ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಮನೆ ಮನೆ ಸರ್ವೇ ಪ್ರಕ್ರಿಯೆ ಅಂತ್ಯವಾಗಿದೆ. ಆದರೆ ಸಮೀಕ್ಷೆಯಲ್ಲಿ ಭಾಗಿಯಾಗದವರು ಆನ್‌ಲೈನ್ ಮೂಲಕ ಸಮೀಕ್ಷೆಯಲ್ಲಿ ಭಾಗಿಯಾಗಲು ನವೆಂಬರ್ 10ರವರೆಗೆ ಅವಕಾಶ ನೀಡಲಾಗಿದೆ.
ರಾಜ್ಯದಲ್ಲಿರುವ ಎಲ್ಲಾ ಜನರ (ಹಿಂದುಳಿದ ವರ್ಗಗಳು, ಇತರೆ ಜಾತಿಗಳು ಅನುಸೂಚಿತ ಜಾತಿ ಮತ್ತು ಪಂಗಡಗಳು ಸೇರಿದಂತೆ) ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಆಗಸ್ಟ್ 22ರಂದು ಆರಂಭಿಸಲಾಗಿದ್ದು, ಅಕ್ಟೋಬರ್ 31ರ ವೇಳೆ ಸಮೀಕ್ಷೆ ಮುಕ್ತಾಯವಾಗಿದೆ.
ಇದನ್ನು ಓದಿದ್ದೀರಾ? ಕುದಿ ಕಡಲು | ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಮತ್ತು ನೈತಿಕ ನಿಷ್ಠೆ
ರಾಜ್ಯದಲ್ಲಿರುವ 6,85,38,000 ಕೋಟಿ ಜನರ ಪೈಕಿ ಇಂದಿನವರೆಗೆ(ಅ.31) 6,13,83,908 ಮಂದಿಯ ಸಮೀಕ್ಷೆಯನ್ನು ನಡೆಸಲಾಗಿದೆ. ಈವರೆಗೆ 4,22,258 ಕುಟುಂಬಗಳು ಸಮೀಕ್ಷೆಯಲ್ಲಿ ಭಾಗಿಯಾಗಲು ನಿರಾಕರಿಸಿದೆ. ಸಮೀಕ್ಷೆ ನಡೆಸುವ ತಂಡ ಭೇಟಿ ನೀಡಿದಾಗ 34,49,681 ಮನೆಗಳಲ್ಲಿ ಬೀಗ ಹಾಕಲಾಗಿತ್ತು ಅಥವಾ ಆ ಮನೆಯಲ್ಲಿದ್ದವರು ಬೇರೆಡೆ ಸ್ಥಳಾಂತರಗೊಂಡಿದ್ದರು.

ಈ ರೀತಿ ವಿವಿಧ ಕಾರಣಗಳಿಂದಾಗಿ ಸಮೀಕ್ಷೆಯಲ್ಲಿ ಭಾಗವಹಿಸಲು ಸಾಧ್ಯವಾಗದೆ ಇರುವವರಿಗೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಆನ್‌ಲೈನ್ ಮೂಲಕ ಸಮೀಕ್ಷೆಯಲ್ಲಿ ಭಾಗಿಯಾಗಲು ಅವಕಾಶ ನೀಡಿದೆ. https://kscbcselfdeclaration.karnataka.gov.in ಲಿಂಕ್ ಮೂಲಕ ಸ್ವಯಂ ಆಗಿ ನ.10ರವರೆಗೆ ಸಮೀಕ್ಷೆಯಲ್ಲಿ ಭಾಗಿಯಾಗಬಹುದು.
ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ನಿರಾಕರಿಸಿದವರು, ಸಮೀಕ್ಷಾದಾರರು ಮನೆಗೆ ಭೇಟಿ ನೀಡಿದಾಗ ಮನೆಯಲ್ಲಿ ಇಲ್ಲದವರು ಈ ಅವಕಾಶವನ್ನು ಬಳಸಿಕೊಂಡು ಮಾಹಿತಿಯನ್ನು ದಾಖಲಿಸಬಹುದು. ಈ ಸಮೀಕ್ಷೆಯು ಸರ್ಕಾರದ ನೀತಿಗಳನ್ನು ಹಾಗೂ ಯೋಜನೆಗಳನ್ನು ರೂಪಿಸಲು ಸಹಾಯವಾಗುವುದರಿಂದ ಸ್ವಯಂ ದೃಢೀಕರಣದ ಮೂಲಕ ಎಲ್ಲಾ ನಾಗರಿಕರು ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕು ಎಂದು ಸರ್ಕಾರ ಮನವಿ ಮಾಡಿದೆ.
ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 8050770004 ಅನ್ನು ಸಂಪರ್ಕಿಸಬಹುದಾಗಿದೆ.





