒಬಿಸಿಗಳಿಂದ ಬರಬೇಕಿತ್ತು. ನಾವು ಮುಂಚೂಣಿಯಲ್ಲಿ ಇಲ್ಲ. ಯಾಕೆಂದರೆ ನಾವು ಪರಿಸ್ಥಿತಿಯನ್ನು ಅರ್ಥಮಾಡಿಕೊಂಡಿಲ್ಲ. ಸರ್ಕಾರ ನಡೆಸಲಿರುವ ಎರಡನೇ ಜಾತಿ ಸಮೀಕ್ಷೆಯು ಆಡಳಿತಾತ್ಮಕ ಕೇವಲ ಪ್ರಕ್ರಿಯೆಯಲ್ಲ. ಇದು ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ, ರಾಜಕೀಯ ಕ್ರಾಂತಿಗೆ ನಾಂದಿ ಎಂದು ಭಾವಿಸೋಣ ಎಂದರು.

‘ಸಾಮಾಜಿಕ ನ್ಯಾಯದ ಪರ ಇರುವವರೆಲ್ಲ ಒಂದಾಗಿ’

“ಸಾಮಾಜಿಕ ನ್ಯಾಯದ ಪರ ಇರುವವರೆಲ್ಲ ಸೇರಿ ರಾಜಕೀಯ ಶಕ್ತಿ ರೂಪಿಸಬೇಕು. ಪ್ರಬಲ ಜಾತಿಗಳಲ್ಲಿಯೂ ಸಾಮಾಜಿಕ ನ್ಯಾಯದ ಪರ ಇರುವವರು ಇದ್ದಾರೆ. ಅವರನ್ನೆಲ್ಲ ಸೇರಿಸಿ ಸೋಷಿಯಲ್ ಜಸ್ಟಿಸ್ ಕೋಯಿಲೇಷನ್ ರೂಪುಗೊಳ್ಳಬೇಕು. ಅದರ ಆಧಾರದಲ್ಲಿ ರಾಜಕೀಯ ಶಕ್ತಿಯನ್ನು ದೇಶದ ಯಾವುದಾದರೂ ರಾಜ್ಯ ಸೃಷ್ಟಿಸುವುದಾದರೆ ಆಗ ಸಾಮಾಜಿಕ ನ್ಯಾಯದ ರಥ ಸಲೀಸಾಗಿ ಮುಂದುವರಿಯುತ್ತದೆ. ಅಲ್ಲಿಯತನಕ ಹಗ್ಗ ಜಗ್ಗಾಟದಲ್ಲಿ ನಮಗೆ ಸಿಕ್ಕಷ್ಟನ್ನು ಮಾತ್ರ ತೆಗೆದುಕೊಳ್ಳುವ ಅಲ್ಪತೃಪ್ತಿಗೆ ಒಳಗಾಗಬೇಕಾಗುತ್ತದೆ” ಎಂದು ಎ.ನಾರಾಯಣ ಅಭಿಪ್ರಾಯಪಟ್ಟರು.

