ಕರ್ನಾಟಕವು ಹಲವು ವಿಷಯಗಳಲ್ಲಿ ದೇಶಕ್ಕೆ ದಿಕ್ಸೂಚಿಯಾಗಿದೆ. ಎಸ್‌ಐಆರ್ ವಿರುದ್ಧದ ಹೋರಾಟದಲ್ಲಿಯೂ ದೇಶಕ್ಕೆ ದಿಕ್ಕುತೋರಿಸುತ್ತದೆಂದು ನಂಬಿದ್ದೇನೆ ಎಂದು ಚಿಂತಕ, ಹೋರಾಟಗಾರ ಪ್ರೊ. ಯೋಗೇಂದ್ರ ಯಾದವ್ ಹೇಳಿದರು.
ಜಾಗೃತ ಕರ್ನಾಟಕ ಸಂಘಟನೆಯು ಬೆಂಗಳೂರಿನಲ್ಲಿ ಆಯೋಜಿಸಿದ್ದ ‘ಎಸ್‌ಐಆರ್: 13 ರಾಜ್ಯಗಳಲ್ಲಿ ಏನಾಗಿದೆ? ಕರ್ನಾಟಕದಲ್ಲಿ ಏನು ಮಾಡಬೇಕಿದೆ?’ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. “ಪ್ರಜಾತಂತ್ರಕ್ಕೆ ಈ ದೇಶದಲ್ಲಿ ಏನಾಗುತ್ತದೆ? 21ನೇ ಶತಮಾನದಲ್ಲಿ ಪ್ರಜಾತಂತ್ರದ ಕಗ್ಗೊಲೆ ನಡೆಯುತ್ತಿದೆ. ಈಗಿನ ಸರ್ವಾಧಿಕಾರಿಗಳು ಸಂವಿಧಾನ ಅದ್ಭುತವಾದುದು ಎನ್ನುತ್ತಾರೆ, ಅದೇ ಸಮಯದಲ್ಲಿ ಸಂವಿಧಾನವನ್ನು ಹರಿದೆಸೆಯುತ್ತಾರೆ. ಜನತಾ ಜನಾರ್ಧನ ಎನ್ನುತ್ತಾ ಜನರನ್ನು ವಂಚಿಸುತ್ತಾರೆ. ಈ ಸಂದರ್ಭದಲ್ಲಿ ಯಾರೂ ಚುನಾವಣೆ ನಡೆಸದೆ ಇರುವುದಿಲ್ಲ – ನ್ಯಾಯಾಂಗವನ್ನು ಕಿತ್ತುಹಾಕುವುದಿಲ್ಲ. ಅವರು ಚುನಾವಣೆ ನಡೆಸುತ್ತಾರೆ. ಆದರೆ, ಫಲಿತಾಂಶ ಅವರ ಪರವಾಗಿ ಬರುವಂತೆ ನಿಭಾಯಿಸುತ್ತಾರೆ, ಅವರಿಗೆ ಬೇಕಾದ್ದನ್ನು ಮಾತ್ರ ಹೇಳುವಂತೆ ನ್ಯಾಯಾಂಗವನ್ನು ನಿಯಂತ್ರಿಸುತ್ತಾರೆ. ಇಡೀ ಪ್ರಪಂಚದಲ್ಲಿ ನಡೆಯುತ್ತಿರುವುದು ಇದೇ ಮಾದರಿ” ಎಂದು ತಿಳಿಸಿದರು.
