ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶುಕ್ರವಾರ ಮಂಡಿಸಿರುವ 2026-27ನೇ ಸಾಲಿನ ಬಜೆಟ್ ರಾಜ್ಯದ ಯುವ ಜನತೆಯ ಪಾಲಿಗೆ ಸಂಪೂರ್ಣ ನಿರಾಶದಾಯಕವಾಗಿದ್ದು, ಯುವ ಸಮುದಾಯದ ಬೇಡಿಕೆ, ನಿರೀಕ್ಷೆಗಳು ಹುಸಿಗೊಂಡಿವೆ. ಪ್ರಣಾಳಿಕೆಯ ಭರವಸೆಗಳು ಬಜೆಟ್‌ನಲ್ಲಿ ಯಾಕಿಲ್ಲ ಎಂದು ಕರ್ನಾಟಕ ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಪ್ರಶ್ನಿಸಿದೆ.
“ಮುಖ್ಯಮಂತ್ರಿಯವರ ತಮ್ಮ ದಾಖಲೆಯ 17ನೇ ಬಜೆಟ್ ರಾಜ್ಯದ ಯುವಜನತೆ ಎದುರಿಸುತ್ತಿರುವ ಮಾನಸಿಕ ಆರೋಗ್ಯ ಸಮಸ್ಯೆಗಳು, ಉದ್ಯೋಗದ ಅನಿಶ್ಚಿತತೆ, ಮಾದಕ ಪದಾರ್ಥಗಳ ಜಾಲ, ಸೈಬರ್ ವಂಚನೆ, ಪರಿಸರ ಮಾಲಿನ್ಯ, ಸಾಲದ ಹೊರೆ, ಹೆಚ್ಚುತ್ತಿರುವ ಒತ್ತಡ ಹಾಗೂ ಬದಲಾಗುತ್ತಿರುವ ಆಹಾರ ಮತ್ತು ಜೀವನಶೈಲಿಯಿಂದ ಉಂಟಾಗುತ್ತಿರುವ ಆರೋಗ್ಯ ಸಮಸ್ಯೆಗಳಂತಹ ಗಂಭೀರ ಸವಾಲುಗಳಿಗೆ ಸಮಗ್ರ ಪರಿಹಾರಗಳು ಕಾಣಿಸದಿರುವುದು ನಿರಾಶಾದಾಯಕವಾಗಿದೆ” ಎಂದು ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಅಭಿಪ್ರಾಯಪಟ್ಟಿದೆ.
ಇದನ್ನು ಓದಿದ್ದೀರಾ? ರಾಜ್ಯ ಬಜೆಟ್ | ವಿವಿಧ ವಲಯದ ಸಾಮಾಜಿಕ ಹೋರಾಟಗಾರರ ಅಭಿಪ್ರಾಯವೇನು?
“2023ರ ವಿಧಾನಸಭಾ ಚುನಾವಣೆಯ ವೇಳೆ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಯುವಜನರ ಸಬಲೀಕರಣಕ್ಕಾಗಿ ಹಲವಾರು ಮಹತ್ವಾಕಾಂಕ್ಷಿ ಯೋಜನೆಗಳನ್ನು ಘೋಷಿಸಿತ್ತು. ಆದರೆ ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಆ ಘೋಷಣೆಗಳಿಗೆ ಸಂಬಂಧಿಸಿದ ಸ್ಪಷ್ಟ ಯೋಜನೆಗಳು ಅಥವಾ ಅನುದಾನಗಳ ಬಗ್ಗೆ ಯಾವುದೇ ಉಲ್ಲೇಖ ಇಲ್ಲದಿರುವುದು ಯುವಜನರಲ್ಲಿ ಆತಂಕ ಮತ್ತು ಅಸಮಾಧಾನ ಮೂಡಿಸಿದೆ” ಎಂದು ಹೇಳಿದೆ.
