ಕೇರಳದ ಕಲ್ಪೆಟ್ಟ ಕ್ಷೇತ್ರದ ಯುಡಿಎಫ್ ಚುನಾವಣಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಕಂದಾಯ ಸಚಿವ ಕೃಷ್ಣಬೈರೇಗೌಡ ‘ಕೇರಳ ತನ್ನ ಹಿಂದಿನ ವೈಭವದ ದಿನಗಳಿಗೆ ಮರಳಬೇಕಾದರೆ ಯುಡಿಎಫ್ ಅಧಿಕಾರಕ್ಕೆ ಬರಬೇಕು’ ಎಂದರು.
ಕೇರಳ ದೇಶದ ಅತ್ಯುತ್ತಮ ರಾಜ್ಯಗಳಲ್ಲಿ ಒಂದಾಗಿದ್ದು ಶಿಕ್ಷಣ, ಆರೋಗ್ಯ ಮತ್ತು ಸಾರ್ವಜನಿಕ ಕಲ್ಯಾಣದಂತಹ ಎಲ್ಲಾ ಕ್ಷೇತ್ರಗಳಲ್ಲಿ ಇತರ ರಾಜ್ಯಗಳಿಗೆ ಮಾದರಿಯಾಗಿದೆ. ಇದಕ್ಕಾಗಿ ಯುಡಿಎಫ್ ಉತ್ತಮ ಪ್ರಯತ್ನ ಮಾಡಿತು. ಆದರೆ, ಕಳೆದ ಹತ್ತು ವರ್ಷಗಳ ತಪ್ಪು ಕ್ರಮಗಳು ಕೇರಳವನ್ನು ಹಿಂದಕ್ಕೆ ತಳ್ಳಿವೆ. ಅದನ್ನು ಹಳೆಯ ಕೇರಳ ಮಾದರಿಗೆ ಮರಳಿ ತರಬೇಕು. ಅದಕ್ಕಾಗಿ, ಯುಡಿಎಫ್ ನ್ನು ಅಧಿಕಾರಕ್ಕೆ ತರಬೇಕು ಎಂದು ಹೇಳಿದರು.
ಅನೇಕ ಮಲಯಾಳಿಗಳು ಕರ್ನಾಟಕದಲ್ಲಿ ವಾಸಿಸುತ್ತಿದ್ದಾರೆ. ಕೇರಳ ತನ್ನ ಒಳ್ಳೆಯ ಕಾಲಕ್ಕೆ ಮರಳಬೇಕಾದರೆ ಯುಡಿಎಫ್ ಅಧಿಕಾರಕ್ಕೆ ಬರಬೇಕು ಎಂದು ಅವರೆಲ್ಲರೂ ಹೇಳುತ್ತಾರೆ. ಕೇರಳದಲ್ಲಿ ಪ್ರಸ್ತುತ ಬಿಜೆಪಿ-ಸಿಪಿಎಂ ಮೈತ್ರಿಕೂಟ ಪ್ರಬಲವಾಗಿದೆ. ಬಿಜೆಪಿ ಸಿಪಿಎಂನ್ನು ಮಿತ್ರಪಕ್ಷವಾಗಿ ಜೊತೆಗಿರಿಸಿಕೊಂಡು ತಮ್ಮ ಅಸ್ತಿತ್ವ ಕಂಡುಕೊಳ್ಳಲು ಹವಣಿಸುತ್ತಿದೆ. ಕೇರಳದಲ್ಲಿ ಬಿಜೆಪಿ ಮತ್ತು ಸಿಪಿಎಂ ಒಟ್ಟಾಗಿ ಕೆಲಸ ಮಾಡುತ್ತಿವೆ ಇದನ್ನರಿತು ಬದಲಾವಣೆಯತ್ತ ಕಾರ್ಯೋನ್ಮುಖರಾಗಬೇಕು ಎಂದು ಕಿವಿ ಮಾತು ಹೇಳಿದರು.