“ಭಾರತದಲ್ಲಿ ಈಗ ಪ್ರಜಾತಂತ್ರದ ಕಗ್ಗೊಲೆ ನಡೆದಿದೆ. ಇಲ್ಲಿ ಸಂವಿಧಾನ ಇದೆ, ಜಾರಿಯಾಗುವುದಿಲ್ಲ. ನ್ಯಾಯಾಂಗ ಇದೆ, ಆಳುವವರ ವಿರುದ್ಧ ತೀರ್ಪು ಬರುವುದಿಲ್ಲ. ಚುನಾವಣೆ ನಡೆಯುತ್ತದೆ, ಫಲಿತಾಂಶ ಆಳುವವರ ಪರವಾಗಿಯೇ ಇರುತ್ತದೆ. 2023-24ರ ಚುಣಾವಣೆಯಲ್ಲಿ ಏನೋ ತಪ್ಪಾಯಿತು. ಮೋದಿ ಹತ್ತಿರ ಒಂದು ಸ್ಕ್ರಿಪ್ಟ್ ಇತ್ತು, ಆದರೂ ಅದರಂತೆ ನಡೆಯಲಿಲ್ಲ. ಚಾರ್ ಸೋ ಪಾರ್ ಆಗಲಿಲ್ಲ. ಆಗ ‘ನೀವು ನ್ಯಾಯಾಂಗ, ಕಾರ್ಯಾಂಗ ಎಲ್ಲವನ್ನೂ ನಿಭಾಯಿಸಬಹುದು. ಆದರೆ ಜನರನ್ನಲ್ಲ’ ಎಂಬ ಸಂದೇಶ ರವಾನೆಯಾಯಿತು. ಆಗ ಬೇರೆ ರೀತಿಯ ಮೂರು ಪ್ರಯತ್ನಗಳನ್ನು ಅವರು ಆರಂಭಸಿದರು” ಎಂದು ವಿವರಿಸಿದರು.
“ಮೊದಲನೆಯದ್ದು ಡಿಲಿಮಿಟೇಶನ್. ದೇಶದ ಲೋಕಸಭಾ ಕ್ಷೇತ್ರಗಳನ್ನು ಮರುರೂಪಿಸಿ, ಅದರ ಆಧಾರದಲ್ಲಿ ಲೋಕಸಭೆಯ ಸೀಟುಗಳನ್ನು ಬದಲಿಸುವುದು. ಕೇರಳ 12ಕ್ಕೆ ಇಳಿಯುತ್ತದೆ, ತಮಿಳುನಾಡು 39ರಿಂದ 31, ಆಂಧ್ರ ತೆಲಂಗಾಣಗಳು ಹಲವು ಕ್ಷೇತ್ರಗಳನ್ನು ಕಳೆದುಕೊಳ್ಳುತ್ತವೆ. ಕರ್ನಾಟಕವೂ ಎರಡು ಸ್ಥಾನಗಳನ್ನು ಕಳೆದುಕೊಳ್ಳುತ್ತದೆ. ಹೀಗೆ, ಯಾವ ರಾಜ್ಯಗಳಲ್ಲಿ ಬಿಜೆಪಿಗೆ ಒಂದಷ್ಟು ಸವಾಲು ಎದುರಾಗುತ್ತಿದೆಯೋ ಆ ಕಡೆಗಳ ಸೀಟುಗಳು ಇಳಿಕೆಯಾಗುತ್ತವೆ. ಉತ್ತರ ಭಾರತ ಮತ್ತು ಗುಜರಾತ್‌ನ ಕ್ಷೇತ್ರಗಳು ಹೆಚ್ಚುತ್ತವೆ” ಎಂದು ತಿಳಿಸಿದರು.
