ಇಂದು ಬೆಂಗಳೂರಿನ ಶಾಸಕರ ಭವನದಲ್ಲಿ ನಾಡಿನ ಎಲ್ಲಾ ಜಾತ್ಯತೀತ ಪಕ್ಷಗಳು ಹಾಗೂ ಸಾಮಾಜಿಕ ಸಂಘಟನೆಗಳ ವತಿಯಿಂದ ‘ಎಸ್‌ಐಆರ್ (Special Intensive Revision) ವಿರೋಧಿ ಸರ್ವಪಕ್ಷ ಮತ್ತು ಸರ್ವ ಸಂಘಟನೆಗಳ ಸಮಾಲೋಚನಾ ಸಭೆ’ಯನ್ನು ಹಮ್ಮಿಕೊಳ್ಳಲಾಗಿತ್ತು. ಕೇಂದ್ರ ಸರ್ಕಾರದ ಅಪ್ರಜಾಪ್ರಭುತ್ವ ನೀತಿಗಳ ವಿರುದ್ಧ ನಡೆದ ಈ ಸಭೆಯಲ್ಲಿ ಹಿರಿಯ ರಾಜಕೀಯ ಚಿಂತಕ ಡಾ. ಪರಕಾಲ ಪ್ರಭಾಕರ್, ಮಾಜಿ ಐಎಎಸ್ ಅಧಿಕಾರಿ ದೇವಾಸಗಾಯಂ, ತಮಿಳುನಾಡಿನ ಹೋರಾಟಗಾರ ಥಾಮಸ್ ಫ್ರಾಂಕೋ ಮತ್ತು ಖ್ಯಾತ ಸಾಮಾಜಿಕ ಕಾರ್ಯಕರ್ತ ನಿಖಿಲ್ ಡೇ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ, ಎಸ್‌ಐಆರ್ ಹಿಂದಿರುವ ಅಪಾಯಕಾರಿ ರಾಜಕೀಯ ಸಂಚನ್ನು ಬಿಚ್ಚಿಟ್ಟರು. ಪಾಲ್ಗೊಂಡಿದ್ದ ಎಲ್ಲ ಸಾಮಾಜಿಕ ಸಂಘಟನೆಗಳು ಮತ್ತು ಜಾತ್ಯತೀತ ಸಂವಿಧಾನಪರ ರಾಜಕೀಯ ಪಕ್ಷಗಳು ಒಮ್ಮತದಿಂದ ಕೆಲವು ನಿರ್ಣಯಗಳನ್ನು ಕೈಗೊಂಡವು. ಸರ್ಕಾರದ ಪರವಾಗಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ನಸೀರ್ ಅಹ್ಮದ್ ಮತ್ತು ಶಾಸಕ ರಿಝ್ವಾನ್ ಅರ್ಷದ್ ಅವರು ಭಾಗವಹಿಸಿ, ಚರ್ಚೆಯಾದ ವಿಷಯಗಳನ್ನು ಆಲಿಸಿದರು.
ಪರಕಾಲ ಪ್ರಭಾಕರ್ ಅವರ ಭಾಷಣದ ಪ್ರಮುಖಾಂಶಗಳು
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಖ್ಯಾತ ಅರ್ಥಶಾಸ್ತ್ರಜ್ಞ ಡಾ. ಪರಕಾಲ ಪ್ರಭಾಕರ್, “ಇದು ಕೇವಲ ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲ, ಬದಲಿಗೆ ಆಯ್ದ ಸಮುದಾಯಗಳನ್ನು ಗುರಿಯಾಗಿಸಿಕೊಂಡು ಮತದಾರರ ಪಟ್ಟಿಯಿಂದ ‘ಅಳಿಸುವ’ ಪ್ರಕ್ರಿಯೆಯಾಗಿದೆ. ಒಂದು ವೇಳೆ ಈ ಪರಿಸ್ಥಿತಿ ಹೀಗೇ ಮುಂದುವರೆದರೆ ಮುಂದಿನ ವರ್ಷ ಕೆಂಪುಕೋಟೆಯ ಮೇಲೆ ಹಾರುವ ಧ್ವಜವೇ ಬದಲಾಗಬಹುದು,” ಎಂದು ಆತಂಕ ವ್ಯಕ್ತಪಡಿಸಿದರು.
