ಸೌಜನ್ಯ ಪ್ರಕರಣವನ್ನು ಸಿಬಿಐಗೆ ಹಸ್ತಾಂತರ ಮಾಡಬೇಕೆಂದು ಬಿಜೆಪಿ ಒತ್ತಾಯಿಸುತ್ತಿದೆ. ಸಿಬಿಐ ಕೇಂದ್ರ ಸರ್ಕಾರದ ಅಧೀನದಲ್ಲಿದ್ದು, ಅವರು ತನಿಖೆ ಮಾಡಿ ವರದಿ ಕೊಟ್ಟಿದ್ದಾರೆ. ಈಗ ಸರ್ವೋಚ್ಚ ನ್ಯಾಯಾಲಯಕ್ಕೆ ಹೋಗಬೇಕೆಂದು ಬಿಜೆಪಿ ಹೇಳುತ್ತಿದೆ. ಸೌಜನ್ಯ ಪ್ರಕರಣದಲ್ಲಿ ವೀರೇಂದ್ರ ಹೆಗ್ಗಡೆಯವರ ಮೇಲೆ ಆರೋಪವಿದೆ. ಹಾಗಾದರೆ ಬಿಜೆಪಿ ಯಾರ ಪರ ಇದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
ಮೈಸೂರಿನಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಒಂದು ಕಡೆ ವೀರೇಂದ್ರ ಹೆಗಡೆಯವರ ಪರ ಎನ್ನುತ್ತಾರೆ. ಮತ್ತೊಂದಡೆ ಸೌಜನ್ಯ ಪರ ಎನ್ನುತ್ತಾರೆ. ನಿಜವಾಗಿಯೂ ಇವರು ಯಾರ ಪರ? ಧರ್ಮಸ್ಥಳಕ್ಕೆ ಬಿಜೆಪಿ ಕೈಗೊಂಡಿರುವುದು ಧರ್ಮ ಯಾತ್ರೆಯಲ್ಲ, ಅದೊಂದು ರಾಜಕೀಯ ಯಾತ್ರೆ” ಎಂದು ಕಿಡಿಕಾರಿದರು.
“ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತನಿಖೆ ನಡೆಯುತ್ತಿದೆ. ಬಿಜೆಪಿ ಈಗ ಎನ್ ಐ ಎ ತನಿಖೆಗೆ ಒತ್ತಾಯಿಸುತ್ತಿದ್ದಾರೆ. ಹಾಗಾದರೆ ನಮ್ಮ ಪೊಲೀಸರ ಮೇಲೆ ಬಿಜೆಪಿಯವರಿಗೆ ನಂಬಿಕೆ ಇಲ್ಲವೇ? ಎಸ್ಐಟಿ ರಚನೆಯಾದ ಪ್ರಾರಂಭದಲ್ಲಿ ಎನ್ಐಎ ತನಿಖೆ ಮಾಡಿ ಎನ್ನಲಿಲ್ಲ. ನಂತರ ದೇಹಗಳು ಸಿಗದೇ ಹೋದಾಗ ಒತ್ತಾಯಿಸುತ್ತಿದ್ದಾರೆ” ಎಂದರು.
“ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರೇ ಸ್ವತಃ ಸತ್ಯ ಹೊರಬರಲಿ ಎಂದು ಎಸ್ಐಟಿ ರಚನೆಯನ್ನು ಸ್ವಾಗತಿಸಿದ್ದಾರೆ. ನಮ್ಮ ಮೇಲಿನ ಅನುಮಾನದ ತೂಗುಗತ್ತಿ ನಿವಾರಣೆಯಾಗಬೇಕು ಎಂದಿದ್ದಾರೆ. ಎಸ್‌ಐಟಿ ತನಿಖೆ ಸ್ವತಂತ್ರವಾಗಿ ಮಾಡುತ್ತಿದ್ದು ನಾವ್ಯಾರು ಅದರಲ್ಲಿ ಹಸ್ತಕ್ಷೇಪ ಮಾಡಿಲ್ಲ. ಸತ್ಯ ಹೊರಬರಬೇಕು” ಎಂದು ಹೇಳಿದರು.
