ವಯೋಸಹಜ ಅನಾರೋಗ್ಯದಿಂದ ಭಾನುವಾರ ನಿಧನರಾದ ಕಾಂಗ್ರೆಸ್‌ನ ಹಿರಿಯ ಶಾಸಕ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರ ಅಂತ್ಯಕ್ರಿಯೆ ವೀರಶೈವ ಲಿಂಗಾಯತ ಸಂಪ್ರದಾಯದಂತೆ ನೆರೆವೇರಿತು.
ದಾವಣಗೆರೆ ಹೃದಯ ಭಾಗವಾದ ಹೈಸ್ಕೂಲ್ ಮೈದಾನದಲ್ಲಿ ಸೋಮವಾರ ಸಂಜೆ 4 ಗಂಟೆವರೆಗೂ ಶಾಮನೂರು ಶಿವಶಂಕರಪ್ಪ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗಿತ್ತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಗಣ್ಯರು, ಸಾರ್ವಜನಿಕರು ಹಾಗೂ ಅಭಿಮಾನಿಗಳು ಶಾಮನೂರು ಶಿವಶಂಕರಪ್ಪ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಬಳಿಕ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡರು.
ಹೈಸ್ಕೂಲ್ ಮೈದಾನದಿಂದ ಮೆರವಣಿಗೆ ಮೂಲಕ ಪಾರ್ಥಿವ ಶರೀರವನ್ನು ಆನೆಕೊಂಡದ ಶಾಮನೂರ ಮನೆತನದ ಕಲ್ಲೇಶ್ವರ ರೈಸ್ ಮಿಲ್ ಜಾಗಕ್ಕೆ ಕರೆತಂದು ವೀರಶೈವ ಸಂಪ್ರದಾಯದಂತೆ ವಿಧಿವಿಧಾನಗಳ ಮೂಲಕ ಅಂತ್ಯಸಂಸ್ಕಾರ ಮಾಡಲಾಯಿತು.
ಶಾಮನೂರು ಅವರಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಗೌರವ ವಂದನೆ ಸಲ್ಲಿಸಲಾಯಿತು. ರಾಷ್ಟ್ರಗೀತೆ ಹಾಡುವ ಮೂಲಕ ಗೌರವ ವಂದನೆ ಸಲ್ಲಿಸಲಾಯಿತು. ಪಾರ್ಥಿವ ಶರೀರದ ಮೇಲೆ ರಾಷ್ಟ್ರಧ್ವಜ ಹೊದಿಸಿ ಮುಖ್ಯಮಂತ್ರಿಗಳ ಸಮ್ಮುಖದಲ್ಲೇ
ಗಾಳಿಯಲ್ಲಿ 3 ಸುತ್ತು ಗುಂಡು ಹಾರಿಸಿ ಅಂತಿಮ ನಮನ ಸಲ್ಲಿಸಲಾಯಿತು.

ಎಂಸಿಸಿ ಬಡಾವಣೆಯ ‘ಬಿ’ ಬ್ಲಾಕ್‌ನಿಂದ ಹೊರಟ ಮೆರವಣಿಗೆಯಲ್ಲಿ ಭಜನೆ ತಂಡಗಳು ಭಕ್ತಿ ಗೀತೆ ಹಾಡಿದವು. ಪಾರ್ಥಿವ ಶರೀರದ ಕೈವಲ್ಯಕ್ಕೆ ಪುತ್ರ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೆಗಲು ಕೊಟ್ಟಿದ್ದರು. ರಸ್ತೆಯ ಇಕ್ಕೆಲಗಳಲ್ಲಿ ಸಾಲಾಗಿ ನಿಂತಿರುವ ಜನರು ಹೂಹಾರ ಹಾಕಿ ಗೌರವ ಸಲ್ಲಿಸಿದರು. ಶಾಮನೂರು ರಸ್ತೆ, ಗುಂಡಿ ವೃತ್ತ, ಚರ್ಚ್ ರಸ್ತೆ, ರಾಮ್ ಅಂಡ್ ಕೋ ವೃತ್ತ, ಎವಿಕೆ ಕಾಲೇಜು ರಸ್ತೆಯ ಮೂಲಕ ಸಾಗಿದ ಮೆರವಣಿಗೆ ಹೈಸ್ಕೂಲ್ ಮೈದಾನ ತಲುಪಿತು.
ಗೃಹ ಸಚಿವ ಜಿ.ಪರಮೇಶ್ವರ, ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜ ಸಚಿವರಾದ ಎಸ್.ಎ.ರವೀಂದ್ರನಾಥ, ಎಂ.ಪಿ.ರೇಣುಕಾಚಾರ್ಯ, ಶಾಸಕ ಕೆ.ಎಸ್. ಬಸವಂತಪ್ಪ, ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅಂತಿಮ ದರ್ಶನ ಪಡೆದರು.