“ಎರಡನೆಯದ್ದು, ಈ ದೇಶದಲ್ಲಿ ಪ್ರತಿ ವರ್ಷ ಒಂದೊಂದು ಪ್ರಮುಖ ಚುನಾವಣೆಗಳು ನಡೆಯುತ್ತಲೇ ಇರುತ್ತವೆ. ನಮಗೆಲ್ಲ ಇರುತ್ತಿದ್ದ ವಾರ್ಷಿಕ ಪರೀಕ್ಷೆಗಳು ಈಗಿಲ್ಲ. ಸೆಮಿಸ್ಟರ್ ಪರೀಕ್ಷೇ ಬರೆಯಲೇಬೇಕು. ಹಾಗೆಯೇ, ಮೋದಿಯವರೂ ಪ್ರತೀ ವರ್ಷ ಪರೀಕ್ಷೆ ಬರೆಯಬೇಕಾಗಿದೆ. ಈ ಪರೀಕ್ಷೆಗಳಿಂದ ತಪ್ಪಿಸಿಕೊಳ್ಳಲು ಮೋದಿಗೆ ಐದು ವರ್ಷಕ್ಕೆ ಒಂದು ಪರೀಕ್ಷೆ ಬೇಕಾಗಿದೆ. ಇದೇ ‘ಒಂದು ದೇಶ ಒಂದು ಚುನಾವಣೆ’ಯ ಸಾರಾಂಶ. ಅಂದರೆ ಪ್ರತಿ ವರ್ಷ ಪರೀಕ್ಷೆ ಎದುರಿಸುವ ಅಗತ್ಯವಿಲ್ಲ. ಒಂದೇ ದಿನ ಲೋಕಸಭೆ, ವಿಧಾನಸಭೆ ಎಲ್ಲ ಚುನಾವಣೆಗಳೂ ಮುಗಿಯುತ್ತವೆ. ಆಗ ಒಂದೇ ಸಲ ಅದನ್ನು ಮ್ಯಾನೇಜ್ ಮಾಡಿದರೆ ಸಾಕು, ಒಂದು ಬಾಲಾಕೋಟ್ ಆಗಬಹುದು, ಅಥವಾ ಒಂದು ಪುಲ್ವಾಮಾ ಆಗಬಹುದು, ಒಟ್ಟಿನಲ್ಲಿ ಚುನಾವಣೆ ಕೆಲಸ ಮುಗಿಯಿತು” ಎಂದು ಬಿಜೆಪಿಯ ತಂತ್ರದ ಹೂರಣವನ್ನು ವಿವರಿಸಿದರು.
“ಮೂರನೆಯದು, ಎಸ್‌ಐಆರ್. ತಮ್ಮ ವಿರೋಧಿ ಮತಗಳನ್ನೇ ಮತಪಟ್ಟಿಯಿಂದ ಹೊರಹಾಕುವ ಹುನ್ನಾರ. ಚುನಾವಣಾ ಆಯೋಗವು, ‘ಮತದಾರರ ಪಟ್ಟಿಯಲ್ಲಿ ತಪ್ಪುಗಳಿವೆ’ ಅದನ್ನು ತಿದ್ದುಪಡಿ ಮಾಡುತ್ತೇವೆ ಎನ್ನುತ್ತಿದೆ. ಆದರೆ, ಇದು ಪರಿಷ್ಕರಣೆ ಅಲ್ಲ. ಪರಿಷ್ಕರಣೆ ಎಂದರೇನು? ಈರುವ ಪಟ್ಟಿಯಲ್ಲಿ ತಿದ್ದುಪಡಿ ಮಾಡುವುದು, ಇರುವುದಕ್ಕೆ ಒಂದಷ್ಟು ಸೇರಿಸಿ ಒಂದಷ್ಟು ತೆಗೆದು ಪರಿಷ್ಕರಿಸುವುದು. ಆದರೆ, ಈ ಎಸ್‌ಐಆರ್, ಹೊಸದಾಗಿ ಖಾಲಿ ಕಾಗದದಲ್ಲಿ ಮಾಡುತ್ತಿರುವ ಹೊಸ ಮತದಾರರ ಪಟ್ಟಿ. ಅಂದರೆ, ನೀವು ಈಗಾಗಲೇ 15 ಚುನಾವಣೆಗಳಲ್ಲಿ ವೋಟ್ ಮಾಡಿರುವವರಾಗಿದ್ದರೂ, ಎಸ್‌ಐಆರ್ ಪ್ರಕ್ರಿಯೆಯಲ್ಲಿ ನೀವು ಪಾಲ್ಗೊಳ್ಳದಿದ್ದರೆ ನಿಮ್ಮ ಹೆಸರು ಡಿಲೀಟ್ ಆಗುತ್ತದೆ. ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕೂಡ ನನ್ನ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಿ ಎಂದು ಅಪ್ಲಿಕೇಶನ್ ಕೊಡದಿದ್ದರೆ, ಅವರು ಮುಖ್ಯಮಂತ್ರಿಯಾಗಿದ್ದರೂ, ಅವರ ಹೆಸರನ್ನು ಪಟ್ಟಿಯಿಂದ ಅಳಿಸಲಾಗುತ್ತದೆ” ಎಂದು ತಿಳಿಸಿದರು.