“ಎಲ್ಲ ವಿಷಯಗಳನ್ನೂ ರಾಜಕೀಯವಾಗಿ ಬಳಸಲು ಹೋಗಬಾರದು. ಹೊರದೇಶಗಳಿಂದ ಇದಕ್ಕಾಗಿ ಹಣ ಬಂದಿದೆ ಎಂಬ ಬಿಜೆಪಿಯವರ ಆರೋಪ ನೋಡಿದರೆ ಅವರಿಗೆ ಹಣ ಬಂದಿದೆ ಅನ್ನಿಸುತ್ತದೆ. ವಿರೋಧ ಪಕ್ಷದವರು ಟೀಕೆ ಮಾಡಲಿ. ಆದರೆ ಎಲ್ಲ ವಿಷಯಗಳನ್ನೂ ರಾಜಕೀಯವಾಗಿ ಬಳಸಲು ಹೋಗಬಾರದು” ಎಂದರು.
ಅಶೋಕ್ ಸದನದಲ್ಲಿ ಚರ್ಚೆ ಮಾಡಿದ್ದೇ ಬೇರೆ
ಚಿನ್ನಯ್ಯ ಎಂಬ ವ್ಯಕ್ತಿಯನ್ನು ಕರೆತಂದಿರುವುದೇ ಕಾಂಗ್ರೆಸ್ ಎಂದು ಬಿಜೆಪಿಯವರ ಆರೋಪದ ಬಗ್ಗೆ ಮಾತನಾಡಿ, “ಸದನದಲ್ಲಿ ಈ ಬಗ್ಗೆ ಚರ್ಚೆಯಾದಾಗ ಬೇರೆ ಮಾತನಾಡಿದ್ದ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹಾಗೂ ಶಾಸಕ ಸುನೀಲ್ ಕುಮಾರ್, ಈಗ ಬೇರೆ ಹೇಳುತ್ತಿದ್ದಾರೆ. ಹೀಗೆ ದಿನಕ್ಕೊಂದು ಹೇಳಿಕೆ ಕೊಡಬಾರದು” ಎಂದು ವಾಗ್ದಾಳಿ ನಡೆಸಿದರು.
12 ವರ್ಷಗಳ ಅಪಹರಣ ವಾಗಿರುವುದನ್ನು ಕಣ್ಣಾರೆ ನೋಡಿದ್ದೇನೆ ಎಂದು ಎಸ್ಐಟಿಗೆ ಮಹಿಳೆಯೊಬ್ಬರು ದೂರ ನೀಡಿರುವ ಬಗ್ಗೆ ಮಾತನಾಡಿ, “ಇದನ್ನು ಸಿಬಿಐ ತನಿಖೆ ನಡೆದಾಗ ಏಕೆ ಹೇಳಲಿಲ್ಲ? ಸತ್ಯ ಗೊತ್ತಿದ್ದ ಮೇಲೆ, ಅದನ್ನು ಮುಚ್ಚಿಡುವುದು ಅಪರಾಧ” ಎಂದರು.
ಸೌಜನ್ಯ ಪ್ರಕರಣದ ಮರು ತನಿಖೆ: ಸೌಜನ್ಯ ತಾಯಿ ತೀರ್ಮಾನಿಸಬೇಕು
“ಸೌಜನ್ಯ ಪ್ರಕರಣದ ಮರು ತನಿಖೆ ಅಗತ್ಯವಿದ್ದರೆ ನ್ಯಾಯಾಲಯಕ್ಕೆ ಹೋಗಲಿ. ನಾನು ಅದರ ತೀರ್ಪನ್ನು ನೋಡಿಲ್ಲ. ಈ ಬಗ್ಗೆ ಸೌಜನ್ಯ ತಾಯಿ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕು” ಎಂದು ತಿಳಿಸಿದರು.
