ಸಿಎಂ ಸಿದ್ದರಾಮಯ್ಯ ಅವರು ಎಂದೂ ಕೊಟ್ಟ ಮಾತನ್ನು ತಪ್ಪುವವರಲ್ಲ. ಅವರು ಯಾರಿಗೆ ಮಾತು ಕೊಟ್ಟರೂ ತಪ್ಪುವುದಿಲ್ಲ ಎಂದು ಬಮೂಲ್ ಅಧ್ಯಕ್ಷ ಡಿ ಕೆ ಸುರೇಶ್ ಹೇಳಿದರು.
ಸಿಎಂ ಬದಲಾವಣೆ, ಸಚಿವ ಸಂಪುಟನ ಪುನಾರಚನೆ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ಚರ್ಚೆಯಲ್ಲಿರುವಾಗ ಡಿ ಕೆ ಸುರೇಶ್ ಮಾತು ಮಾರ್ಮಿಕವಾಗಿದೆ. ಸದಾಶಿವನಗರ ನಿವಾಸದಲ್ಲಿ ಸುರೇಶ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದರು.
ನೀವು ಸಿಎಂ ಅವರನ್ನು ಭೇಟಿ ಮಾಡಿದಾಗ ಅಧಿಕಾರ ಹಸ್ತಾಂತರ ವಿಚಾರ ಚರ್ಚೆ ಮಾಡಿದಿರಾ ಎಂದು ಕೇಳಿದಾಗ, “ಸಿಎಂ ಅವರ ಬಳಿ ಅಧಿಕಾರ ಹಸ್ತಾಂತರ ವಿಚಾರ ಚರ್ಚೆ ಮಾಡಿಲ್ಲ. ಅಷ್ಟು ದೊಡ್ಡವನೂ ನಾನಲ್ಲ. ಅವರು ಹಿರಿಯ ನಾಯಕರು. ಅವರಿಗೆ ತಮ್ಮದೇ ಆದ ಜವಾಬ್ದಾರಿ ಇದೆ. ಕರ್ನಾಟಕದ ಜನರಿಗೆ ಕೊಟ್ಟ ಎಲ್ಲಾ ಭರವಸೆ ಈಡೇರಿಸಿದ್ದಾರೆ. ಈ ಸರ್ಕಾರದಲ್ಲೂ ಅವರು ಯಾರಿಗೆ ಯಾವ ಮಾತು ಕೊಟ್ಟಿದ್ದಾರೋ ಅದರಂತೆ ನಡೆಯುತ್ತಿದ್ದಾರೆ” ಎಂದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷವಾಗಿರುವ ಬಗ್ಗೆ ಕೇಳಿದಾಗ, “ಕರ್ನಾಟಕದ ಜನರ ಆಶೀರ್ವಾದದಿಂದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಇಂದಿಗೆ ಎರಡೂವರೆ ವರ್ಷ ತುಂಬಿದೆ. ಕೊಟ್ಟ ಮಾತಿನಂತೆ ಮುಖ್ಯಮಂತ್ರಿಗಳು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡಿದ್ದಾರೆ. ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆ” ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರು ಪವರ್ ಶೇರಿಂಗ್ ವಿಚಾರದಲ್ಲೂ ಕೊಟ್ಟ ಮಾತಿನಂತೆ ನಡೆಯುತ್ತಾರಾ ಎಂದು ಕೇಳಿದಾಗ, “ಅದು ನನಗೆ ಗೊತ್ತಿಲ್ಲದ ವಿಚಾರ. ಅವರು ಈಗ ಮುಖ್ಯಮಂತ್ರಿ ಆಗಿದ್ದಾರೆ. ಈ ವಿಚಾರವನ್ನು ಪಕ್ಷದ ವರಿಷ್ಠರು ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡುತ್ತಾರೆ. ಈ ವಿಚಾರದ ಬಗ್ಗೆ ನನಗೆ ಏನೂ ಗೊತ್ತಿಲ್ಲ. ನೀವು ಮಾಧ್ಯಮಗಳಲ್ಲಿ ತೋರಿಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ” ಎಂದರು.
