ಕರ್ನಾಟಕದಲ್ಲಿ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಇದೀಗ ಅಂತಿಮ ಹಂತಕ್ಕೆ ನುಗ್ಗಿದೆ. ರಾಜ್ಯಾದ್ಯಂತ 41,22,865 ಕುಟುಂಬಗಳ ಸಮೀಕ್ಷೆ ಈಗಾಗಲೇ ಪೂರ್ಣಗೊಂಡಿದ್ದು, ಕೇವಲ ಸೋಮವಾರ ಒಂದೇ ದಿನ 13,86,969 ಕುಟುಂಬಗಳ ಸಮೀಕ್ಷೆ ನಡೆದಿರುವುದು ವಿಶೇಷ. ಭಾನುವಾರದವರೆಗೆ 27,35,879 ಕುಟುಂಬಗಳ ಸಮೀಕ್ಷೆ ನಡೆದಿದ್ದರೆ, ಸಮೀಕ್ಷೆ ಪ್ರಾರಂಭವಾದಾಗಿನಿಂದ ಇಂದಿನವರೆಗೆ ಒಟ್ಟು 1.56 ಕೋಟಿಗೂ ಅಧಿಕ ಕುಟುಂಬಗಳ ಮಾಹಿತಿ ಸಂಗ್ರಹವಾಗಿದೆ ಎಂದು ಸಮೀಕ್ಷಾ ಆಯೋಗವು ಪ್ರಕಟಿಸಿದೆ.
ಜಿಲ್ಲಾವಾರು ಸ್ಥಿತಿ:
ತುಮಕೂರು ಜಿಲ್ಲೆಯಲ್ಲಿ ಅತಿ ಹೆಚ್ಚು 2,17,692 ಕುಟುಂಬಗಳ ಸಮೀಕ್ಷೆ ಪೂರ್ಣಗೊಂಡಿದೆ. ಹಾವೇರಿ (1,85,413), ಮಂಡ್ಯ (1,81,148), ದಾವಣಗೆರೆ (1,79,048), ಹಾಸನ (1,73,570), ಮೈಸೂರು (1,70,437), ಕಲಬುರಗಿ (1,65,261) ಜಿಲ್ಲೆಗಳು ಉತ್ತಮ ಪ್ರಗತಿ ತೋರಿವೆ. ಕೊಡಗಿನಲ್ಲಿ ಅತಿ ಕಡಿಮೆ 41,154 ಕುಟುಂಬಗಳು ಮಾತ್ರ ಸಮೀಕ್ಷೆಗೆ ಒಳಪಟ್ಟಿದ್ದು, ಯಾದಗಿರಿ (74,658), ಚಾಮರಾಜನಗರ (78,176), ದಕ್ಷಿಣ ಕನ್ನಡ (80,494) ಜಿಲ್ಲೆಗಳಲ್ಲಿ ಸಹ ಹೋಲಿಕೆ ಮಾಡಿದರೆ ಕಡಿಮೆ ಪ್ರಮಾಣದ ಸಮೀಕ್ಷೆ ನಡೆದಿದೆ.
ತಾಂತ್ರಿಕ ಅಡಚಣೆಗಳು:
ಕೆಲವು ಜಿಲ್ಲೆಗಳಲ್ಲಿ ಆನ್‌ಲೈನ್ ಆ್ಯಪ್ ಡೌನ್‌ಲೋಡ್ ತೊಂದರೆ, ಡೇಟಾ ಅಪ್ಲೋಡ್ ವಿಳಂಬ ಹಾಗೂ ಇಂಟರ್ನೆಟ್ ಸಂಪರ್ಕ ಸಮಸ್ಯೆಗಳಿಂದ ಸಮೀಕ್ಷೆ ತಡವಾಗಿದೆ. ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ತಾಂತ್ರಿಕ ತೊಂದರೆ ಜೊತೆಗೆ ಜನರಿಂದ ಸಹಕಾರದ ಕೊರತೆಯೂ ಪ್ರಕ್ರಿಯೆಗೆ ಅಡ್ಡಿಯಾಗಿದೆ. ಸಮೀಕ್ಷಕರು ಹಲವಾರು ಮನೆಗಳಲ್ಲಿ ಇ-ಕೆವೈಸಿ ಹಾಗೂ ಬಹು ಪಡಿತರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಕಾನೂನುಮಟ್ಟದ ಬೆಳವಣಿಗೆ:
ಕರ್ನಾಟಕ ಹೈಕೋರ್ಟ್ ಸಮೀಕ್ಷೆಗೆ ಹಸಿರು ನಿಶಾನೆ ತೋರಿಸಿದರೂ, “ಯಾರನ್ನೂ ಬಲವಂತವಾಗಿ ಸಮೀಕ್ಷೆಗೆ ಒಳಪಡಿಸಬಾರದು” ಎಂದು ಸರ್ಕಾರ ಸ್ಪಷ್ಟ ಆದೇಶ ನೀಡಿದೆ. ಇದರೊಂದಿಗೆ ಸಮೀಕ್ಷಕರು ಮನೆಯಿಂದ ಮನೆಗೆ ತೆರಳಿ, ಜನರನ್ನು ಮನವರಿಕೆ ಮಾಡಿಕೊಳ್ಳುವ ಮೂಲಕ ಸಮೀಕ್ಷೆಯನ್ನು ಮುನ್ನಡೆಸುತ್ತಿದ್ದಾರೆ.
