ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯುದ್ಧ ಬಂದಾಗ ಶಸ್ತ್ರಾಭ್ಯಾಸ ಮಾಡುವ ಬದಲಾಗಿ ಕಬ್ಬು ಅರೆಯುವ ಒಂದು ಅಥವಾ ಎರಡು ತಿಂಗಳ ಮೊದಲೇ ಈ ಸಂಧಾನ ಸಭೆ ಕರೆಯಬೇಕಿತ್ತು. ತಡ ಆಗಿದೆ. ಆದರೂ ಪರವಾಗಿಲ್ಲ; ರೈತರ ತಾಳ್ಮೆ ಪರೀಕ್ಷಿಸದಿರಿ. ಪ್ರಧಾನಿಯವರಿಗೆ ಪತ್ರ ಬರೆಯವುದಾಗಿ ಕೈಕಟ್ಟಿ ಸುಮ್ಮನೆ ಕುಳಿತುಕೊಳ್ಳಬೇಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, “ಮುಖ್ಯಮಂತ್ರಿ ಕುರ್ಚಿಗೆ ಎಷ್ಟು ತಲೆ ಕೆಡಿಸಿಕೊಂಡಿದ್ದೀರೋ ಅದರ ಶೇ. 10ರಷ್ಟನ್ನು ಕಬ್ಬು ಬೆಳೆಗಾರರ ಬಗ್ಗೆ ತಲೆ ಕೆಡಿಸಿಕೊಳ್ಳಿ. ಆಗ ರೈತರು ನಿಮ್ಮನ್ನು ಪೂಜೆ ಮಾಡುತ್ತಾರೆ. ನನಗೆ ಇದರಲ್ಲಿ ರಾಜಕೀಯ ಮಾಡುವ ಅವಶ್ಯಕತೆ ಖಂಡಿತ ಇಲ್ಲ. ಕಬ್ಬು ಬೆಳೆಗಾರರ ಹಿತಾಸಕ್ತಿ ಕಾಪಾಡುವುದಷ್ಟೇ ನಮ್ಮ ಬದ್ಧತೆ” ಎಂದರು.
“ಕಬ್ಬು ಬೆಳೆಗಾರರು ಬೀದಿಗಿಳಿದು ಹೋರಾಟ ಮಾಡುವ ಪರಿಸ್ಥಿತಿ ಬರಬಾರದಿತ್ತು. ಕಬ್ಬು ಬೆಳೆಗಾರರ ವಿಚಾರದಲ್ಲಿ ಮುಖ್ಯಮಂತ್ರಿಗಳು ಅಸಡ್ಡೆ ತೋರಿದ್ದಾರೆ. ಈಗ ಹೋರಾಟ ತೀವ್ರಗೊಂಡಿದೆ. ಬೀದಿಗಿಳಿದು ಪ್ರತಿಭಟನೆ ನಡೆಯುತ್ತಿದೆ. ಈಗ ನೀವು ಪ್ರಧಾನಿಯವರಿಗೆ ಪತ್ರ ಬರೆದು ಕೇಂದ್ರ ಸರಕಾರದ ಮೇಲೆ ದೂರುವ ಪ್ರಯತ್ನ ಮಾಡುತ್ತೀರಾ” ಎಂದು ಪ್ರಶ್ನಿಸಿದರು.
“ಎಫ್‍ಆರ್‌ಪಿಯನ್ನು ಪ್ರಧಾನಿಯವರೊಬ್ಬರೇ ತೀರ್ಮಾನ ಮಾಡುವುದಿಲ್ಲ. ಎಲ್ಲ ರಾಜ್ಯಗಳ ಅಧಿಕಾರಿಗಳು, ತಜ್ಞರ ಅಭಿಪ್ರಾಯ ಪಡೆದು ಇದನ್ನು ತೀರ್ಮಾನ ಮಾಡುತ್ತಾರೆ. ಕೇಂದ್ರ ಎಷ್ಟೇ ಎಫ್‍ಆರ್‌ಪಿ ನಿಗದಿ ಮಾಡಿದರೂ ರಾಜ್ಯ ಸಲಹಾ ಬೆಲೆ (ಎಸ್‍ಎಪಿ) ಹೆಚ್ಚು ದರ ಕೊಡಲು ಅವಕಾಶವಿದೆ. ಮುಖ್ಯಮಂತ್ರಿಗಳು ಮಾನವೀಯತೆ ದೃಷ್ಟಿಯಿಂದ ಯೋಚಿಸಬೇಕು” ಎಂದು ಒತ್ತಾಯಿಸಿದರು.
“ಹಿಂದೆ ವಿಠಲ ಅರಭಾವಿಯವರ ಆತ್ಮಹತ್ಯೆ ಮಾಡಿಕೊಂಡದ್ದು ನಿಮಗೆ ನೆನಪಿದೆಯೇ ಸಿದ್ದರಾಮಯ್ಯನವರೇ? ಆಗ ಕೂಡ ನೀವು ತಾತ್ಸಾರ ಮಾಡಿದ್ದಿರಿ. ಕಬ್ಬು ಅರೆದಾಗ ಮಾತ್ರ ಅಬಕಾರಿ ಇಲಾಖೆಗೆ ಕಂದಾಯ ಹೆಚ್ಚಾಗಲು ಸಾಧ್ಯ. ಆದಾಯ ಬರುವುದರ ಬಗ್ಗೆ ಚಿಂತಿಸುವ ನೀವು ಕಬ್ಬಿಗೆ ವೈಜ್ಞಾನಿಕ ದರ ನಿಗದಿಯ ಜವಾಬ್ದಾರಿ ನಿಭಾಯಿಸುತ್ತಿಲ್ಲ” ಎಂದು ಆಕ್ಷೇಪಿಸಿದರು.
“ಶಾಸಕ ಯಶವಂತರಾಯಗೌಡ ಪಾಟೀಲರು ಕಬ್ಬು ಬೆಳೆಗಾರರ ಹೋರಾಟಗಾರರನ್ನು ಕಬ್ಬು ಬೆಳೆಗಾರರೇ ಅಲ್ಲ ಎಂದಿದ್ದಾರೆ. ಅವರಿಗೆ ನಾಚಿಕೆ ಆಗಬೇಕು. ಇದು ಕಬ್ಬು ಬೆಳೆಗಾರರಿಗೆ ಮಾಡಿದ ಅವಮಾನ. ತಕ್ಷಣ ಅವರು ಕ್ಷಮೆ ಯಾಚಿಸಬೇಕು” ಎಂದು ಆಗ್ರಹಿಸಿದರು.