ಶಿವಕುಮಾರ್ ಅವರು ಎರಡೂವರೆ ವರ್ಷಗಳ ಬಳಿಕ ಸಿಎಂ ಆಗುತ್ತಾರೆ ಎಂಬ ಚರ್ಚೆ ಅಭಿಮಾನಿ, ಕಾರ್ಯಕರ್ತರಲ್ಲಿದೆ ಎಂದು ಕೇಳಿದಾಗ, “ಎಲ್ಲರಿಗೂ ಆ ಆಸೆ ಇದೆ. ಅವರ ಅಭಿಮಾನಿಗಳು ಹೇಳುತ್ತಿರುತ್ತಾರೆ, ಪೂಜೆ ಮಾಡುತ್ತಿರುತ್ತಾರೆ, ಅವರಿಗೆ ಏನು ಬೇಕೋ ಮಾಡುತ್ತಿರುತ್ತಾರೆ. ನಾವುಗಳು ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡುವವರು. ಪಕ್ಷ ಏನು ಹೇಳುತ್ತದೆಯೋ ಅದನ್ನು ಸಿಎಂ, ಡಿಸಿಎಂ ಸೇರಿದಂತೆ ಎಲ್ಲಾ ನಾಯಕರು ಪಾಲನೆ ಮಾಡುತ್ತಾರೆ. ಇದು ನಮ್ಮ, ನಿಮ್ಮ ಮುಂದೆ ನಡೆಯುವ ಚರ್ಚೆಯಲ್ಲ. ಇದನ್ನು ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ. ಸದ್ಯಕ್ಕೆ ಸಿಎಂ ಹುದ್ದೆ ಖಾಲಿ ಇಲ್ಲ. ಏನೇ ತೀರ್ಮಾನ ಮಾಡುವುದಿದ್ದರೂ ಹೈಕಮಾಂಡ್ ತೀರ್ಮಾನ ಮಾಡಬೇಕು. ಇಲ್ಲಿ ವೈಯಕ್ತಿಕ ವಿಚಾರ ಇಲ್ಲ. ” ಎಂದು ತಿಳಿಸಿದರು.
ಶಿವಕುಮಾರ್ ಅವರು ಪಕ್ಷದ ಅಧ್ಯಕ್ಷರಾಗಿ ಆರು ವರ್ಷ ಪೂರ್ಣಗೊಳ್ಳುತ್ತಿದೆ ಎಂದು ಕೇಳಿದಾಗ, “ಅವರು ಪಕ್ಷದ ಕೆಲಸ ಮಾಡುತ್ತಿದ್ದು, ನಾಳೆ ಬೇರೆಯವರು ಅಧ್ಯಕ್ಷರಾದರೆ ಅವರಿಗೆ ಸಂಪೂರ್ಣ ಬೆಂಬಲ ನೀಡುತ್ತಾರೆ. ಯಾರೇ ಅಧ್ಯಕ್ಷರಾದರೂ ಅವರಿಗೆ ಅವಕಾಶ ಮಾಡಿಕೊಡಲು ಶಿವಕುಮಾರ್ ಅವರು ಸಿದ್ಧರಿದ್ದಾರೆ” ಎಂದು ಹೇಳಿದರು.
ಅಧಿಕಾರದ ದಾಖಲೆ ಬರೆಯುವ ಕನಸು ಶಿವಕುಮಾರ್ ಅವರಿಗಿಲ್ಲ
ಡಿ.ಕೆ. ಶಿವಕುಮಾರ್ ಅವರಿಗೆ 8 ವರ್ಷಕ್ಕಿಂತ ಹೆಚ್ಚು ಅವಧಿಗೆ ಕೆಪಿಸಿಸಿ ಅಧ್ಯಕ್ಷರಾಗಿ ದಾಖಲೆ ಬರೆಯುವ ಇಚ್ಛೆ ಇದೆಯೇ ಎಂದು ಕೇಳಿದಾಗ, “ಆ ರೀತಿ ಏನೂ ಇಲ್ಲ. ಅಧಿಕಾರದ ದಾಖಲೆ ಮಾಡುವ ಕನಸು ಅವರದ್ದಲ್ಲ. ರಾಜಕಾರಣದಲ್ಲಿ ಶಾಶ್ವತವಾಗಿ ಉಳಿಯಬೇಕಾದರೆ, ಜನರಿಗೆ ಆಗಲಿ, ಬೇರೆಯವರಿಗೆ ಆಗಲಿ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು. ಆಗ ಶಾಶ್ವತವಾಗಿ ನಾಯಕರಾಗಿ ಉಳಿಯಲು ಸಾಧ್ಯ. ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ, ದೇವರಾಜ ಅರಸು, ನಿಜಲಿಂಗಪ್ಪ, ಎಸ್.ಎಂ. ಕೃಷ್ಣ ಸೇರಿದಂತೆ ಎಲ್ಲರೂ ಹೈಕಮಾಂಡ್ ಅಣತಿಯಂತೆ ಕೆಲಸ ಮಾಡಿದ್ದಾರೆ” ಎಂದರು.





