ಕಬ್ಬಿಗೆ ₹3,500 ದರ ನೀಡಬೇಕು ಎಂದು ಆಗ್ರಹಿಸಿ ರೈತರು ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಗುರ್ಲಾಪುರದಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಶುಕ್ರವಾರ ಕರೆದಿರುವ ಸಭೆಯನ್ನು ಕಬ್ಬು ಹೋರಾಟಗಾರರು ಬಹಿಷ್ಕರಿಸಿದ್ದು, ಸರ್ಕಾರಕ್ಕೆ 24 ಗಂಟೆಗಳ ಗಡುವು ನೀಡಿದ್ದಾರೆ.
ಗುರುವಾರ ಸಂಧಾನಕ್ಕೆ ಆಗಮಿಸಿದ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಅವರು ರೈತರನ್ನು ಉದ್ದೇಶಿ ಮಾತನಾಡುತ್ತ, “ರೈತರ ಬಗ್ಗೆ ನನಗೂ ಕಾಳಜಿ ಇದೆ, ಸಹಕಾರಿ ಸಕ್ಕರೆ ಕಾರ್ಖಾನೆಗಳಿಗೆ ಸಾಲ ಕೊಟ್ಟಿರೋದು ನಾವು. ರೈತರ ಕಾರ್ಖಾನೆ ಇರಬೇಕು ಎಂಬ ಉದ್ದೇಶ ನನ್ನದು. ರೈತರ ಕಾರ್ಖಾನೆ ಯಾವತ್ತೂ ಬಂದ್ ಮಾಡಲ್ಲ”ಎಂದರು.
“ವೈಜ್ಞಾನಿಕವಾಗಿ ಎಫ್ಆರ್‌ಪಿ ಇಲ್ಲ ಎಂಬುದು ಎಷ್ಟೋ ರೈತರ ಆರೋಪವಾಗಿದೆ. ಈ ಬಗ್ಗೆ ನಾವೂ ಕೇಂದ್ರ ಸರ್ಕಾರದ ಜೊತೆ ಚರ್ಚಿಸುತ್ತೇವೆ. ಮುಖ್ಯಮಂತ್ರಿಗಳು ಕ್ಯಾಬಿನೆಟ್‌ನಲ್ಲಿ ರೈತರಿಗೆ ಏನಾದರೂ ಪರಿಹಾರ ಕೊಡಬೇಕು ಎಂದು ಹೇಳಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳನ್ನು ನಂಬಿ ತಡವಾಗಿ ಬಂದಿರುವೆ” ಎನ್ನುವ ಮೂಲಕ ಪರೋಕ್ಷವಾಗಿ ಸತೀಶ ಜಾರಕಿಹೊಳಿ ವಿರುದ್ಧ ಅಸಮಾಧಾನ ಹೊರಹಾಕಿದರು.
“ಈಗಾಗಲೇ ನಿಮ್ಮನ್ನು ನಂಬಿ ಮಹಾರಾಷ್ಟ್ರದಿಂದ ಕಬ್ಬಿನ ಗ್ಯಾಂಗ್ ಬಂದಿವೆ. ಅವರ ಹೊಟ್ಟೆ ಉಪಜೀವನ ನಡೆಯುತ್ತಿಲ್ಲ. ಯೋಗ್ಯ ಬೆಲೆ ಕೊಡಿಸುತ್ತೇನೆ. ನೀವು ಕರೆಕೊಟ್ಟಿರುವ ರಾಷ್ಟ್ರೀಯ ಹೆದ್ದಾರಿ ಪ್ರತಿಭಟನೆಯನ್ನು ಕೇವಲ ಒಂದು ದಿನದ ಮಟ್ಟಿಗೆ ಮುಂದೆ ಹಾಕಿ” ಎಂದು ರೈತರ ಬಳಿ ಮನವಿ ಮಾಡಿದರು.
ರೈತ ಮುಖಂಡರಾದ ಶಶಿಕಾಂತ ಪಡಸಲಗಿ, ಚೂನಪ್ಪ ಪೂಜಾರಿ ಮಾತನಾಡಿ, “ನಾಳೆ ರಾಷ್ಟ್ರೀಯ ಹೆದ್ದಾರಿ ತಡೆಯನ್ನು ಹಿಂಪಡೆದಿದ್ದೇವೆ. ಸರ್ಕಾರಕ್ಕೆ ನಾಳೆ ಒಂದು ದಿನ ಗಡುವು ಕೊಡುತ್ತೇವೆ. ನ್ಯಾಯ ಕೊಡಿಸದಿದ್ದರೆ ನಾಡಿದ್ದು ರಾಷ್ಟ್ರೀಯ ಹೆದ್ದಾರಿ ತಡೆ ಮಾಡುತ್ತೇವೆ. ಸರ್ಕಾರ ಮನವಿ ಮಾಡಿದ್ದು, ಗೌರವ ಕೊಡುತ್ತೇವೆ” ಎಂದು ಹೇಳಿದರು.
ಸಂಧಾನಕ್ಕೆ ಆಗಮಿಸುವ ವೇಳೆ ಸಚಿವ ಶಿವಾನಂದ ಪಾಟೀಲ್ ಕಾರಿಗೆ ನೀರಿನ ಬಾಟಲ್ ಮತ್ತು ಚಪ್ಪಲಿ ಎಸೆದ ಘಟನೆಯೂ ನಡೆಯಿತು.