- ರಾಜಕೀಯ ಹಕ್ಕಿನ ಕಗ್ಗೊಲೆ: ಎಸ್‌ಐಆರ್ ಮೂಲಕ ದೇಶದ ಸುಮಾರು 16.5 ಕೋಟಿ ಮತದಾರರನ್ನು ಪಟ್ಟಿಯಿಂದ ಹೊರಹಾಕುವ ಸಂಚು ನಡೆದಿದೆ. ಇದು ರಕ್ತರಹಿತವಾಗಿ ನಡೆಯುತ್ತಿರುವ ನಾಗರೀಕರ ರಾಜಕೀಯ ಹಕ್ಕಿನ ಕಗ್ಗೊಲೆಯಾಗಿದೆ.
- ಮತದಾರರ ಆಯ್ಕೆಯ ಹಕ್ಕು ಕಸಿಯಲ್ಪಟ್ಟಿದೆ: ಈ ಹಿಂದೆ ಜನರು ಸರ್ಕಾರವನ್ನು ಆರಿಸುತ್ತಿದ್ದರು, ಆದರೆ ಈಗ ಸರ್ಕಾರವೇ ತನಗೆ ಬೇಕಾದ ಮತದಾರರನ್ನು ಆರಿಸಿಕೊಳ್ಳುತ್ತಿದೆ.
- ದಕ್ಷಿಣ ಭಾರತಕ್ಕೆ ಅನ್ಯಾಯ: ಭವಿಷ್ಯದಲ್ಲಿ ನಡೆಯಲಿರುವ ‘ಡಿಲಿಮಿಟೇಶನ್’ ಪ್ರಕ್ರಿಯೆಯ ನಂತರ, ದಕ್ಷಿಣದ ರಾಜ್ಯಗಳ ರಾಜಕೀಯ ಅಸ್ತಿತ್ವಕ್ಕೆ ಧಕ್ಕೆ ಬರಲಿದೆ. ಉತ್ತರ ಭಾರತದ ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಬಿಹಾರದ ಅರ್ಧ ಭಾಗ- ಈ ಎರಡೂವರೆ ರಾಜ್ಯಗಳ ಲೋಕಸಭಾ ಸದಸ್ಯರ ಸಂಖ್ಯೆ ಇಡೀ ದಕ್ಷಿಣ ಭಾರತದ ಸದಸ್ಯರ ಸಂಖ್ಯೆಗಿಂತ ಹೆಚ್ಚಿರಲಿದೆ, ಈ ಕೆಲವೇ ರಾಜ್ಯಗಳು ಇಡೀ ದಕ್ಷಿಣ ಭಾರತದ ಧ್ವನಿಯನ್ನು ಅಡಗಿಸುವ ಸಾಧ್ಯತೆಯಿದೆ.
ದೇವಸಗಾಯಂ ಅವರ ಭಾಷಣದ ಪ್ರಮುಖ ಅಂಶಗಳು:
ನಿವೃತ್ತ ಐಎಎಸ್ ಅಧಿಕಾರಿ ಮತ್ತು ಚುನಾವಣಾ ಪಾರದರ್ಶಕತೆಗಾಗಿ ಕೆಲಸ ಮಾಡುತ್ತಿರುವ ಹಲವು ಸಂಘಸಂಸ್ಥೆಗಳ ಮಾರ್ಗದರ್ಶಕರಾದ ದೇವಸಗಾಯಂರವರು ಮಾತನಾಡಿ ಸಲಹೆಗಳನ್ನು ಮುಂದಿಟ್ಟರು.
