ರಾಜ್ಯದಲ್ಲಿ ಇವತ್ತು ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳನ್ನು ನೋಡಿದರೆ ಮುಂದಿನ ದಿನಗಳಲ್ಲಿ ಯಾರೂ ಕೂಡ ನಿರೀಕ್ಷೆ ಮಾಡದಂತಹ ಸ್ಪೋಟಕ ಬೆಳವಣಿಗೆಗಳು ನಡೆಯಲಿವೆ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಶನಿವಾರದಂದು ಜೆಡಿಎಸ್ ಪಕ್ಷದ ಬೆಳ್ಳಿಹಬ್ಬದ ಸಮಾರಂಭದಲ್ಲಿ ಪಾಲ್ಗೊಂಡು ಕಾರ್ಯಕರ್ತರು, ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರು;
ರಾಜಕೀಯದಲ್ಲಿ ಯಾರು ಯಾವ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಹೇಳಲಿಕ್ಕೆ ಆಗದಂತಹ ಪರಿಸ್ಥಿತಿ ರಾಜ್ಯದಲ್ಲಿ ಸೃಷ್ಟಿ ಆಗಿದೆ. ರಾಜ್ಯ ರಾಜಕಾರಣದಲ್ಲಿ ಅನಿರೀಕ್ಷಿತ ಮತ್ತು ಸ್ಪೋಟಕ ಬೆಳವಣಿಗೆಗಳು ನಡೆಯಲಿವೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಪರೋಕ್ಷವಾಗಿ ಆಡಳಿತ ಪಕ್ಷ ಕಾಂಗ್ರೆಸ್‌ನಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ಬೊಟ್ಟು ಮಾಡಿದ ಅವರುಮ “ದಿನಕ್ಕೊಂದು, ಕ್ಷಣಕ್ಕೊಂದು ರಾಜಕೀಯ ಬೆಳವಣಿಗೆ ನಡೆಯುತ್ತಿರುವುದು ನೋಡಿದರೆ ಕೆಲವೇ ತಿಂಗಳಲ್ಲಿ ರಾಜ್ಯದಲ್ಲಿ ರಾಜಕೀಯ ಕ್ರಾಂತಿಯೇ ಆಗುವ ಸಾಧ್ಯತೆ ಇದೆ. ಹೀಗಾಗಿ ಕಾರ್ಯಕರ್ತರು ಮತ್ತು ಮುಖಂಡರು ಜನರ ಜತೆಯೇ ಇರಬೇಕು. ಜನರ ಕಷ್ಟಗಳಿಗೆ ಸ್ಪಂದಿಸಬೇಕು” ಎಂದರು.
“ಜನ ಕೆಟ್ಟ ಆಡಳಿತದಿಂದ ರೋಸಿ ಹೋಗಿದ್ದಾರೆ. ತೆರಿಗೆ, ದರ ಏರಿಕೆ ಸುಳಿಗೆಯಿಂದ ಬೇಸತ್ತು ಹೋಗಿದ್ದಾರೆ. ಮುಂದೆ ನಮ್ಮ ಪಕ್ಷಕ್ಕೆ ಒಂದು ಅವಕಾಶ ಕೊಡಿ. ಐದು ವರ್ಷದಲ್ಲಿ ಯಾವ ರೀತಿ ಆಡಳಿತ ಕೊಡಬೇಕು, ಜನರಿಗೆ ಏನೆಲ್ಲ ಒಳ್ಳೆಯದು ಮಾಡಬೇಕು ಎಂಬುದನ್ನು ಸಾಬೀತು ಮಾಡಿ ತೋರಿಸುತ್ತೇನೆ. ಒಂದು ವೇಳೆ ಜನ ಮೆಚ್ಚುವ ಸರ್ಕಾರ ನನ್ನಿಂದ ಕೊಡಲು ಆಗದಿದ್ದರೆ ಈ ಜನ್ಮದಲ್ಲಿ ಮತ್ತೆ ನನ್ನ ಮುಖ ತೋರಿಸಲ್ಲ” ಎಂದು ಹೇಳಿದರು.
“ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಹೋಗಿದೆ. ರಾಜ್ಯದ ಸಾಲ 7.50 ಲಕ್ಷ ಕೋಟಿ ದಾಟಿದೆ. ಸಿದ್ಧರಾಮಯ್ಯ ಒಬ್ಬರೇ 5ರಿಂದ 5.50 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಏನಕ್ಕೆ ಮಾಡಿದ್ರು ಇಷ್ಟು ಸಾಲವನ್ನು? ಯಾವ ಪುರುಷಾರ್ಥಕ್ಕೆ ಮಾಡಿದ್ರು ಎಂಬುದನ್ನು ಜನರಿಗೆ ಉತ್ತರ ಕೊಡಬೇಕು” ಎಂದು ಒತ್ತಾಯ ಮಾಡಿದರು.
ಜ್ಯೋತಿಷಿಗಳನ್ನು ಟ್ರ್ಯಾಪ್ ಮಾಡಿ ದೇವೇಗೌಡರನ್ನು ವಂಚಿಸಿದರು!