ಸರ್ಕಾರದ ಗುರಿ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮೀಕ್ಷೆಯನ್ನು ಅಕ್ಟೋಬರ್ 7 ರೊಳಗೆ ಪೂರ್ಣಗೊಳಿಸುವ ಗುರಿ ನೀಡಿದ್ದು, ಜಿಲ್ಲಾ ಆಡಳಿತಗಳಿಗೆ ದಿನನಿತ್ಯ ಪ್ರಗತಿ ವರದಿ ಸಲ್ಲಿಸಲು ಸೂಚನೆ ನೀಡಿದ್ದಾರೆ. ಅಧಿಕಾರಿಗಳಿಗೆ ಗಟ್ಟಿಯಾದ ಗುರಿ ನೀಡಿರುವುದರಿಂದ ಮುಂದಿನ ದಿನಗಳಲ್ಲಿ ಕಾರ್ಯ ಚಟುವಟಿಕೆ ಇನ್ನಷ್ಟು ವೇಗ ಪಡೆಯಲಿದೆ ಎಂದು ನಿರೀಕ್ಷಿಸಲಾಗಿದೆ.
ಮುಂದಿನ ಹಂತ:
ಸಮೀಕ್ಷೆ ಪೂರ್ಣಗೊಂಡ ಬಳಿಕ ಜಿಲ್ಲಾ ಮತ್ತು ತಾಲೂಕುಮಟ್ಟದಲ್ಲಿ ವಿಶ್ಲೇಷಣೆ ಮಾಡಲಾಗುವುದು. ಈ ಮಾಹಿತಿಯನ್ನು ಆಧರಿಸಿ ರಾಜ್ಯದ ಸಾಮಾಜಿಕ–ಶೈಕ್ಷಣಿಕ ಮತ್ತು ಆರ್ಥಿಕ ಹಿನ್ನಲೆಯನ್ನು ಅರ್ಥಮಾಡಿಕೊಳ್ಳಲಾಗುವುದು. ಇದರಿಂದ ಮುಂದಿನ ದಿನಗಳಲ್ಲಿ ಮೀಸಲು ನೀತಿ, ಹಿತಾಸಕ್ತಿ ಯೋಜನೆಗಳು ಮತ್ತು ಸಾರ್ವಜನಿಕ ಸೇವೆಗಳ ಹಂಚಿಕೆ ಹೆಚ್ಚು ಸಮನ್ವಿತವಾಗಲು ಸಾಧ್ಯವಾಗಲಿದೆ.
60 ಪ್ರಶ್ನೆಗಳು:
ಸಮೀಕ್ಷೆಯು 60 ಪ್ರಶ್ನೆಗಳನ್ನು ಒಳಗೊಂಡಿದ್ದು, ಧರ್ಮ, ಜಾತಿ, ಉಪಜಾತಿ, ಆರ್ಥಿಕ ಸ್ಥಿತಿ ಮತ್ತು ಶೈಕ್ಷಣಿಕ ಮಟ್ಟವನ್ನು ಪರಿಶೀಲಿಸುತ್ತದೆ. ಆಧಾರ್ ಕಾರ್ಡ್ ಬಳಸಿ ನಕಲಿ ತಪ್ಪಿಸಲು ಕ್ರಮ ಕೈಗೊಳ್ಳಲಾಗಿದ್ದು, ವಿದ್ಯುತ್ ಮೀಟರ್‌ನ RR ಸಂಖ್ಯೆ ಬಳಸಿ ಜಿಯೋ-ಟ್ಯಾಗಿಂಗ್ ಮಾಡಲಾಗುತ್ತಿದೆ. ಸಹಾಯಕ್ಕಾಗಿ ಸಹಾಯವಾಣಿ (8050770004) ಲಭ್ಯವಿದೆ.
