ದೇಶದ ಆರ್ಥಿಕತೆಗೆ ಹೆಚ್ಚು ಕೊಡುಗೆ ನೀಡುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ರಾಜ್ಯದ ಹಣಕಾಸು ಸ್ಥಿತಿಯೂ ಬಲಿಷ್ಠವಾಗಿಯೇ ಇದೆ. ಅದರಲ್ಲೂ, ರಾಜ್ಯದ ಅದಾಯವು ಖರ್ಚಿಗಿಂತ ಹೆಚ್ಚಾಗಿತ್ತು. ಪ್ರತಿ ವರ್ಷದ ಬಜೆಟ್‌ಅನ್ನು ಹೆಚ್ಚುವರಿ ಬಜೆಟ್ ಎಂದೇ ಬಣ್ಣಿಸಲಾಗುತ್ತಿತ್ತು. ಆದರೆ, ಕಳೆದ ಕೆಲ ವರ್ಷಗಳಿಂದ ರಾಜ್ಯದ ಆರ್ಥಿಕತೆ ದುರ್ಬಲಗೊಳ್ಳುತ್ತಿದೆ. ರಾಜ್ಯದ ಬಜೆಟ್ ಹೆಚ್ಚುವರಿ ಬಜೆಟ್‌ನಿಂದ ಕೊರತೆ ಬಜೆಟ್‌ನತ್ತ ವಾಲಿದೆ. ರಾಜ್ಯದ ಆದಾಯಕ್ಕಿಂತ ಖರ್ಚು ಹೆಚ್ಚಾಗುತ್ತದೆ. ಈ ವರ್ಷ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ 4.47 ಲಕ್ಷ ಕೋಟಿ ರೂ. ಮೌಲ್ಯದ ಬಜೆಟ್ ಕೂಡ ಕೊರತೆ ಬಜೆಟೇ ಆಗಿದೆ.
ರಾಜ್ಯದ ಈ ಬದಲಾವಣೆಗೆ ಪ್ರಮುಖ ಕಾರಣ ಕೇಂದ್ರದಲ್ಲಿ ಮೋದಿ ಸರ್ಕಾರ ಅಧಿಕಾರ ಬಂದ ಬಳಿಕ ಜಾರಿಯಾದ ಹಣಕಾಸು ನೀತಿಗಳು, ಹಣಕಾಸು ಹಂಚಿಕೆಯಲ್ಲಿನ ಖೋತಾ ಹಾಗೂ ವಂಚನೆಯೇ ಮುಖ್ಯ ಕಾರಣವೆಂದು ಆರ್ಥಿಕ ವಿಶ್ಲೇಷಕರು ಪ್ರತಿಪಾದಿಸಿದ್ದಾರೆ.
ವಿಶೇಷವಾಗಿ 15ನೇ ಹಣಕಾಸು ಆಯೋಗದ ಶಿಫಾರಸ್ಸುಗಳಿಂದ ರಾಜ್ಯಕ್ಕೆ ದೊಡ್ಡ ನಷ್ಟವಾಗಿದೆ. ಹಿಂದಿನ 14ನೇ ಆಯೋಗದಲ್ಲಿ ರಾಜ್ಯಕ್ಕೆ ತೆರಿಗೆ ಪಾಲು 4.71% ಇತ್ತು. ಆದರೆ, 15ನೇ ಆಯೋಗದಲ್ಲಿ ರಾಜ್ಯದ ಪಾಲನ್ನು 3.64%ಗೆ ಇಳಿಸಿದೆ. ಇದರಿಂದಾಗಿ ರಾಜ್ಯವು 62,000 ಕೋಟಿ ರೂ.