“ರೈತರಿಗೆ ಆತ್ಮಗೌರವ ತಂದುಕೊಟ್ಟ ಮೊದಲಿಗರು ನಂಜುಂಡಸ್ವಾಮಿ, ಆನಂತರ ಸುಂದರೇಶ್”- ತೇಜಸ್ವಿ

Date:

ಇಂದು (ಫೆ.13) ರೈತ ಮುಖಂಡ ದಿವಂಗತ ಪ್ರೊ ನಂಜುಂಡಸ್ವಾಮಿ ಅವರ ಜನ್ಮದಿನ. ಅಗ್ನಿ ವಾರಪತ್ರಿಕೆಗೆ ಕೆ ಪಿ ಪೂರ್ಣ ಚಂದ್ರ ತೇಜಸ್ವಿ ಅವರು ಬರೆದ ‘ರೈತರ ಆತ್ಮಗೌರವದ ಸಂಕೇತ’ ಅಂಕಣ ಬರಹದ ಸಾಲುಗಳು.

“ನಂಜುಂಡಸ್ವಾಮಿಯವರು ನನಗೆ ಕಾಲೇಜು ದಿನಗಳಿಂದಲೂ ಗೊತ್ತಿದ್ದವರು. ಆದರೆ ಓದು ಮುಗಿದ ನಂತರ ನಾವು ಸಮಾಜವಾದಿ ಪಕ್ಷದಲ್ಲಿ ಸಕ್ರಿಯರಾಗಿ ಕೆಲಸ ಮಾಡಲು ಶುರು ಮಾಡಿದಾಗ ನಾನು, ನಂಜುಂಡಸ್ವಾಮಿ, ಸುಂದರೇಶ್, ಶ್ರೀರಾಮ್, ರಾಮದಾಸ್, ಕಡಿದಾಳು ಶಾಮಣ್ಣ ಈ ಐದು ಜನರು ಬಹಳ ಆತ್ಮೀಯ ಮಿತ್ರರಾದೆವು.

ಸಮಾಜವಾದಿ ಪಕ್ಷದಲ್ಲಿ ಆಗ ಗೋಪಾಲಗೌಡರು, ಜೆ.ಹೆಚ್. ಪಟೇಲರು, ಕೆ.ಜಿ. ಮಹೇಶ್ವರಪ್ಪ ಮೊದಲಾದ ಹಳಬರಿದ್ದುದರಿಂದ ಅವರ ಮೇಲುಸ್ತುವಾರಿಯಲ್ಲಿ ಕೆಲಸ ಮಾಡಲು ನಮಗೆ ತುಂಬಾ ಇರಿಸುಮುರುಸಾಗುತ್ತಿತ್ತು. ಆದ್ದರಿಂದ ನಾವು ಸಮಾಜವಾದಿ ಪಕ್ಷದೊಳಗೆ ‘ಸಮಾಜವಾದಿ ಯುವಜನ ಸಭಾ’ ಎಂಬ ಒಂದು ತರುಣರ ಉಪಸಂಘಟನೆ ಕಟ್ಟಿಕೊಂಡೆವು. ನಾನು, ನಂಜುಂಡಸ್ವಾಮಿ ಸಂಘಟನೆಯ ಮುಂಚೂಣಿಯಲ್ಲಿದ್ದುದರಿಂದ ಸಂಘಟನೆಯ ಕಾರ್ಯಕ್ರಮಗಳನ್ನು ರೂಪಿಸುವುದು, ಆ ಕಾರ್ಯಕ್ರಮಗಳಿಗೆ ಒಂದು ಸೈದ್ಧಾಂತಿಕ ಸ್ವರೂಪ ಕೊಡುವುದು ಮೊದಲಾದ ಜವಾಬ್ದಾರಿಗಳು ನಮ್ಮ ಮೇಲೆ ಬೀಳುತ್ತಿತ್ತು. ಆಗೆಲ್ಲಾ ನಂಜುಂಡಸ್ವಾಮಿಯವರು ಹಗಲೂರಾತ್ರಿ ಎನ್ನದೆ ಊಟ ಉಪಚಾರ ಅಲಕ್ಷಿಸಿ ಕೆಲಸ ಮಾಡುತ್ತಿದ್ದುದು ನನಗೆ ಚೆನ್ನಾಗಿ ನೆನಪಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಒಮ್ಮೆ ಲೋಹಿಯಾರವರ ‘ಕೆಂಪು ಪುಸ್ತಕ’ ಸಿದ್ಧಪಡಿಸಲು ಲೋಹಿಯಾ ಪುಸ್ತಕಗಳ ಭಾರಿ ರಾಶಿ ಹೊತ್ತುಕೊಂಡು ನಂಜುಂಡಸ್ವಾಮಿ ನಮ್ಮ ತೋಟಕ್ಕೆ ಬಂದರು. ಲೋಹಿಯಾ ಆಗ ಇರಲಿಲ್ಲ. ಅವರು ಹೊರಡಿಸುತ್ತಿದ್ದ ‘ಮ್ಯಾನ್ ಕೈಂಡ್’ ಪತ್ರಿಕೆಯ ಅಪಾರ ಸಾಮಗ್ರಿ ಸಹ ಅವರು ಹೊತ್ತು ತಂದಿದ್ದ ಪುಸ್ತಕದ ಬೆಟ್ಟದಲ್ಲಿ ಸೇರಿತ್ತು. ಅದನ್ನೆಲ್ಲಾ ಓದಿ, ಅದರಿಂದಲೇ ಸೂಕ್ತಿಗಳನ್ನು ಸಂಗ್ರಹಿಸಿ ನಾವು ಪುಸ್ತಕ ಸಿದ್ಧಪಡಿಸಲು ಸಾಧ್ಯವೇ ಎಂದು ನನಗೆ ಅಧೈರ್ಯವಾಗಿ ‘ಇಷ್ಟೆಲ್ಲಾ ಮಾಡಲು ನಮ್ಮಿಂದ ಆಗುತ್ತದೆಯೇ’ ಎಂದೆ. ನಂಜುಂಡಸ್ವಾಮಿ ‘ಪ್ರಯತ್ನ ಮಾಡೋಣ’ ಎಂದು ಧೈರ್ಯ ಹೇಳಿ ಕೈಕಾಲು ತೊಳೆದುಕೊಂಡು ಬಂದವರೇ ಜಗಲಿ ಮೇಜಿನ ಮೇಲೆ ಪುಸ್ತಕಗಳನ್ನು ಅಡಚಿ ಒಂದು ಪುಸ್ತಕ ಹಿಡಿದು ಕೆಲಸಕ್ಕೆ ಕೈ ಹಚ್ಚಿಯೇಬಿಟ್ಟರು.