WhatsApp Image 2025 08 30 at 11.44.36
ವಿಚಾರಸಂಕಿರಣದಲ್ಲಿ ಸೇರಿದ್ದ ಜನರು

“ಈ ಹಿಂದೆಯೂ ಸಾಮಾಜಿಕ ನ್ಯಾಯಕ್ಕೆ ಸಂಬಂಧಿಸಿದ ಹಲವು ಪ್ರಮುಖವಾದ ವರದಿಗಳು ಸಲ್ಲಿಕೆಯಾಗಿವೆ. ಸರ್ಕಾರಗಳು ಆ ವರದಿಗಳನ್ನು ಧೂಳು ಹಿಡಿಸಿವೆ. ಇದರ ಹಿಂದಿನ ರಾಜಕೀಯ ಅರ್ಥಮಾಡಿಕೊಳ್ಳಬೇಕು. ಸಾಮಾಜಿಕ ನ್ಯಾಯದ ಪ್ರಶ್ನೆ ಬಂದಾಗ ಧೈರ್ಯದಿಂದ ಮುನ್ನುಗ್ಗಿ ಅನುಷ್ಠಾನ ಮಾಡಲು ಸಾಧ್ಯವಾಗುವುದು ಯಾವಾಗ? ಮುಖ್ಯಮಂತ್ರಿಯಾದವರು ಸಾಮಾಜಿಕ ನ್ಯಾಯದ ಪರ ಇರುವ ಸಮುದಾಯಗಳ ಬೆಂಬಲದಿಂದ ಮಾತ್ರ ಅಧಿಕಾರದಲ್ಲಿದ್ದರೆ ಅಂತಹ ವರದಿ ಜಾರಿಯಾಗುತ್ತದೆ. ಸಾಮಾಜಿಕ ನ್ಯಾಯದ ಪರ ಇಲ್ಲದಿರುವ ವರ್ಗಗಳ, ಸಮುದಾಯಗಳ ಬೆಂಬಲದಲ್ಲಿ ಅಧಿಕಾರ ಉಳಿಸಿಕೊಳ್ಳಬೇಕಾದಾಗ ಯಾವುದೇ ಗಟ್ಟಿ ನಿರ್ಧಾರ ಸಾಧ್ಯವಾಗುವುದಿಲ್ಲ. ಜಾತಿಗಣತಿಯ ವರದಿ ವಿಚಾರ ಬಂದಾಗ ಕಾಂಗ್ರೆಸ್ ನಾಯಕ ಬಿ.ಕೆ.ಪ್ರಸಾದ್ ಅವರು, ‘ನಮ್ಮ ಸರ್ಕಾರ ಹೋದರೆ ಹೋಗಲಿ. ಸಮೀಕ್ಷೆಯನ್ನು ನಾವು ಒಪ್ಪಿಕೊಳ್ಳಲೇಬೇಕು’ ಎಂದಿದ್ದರು. ಸರ್ಕಾರ ಉಳಿಸಿಕೊಳ್ಳಬೇಕೋ, ವರದಿ ಜಾರಿಗೆ ತರಬೇಕೋ ಎಂಬ ಸಂದಿಗ್ಧ ಕಾಲವಿದು. ನೈತಿಕ ನಿಲುವಿಗೂ ರಾಜಕೀಯ ನಿಲುವಿಗೂ ಅಜಗಜಾಂತರ ವ್ಯತ್ಯಾಸವಿದೆ.  ಮುಂದೆ ಆಗಲಿರುವ ಜಾತಿ ಸಮೀಕ್ಷೆಯ ಸಂದರ್ಭದಲ್ಲೂ ಮತ್ತೆ ಈ ಸಮಸ್ಯೆಯಾಗಬಹುದು. ಐದಾರು ತಲೆಮಾರುಗಳು ಮುಗಿದರೂ ಇಂತಹದ್ದೇ ಸಂದಿಗ್ಧತೆಯನ್ನು ಮುಖ್ಯಮಂತ್ರಿಯಾದವರು ಎದುರಿಸಬಹುದು. ಇದಾಗಬಾರದು ಎಂದರೆ ಸಾಮಾಜಿಕ ನ್ಯಾಯದ ಪರ ಇರುವ ಎಲ್ಲ ವರ್ಗಗಳು ಸೇರಿ ಅವರದ್ದೇ ಆದಂತಹ ರಾಜಕೀಯ ಶಕ್ತಿಯನ್ನು ರೂಪಿಸಬೇಕು. ಅದೊಂದೇ ಪರಿಹಾರ. ಜಾಗೃತ ಕರ್ನಾಟಕದ ಈ ವೇದಿಕೆಯಿಂದ ಹೋಗಬೇಕಾದ ಸಂದೇಶವಿದು” ಎಂದು ತಿಳಿಸಿದರು.

ಇದನ್ನೂ ಓದಿರಿ: ಮನುಸ್ಮೃತಿಯ ಘರ್ ವಾಪ್ಸಿಯನ್ನು ಸಂವಿಧಾನ ತಡೆದು ನಿಲ್ಲಿಸಿದೆ: ಕೆ.ವಿ.ಪ್ರಭಾಕರ್

“ಎಲ್ಲಿಯವರೆಗೆ ನಿಮ್ಮ ಸಾಮಾಜಿಕ ನ್ಯಾಯದ ಕಾರ್ಯಸೂಚಿಯ ಜಾರಿಗೆ ಮತ್ತೆ ಯಾರದೋ ಬೆಂಬಲವನ್ನು ಆಶ್ರಯಿಸಿರುತ್ತೀರೋ ಅಲ್ಲಿಯತನಕ, ಸಾಮಾಜಿಕ ನ್ಯಾಯದ ರಥ ಒಂದು ಅಂಗುಲ ಮುಂದೆ ಹೋದರೆ ಎರಡು ಅಂಗುಲ ಹಿಂದಕ್ಕೆ ಎಳೆಯುವವರು ಇದ್ದೇ ಇರುತ್ತಾರೆ ಎಂಬ ಸತ್ಯ ನಮಗೆ ತಿಳಿದಿರಬೇಕು” ಎಂದು ಎಚ್ಚರಿಸಿದರು.