ಗಳನ್ನು ತನ್ನ ಪಾಲಿನ ಹಣವನ್ನು ಕಳೆದುಕೊಂಡಿದೆ. ಜೊತೆಗೆ, ಜಿಎಸ್‌ಟಿ ವ್ಯವಸ್ಥೆಯು ರಾಜ್ಯದ ತೆರಿಗೆ ಸಂಗ್ರಹಕ್ಕೆ ಕೊಕ್ಕೆ ಹಾಕಿದ್ದು, ತೆರಿಗೆ ಸಂಗ್ರಹದ ಬೆಳೆವಣಿಗೆಯು 10-15%ನಿಂದ 4%ಗೆ ಕುಸಿದಿದೆ. ಜೊತೆಗೆ, 2022ರ ನಂತರ ರಾಜ್ಯಗಳಿಗೆ ನೀಡುತ್ತಿದ್ದ ಜಿಎಸ್‌ಟಿ ಪರಿಹಾರವನ್ನು ನಿಲ್ಲಿಸಿದೆ. ಇತ್ತೀಚೆಗೆ, ಜಿಎಸ್‌ಟಿ ದರಗಳ ಸಡಿಲಿಕೆಯಿಂದಾಗಿ ರಾಜ್ಯಕ್ಕೆ ಹೆಚ್ಚುವರಿ 19,000 ಕೋಟಿ ರೂ. ನಷ್ಟವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಾತ್ರವಲ್ಲದೆ, ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನಗಳು ವಿಳಂಬವಾಗುತ್ತಿವೆ ಅಥವಾ ಕಡಿಮೆಯಾಗುತ್ತಿವೆ. ಕೇಂದ್ರ ಸರ್ಕಾರವು ತನ್ನದೇ ಆದ ಸೆಸ್ ಮತ್ತು ಇತರ ತೆರಿಗೆಗಳನ್ನು ಹೆಚ್ಚಿಸಿ ಹಣ ಸಂಗ್ರಹಿಸುತ್ತಿದ್ದರೂ, ರಾಜ್ಯಗಳ ಪಾಲನ್ನು ಹಂಚಿಕೆ ಮಾಡದೇ ತನ್ನ ಬೊಕ್ಕಸಕ್ಕೆ ಸೇರಿಸಿಕೊಳ್ಳುತ್ತಿದೆ ಎಂಬ ಆರೋಪವಿದೆ.
ಈ ಹಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸಚಿವರು ಮತ್ತು ಶಾಸಕರು ದೆಹಲಿಯಲ್ಲಿ ಧರಣಿ ನಡೆಸಿದ್ದರು. ಆದರೂ, ಕೇಂದ್ರ ಸರ್ಕಾರ ಮಣಿಯಲಿಲ್ಲ. ರಾಜ್ಯದ ಪಾಲಿನ ಹಣವನ್ನು ಬಿಡುಗಡೆ ಮಾಡಲಿಲ್ಲ.
ಕೇಂದ್ರ ಸರ್ಕಾರದ ಧೋರಣೆಯಿಂದಾಗಿ, ರಾಜ್ಯದ ಆದಾಯ ಕೊರತೆ ಹೆಚ್ಚಾಗಿದೆ. ಈ ಕೊರತೆಯನ್ನು ನಿಭಾಯಿಸಲು ರಾಜ್ಯವು ಸಾಲಗಳ ಮೊರೆಹೋಗುವಂತೆ ಮಾಡಿದೆ. 2026-27ರ ಬಜೆಟ್‌ನಲ್ಲಿ ಸಾಲದ ಮೊತ್ತ 1.3 ಲಕ್ಷ ಕೋಟಿ ರೂ.ಗಳನ್ನು ಮೀರಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿವರಿಸಿದ್ದಾರೆ.
