ದಸಂಸವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಯುವಕರಿಗೆ ಒಪ್ಪಿಸಲು ಸಿದ್ಧ: ಹೆಣ್ಣೂರು ಶ್ರೀನಿವಾಸ್

Date:

“ದಲಿತ ಸಂಘಟನೆ ಯಾರದ್ದೋ ಮನೆಯ ಸ್ವತ್ತಲ್ಲ, ದಲಿತ ಸಂಘರ್ಷ ಸಮಿತಿಯನ್ನು ಮುನ್ನಡೆಸುವ ಜವಾಬ್ದಾರಿಯನ್ನು ಯುವಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಒಪ್ಪಿಸಬೇಕು. ನಾವು ವಿದ್ಯಾರ್ಥಿಗಳಿದ್ದಾಗಲೇ ಚಳವಳಿಗೆ ಬಂದವರು. ಆದರೆ, ಇಂದಿನ ವಿದ್ಯಾರ್ಥಿಗಳನ್ನು ನಾವು ಚಳವಳಿಗೆ ತರಲು ಸಾಧ್ಯವಾಗುತ್ತಿಲ್ಲ. ಅವರೆಲ್ಲಾ ಸಂಘಪರಿವಾರದ ಕಪಿಮುಷ್ಠಿಗೆ ಸಿಲುಕಿದ್ದಾರೆ. ಯುವ ನಾಯಕರಿಗೆ ನಾನು ನಾಯಕತ್ವ ಬಿಟ್ಟುಕೊಡಲು ತಯಾರಿದ್ದೇನೆ” ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಡಿಎಸ್‌ಎಸ್‌) ರಾಜ್ಯ ಸಂಚಾಲಕ ಹೆಣ್ಣೂರು ಶ್ರೀನಿವಾಸ್ ಘೋಷಿಸಿದರು.

ಬೆಂಗಳೂರಿನಲ್ಲಿ ಇಂದು ನಡೆದ ‘ಸಂವಿಧಾನ ಸಂರಕ್ಷಿಸಿ ಮನುಸ್ಮೃತಿ ಹಿಮ್ಮೆಟ್ಟಿಸೋಣ’ ಜಾಗೃತಿ ಸಮಾವೇಶದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, “ದಲಿತ ಚಳವಳಿ ಯಾವುದೇ ಒಂದು ಜಾತಿಯ ಪರವಾಗಿಲ್ಲ. ಪೌರ ಕಾರ್ಮಿಕನ ಮಗನನ್ನ ರಾಜ್ಯ ಸಂಚಾಲಕನನ್ನಾಗಿ ಮಾಡಿದೆ. ನಮ್ಮಲ್ಲಿ ಹೊಲೆಯ-ಮಾದಿಗ ಎಂಬ ಬೇಧವಿಲ್ಲ. ಈ ಚಳವಳಿ ಎಲ್ಲ ಶೋಷಿತ ಸಮುದಾಯಗಳನ್ನೂ ಒಳಗೊಂಡಿದೆ. ಮನುವಾದದ ಕುರಿತು ನಮ್ಮ ವೇದಿಕೆಗಳಲ್ಲಿ ಹೆಚ್ಚು ಚರ್ಚೆ ಮಾಡಿಲ್ಲ. ಆದಿವಾಸಿಗಳು, ಆರ್ಯರು, ದ್ರಾವಿಡರ ಬಗ್ಗೆ ಮಾತ್ರ ಮಾತನಾಡಿದ್ದೇವೆ. ಮನುಸ್ಮೃತಿ ಏನು ಹೇಳುತ್ತಿದೆ ಎಂಬ ಬಗ್ಗೆ ನಾವು ಮಾತನಾಡುತ್ತಿಲ್ಲ, ಅದರಲ್ಲಿ ಶೂದ್ರರಿಗೆ ಯಾವ ಸ್ಥಾನಮಾನ ಇದೆ ಎಂಬುದರ ಕುರಿತು ನಾವು ಚರ್ಚೆ ಮಾಡಬೇಕು” ಎಂದು ದಸಂಸ ಪದಾಧಿಕಾರಿಗಳಿಗೆ ಕಿವಿಮಾತು ಹೇಳಿದರು.