- ಸಾಮಾಜಿಕ ಆಡಿಟ್: ಸಾಮಾಜಿಕ ಆಡಿಟ್ ಮೂಲಕ ಗ್ರಾಮಸಭೆಗಳಲ್ಲಿ ಮತದಾರರ ಪಟ್ಟಿಯನ್ನು ಬಹಿರಂಗವಾಗಿ ಪಾರದರ್ಶಕವಾಗಿ ಘೋಷಿಸಿ ತಿದ್ದುಪಡಿ ಮಾಡಬೇಕು
- ಚುನಾವಣಾ ಆಯೋಗದ ಹಕ್ಕುಗಳ ವಿಕೇಂದ್ರೀಕರಣ: ಚುನಾವಣಾ ಆಯೋಗವು ವಿಕೇಂದ್ರೀಕರಣಗೊಳ್ಳಬೇಕು. ಸೆಕ್ಷನ್ 243 ಅನ್ವಯ ವಿಕೇಂದ್ರೀಕರಣದ ತತ್ವದ ಆಧಾರದಲ್ಲಿ ರಾಜ್ಯ ಚನಾವಣಾ ಆಯೋಗಕ್ಕೀ ಎಲ್ಲ ಹಕ್ಕುಗಳನ್ನೂ ವರ್ಗಾಯಿಸಬೇಕು.
- ಕೇಂದ್ರ ಚುನಾವಣಾ ಆಯುಕ್ತರ ಆಯ್ಕೆಯೇ ಅತ್ಯಂತ ಅಪ್ರಜಾತಾಂತ್ರಿಕವಾಗಿ ನಡೆದಿರುವುದರಿಂದ ಅದನ್ನು ರದ್ದುಗೊಳಿಸಿ ಪ್ರಜಾತಾಂತ್ರಿಕವಾದ ವಿಧಾನಗಳಲ್ಲಿ ಮರುಆಯ್ಕೆ ಮಾಡಬೇಕು. ಇವಿಎಂಗಳಿಂದ ಉಂಟಾಗಿರುವ ತಂತ್ರಜ್ಞಾನದ ಸಮಸ್ಯೆ ಅನಗತ್ಯ, ಮತದಾರರ ಹಕ್ಕು ಮುಖ್ಯ, ಅದನ್ನು ಉಳಿಸಲು ಪೇಪರ್ ಬ್ಯಾಲಟ್ ವ್ಯವಸ್ಥೆಯನ್ನು ಮರುಜಾರಿಗೊಳಿಸಬೇಕು.
ಥಾಮಸ್ ಫ್ರಾಂಕೋ ಅವರ ಭಾಷಣದ ಪ್ರಮುಖ ಅಂಶಗಳು
ತಮಿಳುನಾಡಿನ ಹೋರಾಟಗಾರ ಥಾಮಸ್ ಫ್ರಾಂಕೋ ಮಾತನಾಡಿ, “ಚುನಾವಣಾ ಆಯೋಗವು 2002-03ರ ದಾಖಲೆಗಳನ್ನು ಕೇಳುವ ಮೂಲಕ ಜನರಲ್ಲಿ ಗೊಂದಲ ಮೂಡಿಸುತ್ತಿದೆ. ಅಸ್ಸಾಂನಲ್ಲಿ ಎಸ್‌ಐಆರ್ ಮಾಡದೆ ಕೇವಲ ಪರಿಷ್ಕರಣೆ (SR) ಮಾಡಿರುವುದನ್ನು ಗಮನಿಸಿದರೆ, ಇದರ ಹಿಂದೆ ನಿರ್ದಿಷ್ಟ ರಾಜಕೀಯ ಹಿತಾಸಕ್ತಿ ಇರುವುದು ಸ್ಪಷ್ಟವಾಗುತ್ತದೆ,” ಎಂದರು.
