ಅಂದಾಜು 62 ಲಕ್ಷ ಮಕ್ಕಳಿಗೆ ಪೋಲಿಯೋ ಹನಿ ಹಾಕಲಾಗುವುದು. ರಾಜ್ಯದ ಎಲ್ಲ ಆಸ್ಪತ್ರೆ, ಅಂಗನವಾಡಿ, ಗುಡ್ಡಗಾಡು ಪ್ರದೇಶ, ಇಟ್ಟಿಗೆ ಭಟ್ಟಿ, ಕೊಳಚೆ ಪ್ರದೇಶ, ರೈಲ್ವೆ ಸ್ಟೇಷನ್ ಮುಂತಾದ ಕಡೆಗಳಲ್ಲಿ ಆದ್ಯತೆ ಮೆರೆಗೆ ಲಸಿಕೆ ಹಾಕಲಾಗುವುದು ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ಕರೆದು ಮಾತನಾಡಿದ ಅವರು, ಡಿಸೆಂಬರ್ 21ರಂದು ಪೋಲಿಯೋ ಲಸಿಕೆ ಕಾರ್ಯಕ್ರಮವಿದೆ. ಎಲ್ಲ ಸರಕಾರಿ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಕಾರ್ಯಕ್ರಮ ನಡೆಸಲಾಗುವುದು” ಎಂದರು.
“0-5 ವರ್ಷದ ಮಕ್ಕಳಿಗೆ ಕಡ್ಡಾಯ ಲಸಿಕೆ ಹಾಕಿಸಬೇಕು. ಮೊದಲು ಹಾಕಿಸಿದ್ದರೂ ಈ ಬಾರಿಯೂ ಎರಡು ಹನಿ ಲಸಿಕೆ ಹಾಕಿಸಬೇಕು. ಪೋಲಿಯೋ ಮುಕ್ತ ದೇಶವಾಗಿರುವ ಭಾರತ ಇದನ್ನು ಮುಂದುವರೆಸಲು ಸಾರ್ವಜನಿಕರ ಸಹಕಾರ ಅಗತ್ಯ.
ಡಿಸೆಂಬರ್ 21ರಂದು ಬೂತ್‌ಗಳಲ್ಲಿ ನಂತರ 2-3 ದಿನ ಮನೆಮನೆಗೆ ತೆರಳಿ 0-5 ವರ್ಷದ ಮಕ್ಕಳಿಗೆ ಲಸಿಕೆ ಹಾಕಲಾಗುವುದು. ಸರ್ವಜನಿಕರು ಸಹಕರಿಸಬೇಕು” ಎಂದು ಮನವಿ ಮಾಡಿದರು.
“ರಾಜ್ಯದಲ್ಲಿ 33,258 ಬೂತ್‌ಗಳು, 1030 ಸಂಚಾರಿ ತಂಡಗಳು, 1096 ಟ್ರಾನ್ಸಿಟ್ ತಂಡಗಳು, 1,13,115 ಲಸಿಕಾ ಕಾರ್ಯಕರ್ತರು ಹಾಗೂ 7,322 ಮೇಲ್ವಿಚಾರಕರನ್ನು ನೇಮಿಸಲಾಗಿದೆ. Nearby Vaccination centre Karnataka ಆಪ್ ಮೂಲಕ ಹತ್ತಿರದ ಲಸಿಕಾ ಕೇಂದ್ರ ಸಂಪರ್ಕಿಸಬಹುದು. ಸಂಪೂರ್ಣ ಸುರಕ್ಷಿತವಾಗಿದ್ದು ವದಂತಿಗಳಿಗೆ ಕಿವಿಗೊಡದೆ ಮಕ್ಕಳಿಗೆ ಲಸಿಕೆ ಹಾಕಿಸಿ” ಸಚಿವರು ಕೋರಿದರು.