“ಸಾಮಾಜಿಕ ನ್ಯಾಯಪರ ಇರುವವರ ಕೋಯಿಲೇಷನ್ ಹೇಗೆ ಸಾಧ್ಯ? ಹಿಂದುಳಿದ ವರ್ಗದ ಸಮೂಹದೊಳಗೆ ಒಂದು ಒಡಕಿದೆ, ಅಪನಂಬಿಕೆ ಇದೆ, ಒಬ್ಬರನ್ನು ಕಂಡರೆ, ಇನ್ನೊಬ್ಬರಿಗೆ ಅಸಹನೆ ಎಂಬ ಸತ್ಯ ಮೊದಲ ಸಮೀಕ್ಷೆ ಹೊರಬಂದಾಗ ತಿಳಿಯಿತು. ಇದನ್ನು ಪರಿಹರಿಸಿಕೊಳ್ಳದಿದ್ದರೆ ಮುಂದೆ ನಡೆಯಲು ಸಾಧ್ಯವಿಲ್ಲ.  ಬಾಬಾಸಾಹೇಬರು ಹೇಳಿದ ‘ಮೈತ್ರಿ’ ಎಂಬ ಕರುಳ ಬಳ್ಳಿಯ ಸಂಬಂಧ ನಮ್ಮದಾಗಬೇಕು. ಪ್ರಾಂಜಲ ಮನಸ್ಸಿನಿಂದ ಕೊಳುಕೊಡುಗೆ ಬೆಳೆಸಿಕೊಳ್ಳಬೇಕು. ಹಿಂದುಳಿದ ವರ್ಗಗಳು ಎಲ್ಲ ಒಟ್ಟಿಗೆ ಸೇರಿದರೂ ಸಾಮಾಜಿಕ ನ್ಯಾಯ ಸಾಧ್ಯವಿಲ್ಲ. ರಾಜಕೀಯದ ಲೆಕ್ಕಾಚಾರ ಬೇರೆ ರೀತಿಯಲ್ಲೇ ಆಪರೇಟ್ ಆಗುತ್ತದೆ. ಸಾಮಾಜಿಕ ನ್ಯಾಯದ ಸುತ್ತ ರಾಜಕೀಯ ಶಕ್ತಿ ರೂಪುಗೊಳ್ಳಬೇಕಾದರೆ ಹಿಂದುಳಿದ ವರ್ಗಗಳ ಜೊತೆಗೆ ಅಲ್ಪಸಂಖ್ಯಾತರು ಮತ್ತು ದಲಿತರು ಸೇರಬೇಕಾಗುತ್ತದೆ. ನಮ್ಮ ಸಮಸ್ಯೆ ಬೇರೆಯಲ್ಲ, ಅವರ ಸಮಸ್ಯೆ ಬೇರೆಯಲ್ಲ ಎಂಬುದನ್ನು ಪರಸ್ಪರ ಅರ್ಥಮಾಡಿಕೊಳ್ಳಬೇಕು. ಅಲ್ಪಸಂಖ್ಯಾತರು ಮತ್ತು ದಲಿತರೊಂದಿಗೆ ಈ ಸಂಬಂಧವನ್ನು ಒಬಿಸಿಗಳು ಹೊಂದಿರಬೇಕು” ಎಂದು ಸಲಹೆ ನೀಡಿದರು.

ಇಂದು ಅಲ್ಪಸಂಖ್ಯಾತರು ಮತ್ತು ಎಸ್‌ಸಿ, ಎಸ್‌ಟಿಗಳ ವಿಚಾರವಾಗಿ ಒಬಿಸಿಗಳಿಂದ ಅಸಹನೆ, ದ್ವೇಷ ಹೊಮ್ಮುತ್ತಿದೆ. ಇದನ್ನು ಮರೆಯುವಂತಿಲ್ಲ. ಈ ಸತ್ಯವನ್ನು ಒಪ್ಪಿಕೊಳ್ಳಬೇಕು ಎಂದರು.