“ಎಸ್‌ಐಆರ್ ನಡೆದಿರುವ ಎಲ್ಲ ರಾಜ್ಯಗಳಲ್ಲಿಯೂ ಒಟ್ಟು 2 ಕೋಟಿ ಮತದಾರರನ್ನು ಅಳಿಸಲಾಗಿದೆ. ಚುನಾವಣಾ ಆಯೋಗದವರು ಹೇಳುತ್ತಾರೆ; ‘ಇದು ಹಳೇ ಪ್ರಕ್ರಿಯೆ, ಬಹಳ ಸಲ ನಡೆದಿದೆ. ಕರ್ನಾಟಕದಲ್ಲಿ ಎಂಟು ಸಲ ಆಗಿದೆ’ ಎನ್ನುತ್ತಿದ್ದಾರೆ. ಆದರೆ, ನಮ್ಮಲ್ಲಿ 2003ರಲ್ಲಿ ಎಷ್ಟು ಜನ ಎನ್ಯುಮರೇಶನ್ ಫಾರ್ಮ್ ತುಂಬಿಸಿ, ಅಪ್ಲಿಕೇಶನ್ ಕೊಟ್ಟಿದ್ದೆವು. ಮತದಾರರ ಪಟ್ಟಿಯಲ್ಲಿರಲು ಕೇಳಿಕೊಂಡಿದ್ದೆವು? ಅಂದರೆ, ಹಿಂದೆ ನಡೆದದ್ದನ್ನೇ ಮಾಡುತ್ತಿದ್ದೇವೆ ಎಂಬುದು ಸಂಪೂರ್ಣ ಸುಳ್ಳು” ಎಂದು ತಿಳಿಸಿದರು.
ಈ ಲೇಖನ ಓದಿದ್ದೀರಾ?: ಬಂಗಾಳದಲ್ಲಿ ಬದಲಾಯ್ತು SIR ವರಸೆ; ದೇಶದ ಉಳಿದ ರಾಜ್ಯಗಳ ಮೇಲಿನ ಪ್ರಭಾವವೇನು?
“ಎರಡು ವಿಷಯಗಳು ಭಾರತದ ಇತಿಹಾಸದಲ್ಲಿ ಎಂದೂ ನಡೆದಿಲ್ಲ. ಒಂದು; ಈಗಾಗಲೇ ಮತದಾರರ ಪಟ್ಟಿಯಲ್ಲಿದ್ದು, ಇರುವ ಸ್ಥಳದಲ್ಲೇ ವಾಸುಸುತ್ತಿರುವವರನ್ನು ಮತ್ತೆ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಫಾರಂ ತುಂಬಿಸಬೇಕೆಂಬುದನ್ನು ಎಂದೂ ಕೇಳಿರಲಿಲ್ಲ. ಎರಡನೇಯದ್ದು; ನಮ್ಮಲ್ಲಿ ಯಾರಾದರೂ ಮತದಾರರ ಪಟ್ಟಿಯಲ್ಲಿರುವುದಕ್ಕಾಗಿ ನಾವು ಈ ದೇಶದ ನಾಗರೀಕರು ಎಂದು ಎಂದಾದರೂ ಸಾಬೀತು ಮಾಡಬೇಕಾಗಿ ಬಂದಿರಲಿಲ್ಲ. ಈಗಾಗಲೇ ಮತದಾರರ ಪಟ್ಟಿಯಲ್ಲಿ ಇದ್ದರೆ, ನಿಮ್ಮನ್ನು ಈ ದೇಶದ ನಾಗರಿಕರೆಂದು ಪರಿಭಾವಿಸಲಾಗುತ್ತದೆ. ಯಾರಾದರೂ ಹಾಗಲ್ಲ ಎಂಬುದಕ್ಕೆ ಸಾಕ್ಷಿ ಕೊಟ್ಟಾಗ ಮಾತ್ರ, ಅವರ ನಾಕಗರಿಕತ್ವ ಪ್ರಶ್ನೆಗೆ ಬರುತ್ತದೆ. ಹರಿಯಾಣದ ನಮ್ಮ ಹಳ್ಳಿಯಲ್ಲಿ ಅಧಿಕಾರಿಗಳು ಬಂದು ನಾನು ಆ ಹಳ್ಳಿಯ ಆ ಮನೆಯಲ್ಲಿ ಇರುವುದನ್ನು ನೋಡಿದ ಮೇಲೆ ಬೇರೆ ಯಾವುದೇ ದಾಖಲೆ ಬೇಕಿಲ್ಲ. ಯಾರಾದರೂ, ಯೋಗೇಂದ್ರ ಯಾದವ್ ಅಮೇರಿಕದ ನಿವಾಸಿ ಎಂದು ವಾದಿಸಿದರೆ, ಅದಕ್ಕೆ ಅವರೇ ಆಧಾರ ಕೊಡಬೇಕೇ ಹೊರತು ನಾನಲ್ಲ” ಎಂದರು.