ಈ ಸಮೀಕ್ಷೆಯು ರಾಜ್ಯಾದ್ಯಂತ 1.49 ಲಕ್ಷಕ್ಕೂ ಹೆಚ್ಚು ಶಿಕ್ಷಕರನ್ನು ಸಮೀಕ್ಷಾದಾರರಾಗಿ ನಿಯೋಜಿಸಲಾಗಿದ್ದು, ಗಣತಿದಾರರು, ವಿದ್ಯುತ್ ಮೀಟರ್ ರೀಡರ್‌ಗಳು ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸಹಯೋಗ ನೀಡುತ್ತಾರೆ. ಪ್ರತಿ ಮನೆಗೆ ಸಂಬಂಧಿಸಿದಂತೆ 60 ಪ್ರಶ್ನೆಗಳನ್ನು ಕೇಳಲಾಗುತ್ತಿದ್ದು, ಇದರಲ್ಲಿ ಧರ್ಮ, ಜಾತಿ, ಶಿಕ್ಷಣ ಮಟ್ಟ, ಆರ್ಥಿಕ ಸ್ಥಿತಿ, ರಾಜಕೀಯ ಪ್ರಾತಿನಿಧ್ಯ ಇತ್ಯಾದಿ ವಿವರಗಳು ಸೇರಿವೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ವಿರೋಧದ ನಡುವೆಯೂ ಕಾವೇರಿಗೆ ಕಾಂಗ್ರೆಸ್ಸಿಗರ ಮೊಂಡಾರತಿ
ಸಮೀಕ್ಷೆಯ ಮೊದಲ ಹಂತದಲ್ಲಿ ಆಗಸ್ಟ್ 23ರಿಂದ ಮನೆಗಳ ಮ್ಯಾಪಿಂಗ್ ಮತ್ತು ಜಿಯೋ-ಟ್ಯಾಗಿಂಗ್ (UHI ಡಿ ಸ್ಟಿಕರ್) ಕಾರ್ಯ ನಡೆದಿದ್ದು, ಈಗ ಮನೆಮನೆಗೆ ಭೇಟಿ ನೀಡಿ ಡಿಜಿಟಲ್ ಆ್ಯಪ್ ಮೂಲಕ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಸಮೀಕ್ಷಾದಾರರು ಮೊಬೈಲ್ OTP ಕೇಳಿದರೆ ಸಹಕರಿಸಿ, ಘೋಷಣಾ ಪತ್ರಕ್ಕೆ ಸಹಿ ಮಾಡಿ ಮಾಹಿತಿ ನೀಡಿ. ಯಾವುದೇ ಮನೆ ಸಮೀಕ್ಷೆಯಿಂದ ಹೊರಗುಳಿದರೆ, ಸ್ಥಳೀಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯನ್ನು ಸಂಪರ್ಕಿಸಬಹುದು.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸಾರ್ವಜನಿಕರು ಸ್ವಯಂ ಮಾಹಿತಿ ದಾಖಲಿಸಲು ಅವಕಾಶ
ಈಗಾಗಲೇ ರಾಜ್ಯದ್ಯ0ತ ಸಮೀಕ್ಷೆ ಕಾರ್ಯ ಆರಂಭಗೊಂಡಿದ್ದು, ಈ ಸಮೀಕ್ಷೆಯು ಅಕ್ಟೊಬರ್ 7 ರ ವರೆಗೂ ನಡೆಯಲಿದೆ. ಈಗಾಗಲೇ ಗುರುತಿಸಲಾಗಿರುವ ಎಲ್ಲ ಮನೆಗಳಿಗೆ ಗಣತಿದಾರರು ಭೇಟಿ ನೀಡಿ, ಗಣತಿ ಕಾರ್ಯ ನಡೆಸುತ್ತಿದ್ದು, ಸಾರ್ವಜನಿಕರೂ ಕೂಡಾ ಸ್ವಯಂ ಆಗಿ ತಮ್ಮ ಮನೆಯ ಗಣತಿ ಮಾಡಿಕೊಳ್ಳಲು ಅನುಕೂಲವಾಗುವಂತೆ ಸೌಲಭ್ಯ ವನ್ನು ಸಿದ್ದಪಡಿಸಲಾಗಿದೆ.
ಸಾರ್ವಜನಿಕರು https://kscbcselfdeclaration.karnataka.gov.in/ ನಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು self declaration ಮೂಲಕ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಸಾರ್ವಜನಿಕರು ಈ ಲಿಂಕ್ ನ್ನು ಕ್ಲಿಕ್ ಮಾಡಿದಾಗ ತೆರೆದುಕೊಳ್ಳುವ ಪುಟದಲ್ಲಿ ನಾಗರಿಕ ಎಂಬುದನ್ನು ಆಯ್ಕೆ ಮಾಡಿದಲ್ಲಿ ಲಾಗಿನ್ ನಲ್ಲಿ ಮುಂದುವರೆಯಲು ಕೋರಲಾಗುತ್ತದೆ. ನಂತರದಲ್ಲಿ ತಮ್ಮ ಮೊಬೈಲ್ ಸಂಖ್ಯೆಯನ್ನು ನೀಡಿದಲ್ಲಿ, ಮೊಬೈಲ್ ಗೆ ಓಟಿಪಿ ಬರಲಿದ್ದು ಅದನ್ನು ದಾಖಲು ಮಾಡಬೇಕಾಗುತ್ತದೆ.