“ಮಾಜಿ ಪ್ರಧಾನಿಗಳಾದ ದೇವೇಗೌಡರು ತಮ್ಮ ಇಡೀ ಬದುಕನ್ನು ಜನರಿಗೆ ಮೀಸಲಿಟ್ಟರು. ಅವರು ಅಧಿಕಾರಕ್ಕಾಗಿ ಇನ್ನೊಬ್ಬರ ಮನೆ ಬಾಗಿಲಿಗೆ ಹೋದವರಲ್ಲಾ. ಈ ರಾಜ್ಯವನ್ನು ದೀರ್ಘ ಕಾಲ ಆಳಿದ ದೇವರಾಜು ಅರಸು ಅವರೇ ಕುಂಡೆ ಬಂದು ನನ್ನ ನಮ್ಮ ಜೊತೆ ಕೈ ಜೋಡಿಸು ಎಂದು ಹೇಳಿದರು ದೇವೇಗೌಡರು ಕೇಳಲಿಲ್ಲ. ಒಂದು ಆದರ್ಶ, ಮೌಲ್ಯ ಇಟ್ಟುಕೊಂಡು ಅವರು ರಾಜಕಾರಣ ಮಾಡುತ್ತಾ ಬಂದಿದ್ದಾರೆ. ಅಂತಹವರ ಮೇಲೆ ಇಲ್ಲಸಲ್ಲದ ಆಪಾದನೆಗಳನ್ನು ಮಾಡಿದರು. ದೇವೇಗೌಡರು ಜ್ಯೋತಿಷ್ಯರನ್ನ ನಂಬುತ್ತಾರೆ ಎಂದು ಆ ಜ್ಯೋತಿಷಿಗಳನ್ನು ಟ್ರ್ಯಾಪ್ ಮಾಡಿ ವಂಚಿಸಿದರು. ಅಲ್ಲದೆ, ಮೈಸೂರಿನಲ್ಲಿ ದೇವೇಗೌಡರು 500 ನಿವೇಶನಗಳನ್ನು ಖರೀದಿ ಮಾಡಿದ್ದಾರೆ ಎಂದು ಸುಳ್ಳು ಪ್ರಚಾರ ಮಾಡಿದರು” ಎಂದು ಹೇಳಿದರು.
ಗ್ಯಾರಂಟಿ ಹೆಸರಿನಲ್ಲಿ ಸರ್ಕಾರ ದರೋಡೆ ಮಾಡ್ತಿದೆ
“ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಹೆಸರಿನಲ್ಲಿ ಲೂಟಿ ಮಾಡುತ್ತಿದೆ. ಇನ್ನು ಎಷ್ಟು ದರೋಡೆ ಮಾಡುತ್ತೀರಿ? ಎಷ್ಟೊಂದು ತೆರಿಗೆಗಳನ್ನು ಏರಿಸಿದಿರಿ? ಎಷ್ಟೊಂದು ಬೆಳೆಗಳನ್ನು ಹೆಚ್ಚಳ ಮಾಡಿದಿರಿ? ಬಿ ಖಾತಾ ಏ ಖಾತಾ ತೆರಿಗೆ ಎಂದು ದೋಖಾ ಮಾಡುತ್ತಿದೀರಿ. ಬೆಂಗಳೂರಿನಲ್ಲಿ, ರಾಜ್ಯದಲ್ಲಿ ರಸ್ತೆ ಗುಂಡಿಗೆ ಬಿದ್ದು ಎಷ್ಟೋ ಜನ ಸಾವನಪ್ಪಿದ್ದಾರೆ. ಕಬ್ಬು ಬೆಳೆಗಾರರ ಕಬ್ಬಿಗೆ ಬೆಂಕಿ ಹಾಕಿದ್ದು ಯಾರು ಅಂತಾ ಗೊತ್ತಿಲ್ಲಾ. ಈ ಪಾಪ ಸುಮ್ಮನೆ ಹೋಗಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಾತಿ ಗಣತಿ ಹೆಸರಿನಲ್ಲಿ ಜನರ ವಿಭಜನೆ
“ಅಭಿವೃದ್ಧಿ ಹೆಸರಿನಲ್ಲಿ ರಾಜಕಾರಣ ಮಾಡಲು ಇವರಿಗೆ ಆಗುತ್ತಿಲ್ಲ. ಅದರಿಂದಲೇ ವಾಮಮಾರ್ಗಗಳ ಮೂಲಕ ರಾಜಕೀಯ ಲಾಭ ಪಡೆದುಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ಇಲ್ಲಿವೆ ಎಲ್ಲಿವೆ ಕಾಂತರಾಜು , ಜಯಪ್ರಕಾಶ್ ಹೆಗಡೆ, ಮದುಸೂದನ್ ನಾಯ್ಕ್ ವರದಿಗಳು? ಸ್ವಲ್ಪ ಹೇಳುತ್ತೀರಾ ಮುಖ್ಯಮಂತ್ರಿಗಳೇ” ಎಂದು ಕುಮಾರಸ್ವಾಮಿ ಹರಿಹಾಯ್ದರು.