“ಕೇಂದ್ರ ಸರ್ಕಾರದ ಅಸಹಕಾರ, ಹಣಕಾಸಿನ ಮಿತಿಗಳು ಮತ್ತು ಕೇಂದ್ರದಿಂದ ಬರುತ್ತಿರುವ ಅನುದಾನದ ಕಡಿತದ ನಡುವೆಯೂ ರಾಜ್ಯವು ಹಣಕಾಸಿನ ಶಿಸ್ತನ್ನು ಕಾಯ್ದುಕೊಂಡಿದೆ. ಈ ವರ್ಷದ ಒಟ್ಟು ಸಾಲ 1.32 ಲಕ್ಷ ಕೋಟಿ ರೂಪಾಯಿಗಳಾಗಿದ್ದು, ರಾಜ್ಯದ ಬಾಕಿ ಇರುವ ಒಟ್ಟು ಸಾಲವು 8.24 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ. ವಿತ್ತೀಯ ಕೊರತೆಯು ಜಿಎಸ್‌ಡಿಪಿಯ 2.94% ರಷ್ಟಿದೆ” ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ತೆರಿಗೆ ಹಂಚಿಕೆಯ ಕುಸಿತದ ಬಗ್ಗೆ ಮಾತನಾಡಿರುವ ಸಿದ್ದರಾಮಯ್ಯ, “ನಾವು 4.5 ಲಕ್ಷ ಕೋಟಿ ರೂಪಾಯಿಗಳನ್ನು ತೆರಿಗೆಯಾಗಿ ನೀಡಿದ್ದೇವೆ. ಆದರೆ, ಈ ವರ್ಷ ನಮಗೆ ಬಂದಿರುವುದು ಕೇವಲ 60,000 ಕೋಟಿ ರೂಪಾಯಿಗಳು ಮಾತ್ರ. ಮುಂದಿನ ವರ್ಷ 73,000 ಕೋಟಿ ರೂಪಾಯಿಗಳನ್ನು ನಿರೀಕ್ಷಿಸಬಹುದು. ನಾವು ಪಾವತಿಸುವ ಪ್ರತಿ ಒಂದು ರೂಪಾಯಿ ತೆರಿಗೆಯಲ್ಲಿ ನಮಗೆ ವಾಪಸ್ ಬರುತ್ತಿರುವುದು ಕೇವಲ 15 ಪೈಸೆ ಮಾತ್ರ” ಎಂದಿದ್ದಾರೆ.
ಈ ಲೇಖನ ಓದಿದ್ದೀರಾ?: ಟಿಆರ್‌ಪಿ ವರದಿಗೆ ನಾಲ್ಕು ವಾರಗಳ ಕೊಕ್ಕೆ; ಮಾಧ್ಯಮಗಳಿಗೆ TRP ಗೀಳು ಯಾಕೆ?
ರಾಜ್ಯದ ಹಣಕಾಸು ಕೊರತೆಯನ್ನು ಎದುರಿಸಲು ರಾಜ್ಯದ ಪಾಲನ್ನು ಕೇಂದ್ರದಿಂದ ಪಡೆಯುವಂತೆ ರಾಜ್ಯ ಸರ್ಕಾರದ ಮೇಲೆ ಕರ್ನಾಟಕ ಕಾಂಗ್ರೆಸ್ ಶಾಸಕರು ಒತ್ತಡ ಹೇರುತ್ತಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ಕಾನೂನು ಹೋರಾಟ ನಡೆಸಬೇಕು. ರಾಜ್ಯಕ್ಕೆ ನ್ಯಾಯಯುತವಾಗಿ ಸಲ್ಲಬೇಕಾದ ತೆರಿಗೆ ಪಾಲು, GST ಪರಿಹಾರ ಹಾಗೂ ಇತರ ಅನುದಾನಗಳನ್ನು ಪಡೆಯಲು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುವಂತೆ ಸಿದ್ದರಾಮಯ್ಯರಿಗೆ ಒತ್ತಾಯಿಸಿದ್ದಾರೆ.