“ದೇಶದಲ್ಲಿ ಫುಟ್‌ಪಾತ್‌ನಲ್ಲಿ ವಾಸಿಸುವವರಿಗೆ, ರಾಜ್ಯದಿಂದ ರಾಜ್ಯಕ್ಕೆ ವಲಸೆ ಹೋಗುವವರಿಗೆ, ದುಡಿವು ಬದುಕುವವರಿಗೆ ನಿಮ್ಮ ನಾಗರಿಕತ್ವದ ದಾಖಲೆ ಕೊಡಿ ಎಂದರೆ, ದೇಶದ ಮೂರರಲ್ಲಿ ಒಂದು ಭಾಗ ಜನರು ನಾಗರೀಕರಲ್ಲ ಎಂದಾಗುತ್ತದೆ. ಯಾರೂ ಈ ವರೆಗೆ ನಮಗೆ ನಾಗರೀಕತ್ವಕ್ಕೆ ಸರ್ಟಿಫಿಕೇಟ್ ಕೊಟ್ಟಿಲ್ಲ. ಎಸ್‌ಐಆರ್ ಹಿಂದೆ ನಡೆದಿರುವುದರ ಮರುಕಳಿಕೆಯಲ್ಲ. ಇದು ಹಿಂದೆಂದೂ ನಡೆದಿರದ ಮತ್ತು ಈಗ ನಡೆಯುತ್ತಿರುವ ಮೋಸ” ಎಂದು ಆರೋಪಿಸಿದರು.
“ಒಂದೇ ಊರಿನ ಒಂದೇ ಮನೆಯಲ್ಲಿ ಹತ್ತು ಮತದಾರರಿದ್ದರೆ ಅದನ್ನು ಮರುಪರಿಶೀಲಿಸಬೇಕು. ಬಿಹಾರದಲ್ಲಿ 21 ಲಕ್ಷ ಮನೆಗಳಲ್ಲಿ ಹತ್ತಕ್ಕಿಂತ ಹೆಚ್ಚು ಮತದಾರರಿದ್ದಾರೆ, ಇದನ್ನು ನಾನು ಸುಪ್ರೀಂ ಕೋರ್ಟ್‌ನಲ್ಲಿ ತೋರಿಸಿದ್ದೇನೆ, ಒಂದೇ ಮನೆಯಲ್ಲಿ 801 ಮತದಾರರಿದ್ದನ್ನು ತೋರಿಸಿದ್ದೇನೆ, 700ಕ್ಕಿಂತ ಹೆಚ್ಚು ಮತದಾರರು ಒಂದೇ ಮನೆಯಲ್ಲಿರುವ 10 ಮನೆಗಳನ್ನು ತೋರಿಸಿದ್ದೇನೆ. ಬಿಹಾರದ ಮತದಾರರ ಪಟ್ಟಿಯಲ್ಲಿ ಕನ್ನಡದಲ್ಲಿ ತಮಿಳಿನಲ್ಲಿ ಹೆಸರುಗಳು ಮುದ್ರಿತವಾಗಿವೆ. ಯಾವುದೇ ಬೇಸಿಕ್ ಸಾಫ್ಟ್‌ವೇರ್ ಇದನ್ನು ಪತ್ತೆಮಾಡಬಲ್ಲದು, ಇದನ್ನೆಲ್ಲ ಸುಪ್ರೀಂ ಕೋರ್ಟ್‌ನಲ್ಲಿ ತೋರಿಸಿದ ನಂತರವೂ, ಒಂದು ತಿಂಗಳಲ್ಲಿ ಅದೇ ವೋಟರ್ ಲಿಸ್ಟ್ ಆಧರಿಸಿ ಬಿಹಾರದ ಚುನಾವಣೆ ನಡೆಯಿತು. 50,000 ಮತದಾರರು, ಹೆಸರು ಅಪಭ್ರಂಶ ಆಗಿರುವ ಅಥವಾ ಹೆಸರು ಇಲ್ಲದೇ ಇರುವ ಪಟ್ಟಿ ತೋರಿಸಿದೆ, ಅದನ್ನು ಸ್ವಚ್ಛಗೊಳಿಸಲು ಯಾವುದೇ ಕೆಲಸ ಆಯೋಗದಿಂದ ನಡೆಯಲಿಲ್ಲ” ಎಂದರು.