“ಪ್ರಣಾಳಿಕೆಯಲ್ಲಿ ಪ್ರತಿಯೊಂದು ಪಂಚಾಯತ್ ಮತ್ತು ವಾರ್ಡ್ ಮಟ್ಟದಲ್ಲಿ ‘ಭಾರತ್ ಜೋಡೋ ಯುವ ಶಕ್ತಿ ಕೇಂದ್ರ’ಗಳನ್ನು ಸ್ಥಾಪಿಸಿ ಉದ್ಯೋಗ ಸೃಷ್ಟಿಗೆ ಸಹಾಯ ಮಾಡಲಾಗುವುದು ಎಂದು ಘೋಷಿಸಲಾಗಿತ್ತು. ಆದರೆ ಈ ಯೋಜನೆಗೆ ಸಂಬಂಧಿಸಿದ ಯಾವುದೇ ಪ್ರಸ್ತಾಪ ಬಜೆಟ್‌ನಲ್ಲಿ ಇಲ್ಲದಿರುವುದನ್ನು” ಪ್ರಶ್ನಿಸಿದೆ.
“ಇದೇ ರೀತಿ, ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರಗಳಲ್ಲಿ ಕರ್ನಾಟಕದ ಸ್ಥಳೀಯರಿಗೆ 80% ಉದ್ಯೋಗ ಅವಕಾಶಗಳನ್ನು ಖಚಿತಪಡಿಸುವುದಾಗಿ ನೀಡಿದ ಭರವಸೆ, ಯುವಕರ ಹೊಸ ಆಲೋಚನೆಗಳಿಗೆ ಮೆಂಟರ್‌ಶಿಪ್, ಮಾರುಕಟ್ಟೆ ಸಂಪರ್ಕ ಮತ್ತು ಸಾಫ್ಟ್ ಲೋನ್‌ಗಳನ್ನು ಒದಗಿಸುವ ಯೋಜನೆ, ಹಾಗೂ ಸರ್ಕಾರದ ಎಲ್ಲಾ ಇಲಾಖೆಗಳಲ್ಲಿಯೂ 10,000 ಪದವೀಧರರಿಗೆ ‘ಯಂಗ್ ಇಂಟರ್ನ್ಸ್ ಪ್ರೋಗ್ರಾಂ’ ನೀಡುವ ಯೋಜನೆಗಳಿಗೂ ಬಜೆಟ್‌ನಲ್ಲಿ ಯಾವುದೇ ಸ್ಪಷ್ಟ ಕ್ರಮಗಳು ಕಾಣಿಸಿಲ್ಲ” ಎಂದು ಹೇಳಿದೆ.
“ಅದೇ ರೀತಿ, ಪ್ರೋಟೋಟೈಪ್‌ಗಳು ಮತ್ತು ನವೀನ ಉತ್ಪನ್ನಗಳಿಗೆ ರೂ.1 ಲಕ್ಷ ಸಹಾಯಧನ, ‘ಯುವಕರಿಗೆ ಯುವಕರು’ ಕಾರ್ಯಕ್ರಮದ ಮೂಲಕ ತಾಲೂಕು ಮಟ್ಟದ ಯುವ ಸಂಘಟನೆಗಳಿಗೆ ವರ್ಷಕ್ಕೆ ರೂ.5 ಲಕ್ಷ ಅನುದಾನ, ಹಾಗೂ ಪ್ರತಿಯೊಂದು ತಾಲೂಕು/ನಗರದಲ್ಲಿ ಉದ್ಯೋಗ ಮತ್ತು ಶಿಕ್ಷಣ ಮಾರ್ಗದರ್ಶನಕ್ಕಾಗಿ 24×7 ಯುವ ಸಹಾಯವಾಣಿ ಸ್ಥಾಪನೆ ಕುರಿತ ಘೋಷಣೆಗಳೂ ಬಜೆಟ್‌ನಲ್ಲಿ ಉತ್ತರ ಇಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ಇದನ್ನು ಓದಿದ್ದೀರಾ? ರಾಜ್ಯ ಬಜೆಟ್ | ಮಾಜಿ ದೇವದಾಸಿಯರಿಗೆ ಪ್ರೋತ್ಸಾಹಧನ ಹೆಚ್ಚಳ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ದಕ್ಕಿದ್ದಿಷ್ಟು
