ಬಿಜೆಪಿ ಜಿಲ್ಲಾ ಪಂಚಾಯತಿ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ 15ನೇ ಆರೋಪಿಯಾಗಿರುವ ಕಾಂಗ್ರೆಸ್ ಶಾಸಕ, ಮಾಜಿ ಸಚಿವ ವಿನಯ್ ಕುಲಕರ್ಣಿ ಅವರಿಗೆ ಶುಕ್ರವಾರ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ನ್ಯಾಯಮೂರ್ತಿ ಸಂಜಯ್ ಕರೋರ್ ಅವರಿದ್ದ ಪೀಠವು ಜಾಮೀನು ನೀಡಿದೆ.
ಈ ಹಿಂದೆ ವಿನಯ್ ಕುಲಕರ್ಣಿಗೆ 2021ರ ಆಗಸ್ಟ್‌ನಲ್ಲಿ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಆದರೆ ಸಾಕ್ಷಿಗಳಿಗೆ ಬೆದರಿಕೆ ಹಾಕಿ ಜಾಮೀನು ಷರತ್ತನ್ನು ಕುಲಕರ್ಣಿ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ ಸಿಬಿಐ, ಜಾಮೀನು ರದ್ದುಗೊಳಿಸುವಂತೆ ಮನವಿ ಮಾಡಿತ್ತು.
ಇದನ್ನು ಓದಿದ್ದೀರಾ? ವಿನಯ್ ಕುಲಕರ್ಣಿ ಅರ್ಜಿ ಮತ್ತೆ ವಜಾ; ಧಾರವಾಡಕ್ಕಿಲ್ಲ ಪ್ರವೇಶ
ಸಿಬಿಐ ಮನವಿಯಲ್ಲಿ 2025ರ ಜೂನ್‌ನಲ್ಲಿ ಸುಪ್ರೀಂ ಕೋರ್ಟ್ ಕುಲಕರ್ಣಿ ಜಾಮೀನು ರದ್ದುಗೊಳಿಸಿದ್ದು, ಕಳೆದ ಏಳು ತಿಂಗಳಿನಿಂದ ಕುಲಕರ್ಣಿ ಜೈಲಿನಲ್ಲಿದ್ದಾರೆ. ಇದೀಗ ಹೈಕೋರ್ಟ್ ಜಾಮೀನು ಅರ್ಜಿ ವಜಾಗೊಳಿಸಿರುವ ಕಾರಣ ವಿನಯ್ ಇತ್ತೀಚೆಗೆ ಜನಪ್ರತಿನಿಧಿಗಳ ಕೋರ್ಟ್‌ಗೆ ಶರಣಾಗಿದ್ದರು. ಅದಾದ ಬಳಿಕ ಇದೀಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಜಾಮೀನು ಲಭಿಸಿದೆ.
ಏನಿದು ಯೋಗಿಶ್ ಗೌಡ ಕೊಲೆ ಪ್ರಕರಣ?
2016ರ ಜೂನ್ 15ರಂದು ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಯೋಗೀಶ್ ಗೌಡ ಅವರನ್ನು ಜಿಮ್ ಮುಂಭಾಗದಲ್ಲಿ ಕೊಲೆ ಮಾಡಲಾಗಿತ್ತು. ಪ್ರಕರಣದಲ್ಲಿ ಒಟ್ಟು 21 ಆರೋಪಿಗಳಿದ್ದು, ಅದರಲ್ಲಿ 15ನೇ ಆರೋಪಿ ವಿನಯ್ ಕುಲಕರ್ಣಿಯಾಗಿದ್ದಾರೆ.