“ಆರ್‌ಎಸ್‌ಎಸ್‌ ಕುರಿತು ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಇತ್ತೀಚೆಗೆ ಸಾಕಷ್ಟು ಮಾತನಾಡಿದ್ದಾರೆ. ಆರ್‌ಎಸ್‌ಎಸ್‌ ನೋಂದಣಿ ಮಾಡಿಸಿಕೊಳ್ಳದೆ, ಲಕ್ಷಾಂತರ ರೂಪಾಯಿ ದೇಣೆಗೆ ಪಡೆಯುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದ್ದರು. ಅವರನ್ನು ಓರ್ವ ಕೆಟ್ಟ ಪದಗಳಿಂದ ನಿಂದಿಸಿದ್ದನ್ನು ನಾನು ಗಮನಿಸಿದ್ದೇನೆ. ನಮ್ಮ ಯಾವ ನಾಯಕರೂ ಇದಕ್ಕೆ ಸರಿಯಾಗಿ ಪ್ರತಿಕ್ರಿಯೆ ಕೊಡಲಿಲ್ಲ. ಖರ್ಗೆ ಅವರ ಪ್ರತಿಕ್ರಿಯೆ ಸರಿಯಾಗಿದೆ ಎಂಬ ಕಾರಣಕ್ಕೆ ನಾನೂ ಸಾರ್ವಜನಿಕವಾಗಿ ಸಮರ್ಥನೆ ಮಾಡಿಕೊಂಡಿದ್ದೇನೆ. ಅದಕ್ಕಾಗಿ ಪ್ರಶ್ನೆಗಳನ್ನೂ ಎದುರಿಸಿದ್ದೇನೆ” ಎಂದರು.

“ದಲಿತ ಸಮುದಾಯಕ್ಕೆ ಅಪಾಯ ಎದುರಾದಾಗ ಧೈರ್ಯವಾಗಿ ಮಾತನಾಡುವುದೇ ನಿಜವಾದ ನಾಯಕತ್ವ, ಅಧಿಕಾರ ಅಥವಾ ಇನ್ಯಾವುದಾದರೂ ಆಸೆಯಿಂದ ಮಾತನಾಡದೇ ಸುಮ್ಮನಿರುವುದೂ ಕೂಡ ಮನುವಾದಕ್ಕೆ ಸಮವಾಗುತ್ತದೆ. ಸಂಘಪರಿವಾರಕ್ಕೆ ತಿರುಗೇಟು ನೀಡಬೇಕು ಎಂಬ ಕಾರಣಕ್ಕೆ ನಾನು ಎರಡು ದಿನಗಳ ಕಾಲ ಮನುಸ್ಮೃತಿಯನ್ನು ಅಧ್ಯಯನ ಮಾಡಿ, ಅದರಲ್ಲಿ ಸುಮಾರು 25 ಅಂಶಗಳನ್ನು ಪಟ್ಟಿ ಮಾಡಿದ್ದೇನೆ. ಮನುಸ್ಮೃತಿಯಲ್ಲಿರುವ ಹುನ್ನಾರವನ್ನು ನಾವು ಅರ್ಥ ಮಾಡಿಕೊಳ್ಳದೆ ಇರುವುದರಿಂದಲೇ, ಇಂದು ಜಾತಿಜಾತಿ ಎಂದು ನಮ್ಮೊಳಗೆ ಜಗಳ ಮಾಡಿಕೊಳ್ಳುತ್ತಿದ್ದೇವೆ. ಮನುಸ್ಮೃತಿ ಬರೆದವನು ಚಿತ್ಪಾವನ ಬ್ರಾಹ್ಮಣ ಸಮುದಾಯಕ್ಕೆ ಸೇರಿದವನು, ಈ ಬಗ್ಗೆ ನಮ್ಮಲ್ಲಿ ಎಷ್ಟು ಜನಕ್ಕೆ ಗೊತ್ತಿದೆ” ಎಂದು ಪ್ರಶ್ನಿಸಿದರು.