“ಇದಲ್ಲದೆ, ಸರ್ಕಾರಿ ಉದ್ಯೋಗ ನೇಮಕಾತಿಯಲ್ಲಿ ಸಂಪೂರ್ಣ ಪಾರದರ್ಶಕತೆ ತರಲು ಸೂಕ್ತ ವ್ಯವಸ್ಥೆ ರೂಪಿಸುವುದು, ಹಾಗೂ ಪ್ರತಿವರ್ಷ ರಾಜ್ಯದಾದ್ಯಂತದಿಂದ 1000 ಪ್ರತಿಭಾವಂತ ಯುವ ಕ್ರೀಡಾಪಟುಗಳನ್ನು ಗುರುತಿಸಿ ಆರ್ಥಿಕ ಸಹಾಯ ನೀಡುವುದು ಎಂಬ ಭರವಸೆಗಳಿಗೂ ಸ್ಪಷ್ಟ ಅನುದಾನ ಅಥವಾ ಕಾರ್ಯಯೋಜನೆ ಪ್ರಕಟವಾಗಿಲ್ಲ” ಎಂದಿದೆ.
“ಕ್ರೀಡೆ ಮತ್ತು ಕ್ರೀಡಾಂಗಣಗಳ ಅಭಿವೃದ್ಧಿಗೆ ನೂರಾರು ಕೋಟಿ ರೂಪಾಯಿ ಮೀಸಲಿಡಲಾಗಿದ್ದರೂ, ಯುವಜನರ ಹಕ್ಕುಗಳ ವಕಾಲತ್ತು, ಸಮಸ್ಯೆಗಳ ಅಧ್ಯಯನ ಮತ್ತು ಸಮಗ್ರ ನೀತಿ ರೂಪಣೆಗೆ ಅಗತ್ಯವಾದ ಯುವಜನ ಆಯೋಗ ಸ್ಥಾಪನೆ ಕುರಿತು ಯಾವುದೇ ಪ್ರಸ್ತಾಪ ಇಲ್ಲದಿರುವುದು, ಗ್ಯಾರಂಟಿ ಯೋಜನೆಗಳಲ್ಲಿ ಯುವ ನಿಧಿಗೆ ಅನುದಾನ ಘೋಷಿಸದಿರುವುದು ಸರ್ಕಾರ ಯುವಜನರ ಮೂಲಭೂತ ಸಮಸ್ಯೆಗಳನ್ನು ಕಡೆಗಣಿಸುತ್ತಿರುವುದನ್ನು ತೋರಿಸುತ್ತದೆ” ಎಂದು ಹೇಳಿದೆ.
“ಚುನಾವಣೆಯ ಸಂದರ್ಭದಲ್ಲಿ ನೀಡಿದ ಭರವಸೆಗಳು ಕೇವಲ ಘೋಷಣೆಗಳಾಗಿಯೇ ಉಳಿಯಬಾರದು. ಪ್ರಣಾಳಿಕೆಯಲ್ಲಿ ಘೋಷಿಸಿದ ಯೋಜನೆಗಳನ್ನು ಜಾರಿಗೆ ತರುವ ಬಗ್ಗೆ ಸರ್ಕಾರ ಸ್ಪಷ್ಟ ನಿಲುವು ಪ್ರಕಟಿಸಿ, ಯುವಜನರ ಸಮಗ್ರ ಸಬಲೀಕರಣಕ್ಕೆ ಅಗತ್ಯವಾದ ಯೋಜನೆಗಳು ಮತ್ತು ಅನುದಾನಗಳನ್ನು ತಕ್ಷಣವೇ ಘೋಷಿಸಬೇಕು” ಎಂದು ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಆಗ್ರಹಿಸಿದೆ.





