ಇತಿಹಾಸದಲ್ಲಿಯೇ ಮೊದಲ ಬಾರಿಗೆ ಭಾರತದ ಸಂವಿಧಾನ ಹಾಗೂ ಪ್ರಜಾಭುತ್ವವನ್ನು ನಾಶ ಮಾಡಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಪಕ್ಷ ಬಿಜೆಪಿ ಹೊರಟಿದೆ. ಆದ ಕಾರಣ ಈ ಚುನಾವಣೆ ಹಿಂದಿನ ಚುನಾವಣೆಗಳಿಗಿಂತ ಸಾಮಾನ್ಯ ಚುನಾವಣೆಯಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜಾಪುರದ ರ್‍ಯಾಲಿಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಅವರು ಸಂವಿಧಾನವನ್ನು ನಾಶ ಮಾಡಲು ಹೊರಟಿದ್ದಾರೆ. ಚುನಾವಣೆಯನ್ನು ಗೆದ್ದರೆ ಸಂವಿಧಾನವನ್ನು ಬದಲಿಸಿ ನಾಶ ಮಾಡುವುದಾಗಿ ಅವರ ಪಕ್ಷದ ಸಂಸದರು ಸ್ಪಷ್ಟವಾಗಿ ಹೇಳುತ್ತಿದ್ದಾರೆ. ಮತ್ತೊಂದು ಕಡೆ ಕಾಂಗ್ರೆಸ್ ಪಕ್ಷ ಹಾಗೂ ಇಂಡಿಯಾ ಒಕ್ಕೂಟ ಸಂವಿಧಾನವನ್ನು ಉಳಿಸುವ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರು ಸಂವಿಧಾನವನ್ನು ನಾಶ ಮಾಡಲು ಪ್ರಯತ್ನಿಸುತ್ತಿದ್ದರೆ, ಇಂಡಿಯಾ ಒಕ್ಕೂಟ ಸಂರಕ್ಷಿಸುವ ಕಾರ್ಯದಲ್ಲಿ ನಿರತವಾಗಿದೆ. ಸಂವಿಧಾನವು ಭಾರತದ ಜನರಿಗೆ ಹಕ್ಕುಗಳು, ಧ್ವನಿ ಹಾಗೂ ಮೀಸಲಾತಿಯನ್ನು ಕೊಟ್ಟಿದೆ. ಸಂವಿಧಾನ ರಚನೆಗೊಳ್ಳುವ ಮುನ್ನ ರಾಜರು ಹಾಗೂ ಸಾಮ್ರಾಟರು ದೇಶವನ್ನು ಆಳುತ್ತಿದ್ದರು. ಸಂವಿಧಾನವು ಬಡವರು, ಹಿಂದುಳಿದವರು, ದಲಿತರು ಹಾಗೂ ಬುಡಕಟ್ಟು ಸಮುದಾಯದವರಿಗೆ ಹಕ್ಕುಗಳು, ಧ್ವನಿ ಎಲ್ಲವನ್ನು ಕೊಟ್ಟಿದೆ. ಆದರೆ ಇಂತಹ ಸಂವಿಧಾನವನ್ನೇ ಪ್ರಧಾನಿ ಮೋದಿ ನಾಶ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕೋಮುದ್ವೇಷ ಜಾಹೀರಾತು ನೀಡಿ ವಿಕೃತಿ ಮೆರೆದ ಬಿಜೆಪಿ
ಪ್ರಧಾನಿ ಮೋದಿ ಬಡವರನ್ನು ವಂಚಿಸಿ ಭಾರತದ ಸಂಪತ್ತನ್ನು ಕೆಲವೇ ಮಂದಿಗೆ ನೀಡುತ್ತಿದ್ದಾರೆ. ಕಳೆದ 10 ವರ್ಷಗಳಲ್ಲಿ ನರೇಂದ್ರ ಮೋದಿ 20 ರಿಂದ 25 ಮಂದಿಯನ್ನು ಬಿಲೇನಿಯರ್‌ಗಳಾಗಿ ಮಾಡಿದ್ದಾರೆ. ಭಾರತದ ಸಂಪತ್ತನ್ನು ಅವರಿಗೆ ನೀಡಿದ್ದಾರೆ. ಅದಾನಿ ರೀತಿಯ ವ್ಯಕ್ತಿಗಳಿಗೆ ನರೇಂದ್ರ ಮೋದಿ ಎಲ್ಲ ರೀತಿಯ ಅನುಕೂಲಗಳನ್ನು ನೀಡಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದರು.
ಭಾರತದ ವಿಮಾನ ನಿಲ್ದಾಣಗಳು, ಭಾರತದ ಬಂದರುಗಳು, ಮೂಲಸೌಕರ್ಯಗಳು, ರಕ್ಷಣಾ ಉದ್ಯಮ, ಸೌರ ಶಕ್ತಿ ಉದ್ಯಮ, ಪವನ ಶಕ್ತಿ ಉದ್ಯಮ ಎಲ್ಲವನ್ನು ನರೇಂದ್ರ ಮೋದಿ ಅವರು ಅದಾನಿ ಹಾಗೂ ಅದಾನಿ ರೀತಿಯ ವ್ಯಕ್ತಿಗಳಿಗೆ ನೀಡಿ ಬಡವರಿಗೆ ಮೋಸ ಮಾಡಿದ್ದಾರೆ ಎಂದು ರಾಹುಲ್ ತಿಳಿಸಿದರು.
88 ಲೋಕಸಭಾ ಕ್ಷೇತ್ರಗಳಲ್ಲಿ ಕೇರಳದ ಎಲ್ಲ 20, ಕರ್ನಾಟಕದ 14 ಸೇರಿದಂತೆ ರಾಜಸ್ಥಾನ, ಮಹಾರಾಷ್ಟ್ರ, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಅಸ್ಸಾಂ, ಬಿಹಾರ್, ಛತ್ತೀಸ್‌ಘಡ, ಪಶ್ಚಿಮ ಬಂಗಾಳ, ಮಣಿಪುರ, ತ್ರಿಪುರ ಮತ್ತು ಜಮ್ಮು ಕಾಶ್ಮೀರ ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದೆ.