‘ಕೇಂದ್ರ ಸರ್ಕಾರದ ಜಾತಿಗಣತಿಗಿಂತ ರಾಜ್ಯದ ಜಾತಿ ಸಮೀಕ್ಷೆಗೆ ಮಹತ್ವವಿದೆ’

ರಾಜ್ಯ ಸರ್ಕಾರ ಜಾತಿ ಸಮೀಕ್ಷೆ ನಡೆಸಿದಾಗಲೂ ಅಪಪ್ರಚಾರ ನಡೆಸಲಾಯಿತು. ಸರ್ಕಾರ ಹಣವನ್ನು ವ್ಯರ್ಥ ಮಾಡುತ್ತಿದೆ ಎಂದು ಹೇಳಿದರು. ಎರಡನೇ ಸಮೀಕ್ಷೆ ಮಾಡಲು ಮುಂದಾದಾಗ, ‘ಈಗಾಗಲೇ ಕೇಂದ್ರ ಸರ್ಕಾರ ಜಾತಿಗಣತಿ ನಡೆಸುವುದಾಗಿ ಹೇಳಿದೆ. ರಾಜ್ಯ ಸರ್ಕಾರದ ಸಮೀಕ್ಷೆಗೆ ಯಾವುದೇ ಬೆಲೆ ಇಲ್ಲ’ ಎನ್ನುತ್ತಿದ್ದಾರೆ. ಆದರೆ ಜಾತಿಗಳ ವಾಸ್ತವ ಸ್ಥಿತಿ ಕೇಂದ್ರ ಸರ್ಕಾಗಳಿಗಿಂತ ರಾಜ್ಯ ಸರ್ಕಾರಗಳಿಗೆ ಹೆಚ್ಚು ತಿಳಿದಿರುತ್ತದೆ ಎಂದು ಎ.ನಾರಾಯಣ ವಿವರಿಸಿದರು.

ಇಷ್ಟೆಲ್ಲ ಅಪಪ್ರಚಾರ ನಡೆಯುತ್ತಿರುವಾಗ, ಆ ಗಣತಿಗೂ ರಾಜ್ಯದ ಗಣತಿಗೂ ವ್ಯತ್ಯಾಸ ಏನೆಂಬುದನ್ನು ತಿಳಿಸುವ ಪ್ರಯತ್ನ ನಾವು ಮಾಡಲಿಲ್ಲ. ರಾಜ್ಯದ ಸಮೀಕ್ಷೆಗೆ ಸಾಮಾಜಿಕ, ರಾಜಕೀಯ ದೃಷ್ಟಿ ಇದೆ ಎಂಬ ಒಗ್ಗಟ್ಟಿನ ದನಿ ಮೊಳಗಲಿಲ್ಲ. ಎರಡನೇ ಸಮೀಕ್ಷೆಗೂ ಟೀಕೆಗಳು ಬರಬಹುದು. ಕರ್ನಾಟಕದಲ್ಲಿ ಆಗುತ್ತಿರುವ ಸಮೀಕ್ಷೆಯು ಬೇರೆಯೇ ಆಯಾಮದ್ದು ಮತ್ತು ಬೇರೆಯೇ ಉದ್ದೇಶಗಳಿಗೆ ಸಂಬಂಧಿಸಿದ್ದು. ಕೇಂದ್ರದ ಸಮೀಕ್ಷೆಗೂ ರಾಜ್ಯದ ಸಮೀಕ್ಷೆಗೂ ಸಂಬಂಧವಿಲ್ಲ ಎಂಬುದನ್ನು ನಾವು ಹೇಳಬೇಕು. ಜಾತಿವಾರು ಲೆಕ್ಕಹಾಕುವುದನ್ನು ರಾಜ್ಯ ಸರ್ಕಾರ ಸಮರ್ಪಕವಾಗಿ ಮಾಡಿದಷ್ಟು ಕೇಂದ್ರ ಸರ್ಕಾರ ಮಾಡಲು ಸಾಧ್ಯವಿಲ್ಲ. ಮುಖ್ಯವಾಗಿ ಇದು ಕೇವಲ ತಲೆ ಎಣಿಕೆಯ ಸಮೀಕ್ಷೆಯಲ್ಲ. ಇಡೀ ಜನಸಮೂಹದ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಸ್ಥಿತಿಗತಿ ಏನಿದೆ ಎಂಬುದಕ್ಕೆ ಕನ್ನಡಿ ಹಿಡಿಯುತ್ತದೆ. ಕೇಂದ್ರ ಸರ್ಕಾರ ಇದನ್ನು ಮಾಡಲು ಸಾಧ್ಯವಾದರೂ, ಇದು ರಾಜ್ಯ ಸರ್ಕಾರದ ಜವಾಬ್ದಾರಿ. ಮಂಡಲ್ ತೀರ್ಪಿನಲ್ಲಿ ಸುಪ್ರೀಂಕೋರ್ಟ್ ಸೂಚಿಸಿರುವಂತೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗಗಳು ಕಾಲಕಾಲಕ್ಕೆ ಸಮೀಕ್ಷೆಗಳನ್ನು ನಡೆಸಬೇಕು. ಜಾತಿಗಳ ಬಗ್ಗೆ ರಾಜ್ಯ ಸರ್ಕಾರಗಳಿಗೆ ಇರುವ ಅರಿವು, ಕೇಂದ್ರ ಸರ್ಕಾರಗಳಿಗೆ ಇರಲು ಸಾಧ್ಯವಿಲ್ಲ. ಇವತ್ತು ಕೂಡ ರಾಜ್ಯ ಸರ್ಕಾರಗಳು ಕಳುಹಿಸುವ ಜಾತಿಗಳ ಪಟ್ಟಿಯನ್ನು ಇಟ್ಟುಕೊಂಡು ಮೀಸಲಾತಿಯನ್ನು ಕೇಂದ್ರ ಸರ್ಕಾರ ನಿರ್ಧರಿಸುತ್ತದೆ. ಇದು ರಾಜ್ಯದ ಸ್ವಾಯತ್ತತೆಯ ಪ್ರಶ್ನೆ ಇದೆ, ಸ್ವಾಭಿಮಾನದ ಪ್ರಶ್ನೆ, ಹಿಂದುಳಿದ ವರ್ಗಳ ಹಿತಾಸಕ್ತಿಯ ಪ್ರಶ್ನೆ ಎಂದು ವಿಶ್ಲೇಷಿಸಿದರು.

