ಸಂಸದರದ್ದು ದುಡ್ಡು ತರುವ ಕೆಲಸವಲ್ಲ, ಅವರೇನು ಏಜೆಂಟರೇ? ಅವರು ರಿಯಲ್ ಎಸ್ಟೇಟ್ ಮಾಡುತ್ತಾರಾ? ನೀವು ಮೊದಲು ರಾಜೀನಾಮೆ ಕೊಡಿ; ಆಮೇಲೆ ಅವರು ಹಣ ತರುತ್ತಾರೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸವಾಲು ಹಾಕಿದರು.
ಸೋಮವಾರ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಕುಣಿಯಲಾರದವರಿಗೆ ನೆಲ ಡೊಂಕು ಎಂಬಂತೆ ಕಾಂಗ್ರೆಸ್ ನಡೆದುಕೊಳ್ಳುತ್ತಿದೆ. ಕುಮಾರಸ್ವಾಮಿಯವರು ಅವರಿಗೆ ಸರಿಯಾದ ಉತ್ತರ ಕೊಟ್ಟಿದ್ದಾರೆ” ಎಂದರು.
ಸುರಂಗ ಮಾರ್ಗ ರಚನೆ ಮೂಲಕ ಬೆಂಗಳೂರಿಗೆ ಆಪತ್ತು ಎದುರಾಗಲಿದೆ ಎಂಬ ವರದಿಗಳಿವೆ. ಇಷ್ಟಿದ್ದರೂ ಡಿ.ಕೆ.ಶಿವಕುಮಾರ್ ಅವರು ಇದನ್ನು ಮಾಡಲು ಮುಂದಾಗಿರುವುದು ಸರಿಯಲ್ಲ. ಸುರಂಗ ಯೋಜನೆ ವಿರುದ್ಧ ಈಗಾಗಲೇ ಹಲವು ಸಂಸ್ಥೆಗಳು- ಪರಿಸರವಾದಿಗಳು ಧ್ವನಿ ಎತ್ತಿದ್ದಾರೆ. ಅದೇನು ಜನೋಪಯೋಗಿ ಎಂದು ನನಗೆ ಅನಿಸುತ್ತಿಲ್ಲ. ಟನೆಲ್ ರಸ್ತೆಗೆ 300- 400 ರೂ. ಟೋಲ್ ಕೊಡಬೇಕಾಗುತ್ತದೆ. ಹಣ ಕಟ್ಟಿಸಿಕೊಳ್ಳದೇ ಮಾಡುವ ಕೆಲಸ ಇದ್ದರೆ ಮಾಡಿ. ಭೂಮಿ ಮೇಲೆ ರಸ್ತೆ ಮಾಡುವುದು ಸೂಕ್ತವಿದ್ದು, ಈ ಕುರಿತು ಗಮನಿಸಲಿ” ಎಂದು ಒತ್ತಾಯಿಸಿದರು.
“ಬೆಂಗಳೂರು ಬೆಳೆಸುವುದನ್ನು ನಿಲ್ಲಿಸಿ. ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಬೆಳೆಸಿ ಎಂದು ತಿಳಿಸಿದರು. ಅಲ್ಲಿ ಜನರು ನಿಲ್ಲುವಂತೆ ಮಾಡಿ. ಗುಲ್ಬರ್ಗದ ಸ್ಥಿತಿ ಏನಾಗಿದೆ? ತಲಾದಾಯದ ವಿಷಯದಲ್ಲಿ ಅದು ಅತ್ಯಂತ ಹಿಂದುಳಿದಿದೆ. ಬಿಜಾಪುರದಲ್ಲಿ ಕೈಗಾರಿಕೆ ಸ್ಥಾಪಿಸಿ” ಎಂದು ಎಂ.ಬಿ.ಪಾಟೀಲರಿಗೆ ಮನವಿ ಮಾಡಿದರು.