“ಎಸ್‌ಐಆರ್ ಪರದೇಶದವರನ್ನು ಪತ್ತೆಹಚ್ಚುವ ಕೆಲಸವೂ ಅಲ್ಲ. ಪರದೇಶದವರನ್ನು ಚುನಾವಣಾ ಪಟ್ಟಿಯಿಂದ ತೆಗೆಯುವ ಕೆಲಸ ಮಾಡುತ್ತೇವೆಂದು ಆಯೋಗ ಹೇಳಿಕೊಂಡಿತು. ಪ್ರಕ್ರಿಯೆ ನಡೆಯುವಾಗಲೇ ನಾವು ಕೇಳಿದೆವು, ಅಳಿಸಲ್ಪಟ್ಟವರಲ್ಲಿ ಎಷ್ಟು ಜನ ಹೊರದೇಶದವರು ಎಂದು; ಅದಕ್ಕೆ, ಉತ್ತರವಿಲ್ಲ. ಚುನಾವಣಾ ಆಯೋಗಕ್ಕೆ ಪತ್ರಿಕಾ ಗೋಷ್ಟಿಯಲ್ಲಿ ಈ ಪ್ರಶ್ನೆ ಕೇಳಿದಾಗಲೂ ಉತ್ತರವಿಲ್ಲ. ನಮ್ಮ ತಂಡ ಬಿಹಾರದ ಮತದಾರರ ಪಟ್ಟಿಯನ್ನು ಸಂಪೂರ್ಣವಾಗಿ ಪರಿಶೀಲಿಸಿದಾಗ, ಆಕ್ಷೇಪಣೆಗಳಲ್ಲಿ ಹೆಚ್ಚಿನವುಗಳನ್ನು ಸಂಬಂಧಪಟ್ಟ ವ್ಯಕ್ತಿಗಳೇ ತಮ್ಮನ್ನು ತಾವು ಹೊರದೇಶದವರೆಂದು ಹೇಳಿಕೊಂಡು ಸಲ್ಲಿಸಿರುವಂಥವಾಗಿವೆ ಎಂದು ದಾಖಲೆಗಳು ತೋರಿಸುತ್ತಿವೆ. ಈ ಎಲ್ಲ ಹೆಸರುಗಳನ್ನು ಡೌನ್‌ಲೋಡ್ ಮಾಡಿ, ಬಾಂಗ್ಲಾದೇಶಕ್ಕೆ ಹತ್ತಿರವಿರುವ ಪೂರ್ವಾಂಚಲ ಎಂದು ಕರೆಯಲ್ಪಡುವ ಆ ನಾಲ್ಕು ಜಿಲ್ಲೆಗಳನ್ನು ಪರಿಶೀಲಿಸಿದಾಗ, ಹೊರದೇಶದವರೆಂದು ಆಕ್ಷೇಪಣೆ ಸಲ್ಲಿಸಲ್ಪಟ್ಟಿರುವುದು ಕೇವಲ ಹತ್ತು, ಐದು ಹಿಂದು ಮತ್ತು ಐದು ಮುಸ್ಲಿಂ ವ್ಯಕ್ತಿಗಳು. ಅದರಲ್ಲಿ ಕೇವಲ ಮೂರು ಮಾತ್ರ ಸಮರ್ಪಕವೆಂದು ಪರಿಗಣಿಸಲ್ಪಟ್ಟವು. ಇದು ಬೆಟ್ಟ ಅಗೆದು ಸತ್ತ ಇಲಿ ಹಿಡಿದಂತಿದೆ” ಎಂದು ಕಿಡಿಕಾರಿದರು.