ಸುಮಾರು ಒಂದು ತಿಂಗಳು ನಾವು ಕುಳಿತಲ್ಲಿಂದ ಏಳದೆ ಕೆಲಸ ಮಾಡಿ ಮುಗಿಸಿದವು. ಆ ಸಮಯದಲ್ಲಿ ಕೆಲಸ ಮಾಡುತ್ತಲೇ ಲೋಹಿಯಾ ಬಗ್ಗೆ ನಾವು ಮಾಡಿದ ಚರ್ಚೆ, ವಿವರಣೆ, ವಿಶ್ಲೇಷಣೆಗಳಿಂದ ಲೋಹಿಯಾ ನಮಗೆ ಎಷ್ಟು ಚೆನ್ನಾಗಿ ಅರ್ಥವಾದರೆಂದರೆ, ನಮ್ಮ ಕೆಲಸ ಮುಗಿಯುವ ಹೊತ್ತಿಗೆ ನಾವಿಬ್ಬರೂ ಲೋಹಿಯಾ ಬಗ್ಗೆ ಅಧಿಕಾರಯುತವಾಗಿ ಮಾತನಾಡುವಷ್ಟು ಪಳಗಿ ಹೋಗಿದ್ದೆವು.

ಮೂಡಿಗೆರೆ ಬಸ್ ಸ್ಟಾಂಡ್ ಹತ್ತಿರ ಇದ್ದ ಟೆಂಟ್ ಸಿನಿಮಾ ಮಂದಿರದ ಒಳಗೆ ಸಭೆ ಸೇರಿ ರೈತಸಂಘದ ಮೊಟ್ಟಮೊದಲ ಸಮಾವೇಶ ನಡೆಸಿದ್ದು ನಾವೆ. ಆದರೆ ಅದನ್ನು ಪ್ರಾರಂಭಿಸಿದ ಕೆಲವೇ ದಿವಸದೊಳಗೆ ಜೆ.ಪಿ.ಯವರ ‘ನವ ನಿರ್ಮಾಣ ಕ್ರಾಂತಿ’ ಆರಂಭವಾದ್ದರಿಂದ ರೈತ ಚಳವಳಿಯನ್ನು ತಾತ್ಕಾಲಿಕವಾಗಿ ತಟಸ್ಥ ಮಾಡಿ ಅದಕ್ಕೆ ಧುಮುಕಿದೆವು.