ವಿವೇಕದ ಪ್ರಶ್ನೆ ಇದ್ದಂತಿಲ್ಲ
“ಪ್ರಿಯಾಂಕ್ ಖರ್ಗೆ ಬಳಿ ವಿವೇಕದ ಪ್ರಶ್ನೆಗಳಿವೆ ಎಂದು ಅನಿಸುತ್ತಿಲ್ಲ; ಆದ್ದರಿಂದ ಅವರ ಪ್ರಶ್ನೆಗಳಿಗೆ ನಾನು ಉತ್ತರ ಕೊಡುವುದಿಲ್ಲ. ಆರೆಸ್ಸೆಸ್‍ಗೆ ದೇಣಿಗೆ ಎಲ್ಲಿಂದ ಎಂಬುದನ್ನು ಇಲಾಖೆ ಪ್ರಶ್ನಿಸಲಿ, ಇ.ಡಿ, ಆದಾಯ ತೆರಿಗೆ ಇಲಾಖೆಯವರು ಕೇಳಲಿ, ಎಲ್ಲೋ ಕುಳಿತು ಕೇಳುವವರಿಗೆ ಅವರು ಉತ್ತರ ಕೊಡುತ್ತ ಕೂರುತ್ತಾರಾ? ಆರೆಸ್ಸೆಸ್ ಕಚೇರಿಗೆ ಹೋಗಿ ಪ್ರಶ್ನಿಸುವುದು ಒಳ್ಳೆಯದು” ಎಂದರು.
“ಆರೆಸ್ಸೆಸ್ ನೋಂದಣಿ ಕುರಿತ ಪ್ರಶ್ನೆಗೆ ಉತ್ತರ ಕೊಟ್ಟ ಅವರು, ನೋಂದಣಿ ಆಗಬೇಕೆಂದು ಕಾನೂನಿನಲ್ಲಿ ಇಲ್ಲ. ಅವರು ಗ್ರಾಮೀಣಾಭಿವೃದ್ಧಿ ಸಚಿವರು ಅಲ್ಲಿ ಕೆಲಸ ಮಾಡಲಾರದೇ ಜನರನ್ನು ದಾರಿ ತಪ್ಪಿಸಲು ಈ ರೀತಿ ಅನ್ಯ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ” ಎಂದು ಟೀಕಿಸಿದರು.
ಬಿಜೆಪಿಯವರು 40-50 ವರ್ಷ ಈ ರಾಜ್ಯ ಆಳಿಲ್ಲ
“ಬಿಜೆಪಿಯವರು 40-50 ವರ್ಷ ಈ ರಾಜ್ಯ ಆಳಿಲ್ಲ; ಅವರೇ 63 ವರ್ಷ ಈ ರಾಜ್ಯವನ್ನು ಆಳಿದ್ದಾರೆ. ಕೆಂಪೇಗೌಡರು 4 ಸ್ತೂಪಗಳನ್ನು ನಿರ್ಮಿಸಿ ಅಲ್ಲಿನವರೆಗೆ ಬೆಂಗಳೂರನ್ನು ವಿಸ್ತರಿಸಲು ಯೋಜಿಸಿದ್ದರು. ಅದಕ್ಕಿಂತ ಹೆಚ್ಚಾದರೆ ಬೆಂಗಳೂರಿಗೆ ಆಪತ್ತಿದೆ ಎಂಬ ಆಶಯ ಅವರಲ್ಲಿತ್ತು. ಈಗ ದೇವನಹಳ್ಳಿ, ಆನೇಕಲ್, ಹೊಸಕೋಟೆ ಬೆಂಗಳೂರೇ ಆಗಿವೆ. ಸ್ವಲ್ಪ ದಿನ ಹೋದರೆ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಎಲ್ಲ ತಗೊಂಡು ಬಿಡುತ್ತಾರೆ” ಎಂದು ಆಕ್ಷೇಪಿಸಿದರು.
ಕಾಂಗ್ರೆಸ್ಸಿನೊಳಗೇ ಭಯೋತ್ಪಾದನೆ
“ಹಲವು ತಿಂಗಳಿಂದ ಮಾತೆತ್ತಿದರೆ ಸಂಪುಟ ಪುನಾರಚನೆ ವಿಷಯ ತರುತ್ತಾರೆ. ಗುಜರಾತ್‍ನವರ ಬಳಿ ಪಾಠ ಹೇಳಿಸಿಕೊಂಡು ಬನ್ನಿ. ಬೆಳಿಗ್ಗೆ ರಾಜೀನಾಮೆ ಕೊಟ್ಟರು. ಮರುದಿನ ಹೊಸ ಸರಕಾರವೇ ಬಂತು ಎಂದು ಗಮನ ಸೆಳೆದರು. ಸಚಿವಸಂಪುಟದ ವಿಷಯ ಮುಂದಿಟ್ಟು ಕಾಂಗ್ರೆಸ್ಸಿನೊಳಗೇ ಭಯೋತ್ಪಾದನೆ ನಡೆದಿದೆ” ಎಂದು ಆರೋಪಿಸಿದರು.