- ಬಿಜೆಪಿ-ಆರೆಸ್ಸೆಸ್ ಕಾರ್ಯಕರ್ತರ ಹಸ್ತಕ್ಷೇಪ: ಎಸ್‌ಐಆರ್ ಪ್ರಕ್ರಿಯೆಯಲ್ಲಿ ಬಿಜೆಪಿ ಮತ್ತು ಆರೆಸ್ಸೆಸ್ ಕಾರ್ಯಕರ್ತರನ್ನು ಸ್ವಯಂಸೇವಕರನ್ನಾಗಿ ಬಳಸಿಕೊಳ್ಳಲಾಗುತ್ತಿದೆ. ಬಿಹಾರದಲ್ಲಿ ಈ ಪ್ರಕ್ರಿಯೆಯ ನಂತರ ಲಕ್ಷಾಂತರ ಮತದಾರರನ್ನು ಅಳಿಸಿ ಹಾಕಲಾಗಿದೆ.
- ಕರ್ನಾಟಕಕ್ಕೆ ಕರೆ: ಕರ್ನಾಟಕವು ಈ ಹೋರಾಟದಲ್ಲಿ ದೇಶಕ್ಕೆ ಮಾದರಿಯಾಗಬೇಕು. ಮತದಾರರು ಕೇವಲ 2 ದಾಖಲೆಗಳನ್ನು (ಜನ್ಮ ದಿನಾಂಕ ಮತ್ತು ವಾಸಸ್ಥಳದ ದೃಢೀಕರಣ) ಮಾತ್ರ ನೀಡುವಂತೆ ಸರ್ಕಾರ ಚುನಾವಣಾ ಆಯೋಗದ ಮೇಲೆ ಒತ್ತಡ ಹೇರಬೇಕು.
ಹೋರಾಟದ ಮುಂದಿನ ಹಾದಿ
ಸಭೆಯಲ್ಲಿ ಭಾಗವಹಿಸಿದ್ದ ಸಾಮಾಜಿಕ ಹೋರಾಟಗಾರ ನಿಖಿಲ್‌ಡೇ ಅವರು ಪಂಚಾಯತ್ ಮಟ್ಟದಲ್ಲಿ ‘ಸಾಮಾಜಿಕ ಆಡಿಟ್’ (Social Audit) ನಡೆಸುವ ಮೂಲಕ ಈ ಅನ್ಯಾಯವನ್ನು ಎದುರಿಸುವ ತಂತ್ರವನ್ನು ಮಂಡಿಸಿದರು. ರಾಜಸ್ಥಾನದಲ್ಲಿ 2002-03ರ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆಯ ಸಂಧರ್ಭದಲ್ಲಿ, ನಿಖಿಲ್ ಡೇ ಮತ್ತು ಅವರ ಸಂಗಾತಿಗಳು ʼಭಾರತದ ನಿಯಂತ್ರಕರು ಮತ್ತು ಮಹಾಲೇಖಪಾಲರುʼ (Controller and Auditor General of India- CGI) ನೀಡಿರುವ ಮಾರ್ಗಸೂಚಿಗಳ ಅನ್ವಯ ನಡೆಸಿದ ಸಾಮಾಜಿಕ ಆಡಿಟ್ ಅತ್ಯಂತ ಸಮರ್ಪಕವಾಗಿ ಮತದಾರರ ಪಟ್ಟಿಯನ್ನು ಪಾರದರ್ಶಕ ಮತ್ತು ಪಾಲ್ಗೊಳ್ಳುವಿಕೆ ಆಧಾರದಲ್ಲಿ ಸರಿತಿದ್ದುವುದಕ್ಕೆ ಸಹಕಾರಿಯಾಯಿತು, ಇದನ್ನು ಅತ್ಯುತ್ತಮವಾದ ಮಾದರಿಯೆಂದು ಭಾವಿಸಿದ ಚುನಾವಣಾ ಆಯೋಗವು ಅದನ್ನು ತನ್ನ ಮಾರ್ಗಸೂಚಿಗಳ ಭಾಗವಾಗಿಸಿಕೊಂಡಿತು ಎಂದು ನಿಖಿಲ್ ಡೇ ಅವರು ವಿವರಿಸಿದರು. ಅದರಂತೆ, ಈಗಲೂ ಎಸ್‌ಐಆರ್‌ನ್ನು ಮನೆಮನೆ ಭೇಟಿ ಮತ್ತು ನಂತರ ಗ್ರಾಮಸಭೆ-ವಾರ್ಡ್‌ಸಭೆಗಳಲ್ಲಿ ಕರಡು ಪತದಾರರ ಪಟ್ಟಿಯನ್ನು ಬಹಿರಂಗವಾಗಿ ಓದಿ ಹೇಳಿ ತಿದ್ದುವ ಮೂಲಕವೇ ಜಾರಿಮಾಡಬೇಕೆಂದು ರಾಜ್ಯ ಸರ್ಕಾರಗಳು ರಾಜ್ಯ ಚುನಾವಣಾ ಆಯೋಗಕ್ಕೆ ಓತ್ತಡ ಹೇರುವ ಹಾದಿಯನ್ನು ಅನುಸರಿಸಬೇಕೆಂಬ ಸಲಹೆಯನ್ನು ಅವರು ನೀಡಿದರು.