ಮೊದಲ ಸಮೀಕ್ಷೆಯ ವರದಿ ಬಂದ ಬಳಿಕ ನಮ್ಮ ಜಾತಿಯ ಸಂಖ್ಯೆ ಹೆಚ್ಚಾಗಿದೆ, ಆದರೆ ಕಡಿಮೆ ತೋರಿಸಲಾಗಿದೆ ಎಂದು ವಿವಾದ ಸೃಷ್ಟಿಸಲಾಯಿತು. ನಮ್ಮ ಜಾತಿಯ ಸಂಖ್ಯೆ ಹೆಚ್ಚಿದ್ದರೆ, ಅದರಿಂದ ಹೆಚ್ಚಿನ ಸವಲತ್ತು ಸಿಗುತ್ತದೆ, ಪ್ರಾತಿನಿಧ್ಯ ಸಿಗುತ್ತದೆ ಎಂಬ ಚಿಂತನೆ ಇದರ ಹಿಂದೆ ಇದ್ದಂತೆ ಕಾಣುತ್ತದೆ. ಸಾಮಾಜಿಕ ನ್ಯಾಯ ಎಂಬುದು ಸಂಖ್ಯೆಯ ಆಧಾರದಲ್ಲಿ ಮಾತ್ರ ನಿರ್ಧಾರ ಆಗುವುದಿಲ್ಲ. ಸಂಖ್ಯೆಯ ಆಧಾರದಲ್ಲಿ ಸಾಮಾಜಿಕ ನ್ಯಾಯವನ್ನು ನಿರ್ಧರಿಸುವುದಾಗಿದ್ದರೆ ಕೇಂದ್ರ ಸರ್ಕಾರ ಮಾಡಲು ಹೊರಟಿರುವ ತಲೆಎಣಿಕೆಯಷ್ಟೇ ಸಾಕಾಗುತ್ತಿತ್ತು. ಸಂಖ್ಯೆಯ ಆಧಾರದಲ್ಲಿ ಮೀಸಲಾತಿ ಹಂಚಿಕೆ, ಸವಲತ್ತು ನೀಡಬೇಕು ಎಂಬುದು ತಪ್ಪು. ಎಪ್ಪತ್ತೈದು ವರ್ಷಗಳಲ್ಲಿ ಯಾವ ಸಮೂಹ, ಯಾವ ಜಾತಿ ಎಷ್ಟು ಪಡೆದುಕೊಂಡಿದೆ, ಪಡೆದುಕೊಂಡಿಲ್ಲ, ಅಸಮಾನತೆ ಎಷ್ಟಿದೆ, ಯಾರು ಹಿಂದುಳಿದಿದ್ದಾರೆ ಎಂಬುದರ ಆಧಾರದಲ್ಲಿ ಮೀಸಲಾತಿ, ಸವಲತ್ತು ಸಿಗಬೇಕು ಎಂದು ಹೇಳಿದರು.