WhatsApp Image 2025 12 04 at 4.30.24 PM

ಮೋದಿಯಿಂದ ದಲಿತರಿಗೆ ಪರೋಕ್ಷ ಎಚ್ಚರಿಕೆ

“ನವೆಂಬರ್ 26 ರ ಸಂವಿಧಾನ ಸಮರ್ಪಣಾ ದಿನದಿಂದು ಈ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಯೋಧ್ಯೆ ರಾಮಮಂದಿರದಲ್ಲಿ ಕೇಸರಿ ಧ್ವಜ ಹಾರಿಸಿದರು. ಈ ಮೂಲಕ, ನಾವು ಸಂವಿಧಾನವನ್ನು ಧಿಕ್ಕರಿಸುತ್ತೇವೆ ಎಂದು ಪರೋಕ್ಷವಾಗಿ ಸಂದೇಶ ರವಾನಿಸಿದ್ದಾರೆ. ಆದರೆ, ಈ ಬಗ್ಗೆ ನಮ್ಮಲ್ಲಿ ಯಾರ ರಕ್ತವೂ ಕುದಿಯುತ್ತಿಲ್ಲ ಎಂಬುದೇ ಬೇಸರದ ವಿಷಯ. ಡಿಸೆಂಬರ್ 6 ರಂದೇ, ಬಾಬಾ ಸಾಹೇಬರ ಪರಿನಿಬ್ಬಾಣ ದಿನದಂದು ಅವರು ಬಾಬ್ರಿ ಮಸೀದಿ ಕೆಡವಿದ್ದರು. ಸಂಘಪರಿವಾರದವರು ಹಿಂದೂ ಸಮುದಾಯದ ಹೆಸರಿನಲ್ಲಿ ಬಾಬ್ರಿ ಮಸೀದಿ ಹೊಡೆದರು. ಅವರ ಈ ಹುನ್ನಾರ ಮತ್ತು ಮುಂದೆ ಬರುವ ಅಪಾಯವನ್ನು ನಾವು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು” ಎಂದು ಎಚ್ಚರಿಕೆ ನೀಡಿದರು.

“ಇಂದು ರಾಜ್ಯದಲ್ಲಿ ಮೀಸಲಾತಿ ಹೆಸರಿನಲ್ಲಿ ಹುನ್ನಾರ, ಒಳ ಮೀಸಲಾತಿ ವಿಚಾರದಲ್ಲಿ ಕುತಂತ್ರ ನಡೆಯುತ್ತಿದೆ. 2012ರ ವರೆಗೆ ಸಂಘಪರಿವಾರದವರು ಒಳಮೀಸಲಾತಿ ವಿಚಾರವಾಗಿ ಮಾತನಾಡೇ ಇಲ್ಲ. ರಾಜ್ಯದ ಹೊಲೆ-ಮಾದಿಗರು ಈವರೆಗೆ ಕಿತ್ತಾಡಿಲ್ಲ. ಇಡೀ ಒಳಮೀಸಲಾತಿಯ ಹೋರಾಟದ ಶಕ್ತಿ ದಲಿತ ಚಳವಳಿ, ಒಳಮೀಸಲಾತಿ ಆಯೋಗ ರಚನೆ ಆಗುವುದಕ್ಕೂ ದಲಿತ ಚಳವಳಿಯೇ ಕಾರಣ. ಆಯೋಗ ರಚನೆಯಾಗಿ ವರದಿ ಬಂದ ನಂತರ ಸಂಘಪರಿವಾರ ಪ್ರವೇಶ ಪಡೆಯಿತು. ನಮ್ಮಲ್ಲಿ ಕೆಲವರು ಬಾಯಿ ಮಾತಿಗೆ ಮಾತ್ರ ಅಂಬೇಡ್ಕರ್, ಜೈಭೀಮ್ ಮತ್ತು ಬಿ.ಕೃಷ್ಣಪ್ಪ ಹೆಸರು ಹೇಳುವವರಿದ್ದಾರೆ. ಅವರು ಸಂಘಪರಿವಾರದ ವಿರುದ್ಧ ಅಂದು ಮಾತನಾಡಲೇ ಇಲ್ಲ. ಅವರು ಅಂದು ಮಾತನಾಡದ ಕಾರಣಕ್ಕೆ ಇಂದು ವಾದಿರಾಜ್ ಎಂಬ ಸಂಘ ಪರಿವಾರದವನೊಬ್ಬ ಹೊಲೆಮಾದಿಗರ ನಡುವೆ ಬೆಂಕಿ ಹಚ್ಚುತ್ತಿದ್ದಾನೆ. ಭೋವಿ-ಲಂಬಾಣಿಗಳು ಮತ್ತು ಅಲೆಮಾರಿಗಳ ನಡುವೆ ಒಡಕು ಮೂಡಿಸುತ್ತಾ, ದಲಿತ ಸಮುದಾಯದ 101 ಜಾತಿಗಳ ಒಗ್ಗಟ್ಟು ಮುರಿಯುವ ಕೆಲಸ ಮಾಡುತ್ತಿದ್ದಾನೆ” ಎಂದು ಆಕ್ರೋಶ ಹೊರಹಾಕಿದರು.