ಸಭೆಯ ಪ್ರಮುಖ ನಿರ್ಣಯಗಳು:
- ಗಡಿಬಿಡಿಯ, ಗೊಂದಲಕಾರಿಯಾದ, ಅಸಿಂಧುವಾದ SIR ಪ್ರಕ್ರಿಯೆಯನ್ನು ಯಥಾರೂಪದಲ್ಲಿಯೇ ಒಪ್ಪಿಕೊಳ್ಳಲು ನಾವು ಸಿದ್ಧರಿಲ್ಲ. ಪಾರದರ್ಶಕವಾದ, ವ್ಯವಧಾನದ ಹಾಗೂ ಜನಸ್ನೇಹಿಯಾದ ರೀತಿಯಲ್ಲಿ ಮತಪಟ್ಟಿಪರಿಷ್ಕರಣೆ ನಡೆಯಬೇಕು ಎಂದು ನಾವು ಒತ್ತಾಯಿಸುತ್ತೇವೆ.
- ಚುನಾವಣಾ ಆಯೋಗದ ಮಾರ್ಗಸೂಚಿಯಲ್ಲಿ ಇರುವಂತೆ ‘ಸಾಮಾಜಿಕ ಆಡಿಟ್ʼಯನ್ನು[Social Auditing]ಕಡ್ಡಾಯ ಕ್ರಮವಾಗಿ ಅನುಸರಿಸಬೇಕು.
ಅಂದರೆ ಗ್ರಾಮೀಣಭಾಗದಲ್ಲಿ‘ಗ್ರಾಮಸಭೆʼಗಳನ್ನು ಹಾಗೂ ನಗರಪ್ರದೇಶಗಳಲ್ಲಿ ‘ಬೂತ್‌ಸಭೆʼಗಳನ್ನು ನಡೆಸಿ ಮತದಾರರ ಪಟ್ಟಿಯ ಪರಿಷ್ಕರಣೆಯನ್ನು ಸಾರ್ವಜನಿಕವಾಗಿ ನಡೆಸಬೇಕು. ಆ ಪ್ರದೇಶದ ಎಲ್ಲಾ ಜನರ, ಬಿಎಲ್‌ಓ, ಬಿಎಲ್‌ಎ ಗಳು - ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಮತದಾರ ಪಟ್ಟಿಯ ಪರಿಷ್ಕರಣೆ ಮುಕ್ತ ಹಾಗೂ ಬಹಿರಂಗ ರೀತಿಯಲ್ಲಿ ನಡೆಯಬೇಕು.