ಈ ಲೇಖನ ಓದಿದ್ದೀರಾ?: SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ
“ಎಸ್‌ಐಆರ್‍ನಿಂದ ಹಾನಿಗೊಳಗಾಗುತ್ತಿರುವವರು ಯಾರು? ಅತ್ಯಂತ ಬಡವರು, ವಲಸೆ ಕಾರ್ಮಿಕರು, ಅವರು ದುಡಿಯಲು ವಲಸೆ ಬಂದಲ್ಲಿ ಅವರ ಹೆಸರಿಲ್ಲ, ಅವರ ಹುಟ್ಟೂರಿನಿಂದಲೂ ಅವರನ್ನು ತೆಗೆಯಲಾಗಿದೆ. ನಾಳೆ ಯಾವಾಗ ಬೇಕಾದರೂ ನೀವು ಈ ದೇಶದ ನಾಗರೀಕರೇ ಅಲ್ಲ ಎಂದು ಹೇಳಬಹುದು. ಈಗಾಗಲೇ ಎರಡು ಕೋಟಿಗಿಂತ ಹೆಚ್ಚು ಮಂದಿಯನ್ನು ಮತದಾರರ ಪಟ್ಟಿಯಿಂದ ಹಿತ್ತೆಸೆಯಲಾಗಿದೆ, ಈಗ ಕರ್ನಾಟಕ ಮತ್ತು ಇತರರ ಸರದಿ. ಇದೆಲ್ಲ ಮುಗಿಯುವಾಗ ಸುಮಾರು ಹತ್ತು ಕೋಟಿಯಷ್ಟು ಮತದಾರರನ್ನು ಹೊರಹಾಕಲಾಗಿರುತ್ತದೆ” ಎಂದು ಎಚ್ಚರಿಸಿದರು.
“ಈ ಎಲ್ಲ ಹತ್ತು ಕೋಟಿ ಜನರೂ ಬಿಜೆಪಿ ವಿರೋಧಿಗಳಲ್ಲ ಎಂದು ಕೆಲವರು ಕೇಳುತ್ತಾರೆ. ದೇಶದ ತಳಮಟ್ಟದ ಹತ್ತು ಕೋಟಿಯನ್ನು ತೆಗೆದುಹಾಕಿದರೆ ಅದರಲ್ಲಿ 6/10 ಬಿಜೆಪಿ ವಿರೋಧೀಗಳೇ ಆಗಿರುತ್ತಾರೆ. ಇದರಲ್ಲಿ ಬಿಜೆಪಿಗೂ ಒಂದು ಸಣ್ಣ ಪ್ರಮಾಣದ ಮತ ನಷ್ಟವಾದರೂ, ಉಳಿದವರ ಪೂರ್ತಿ ಬುನಾದಿ ಕುಸಿದು ಹೋಗುತ್ತದೆ, ಹೀಗೆ ಬಿಜೆಪಿ ಇದರ ಲಾಭ ಗಳಿಸುತ್ತದೆ. ಈ ದೇಶದ ಜನರೇ ಈಗ ಏನಾದರೂ ಮಾಡಬಲ್ಲರು. ಬಿಎಲ್‌ಓಗಳು ಯಾರು? ಸ್ಫಳೀಯ ಶಾಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತರು, ಇದನ್ನು ಅವರುಗಳೊಂದಿಗೆ ಮಾತನಾಡಬೇಕು. ಆಕ್ಷೇಪಣೆಗಳು ಹೊರಗಿನವರಿಂದ ಬರದಂತೆ ಎಚ್ಚರ ವಹಿಸಬೇಕು” ಎಂದರು.