ಕನ್ನಡದ ಮೇಲೆ ಅಭಿಮಾನ, ಪ್ರೀತಿ ಇಲ್ಲದೆ ಇದ್ದರೆ ಬರೆಯಲು ಸಾಧ್ಯವೇ?
“ದಿವಾನ್ ಮಿರ್ಜಾ ಇಸ್ಮಾಯಿಲ್ ಅವರನ್ನು ಮಹಾರಾಜರು ಅಂಬಾರಿ ಮೇಲೆ ಕೂಡಿಸಿಕೊಂಡು ಮೆರವಣಿಗೆ ಮಾಡುತ್ತಿದ್ದರು. ಆಗ ಆರ್. ಎಸ್. ಎಸ್ ಹಾಗೂ ಬಿಜೆಪಿಯವರು ಎಲ್ಲಿ ಹೋಗಿದ್ದರು? 2017 ರಲ್ಲಿ ಕವಿ ನಿಸಾರ್ ಅಹಮದ್ ಅವರು ದಸರಾ ಉದ್ಘಾಟನೆ ಮಾಡಿದ್ದರು. ಆಗ ಇವರೆಲ್ಲ ಎಲ್ಲಿ ಹೋಗಿದ್ದರು? ಬಾನು ಅವರು ಕುಂಕುಮದ ಬಗ್ಗೆ ಮಾತನಾಡಿದ್ದಾರೆ ಎನ್ನುವುದು ನನಗೆ ತಿಳಿದಿಲ್ಲ. ಅವರೊಬ್ಬ ಕನ್ನಡದ ಬರಹಗಾರ್ತಿ. ಕನ್ನಡದ ಮೇಲೆ ಅಭಿಮಾನ, ಪ್ರೀತಿ ಇಲ್ಲದೆ ಬರೆಯಲು ಸಾಧ್ಯವೇ” ಎಂದು ಪ್ರಶ್ನಿಸಿದರು.
ಬಾನು ಅವರು ಕುಂಕುಮ ಹಚ್ಚಿಕೊಂಡು ದಸರಾ ಉದ್ಘಾಟಸಲಿ ಎಂದು ಬಿಜೆಪಿಯವರು ಒತ್ತಾಯಿಸಿರುವ ಬಗ್ಗೆ ಪ್ರತಿಕ್ರಿಯಿಸಿ, “ಬೂಕರ್ ಪ್ರಶಸ್ತಿ ವಿಜೇತರಾದ ಬಾನು ಮುಷ್ತಾಕ್ ಓರ್ವ ಮುಸ್ಲಿಂ ಮಹಿಳೆಯಾಗಿದ್ದು, ಕುಂಕುಮ ಹಚ್ಚಿಕೊಳ್ಳುವುದು ಅವರ ಧರ್ಮದಲ್ಲಿಲ್ಲ. ದಸರಾ ಹಬ್ಬವನ್ನು ನಾಡ ಹಬ್ಬ ಎಂದು ಆಚರಿಸುತ್ತೇವೆ. ಬೇರೆ ಧರ್ಮದವರನ್ನು ಉದ್ಘಾಟಕರನ್ನಾಗಿ ಆಹ್ವಾನಿಸಿದರೆ ಕುಂಕುಮ ಹಚ್ಚಿಕೊಂಡು ಬನ್ನಿ, ಹಿಂದೂಗಳಾಗಿ ಎನ್ನುವುದು ತರವಲ್ಲ. ಮುಸ್ಲಿಂ ಗುರುಗಳು ಬಾನು ಮುಷ್ತಾಕ್ ಅವರ ವಿರುದ್ಧ ಫತ್ವಾ ಹೊರಡಿಸಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ” ಎಂದರು.