ಸೂಚಿತ 11 ದಾಖಲೆಗಳು ಇಲ್ಲದಿದ್ದರೂ ಗ್ರಾಮ ಸಭೆ ಅವರ ವಾಸ್ತವ್ಯವನ್ನು ಅನುಮೋದಿಸಿದರೆ ಅದನ್ನು “ಸಾಮಾನ್ಯವಾಗಿ ವಾಸಿಸುತ್ತಿರುವ ಸಾಮಾಜಿಕ ಸಾಕ್ಷ್ಯ” ವಾಗಿ ಪರಿಗಣಿಸಬೇಕು. ಸೂಕ್ತ ದಾಖಲೆಗಳನ್ನು ಒದಗಿಸುವ ಜವಾಬ್ದಾರಿಯನ್ನು ಆಡಳಿತಾಂಗ ತೆಗೆದುಕೊಳ್ಳಬೇಕು. ಕಳ್ಳ ಮತಗಳನ್ನು ಪತ್ತೆ ಹಚ್ಚಲು ಮತ್ತು ನಿಜವಾದ ಮತದಾರರು ಪಟ್ಟಿಯಿಂದ ಹೊರಗುಳಿಯದಿರುವುದನ್ನು ಖಾತ್ರಿ ಪಡಿಸಿಕೊಳ್ಳಲು “ಸಮಾಜಿಕ ಪರಿಶೀಲನೆ” ಎಂಬುದು ಚುನಾವಣಾ ಆಯೋಗದ ಮಾರ್ಗಸೂಚಿಯಲ್ಲಿಯೇ ಇರುವ ಅತ್ಯಂತ ಪಾರದರ್ಶಕ ಮತ್ತು ಪರಿಣಾಮಕಾರಿ ವಿಧಾನವಾಗಿದೆ. - ಸುಪ್ರೀಂ ಕೋರ್ಟ್ ಆಧಾರ್ ಕಾರ್ಡನ್ನು 12ನೇ ಸಾಕ್ಷ್ಯವಾಗಿ ಪರಿಗಣಿಸಬೇಕು ಎಂದು ಹೇಳಿರುವಾಗ ಚುನಾವಣಾ ಆಯೋಗ ಅದನ್ನು ಉಲ್ಲಂಘಿಸಬಾರದು. ಆಧಾರ್ ಕಾರ್ಡ್ ಇದ್ದಲ್ಲಿ ಅವರನ್ನು ಮತದಾನ ಪಟ್ಟಿಯಿಂದ ತೆಗೆಯಬಾರದು.
- ಪ್ರತಿಯೊಂದು ರಾಜಕೀಯ ಪಕ್ಷವು ಬೂತ್ ಮಟ್ಟದಲ್ಲಿ ಏಜೆಂಟ್‌ಗಳನ್ನು (BLA) ನೇಮಿಸಿ, ಪ್ರತಿಯೊಂದು ಮನೆಯನ್ನೂ ಭೇಟಿ ಮಾಡಿ ಮತದಾರರ ಪಟ್ಟಿಯನ್ನು ಮರುಪರಿಶೀಲಿಸಬೇಕು.
- ಅಧಿಕಾರಿಗಳ ಮೇಲೆ ಪಾರದರ್ಶಕತೆಗಾಗಿ ಒತ್ತಡ ಹೇರಬೇಕು ಮತ್ತು ʼಸಂಶಯಾಸ್ಪದʼ ಎಂಬ ಪಟ್ಟಿಗೆ ಸೇರಿಸಿ ಮತದಾರರ ಹಕ್ಕನ್ನು ಕಡಿತಗೊಳಿಸುವುದನ್ನು ತಡೆಯಬೇಕು.
ಈ ಸಭೆಯು ಕೇವಲ ಕರ್ನಾಟಕಕ್ಕೆ ಮಾತ್ರವಲ್ಲದೆ ಇಡೀ ದೇಶಕ್ಕೆ ಒಂದು ಎಚ್ಚರಿಕೆಯ ಗಂಟೆಯಾಗಿದ್ದು, ಪ್ರಜಾಪ್ರಭುತ್ವವನ್ನು ಉಳಿಸಲು ಎಲ್ಲರೂ ಒಗ್ಗೂಡಬೇಕೆಂದು ಸಭೆಯಲ್ಲಿ ಕರೆ ನೀಡಲಾಯಿತು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9606187207, 8660096921, ಮಾಧ್ಯಮ ವಿಭಾಗ, ಎಸ್‌ಐಆರ್ ವಿರೋಧಿ ಸರ್ವ ಪಕ್ಷ ಮತ್ತು ಸಂಘಟನೆಗಳ ಸಮಿತಿ, ಬೆಂಗಳೂರು.