ಇದನ್ನೂ ಓದಿರಿ: ಜಾತಿ ಸಮೀಕ್ಷೆ ಬೇಕೆಂಬ ಕೂಗು ಒಬಿಸಿಗಳ ಒಳಗಿಂದ ಬರಬೇಕು: ಎಲ್‌.ಕೆ.ಅತೀಕ್

ಸಂಖ್ಯೆಯನ್ನು ಮುಂದಿಟ್ಟ ತಕ್ಷಣ ನಾವು ನಿರ್ಧರಿಸಬಾರದು. ಸಂಖ್ಯಾಬಲದಲ್ಲಿ ಎಲ್ಲವನ್ನೂ ಆಪೋಷಣೆ ತೆಗೆದುಕೊಳ್ಳುವುದು ಸಾಮಾಜಿಕ ನ್ಯಾಯವಲ್ಲ, ಪ್ರಜಾತಂತ್ರವಲ್ಲ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬುದು ಈ ಸಾಮಾಜಿಕ ನ್ಯಾಯದ ಆಶಯ. ದೇವರಾಜ ಅರಸು ಅವರು ಬದುಕಿದ್ದರೆ ಇಂತಹದ್ದೊಂದು ಗಣತಿ ನಡೆಯುತ್ತಿರುವ ಬಗ್ಗೆ ಸಂತೋಷ ಪಡುತ್ತಿದ್ದರು. ನಾಡು, ನುಡಿ, ಹಿಂದುಳಿದ ಜನರ ಬಗ್ಗೆ ಅರಸು ಅವರು ಕಂಡಿದ್ದ ಕನಸು ಸಾಕಾರಗೊಳ್ಳಲು ಈ ಸಮೀಕ್ಷೆ ಅಗತ್ಯ ಎಂದು ಮನದಟ್ಟು ಮಾಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ‘ಜಾಗೃತ ಕರ್ನಾಟಕ’ದ ಮುತ್ತುರಾಜ್, “ಸೆಪ್ಟೆಂಬರ್‌ 22ರಿಂದ ಸಮೀಕ್ಷೆ ನಡೆಯುತ್ತಿದೆ. ವೈಜ್ಞಾನಿಕವಾಗಿ ನಡೆದರೂ ಜಾರಿಯಾಗುತ್ತದೆಯಾ ಎಂಬುದೇ ಪ್ರಶ್ನೆ. ಹೀಗಾಗಿ ನಾವು ಜಾಗೃತರಾಗಬೇಕು. ಜಸ್ಟಿಸ್ ನಾಗಮೋಹನ್ ದಾಸ್ ಅವರು ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿ ಒಳಮೀಸಲಾತಿ ವರದಿ ಕೊಟ್ಟರು. ಆದರೆ ಸರ್ಕಾರ ಮಾಡಿದ ವರ್ಗೀಕರಣ ಅಲೆಮಾರಿಗಳಿಗೆ ಅನ್ಯಾಯ ಮಾಡಿದೆ. ಅಸ್ಪೃಶ್ಯರನ್ನು ಸ್ಪೃಶ್ಯರೊಂದಿಗೆ ಸೇರಿಸಿದ್ದಾರೆ. ಅಲೆಮಾರಿಗಳು ಸ್ಪೃಶ್ಯರೊಂದಿಗೆ ಸ್ಪರ್ಧಿಸಲು ಸಾಧ್ಯವಿಲ್ಲ. ಒಳಮೀಸಲಾತಿಯಲ್ಲಿ ಆದಂತೆ ಜಾತಿಗಣತಿ ವಿಚಾರದಲ್ಲೂ ಆಗಬಹುದು. ಹೀಗಾಗಿ ನಾವು ಒಗ್ಗೂಡಿರಬೇಕು” ಎಂದು ಅಭಿಪ್ರಾಯಪಟ್ಟರು.

ಅಬಕಾರಿ ಇಲಾಖೆಯ ನಿವೃತ್ತ ಹೆಚ್ಚುವರಿ ಆಯುಕ್ತ ಸಣ್ಣಭತ್ತಪ್ಪ ಸ್ವಾಗತಿಸಿದರು. ನಿವೃತ್ತ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಎಲ್‌.ಕೆ.ಅತೀಕ್‌ ಇದ್ದರು. ಶೋಷಿತ ವರ್ಗಗಳ ಒಕ್ಕೂಟದ ರಾಮಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...