ರಾಜ್ಯ ಸರ್ಕಾರವು ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಗಾಗಿ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಸಮಯವನ್ನು ದಿಢೀರ್ ಬದಲಾವಣೆ ಮಾಡಿರುವ ಸರ್ಕಾರದ ಕ್ರಮಕ್ಕೆ ಎಐಡಿಎಸ್‌ಒ ಆಕ್ಷೇಪ ವ್ಯಕ್ತಪಡಿಸಿದೆ.
“ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಸಮಯವನ್ನು ಬೆಳಗ್ಗೆ 8 ಗಂಟೆಯಿಂದ 1 ಗಂಟೆಯವರೆಗೆ ಮಾತ್ರ ಎಂದು ಬದಲಾಯಿಸಲಾಗಿದೆ. ಈ ಕ್ರಮವು ಅತ್ಯಂತ ಅಪ್ರಜಾತಾಂತ್ರಿಕವಾಗಿದ್ದು, ಇದರಿಂದ ಸರ್ಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಅಡ್ಡಿ ಎದುರಾಗುವುದರಲ್ಲಿ ಸಂಶಯವಿಲ್ಲ. ಇದರಿಂದಾಗಿ ಖಾಸಗಿ ಶಾಲಾ ಮತ್ತು ಸರ್ಕಾರಿ ಶಾಲಾ ಮಕ್ಕಳ ನಡುವೆ ಭೀಕರ ತಾರತಮ್ಯ ಉಂಟಾಗುವ ಆತಂಕ ಇದೆ”
“ಈಗಾಗಲೇ ಶಾಲಾ ಶಿಕ್ಷಕರು ಬೋಧನೆ ಮಾಡುವ ಜೊತೆಗೆ ಬೋಧಕೇತರ ಚಟುವಟಿಕೆಗಳ ಜವಾಬ್ದಾರಿಗಳನ್ನು ನಿರ್ವಹಿಸುವ ದುಸ್ಥಿತಿ ಇದ್ದು, ಈ ಸಮೀಕ್ಷೆಯ ಜವಾಬ್ದಾರಿಯು ಮತ್ತಷ್ಟು ಹೊರೆಯಾಗಲಿದೆ ಎಂದು ಶಿಕ್ಷಕರಿಂದಲೂ ಆರೋಪ ಕೇಳಿಬರುತ್ತಿದೆ. ಅಲ್ಲದೇ ಈ ಕ್ರಮವು ಸರ್ಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಸ್ಥಿರತೆ ಮತ್ತು ದೈನಂದಿನ ದಿನಚರಿಯನ್ನು ಹಾಳು ಮಾಡುತ್ತದೆ. ಬೋಧನೆ ಮತ್ತು ಕಲಿಕೆಯ ಕಾರ್ಯಕ್ಕೆ ತೊಂದರೆಯಾಗದಂತೆ ಪೂರಕ ಯೋಜನೆಯಿಲ್ಲದೆ, ಈ ಬಗ್ಗೆ ಚರ್ಚೆಯುನ್ನೂ ಮಾಡದೇ ಶಾಲಾ ಸಮಯವನ್ನು ಏಕಾಏಕಿ ಬದಲಾಯಿಸಿರುವುದು ಶೋಚನೀಯ ಸಂಗತಿ. ಜೊತೆಗೆ ಸರ್ಕಾರಿ ಶಾಲಾ ಮಕ್ಕಳ ಫಲಿತಾಂಶ ಕುಸಿಯುವ ಭೀತಿ ಉಂಟಾಗಿದೆ. ಈ ಬಾರಿ, ದಸರಾ ರಜೆ ಸೌಲಭ್ಯವನ್ನು ಪಡೆಯದ ಸರ್ಕಾರಿ ಶಾಲಾ ಶಿಕ್ಷಕರಿಗೆ ಇದೀಗ ಒಂದೇ ದಿನ, ಬೋಧನೆ ಮತ್ತು ಸಮೀಕ್ಷೆ ಎರಡನ್ನೂ ನಡೆಸುವ ಹೊರೆ ಹೇರಿರುವುದು ಸಮಂಜಸವಲ್ಲ”
ಇದನ್ನೂ ಓದಿ: ಸಾಮಾಜಿಕ – ಶೈಕ್ಷಣಿಕ ಸಮೀಕ್ಷೆ | 1.09 ಕೋಟಿ ಮನೆಗಳ ಸಮೀಕ್ಷೆ ಪೂರ್ಣ: ಕೊಪ್ಪಳ ಪ್ರಥಮ
“ಸಮೀಕ್ಷೆಯ ಕೆಲಸಕ್ಕೆ ಸರ್ಕಾರಿ ಶಾಲಾ ಸಮಯವನ್ನು ಬಲಿಕೊಡದೆ, ಮಕ್ಕಳ ಶೈಕ್ಷಣಿಕ ಭವಿಷ್ಯ ಹಿತದೃಷ್ಟಿಯಿಂದ ತನ್ನ ಆದೇಶವನ್ನು ಹಿಂಪಡೆದು, ಸಮೀಕ್ಷೆಯ ಕೆಲಸಕ್ಕೆ ಪರ್ಯಾಯ ವ್ಯವಸ್ಥೆಗೆ ಸರ್ಕಾರವು ಕ್ರಮ ಕೈಗೊಳ್ಳಬೇಕು” ಎಂದು ಎಐಡಿಎಸ್‌ಒ ಕರ್ನಾಟಕದ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





