ಇತ್ತೀಚೆಗೆ ಕರ್ನೂಲ್‌ನಲ್ಲಿ ನಡೆದ ಬಸ್ ದುರಂತದಿಂದ ಬೆಚ್ಚಿಬಿದ್ದಿರುವ ಕರ್ನಾಟಕ ಸಾರಿಗೆ ಇಲಾಖೆ, ರಾಜ್ಯದ ಎಲ್ಲಾ ಸಾರಿಗೆ ಸಂಸ್ಥೆಗಳ ಬಸ್ಸುಗಳಲ್ಲಿ ಸುರಕ್ಷತಾ ಕ್ರಮಗಳ ಪರಿಶೀಲನೆಗೆ ಮುಂದಾಗಿದೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಬಸ್ಸುಗಳ ಸುರಕ್ಷತಾ ಆಡಿಟ್ (Safety Audit) ನಡೆಸುವಂತೆ ಸೂಚನೆ ನೀಡಿದ್ದಾರೆ.
“ಹಾವೇರಿ ಬಳಿ ಜಬ್ಬಾರ್ ಟ್ರಾವೆಲ್ಸ್ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಹಲವರು ಸಾವನ್ನಪ್ಪಿದ ಘಟನೆ ಬಳಿಕ ರಾಜ್ಯದ 50,000ಕ್ಕೂ ಹೆಚ್ಚು ವಾಹನಗಳಲ್ಲಿ ತುರ್ತು ನಿರ್ಗಮನ ದ್ವಾರಗಳನ್ನು ಕಡ್ಡಾಯಗೊಳಿಸಿದ್ದೆವು. ಈಗ ಮತ್ತೆ ಎಲ್ಲ ಬಸ್‌ಗಳಲ್ಲಿ ಸುರಕ್ಷತಾ ಪರಿಶೀಲನೆ ನಡೆಸಬೇಕಿದೆ. ಬಸ್‌ಗಳಲ್ಲಿ ಯಾವುದೇ ವಾಣಿಜ್ಯ ಸರಕು ಅಥವಾ ಸ್ಫೋಟಕ, ಸುಲಭವಾಗಿ ಉರಿಯುವ ವಸ್ತುಗಳನ್ನು ಸಾಗಿಸಬಾರದು. ಎಲ್ಲಾ ಎಸಿ ಬಸ್‌ಗಳಲ್ಲಿ ತುರ್ತು ಸಂದರ್ಭಗಳಲ್ಲಿ ಕಿಟಕಿಗಳನ್ನು ಒಡೆಯಲು ಸುತ್ತಿಗೆಗಳು ಕಡ್ಡಾಯವಾಗಿರಬೇಕು. ಲಗೇಜ್ ಜಾಗದಲ್ಲಿ ಯಾರೂ ಮಲಗಲು ಅವಕಾಶ ನೀಡಬಾರದು. ಬಸ್‌ಗಳ ನವೀಕರಣ, ತುರ್ತು ನಿರ್ಗಮನ ದ್ವಾರಗಳ ಕಾರ್ಯಕ್ಷಮತೆ ಹಾಗೂ ಅಗ್ನಿ ಸುರಕ್ಷತಾ ವ್ಯವಸ್ಥೆಗಳನ್ನು ಪರಿಶೀಲಿಸಬೇಕು” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಈ ದಿನ ಸಂಪಾದಕೀಯ | ಕುರುಡು ದ್ವೇಷದ ಈ ಅಂಧಕಾರಕ್ಕೆ ಅಂತ್ಯವೆಂದು?
“ಯಾವುದೇ ರೀತಿಯ ನಿರ್ಲಕ್ಷ್ಯ ಕಂಡುಬಂದರೆ ಸಂಬಂಧಪಟ್ಟವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಪ್ರಯಾಣಿಕರ ಸುರಕ್ಷತೆ ನಮ್ಮ ಮೊದಲ ಆದ್ಯತೆ. ಪ್ರಾಣ ಹಾನಿಗೆ ಯಾವುದೇ ರೀತಿಯ ಪರಿಹಾರ ಸಾಧ್ಯವಿಲ್ಲ” ಎಂದು ಪತ್ರದ ಮೂಲಕ ನಿರ್ದೇಶಿಸಿದ್ದಾರೆ.





