ಹಿರಿಯ ಪತ್ರಕರ್ತ ಸಂಜೆವಾಣಿ ಶಿವಣ್ಣ ಎಂದೇ ಖ್ಯಾತರಾಗಿದ್ದ ಅ.ಚ. ಶಿವಣ್ಣ ಅವರು ಶುಕ್ರವಾರ ಮಧ್ಯಾಹ್ನ ನಿಧನರಾಗಿದ್ದಾರೆ.
ಮೃತರಿಗೆ 84 ವರ್ಷ ವಯಸ್ಸಾಗಿತ್ತು. ಪತ್ನಿ ಇಂದಿರಾ ಶಿವಣ್ಣ ಪುತ್ರ ವಿಕ್ಟೋರಿಯಾ ಆಸ್ಪತ್ರೆಯ ತಜ್ಞ ವೈದ್ಯ ಡಾ.ದೀಪಕ್ ಶಿವಣ್ಣ ಅವರನ್ನು ಶಿವಣ್ಣ ಅಗಲಿದ್ದಾರೆ.
ಪತ್ರಿಕೋದ್ಯಮ ಅಲ್ಲದೇ ರಾಜಕೀಯ ಕ್ಷೇತ್ರದಲ್ಲಿಯೂ ಹೆಚ್ಚು ಚಿರಪರಿಚಿತರಾಗಿದ್ದರು. ಶಿವಣ್ಣ ಅವರು 1941ರ ಡಿಸೆಂಬರ್ 10ರಂದು ದೊಡ್ಡಬಳ್ಳಾಪುರ ಸಮೀಪದ ಅರಳು ಮಲ್ಲಿಗೆಯಲ್ಲಿ ಜನಿಸಿದರು. ಶಿವಣ್ಣ ಅವರು ‘ಲೋಕವಾಣಿ’ ಮೂಲಕ ಲೇಖನಿ ಹಿಡಿದು ಪತ್ರಕರ್ತರಾಗಿ ಗುರುತಿಸಿಕೊಂಡರು. ಲೋಕವಾಣಿಯಲ್ಲಿ ವರದಿಗಾರರಾಗಿ, ಚಲನಚಿತ್ರ ವಿಮರ್ಶಕರಾಗಿ ಸೇವೆ ಸಲ್ಲಿಸಿ ಕಾಲಾನುಕ್ರಮದಲ್ಲಿ ಪ್ರಧಾನ ವರದಿಗಾರರಾಗಿ ಕಾರ್ಯ ನಿರ್ವಹಿಸಿ, ಅಲ್ಲಿಂದ ಜನಪ್ರಿಯ ಸಂಜೆ ದಿನಪತ್ರಿಕೆ ‘ಸಂಜೆವಾಣಿ’ಯಲ್ಲಿ 26 ವರ್ಷಗಳ ಕಾಲ ಮುಖ್ಯವರದಿಗಾರರಾಗಿ ಅವರು ಸಲ್ಲಿಸಿದ ಸೇವೆ ಮಹತ್ವವಾದದ್ದು.
ಶಿವಣ್ಣ ಅವರು ಕೇವಲ ಪತ್ರಿಕೋದ್ಯಮ ಅಲ್ಲದೆ ಅದಕ್ಕೆ ಸಂಬಂಧಿಸಿದ ಸಂಸ್ಥೆಗಳ ಚಟುವಟಿಕೆಗಳಲ್ಲಿಯೂ ಸಕ್ರಿಯರಾಗಿ ಪಾಲ್ಗೊಂಡು ಅವುಗಳ ಬೆಳವಣಿಗೆಗೂ ಕಾರಣೀಭೂತರಾಗಿದ್ದರು. ವಿಶೇಷವಾಗಿ ಬೆಂಗಳೂರು ಪ್ರೆಸ್‌ಕ್ಲಬ್, ಬೆಂಗಳೂರು ವರದಿಗಾರರ ಕೂಟಗಳಿಗೆ ಹೊಸ ರೂಪ ನೀಡುವಲ್ಲಿಯೂ ಅವರ ಪಾತ್ರ ಸ್ಮರಣೀಯ.
ಶಿವಣ್ಣ ಅವರಿಗೆ ರಾಜ್ಯ ಸರ್ಕಾರ 1992ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತು. ಬೆಂಗಳೂರು ಮಹಾನಗರ ಪಾಲಿಕೆಯ ಕೆಂಪೇಗೌಡ ಪ್ರಶಸ್ತಿ (1999), ಕನ್ನಡ ಸಾಹಿತ್ಯ ಪರಿಷತ್ತಿನ ಕಿಡಿ ಶೇಷಪ್ಪ ಪ್ರಶಸ್ತಿ (1999), 2004ರಲ್ಲಿ ಡಾ. ವಿಶ್ವೇಶ್ವರಯ್ಯ ಪ್ರಶಸ್ತಿ, 2009ರಲ್ಲಿ ಕನ್ನಡ ಸಾಹಿತ್ಯ ಪ್ರಶಸ್ತಿ, ಬೆಂಗಳೂರು ಪ್ರೆಸ್‌ಕ್ಲಬ್ ಪ್ರಶಸ್ತಿ ಹಾಗೂ ಬೆಂಗಳೂರು ಕೆ.ಯು.ಡಬ್ಲ್ಯೂ.ಜೆ ಪ್ರಶಸ್ತಿ, ಎಸ್.ವಿ. ಜಯಶೀಲರಾವ್ ಪ್ರಶಸ್ತಿ, ಅ.ನ.ಕೃ. ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಅವರಿಗೆ ಸಂದಿವೆ.