ಜಾತಿ-ಉಪಜಾತಿಯ ಅಮಲಿನಲ್ಲಿ ದಲಿತ ಚಳವಳಿ

ಈ ಚಳವಳಿ ಎಲ್ಲ ಸಮುದಾಯಗಳನ್ನೂ ಒಳಗೊಂಡಿದೆ. ರಾಯಚೂರಿನಲ್ಲಿ ಲಂಬಾಣಿಗಳಿಗೆ ಮನೆ ಕೊಟ್ಟಿಲ್ಲ ಎಂಬ ಕಾರಣಕ್ಕೆ ಹೋರಾಟ ಮಾಡಿ ಹಕ್ಕುಪತ್ರ ಕೊಡಿಸಿದ್ದೇವೆ. ಕುಂಬಾರ ಶೇಷಗಿರಿಯಪ್ಪ, ಅನುಸೂಯಮ್ಮ ಅವರ ಪರವಾಗಿ ಹೋರಾಟ ಮಾಡಿದೆ. ಮಂಡಲ್ ಕಮಿಷನ್ ಜಾರಿಯಾಗಬೇಕು ಎಂದು ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಚಿನ್ನಪ್ಪ ರೆಡ್ಡಿಯನ್ನು ಕರೆಸಿ ಹೋರಾಟ ಮಾಡಿದ್ದು ಇದೇ ದಲಿತ ಚಳವಳಿ. ಶೋಷಿತರ ಪರವಾಗಿ ಹೋರಾಟ ಮಾಡಿದ ಮಾದರಿ ಚಳವಳಿಗೆ ಜಾತಿ-ಉಪಜಾತಿಯ ಅಮಲು ಸೇರಿಕೊಂಡಿದೆ. ದಲಿತ ನಾಯಕರು ಜಾತಿಯ ಸಂಕೋಲೆಗೆ ಸಿಲುಕಿಕೊಂಡು ಈ ಸಮುದಾಯಗಳನ್ನು ಒಟ್ಟುಗೂಡಿಸದೇ ಇರುವುದು ದುರಂತ. ಈ ಬಗ್ಗೆ ತಿಳಿದಿರುವ ಸಂಘಪರಿವಾರ ಇಂದು ಒಳಮೀಸಲಾತಿ ವಿಚಾರದಲ್ಲಿ ಕೈಯಾಡಿಸುತ್ತಿದೆ ಎಂದು ಅವರು ಬೇಸರ ಹೊರಹಾಕಿದರು.

ನಾವ್ಯಾರೂ ಅಸ್ಪೃಶ್ಯರಲ್ಲ: ಎಂ.ದೇವದಾಸ್

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ದಲಿತ ನಾಯಕ ಎಂ.ದೇವದಾಸ್ ಮಾತನಾಡಿ, “ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೆ. ಈ ದೇಶದಲ್ಲಿ ನಾವ್ಯಾರೂ ಅಸ್ಪೃಶ್ಯರಲ್ಲ. ನಮ್ಮನ್ನು ಅಸ್ಪೃಶ್ಯರನ್ನಾಗಿ ಮಾಡಿದ್ದು ಮಧ್ಯಪ್ರಾಚ್ಯದಿಂದ ವಲಸೆ ಬಂದ ಆರ್ಯರು. ನಮ್ಮಲ್ಲಿದ್ದ ಭಿನ್ನಾಭಿಪ್ರಾಯಗಳನ್ನು ಬಳಸಿಕೊಂಡು ಅವರು ಇಲ್ಲಿಯೇ ಶಾಶ್ವತವಾಗಿ ಉಳಿದುಕೊಂಡು, ಇಂದು ದೇಶದ ಅಧಿಕಾರ ಹಿಡಿಯುವ ಹಂತಕ್ಕೆ ಬಂದಿದ್ದಾರೆ. ಈ ದೇಶದಲ್ಲಿ ಭಗವಾನ್ ಬುದ್ದರಿಂದ ಸಮಾನತೆ ಬಂದಿತ್ತು. ಆದರೆ, ಆರ್ಯರು ಮತ್ತು ಬ್ರಾಹ್ಮಣರ ಪ್ರಾಬಲ್ಯ ಹೆಚ್ಚಾದ ಬಳಿಕ ಅಸ್ಪೃಶ್ಯತೆ ಹೆಚ್ಚಾಯಿತು” ಎಂದರು.