“ನಾವು ಎಚ್ಚರವಾಗಿರಬೇಕು, ತುದಿಗಾಲ ಮೇಲೆ ನಿಂತಿರಬೇಕು. ಮುಂದಿನ ಕೆಲವು ತಿಂಗಳು ನಮ್ಮ ಸಾರ್ವತ್ರಿಕ ಮತದಾನದ ಹಕ್ಕಿನ ಪರೀಕ್ಷೆ ನಡೆಯಲಿದೆ. ಭಾರತದ ಅದ್ಭುತ ಸ್ವಾತಂತ್ರ್ಯ ಆಂದೋಲನದ ನಂತರ ನಮಗೆ ಎಲ್ಲರಿಗೂ ಸಮಾನವಾಗಿ ಸಿಕ್ಕಿದ್ದು ಸಾರ್ವತ್ರಿಕ ಮತದಾನದ ಹಕ್ಕು. ನನಗೂ ಪ್ರಧಾನಿಗೂ ಅಂಬಾನಿ-ಅದಾನಿಗೂ ಒಂದೇ ಮತ. ಆದರೆ, ಅದನ್ನು ನಾವು ಕಳೆದುಕೊಳ್ಳಲಿದ್ದೇವೆ. ಅದಾಗಬಾರದೆಂದರೆ, ನಾವು ಇದರಲ್ಲಿ ಮಧ್ಯಪ್ರವೇಶ ಮಾಡಬೇಕು, ಸಕ್ರಿಯರಾಗಿದಬೇಕು” ಎಂದರು.
ಕರ್ನಾಟಕವು ಭಾರತದ ಎಚ್ಚೆತ್ತ ರಾಜ್ಯಗಳಲ್ಲಿ ಒಂದು. ಕರ್ನಾಟಕ ಬೇರೆಲ್ಲ ವಿಷಯಗಳಲ್ಲಿ ದೇಶಕ್ಕೆ ದಿಕ್ಸೂಚಿಯಾಗಿದೆ. ಸಾಮಾಜಿಕ ನ್ಯಾಯದ ಬಗ್ಗೆ ಯೋಚನೆ ಮಾಡಿದರೆ, ನಾವು ಹಾವನೂರು ವರದಿಯನ್ನು ಓದುತ್ತೇವೆ. ರೈತ ಚಳವಳಿ ಬಗ್ಗೆ ಮಾತಾಡಿದರೆ ಪ್ರೊ. ಎಂ.ಡಿ ನಂಜುಂಡಸ್ವಾಮಿ ಮತ್ತು ರೈತ ಸಂಘದ ಬಗ್ಗೆ ಯೋಚಿಸಿ ಸ್ಫೂರ್ತಿ ಪಡೆಯುತ್ತೇವೆ. ದಲಿತ ಚಳವಳಿ ಮತ್ತು ಸಾಹಿತ್ಯದ ಬಗ್ಗೆ ಮಾತಾಡಿದಾಗ ಡಿ.ಆರ್ ನಾಗರಾಜ್, ದೇವನೂರ ಮಹಾದೇವರನ್ನು ನಾನು ನೋಡುತ್ತೇನೆ. ಇಡೀ ದೇಶ ಕರ್ನಾಟಕದ ಕಡೆ ನೋಡುತ್ತದೆ. ವೋಟ್ ಚೋರಿ ವಿರುದ್ಧದ ಕೆಲಸವೂ ಕರ್ನಾಟಕದಿಂದ ಆರಂಭವಾಗಿದೆ. ಎಸ್‌ಐಆರ್ ವಿರುದ್ಧದ ಹೋರಾಟದಲ್ಲೂ ದಿಕ್ಕುತೋರಿಸುತ್ತದೆಂದು ನಂಬಿದ್ದೇನೆ” ಎಂದರು.




