ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿನ ಭ್ರಷ್ಟಾಚಾರವನ್ನೇ ಮುಖ್ಯವಾಗಿಟ್ಟುಕೊಂಡು ಅಭಿಯಾನ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಕೂಡ ತನ್ನ ಸರ್ಕಾರದಲ್ಲಿ ಭ್ರಷ್ಟಾಚಾರವನ್ನು ಪೋಷಿಸುತ್ತಿದೆ ಎನ್ನುವ ಗಂಭೀರ ಆರೋಪಗಳು ವ್ಯಕ್ತವಾಗಿವೆ. ಇಂತಹ ಆರೋಪಗಳನ್ನು ಯಾರೋ ವಿಪಕ್ಷಗಳ ನಾಯಕರು ಮಾಡುತ್ತಿಲ್ಲ. ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಕಾಂಗ್ರೆಸ್ ವಿರುದ್ಧ ಗಂಭೀರವಾಗಿ ಭ್ರಷ್ಟಾಚಾರದ ಆರೋಪಗಳನ್ನು ಮಾಡಿದ್ದಾರೆ.
ಮಂಡ್ಯ ನಗರದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, “ಬಿಜೆಪಿ, ಜೆಡಿಎಸ್ ಸರ್ಕಾರದಲ್ಲಿ ಇದ್ದಂತೆ ಸಿದ್ದರಾಮಯ್ಯ ಸರ್ಕಾರದಲ್ಲೂ ಭ್ರಷ್ಟಾಚಾರ ಇದೆ” ಎಂದು ದೂರಿದ್ದಾರೆ.
“ಲಂಚ ತೆಗೆದುಕೊಂಡು ಸಿಕ್ಕಿ ಹಾಕಿಕೊಂಡರೆ ಕೋರ್ಟ್‌ನಿಂದ ಶಿಕ್ಷೆಯಾಗಲು 30 ವರ್ಷಗಳಾಗುತ್ತವೆ. ಅದಕ್ಕೆ ಯಾರೂ ಕಾನೂನಿಗೆ ಹೆದರುತ್ತಿಲ್ಲ. ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯವಿಲ್ಲ, ಆದರೆ ನಿಯಂತ್ರಣ ಮಾಡಬಹುದು” ಎಂದು ಹೇಳಿದರು.
“ಹಣ ಕೊಟ್ಟು ಹುದ್ದೆಗೆ ಹೋದವರಿಗೆ ಹಣ ಮಾಡುವುದೇ ಕೆಲಸವಾಗಿದೆ. ಶೇ.40ರಷ್ಟು ಕಮಿಷನ್ ಕೊಟ್ಟರೆ ಉಳಿದ ಹಣದಲ್ಲಿ ರಸ್ತೆ ಗುಂಡಿ ಮಾಡಲು ಆಗುತ್ತದಾ? ದೇಶದಲ್ಲಿ ಅನೇಕ ಸಮಸ್ಯೆಗಳಿದ್ದರೂ ಸೌಲಭ್ಯ ನೀಡಲು ಸರ್ಕಾರದ ಬಳಿ ಹಣವಿಲ್ಲ. ದೇಶದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ” ಎಂದು ಆರೋಪಿಸಿದರು.
“ಬಿಹಾರ ಚುನಾವಣೆಯಲ್ಲಿ ಸೋಲುವ ವಿಚಾರ ಮೊದಲೇ ಕಾಂಗ್ರೆಸ್‌ನವರಿಗೆ ತಿಳಿದಿದೆ. ಅದಕ್ಕೆ ವೋಟ್ ಚೋರಿ ವಿಚಾರ ಶುರು ಮಾಡಿದರು. ವೋಟ್ ಚೋರಿ ಅಷ್ಟು ಸುಲಭವಿಲ್ಲ. ವಿಚಾರಣೆ ಮಾಡಲು ಸಾಧ್ಯವಿಲ್ಲ ಅಂತ ಕೋರ್ಟ್ ಹೇಳಿದೆ. ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ. ಸೋತಿದ್ದಕ್ಕೆ ಕಾರಣ ಕೊಡುತ್ತಾರಷ್ಟೆ” ಎಂದು ತಿಳಿಸಿದರು.