ನಂತರ ತೆರೆಯುವ ಪುಟದಲ್ಲಿ ತಮ್ಮ ಸಮೀಕ್ಷೇಯ ಸ್ಥಿತಿ ಗತಿ ಕುರಿತಂತೆ ನಿಮ್ಮ ಸಮೀಕ್ಷೆ ಪೂರ್ಣಗೊಂಡಿದೆ ಅಥವಾ ಬಾಕಿ ಎಂದು ಕಾಣಬಹುದಾಗಿದ್ದು, ಇದುವರೆಗೆ ಸಮೀಕ್ಷೆ ನಡೆಯದೇ ಬಾಕಿ ಇದ್ದಲ್ಲಿ, ಇನ್ನೂ ಯಾವುದೇ ಕುಟುಂಬ ಸದಸ್ಯರನ್ನು ಸೇರಿಸಿಲ್ಲ ಫಾರ್ಮ್ ಭರ್ತಿ ಮಾಡಲು ಆರಂಭಿಸಿ ಎಂಬ ಸಂದೇಶ ಕಾಣಲಿದ್ದು, ಹೊಸ ಸಮೀಕ್ಷೆ ಆರಂಭಿಸಿ ಎಂಬುದನ್ನು ಕ್ಲಿಕ್ ಮಾಡಬೇಕಾಗುತ್ತದೆ. ನಂತರದ ಪುಟದಲ್ಲಿ ಈಗಾಗಲೇ ತಮ್ಮ ಮನೆಗೆ ಅಂಟಿಸಲಾಗಿರುವ ಸ್ಟಿಕರ್ ನಲ್ಲಿರುವ UHID ಸಂಖ್ಯೆ ಯನ್ನು ದಾಖಲಿಸಿ ಸ್ಕ್ರೀನ್ ನಲ್ಲಿ ಕೋರುವ ಮಾಹಿತಿಗಳನ್ನು ದಾಖಲು ಮಾಡಬೇಕಾಗುತ್ತದೆ.
ಸದರಿ ಸಮೀಕ್ಷೆಗೆ ದಾಖಲೆಗಳ ಮಾಹಿತಿ ನೀಡುವ ಅವಶ್ಯಕತೆ ಇರುವುದರಿಂದ ತಮ್ಮ ಕುಟುಂಬದ ಸದಸ್ಯರ ರೇಷನ್ ಕಾರ್ಡ್,ಆಧಾರ್ ಕಾರ್ಡ್ ಮತದಾರರ ಗುರುತಿನ ಚೀಟಿ, ವಿಕಲಚೇತರನರಾಗಿದ್ದರೆ UID Card ಅಥವಾ ಅಂಗವಿಕಲ ಪ್ರಮಾಣ ಪತ್ರದ ದಾಖಲೆಗಳನ್ನು ತೆಗೆದಿರಿಸಿಕೊಂಡು ಸುಲಭವಾಗಿ ಈ ಸಮೀಕ್ಷೆ ಕಾರ್ಯದಲ್ಲಿ ತಾವೇ ಸ್ವಯಂ ಆಗಿ ಭಾಗವಹಿಸಬಹುದುದಾಗಿದ್ದು, ಸಮೀಕ್ಷೆ ಯಶಸ್ವಿಯಾದ ನಂತರ ಈ ಬಗ್ಗೆ ಮೊಬೈಲ್ ಗೆ ಸಂದೇಶ ಬರಲಿದೆ.
ಗಣತಿದಾರರು ತಮ್ಮ ಮನೆಗೆ ಬರುವವರೆಗೆ ಕಾಯದೇ ಸಾರ್ವಜನಿಕರು ತಮಗೆ ಅನುಕೂಲವಾದ ಅವಧಿಯಲ್ಲಿ ಯಾವುದೇ ಪ್ರದೇಶದಿಂದ ಸಮೀಕ್ಷೆಯಲ್ಲಿ ಭಾಗವಹಿಸಲು ಅನುಕೂಲವಾಗಲಿದ್ದು, ತಾವೇ ತಮ್ಮ ಮಾಹಿತಿಯನ್ನು ದಾಖಲು ಮಾಡುವುದರಿಂದ, ಯಾವುದೇ ಗೊಂದಲಗಳಿಲ್ಲದೆ ನಿಖರವಾಗಿ ತಮ್ಮ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಯನ್ನು ಸಮೀಕ್ಷೆ ಯಲ್ಲಿ ತಿಳಿಸಲು ಸಾಧ್ಯವಾಗಲಿದೆ.





