ರಾಜ್ಯದಲ್ಲಿ ಈ ವರ್ಷ ಬೇಸಿಗೆಯು ನಿರೀಕ್ಷೆಗಿಂತ ಮೊದಲೇ ಆರಂಭವಾಗಿದೆ. ಫೆಬ್ರವರಿಯಲ್ಲೇ ತಾಪಮಾನ ತೀವ್ರವಾಗಿ ಹೆಚ್ಚಾಗಿದೆ. ಹೀಗಿರುವಾಗ ತಾಪಮಾನ ಇನ್ನಷ್ಟು ಏರಿಕೆಯಾಗುವ ಮತ್ತು ಈ ವರ್ಷ ರಾಜ್ಯದಲ್ಲಿ ಸಾಮಾನ್ಯಕ್ಕಿಂತ ಅಧಿಕ ತಾಪಮಾನ ಇರುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ.
ಈಗಾಗಲೇ ಶಿವಮೊಗ್ಗ, ಹಾವೇರಿ, ಬಾಗಲಕೋಟೆ, ಉತ್ತರ ಕನ್ನಡ, ಕಲಬುರಗಿಯಲ್ಲಿ ಗರಿಷ್ಠ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚಾಗಿದೆ. ಬಹುತೇಕ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಸಿಯಸ್ ಆಸುಪಾಸಿಗೂ ತಲುಪಿದೆ. ಕಾರವಾರ, ಕಲಬುರಗಿಯಲ್ಲಿ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್‌ಗೆ ಏರಿದೆ. ಇಂದು ರಾಜ್ಯದ ಹಲವು ಭಾಗಗಳಲ್ಲಿ ಗರಿಷ್ಠ ತಾಪಮಾನವು 31°C ನಿಂದ 34°Cವರೆಗೆ ದಾಖಲಾಗುವ ಸಾಧ್ಯತೆಯಿದೆ.
ಇದನ್ನು ಓದಿದ್ದೀರಾ? ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ
ಏಪ್ರಿಲ್ ಮತ್ತು ಮೇಯಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 4-5 ಡಿಗ್ರಿ ಸೆಲ್ಸಿಯಸ್ ಅಧಿಕವಾಗಬಹುದು. ತೇವಾಂಶ ಕೊರತೆ, ಜಾಗತಿಕ ತಾಪಮಾನ ಏರಿಕೆ ಸೇರಿದಂತೆ ವಿವಿಧ ಕಾರಣಗಳು ಇದಕ್ಕಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇನ್ನು ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ತಾಪಮಾನವು 45°C – 47°C ವರೆಗೂ ತಲುಪಬಹುದು ಎಂದು ಅಂದಾಜಿಸಲಾಗಿದೆ. ಬೆಂಗಳೂರಿನಲ್ಲಿ ಫೆಬ್ರವರಿ 23ರಂದು ಗರಿಷ್ಠ ತಾಪಮಾನ ಸುಮಾರು 31°C – 32°C ಇರಲಿದ್ದು, ಏಪ್ರಿಲ್ ವೇಳೆಗೆ ಇದು 39°C ವರೆಗೆ ಏರುವ ಸಾಧ್ಯತೆಯಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.