ನಾನು, ನಂಜುಂಡಸ್ವಾಮಿ, ಭಾಷಣ, ಮೌನ ಮೆರವಣಿಗೆ ಇತ್ಯಾದಿಗಳನ್ನು ಮಾಡಿಕೊಂಡು ಇಡೀ ಕರ್ನಾಟಕದ ಎಲ್ಲಾ ಜಿಲ್ಲೆಗಳನ್ನು ಸ್ಕೂಟರ್ ಮೇಲೆ ಸುತ್ತಿದೆವು. 1961 ರಿಂದ 1976 ರವರೆಗಿನ ನನ್ನ ನೆನಪಿನ ಬಹುಭಾಗ ನಂಜುಂಡಸ್ವಾಮಿ ಆಕ್ರಮಿಸಿದ್ದಾರೆ. ನಂಜುಂಡಸ್ವಾಮಿ ಬಗ್ಗೆ ನಾನು ಹೇಳಬಹುದಾದ ಸಾವಿರಾರು ಘಟನೆಗಳು ನನ್ನ ಮನಸ್ಸಿನಲ್ಲಿ ಹಚ್ಚ ಹಸಿರಾಗಿವೆ. 1976 ರಲ್ಲಿ ನಮ್ಮ ಕೆಲವು ಮಿತ್ರರ ವರ್ತನೆಯಿಂದ ಬೇಸರಗೊಂಡ ನಾನು ಸಕ್ರಿಯ ರಾಜಕಾರಣಕ್ಕೆ ವಿದಾಯ ಹೇಳಿ ದೂರಾದೆ. ನಂಜುಂಡಸ್ವಾಮಿ, ಸುಂದರೇಶ್, ಶಾಮಣ್ಣ ಮುಂತಾದವರು ರೈತ ಸಂಘದ ಪೂರ್ಣ ಪ್ರಮಾಣದ ಸಕ್ರಿಯ ರಾಜಕಾರಣಕ್ಕೆ ಇಳಿದು ಅದನ್ನೊಂದು ಅದ್ಭುತ ಆಂದೋಲನವಾಗಿ ಬೆಳೆಸಿದರು.

ಸ್ವಾತಂತ್ರ್ಯ ಸಂಗ್ರಾಮದ ನಂತರ ನಮ್ಮ ಗ್ರಾಮಗಳವರೆಗೂ ವಿಸ್ತರಿಸಿದ ಏಕಮಾತ್ರ ರಾಜಕೀಯ ಚಳವಳಿ ಎಂದರೆ ಕರ್ನಾಟಕ ರಾಜ್ಯ ರೈತ ಸಂಘದ ಚಳವಳಿ. ಆವರೆಗೂ ಅಧಿಕಾರಿಗಳ, ರಾಜಕಾರಣಿಗಳ ಮರ್ಜಿಯಲ್ಲಿ ತಗ್ಗಿ-ಬಗ್ಗಿ ಗೂನು ಬೆನ್ನಾಗಿದ್ದ ರೈತನನ್ನು ನೆಟ್ಟಗೆ ನಿಲ್ಲಿಸಿ, ಅವನಲ್ಲಿ ಆತ್ಮವಿಶ್ವಾಸ ತುಂಬಿ ದರ್ಪದಮನಗಳ ಎದುರು ಸೆಟೆದು ನಿಲ್ಲುವ ಆತ್ಮ ಗೌರವ ತಂದುಕೊಟ್ಟ ಮೊದಲಿಗರು ನಂಜುಂಡಸ್ವಾಮಿ ಆನಂತರ ಸುಂದರೇಶ್.”

-ಕೆ.ಪಿ. ಪೂರ್ಣಚಂದ್ರ ತೇಜಸ್ವಿ
(‘ರೈತರ ಆತ್ಮಗೌರವದ ಸಂಕೇತ’ (ಫೆಬ್ರವರಿ 12, 2004, ‘ಅಗ್ನಿ’ ಪತ್ರಿಕೆ)

ಕೃಪೆ: -‘ಹೊಸ ವಿಚಾರಗಳು’ (ಪುಸ್ತಕ, ಪುಟ: 444-445, 2021)

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...