“ಗಾಂಧಿ ನೇತೃತ್ವದಲ್ಲಿ ರಾಜಕೀಯ ಹೋರಾಟ ನಡೆದರೆ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನೇತೃತ್ವದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ನಡೆಯಿತು. ಕೆರೆಯ ನೀರು ಮುಟ್ಟುವುದು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಅಂಬೇಡ್ಕರ್ ಕೈಗೊಂಡರು. ಮನುಸ್ಮೃತಿಯನ್ನು ಸುಡುವ ಮೂಲಕ ಪ್ರತಿರೋಧ ತೋರಿದರು. ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡದವರು, ಬ್ರಿಟಿಷರಿಗೆ ಕ್ಷಮಾಪಣೆ ಬರೆದವರು ಹಿಂದುತ್ವದ ಮೂಲಕ ದೇಶವನ್ನು ಹಿಡಿತಕ್ಕೆ ತೆಗೆದುಕೊಳ್ಳುವ ಪ್ರಯತ್ನ ನಡೆಯುತ್ತಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಸಂವೀಧಾನದ ಮೇಲಿನ ದಾಳಿ ಹೆಚ್ಚಾಗಿದೆ. ಸಂವಿಧಾನ ಬದಲಿಸುವುದೇ ನಮ್ಮ ಕೆಲಸ ಎಂದು ಬಹಿರಂಗವಾಗಿ ಹೇಳುತ್ತಿದ್ದಾರೆ. ನಾವು ಈ ಬಗ್ಗೆ ಎಚ್ಚರವಾಗಿರಬೇಕು” ಎಂದರು.

“ನಮ್ಮ ಮಕ್ಕಳು ಲಾಠಿ ಹಿಡಿಯಬಾರದು, ನಮ್ಮ ಯುವಕರು ಪೆನ್ನು ಹಿಡಿಯಬೇಕು. ನಮ್ಮ ಮಕ್ಕಳು ಸಂಘಪರಿವಾರಕ್ಕೆ ಹೋಗದಂತೆ ತಡೆಯಬೇಕಾಗಿದೆ. ಹಿಂದೂ ದೇವರುಗಳ ಸೃಷ್ಟಿಕರ್ತರು ಬ್ರಾಹ್ಮಣರು. ನಮ್ಮ ಮನೆಯಲ್ಲಿ ನೂರಾರು ದೇವರುಗಳನ್ನು ಇಟ್ಟುಕೊಳ್ಳುವ ಮೂಲಕ ನಾವು ಧಾರ್ಮಿಕ ಗುಲಾಮಗಿರಿಗೆ ದಾಸರಾಗಿದ್ದೇವೆ. ನಮಗೆ ಭಗವಾನ್ ಬುದ್ಧ ಮಾತ್ರ ಸಾಕು, ನಮ್ಮನ್ನು ಆರ್ಥಿಕ ಗುಲಾಮಗಿರಿಗೆ ತಳ್ಳುವ ಈ ಹಿಂದುತ್ವ ದೇವರುಗಳು ಬೇಡ” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕಾರ್ಯಕ್ರಮದಲ್ಲಿ ಸಚಿವ ಸತೀಶ್‌ ಜಾರಕಿಹೊಳಿ, ಚಂದ್ರು ತರಹುಣಿಸೆ, ಕ್ಯಾಸಂಬಳ್ಳಿ ನಾರಾಯಣ, ಸುರೇಶ್‌ ಮೆಂಗನ್‌, ನಂಜುಂಡ ಮೌರ್ಯ ಇನ್ನಿತರರು ಭಾಗವಹಿಸಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...