ರಾಜ್ಯ ಬಜೆಟ್ ಅಧಿವೇಶನದಲ್ಲಿ ವಿಧಾನ ಪರಿಷತ್‌ನಲ್ಲಿ ಮಾತನಾಡಿರುವ ಕಾಂಗ್ರೆಸ್ ಎಂಎಲ್‌ಸಿ ರಮೇಶ್ ಬಾಬು, ಜಿಎಸ್‌ಟಿ ಸಂಗ್ರಹಣೆಯಲ್ಲಿ ಕರ್ನಾಟಕವು ತನ್ನ ನ್ಯಾಯಸಮ್ಮತವಾದ ಪಾಲನ್ನು ಹೇಗೆ ಪಡೆಯಬಹುದು ಎಂದು ಪ್ರಶ್ನಿಸಿದ್ದಾರೆ. “ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಸಮೀಪಿಸುತ್ತಿರುವ ಸಮಯದಲ್ಲಿ ಶಾಸಕರಿಗೆ ನಿಧಿಯ ಅವಶ್ಯಕತೆಯಿದೆ. ಕೇಂದ್ರ ಸರ್ಕಾರವು ಅನುದಾನ ಬಿಡುಗಡೆ ಮಾಡಲು ವಿಫಲವಾದರೆ, ಕಾನೂನು ಸಚಿವ ಎಚ್.ಕೆ. ಪಾಟೀಲ್ ಮತ್ತು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಇದನ್ನು ಕಾನೂನಾತ್ಮಕವಾಗಿ ಹೋರಾಟ ನಡೆಸಬೇಕು” ಎಂದು ಶಾಸಕ ಕೋನರೆಡ್ಡಿ ಹೇಳಿದ್ದಾರೆ.
“ಜಿಎಸ್‌ಟಿ ಕೌನ್ಸಿಲ್‌ನಲ್ಲಿ ಬಿಜೆಪಿ ಆಡಳಿತವಿರುವ ರಾಜ್ಯಗಳಿಗೆ ಹೆಚ್ಚಿನ ಪಾಲು ನೀಡಲಾಗಿದೆ. ಕರ್ನಾಟಕಕ್ಕೆ ಅನ್ಯಾಯ ಮಾಡಲಾಗಿದೆ. ಆದ್ದರಿಂದ, ನಾವು ಕಾನೂನು ಹೋರಾಟ ಮಾಡುವ ಕುರಿತು ಪರಿಶೀಲನೆ ನಡೆಸುತ್ತಿದ್ದೇವೆ. ಈ ಹಿಂದೆ ಕೂಡ ಕರ್ನಾಟಕ ಸರ್ಕಾರವು ಕಾನೂನು ಹೋರಾಟದ ಮೂಲಕ ಕೇಂದ್ರದಿಂದ ಬರ ಪರಿಹಾರವಾಗಿ ತನ್ನ ಪಾಲಿನ 3,000 ಕೋಟಿ ರೂ.ಗಳನ್ನು ಪಡೆದಿತ್ತು” ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಇದು ರಾಜಕೀಯ ವಿಷಯವಲ್ಲ. ಹಲವಾರು ರಾಜ್ಯಗಳಿಗೆ ಅನ್ಯಾಯವಾಗಿದೆ. ಅನ್ಯಾಯದ ವಿರುದ್ಧ ಹೋರಾಟ ಮತ್ತು ನಮ್ಮ ಪಾಲನ್ನು ಪಡೆಯುವುದು ನಮ್ಮ ಆದ್ಯತೆ ಎಂದು ಕಾಂಗ್ರೆಸ್ ಹೇಳಿದೆ.
ತೆರಿಗೆ ಹಂಚಿಕೆ ವಿಷಯವು ಮತ್ತೊಮ್ಮೆ ರಾಜ್ಯ-ಕೇಂದ್ರ ನಡುವಿನ ತಿಕ್ಕಾಟಕ್ಕೆ ಕಾರಣವಾಗುತ್ತಿದೆ. ದಕ್ಷಿಣ ಭಾರತದ ಹಲವು ರಾಜ್ಯಗಳು ಒಗ್ಗೂಡಿ ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತುತ್ತಿವೆ.




