ರಾಜ್ಯದ ವಾಣಿಜ್ಯ ತೆರಿಗೆ ಇಲಾಖೆಯು ಕಳೆದ ನವೆಂಬರ್ ಅಂತ್ಯದೊಳಗೆ ₹72,131 ಕೋಟಿ ನಿವ್ವಳ ತೆರಿಗೆ ಸಂಗ್ರಹಿಸಿದ್ದು, ನಿಗದಿತ ಗುರಿಯ ಶೇ.90ರಷ್ಟು ಸಾಧನೆ ಮಾಡಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ನಡೆದ ತೆರಿಗೆ ಸಂಗ್ರಹ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ವಾಣಿಜ್ಯ ತೆರಿಗೆ, ಅಬಕಾರಿ ತೆರಿಗೆ ಸೇರಿದಂತೆ ವಿವಿಧ ತೆರಿಗೆ ವಿಭಾಗಗಳ ಸಾಧನೆ ಮತ್ತು ಸವಾಲುಗಳನ್ನು ವಿಮರ್ಶಿಸಿದರು. ತೆರಿಗೆ ಸಂಗ್ರಹದಲ್ಲಿ ಶೇ.100ರಷ್ಟು ಗುರಿ ಸಾಧನೆಗೈಯಲು ಕ್ರಮಬದ್ಧ ಕಾರ್ಯಾಚರಣೆ ಅಗತ್ಯವಿದೆ ಎಂದು ಅವರು ಸ್ಪಷ್ಟಪಡಿಸಿದರು.
2025-26ನೇ ಸಾಲಿನಲ್ಲಿ ಇಲಾಖೆಗೆ ₹1,20,000 ಕೋಟಿ ಗುರಿ ನಿಗದಿಪಡಿಸಲಾಗಿದ್ದು, ನವೆಂಬರ್‌ವರೆಗೆ ₹80 ಸಾವಿರ ಕೋಟಿಯ ಗುರಿಯ ವಿರುದ್ಧ ಉತ್ತಮ ಪ್ರಗತಿ ಸಾಧಿಸಲಾಗಿದೆ.
ವಾಣಿಜ್ಯ ತೆರಿಗೆ ಇಲಾಖೆಯ ವಿವರ ಹಂಚಿಕೊಂಡ ಅವರು, ಜಿಎಸ್‌ಟಿ ಮೂಲಕ ₹53,522 ಕೋಟಿ, ಕೆಎಸ್‌ಟಿ ಮೂಲಕ ₹17,595 ಕೋಟಿ ಹಾಗೂ ವೃತಿ ತೆರಿಗೆಯಿಂದ ₹1,014 ಕೋಟಿ ಸಂಗ್ರಹಿಸಲಾಗಿದೆ ಎಂದು ತಿಳಿಸಿದರು. ಏಪ್ರಿಲ್‌ನಿಂದ ಆಗಸ್ಟ್‌ವರೆಗೆ ತೆರಿಗೆ ಸಂಗ್ರಹದಲ್ಲಿ ಶೇ.12ರಷ್ಟು ಬೆಳವಣಿಗೆ ಕಂಡುಬಂದಿದ್ದರೂ, ಜಿಎಸ್‌ಟಿ ದರ ಬದಲಾವಣೆಯಿಂದ ಕಳೆದ ಮೂರು ತಿಂಗಳ ಬೆಳವಣಿಗೆ ಶೇ.3ರಷ್ಟಿಗೆ ಮಾತ್ರ ಸಿಮಿತವಾಗಿದೆ ಎಂದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಕೋಮುವಾದಿಗಳ ಅಜೆಂಡಾ ಅರ್ಥ ಮಾಡಿಕೊಳ್ಳದ ಕಾಂಗ್ರೆಸ್; ಪುಂಡಾಟಕ್ಕೆ ಕಡಿವಾಣ ಯಾವಾಗ?
ತಪಾಸಣೆಗಳ ಕುರಿತು ಮಾತನಾಡಿದ ಅವರು, ನವೆಂಬರ್‌ವರೆಗೆ 13 ಸಾವಿರಕ್ಕೂ ಹೆಚ್ಚು ತಪಾಸಣೆ ನಡೆಸಿ ₹3,183 ಕೋಟಿ ತೆರಿಗೆ ಸಂಗ್ರಹಿಸಲಾಗಿದೆ ಎಂದು ಮಾಹಿತಿ ನೀಡಿದರು. ತೆರಿಗೆ ಕಳ್ಳತನ ತಡೆಗೆ ವಿಚಕ್ಷಣಾ ದಳವು ನಿರಂತರ ತಪಾಸಣೆ ನಡೆಸಬೇಕು, ತಂತ್ರಜ್ಞಾನ ಆಧಾರಿತ ವಿಶ್ಲೇಷಣೆ ಬಲಪಡಿಸಬೇಕು ಹಾಗೂ ಬೋಗಸ್ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಪ್ರಕರಣಗಳ ವಿರುದ್ಧ ಗಟ್ಟಿಯಾದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿದರು.
ಅಬಕಾರಿ ತೆರಿಗೆ ಸಂಗ್ರಹದ ವಿಷಯದಲ್ಲೂ ಮುಖ್ಯಮಂತ್ರಿಗಳು ತೃಪ್ತಿ ವ್ಯಕ್ತಪಡಿಸಿದರು. 2025-26ನೇ ಸಾಲಿಗೆ ನಿಗದಿಯಾದ ₹43 ಸಾವಿರ ಕೋಟಿಯ ಗುರಿಯ ಪೈಕಿ ನವೆಂಬರ್‌ವರೆಗೆ ₹26,215 ಕೋಟಿ ಸಂಗ್ರಹವಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.10.46ರಷ್ಟು ಹೆಚ್ಚಳವಾಗಿದೆ. ನಿಗದಿತ ಗುರಿ ಸಾಧಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಬಕಾರಿ ಇಲಾಖೆಗೆ ಸೂಚಿಸಿದರು.





