ಮಹಾತ್ಮಾ ಗಾಂಧಿಯನ್ನು ಕೊಂದ ಗೋಡ್ಸೆಗೂ, ಬಾಬಾರಿ ಮಸೀದಿ ಧ್ವಂಸ ಮಾಡಿದ ಸಂಘಿಗಳಿಗೂ, ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶರಿಗೆ ಶೂ ಎಸೆದ ಸನಾತನಿ ವಕೀಲನಿಗೂ ಸಾಮ್ಯತೆಗಳಿವೆಯೇ ಎಂದು ಎಐಸಿಸಿ ಮುಖಂಡ ಮತ್ತು ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ಪ್ರಶ್ನಿಸಿದ್ದಾರೆ.
“ಯಾವ ಸಿದ್ಧಾಂತ ದೇಶದಲ್ಲಿ ದ್ವೇಷವನ್ನು ಹರಡುತ್ತಿದ್ದಿಯೋ, ಯಾವ ಸಿದ್ಧಾಂತ ದೇಶದ ಭಾವೈಕ್ಯತೆಗೆ ಧಕ್ಕೆ ತರುತ್ತಿದೆಯೋ, ಯಾವ ಸಿದ್ಧಾಂತ ಸಂವಿಧಾನದ ಮೇಲೆಯೇ ದಾಳಿ ನಡೆಸುತ್ತಿದಿಯೋ, ಯಾವ ಸಿದ್ಧಾಂತ ದೇಶದಲ್ಲಿ ಭಯೋತ್ಪದಾನೆಯನ್ನು ಹುಟ್ಟು ಹಾಕುತ್ತಿದೆಯೋ, ಅದೇ ಸಿದ್ಧಾಂತವೇ ಇಂದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆಯುವಂತೆ ಮಾಡಿರುವುದು ಸ್ಪಷ್ಟ” ಎಂದು ಎಕ್ಸ್ ಖಾತೆಯಲ್ಲಿ ಖಂಡಿಸಿದ್ದಾರೆ.
“ದೇಶದ ಸರ್ವೋಚ್ಛ ನ್ಯಾಯಾಧೀಶರ ಮೇಲೆ ಶೂ ಎಸೆದಿರುವ ದುಷ್ಕರ್ಮಿಯ ಪರದೆಯ ಹಿಂದಿನ ಸೂತ್ರದಾರರು ಯಾರು? ದೇಶದ ಅಮಾಯಕ ಜನರ ತಲೆಯಲ್ಲಿ ಮನುಷ್ಯ ವಿರೋಧಿ ಮನಸ್ಥಿತಿ ತುಂಬುತ್ತಿರುವವವರು ಯಾರು? ಅದಕ್ಕೆ ಮೂಲ ಕಾರಣವೇ ಸಮಾಜದಲ್ಲಿ ಆರ್.ಎಸ್.ಎಸ್ ಬಿತ್ತುತ್ತಿರುವ ದ್ವೇಷ” ಎಂದು ಆರೋಪಿಸಿದ್ದಾರೆ.
“ಆರ್‌ಎಸ್‌ಎಸ್ ಸಿದ್ಧಾಂತದ ವಿರೋಧಿಗಳಾದ ಸಂವಿಧಾನದ ರಕ್ಷಕರು, ಪ್ರಜಾಪ್ರಭುತ್ವವಾದಿಗಳು, ಸಮಾನತಾವಾದಿಗಳು,
ಜಾತ್ಯಾತೀತವಾದಿಗಳನ್ನು ಇಲ್ಲವಾಗಿಸುವ ವಿಷಕಾರಿ, ದ್ವೇಷಮಯ ವಾತಾವರಣವನ್ನು ಸಮಾಜದಲ್ಲಿ ಆರ್.ಎಸ್.ಎಸ್ ಹುಟ್ಟು ಹಾಕಿದೆ. ಇಂತಹ ವಿಚ್ಛದ್ರಕಾರಿ ಶಕ್ತಿಗಳ ವಿರುದ್ಧ ದೇಶ ಒಟ್ಟಾಗಿ ಮುಖಾಮುಖಿಯಾಗಬೇಕಿದೆ” ಎಂದು ಹೇಳಿದ್ದಾರೆ.
“ದಲಿತ ಸಮುದಾಯವನ್ನು ಪ್ರತಿನಿಧಿಸುವ ಸುಪ್ರೀಂಕೋರ್ಟ್ ನ ನ್ಯಾಯಾಧೀಶರ ಮೇಲಿನ ದಾಳಿಯನ್ನು ಅತ್ಯಂತ ಕಟುವಾಗಿ ಖಂಡಿಸುತ್ತೇನೆ. ಸಿಜೆಐ ಗವಾಯಿ ಅವರ ಬೆನ್ನಿಗೆ ದೇಶದ ಪ್ರಜ್ಞಾವಂತ ಜನರು ಗಟ್ಟಿಯಾಗಿ ನಿಲ್ಲಬೇಕಿದೆ” ಎಂದು ಮನವಿ ಮಾಡಿದ್ದಾರೆ.