ಮುಂಬರುವ ದಿನಗಳು ಕಠಿಣ ಪರಿಶ್ರಮದ ದಿನಗಳಾಗಿವೆ. ಈಗ ನಮ್ಮ ಗುರಿ ಕೇರಳದಲ್ಲಿ ಕಾಂಗ್ರೆಸ್ ಬೆಂಬಲಿತ ಯುಡಿಎಫ್ ಅಧಿಕಾರಕ್ಕೆ ತರುವುದು ಮತ್ತು ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಅಧಿಕಾರಕ್ಕೆ ಬರುವುದು ಎಂದು ಹೇಳಿದರು.

ಟಿ. ಸಿದ್ದಿಕ್ ಕೇರಳದ ಅತ್ಯುತ್ತಮ ಶಾಸಕರಲ್ಲಿ ಒಬ್ಬರು. ಈ ಬಾರಿಯೂ ಆಯ್ಕೆಯಾಗುವುದು ನೂರಕ್ಕೆ ನೂರು ಖಚಿತ. ಕರ್ನಾಟಕದಲ್ಲಿ ನಾನು ಯುವ ಕಾಂಗ್ರೆಸ್ ಅಧ್ಯಕ್ಷನಾಗಿದ್ದಾಗ ಸಿದ್ದಿಕ್ ಕೇರಳದ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಅಂದಿನಿಂದ ನಾವು ಸ್ನೇಹಿತರಾಗಿದ್ದು, ಅವರನ್ನು ಹೆಚ್ಚಿನ ಬಹುಮತದಿಂದ ಆಯ್ಕೆ ಮಾಡಬೇಕು ಎಂದು ಕರೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಕೇರಳ ಚುನಾವಣೆ | ಮಂಜೇಶ್ವರ ಬಿಜೆಪಿ ಅಭ್ಯರ್ಥಿ ಸುರೇಂದ್ರನ್ ಮೇಲಿದೆ 242 ಕ್ರಿಮಿನಲ್ ಪ್ರಕರಣಗಳು
ಯುಡಿಎಫ್ ಕ್ಷೇತ್ರಾಧ್ಯಕ್ಷ ಸಲೀಂ ಮೇಮನಾ, ಯೂತ್ ಲೀಗ್ ರಾಜ್ಯಾಧ್ಯಕ್ಷ ಮುನವರಲಿ ಶಿಹಾಬ್, ಟಿ.ಜೆ ಐಸಾಕ್, ಟಿ. ಮೊಹಮ್ಮದ್, ಪಿ.ಪಿ ಅಲಿ, ಎನ್.ಕೆ ರಶೀದ್, ಎನ್.ಡಿ ಅಪ್ಪಚ್ಚನ್, ಪಿ. ಇಸ್ಮಾಯಿಲ್, ಪಿ.ಕೆ ಅಬೂಬಕರ್, ಟಿ. ಹಂಜಾ, ಕೆ.ವಿ ಪೋಕರ್ ಹಾಜಿ, ಚಂದ್ರಿಕಾ ಕೃಷ್ಣನ್, ರಜಾಕ್ ಕಲ್ಪೆಟ್ಟಾ, ಯಾಹಿಯಾ ಖಾನ್ ತಳಕ್ಕಲ್, ಬಿ. ಸುರೇಶ್ ಬಾಬು, ಕಡವನ್ ಹಮ್ಜಾ, ಓ.ವಿ ಅಪ್ಪಾಚನ್, ಎಂ. ಹರೀಸ್, ಎಂ. ಕಂಡಿಯಾನ್, ಪಿ. ಕೆ ರಾಜನ್, ಕುಂಜು ಮುಹಮ್ಮದ್ ಕೈತಪಲ್ಲಿ, ಸಿ. ಪಿ ಅಶ್ರಫ್, ಪಾಲ್ಸನ್ ಕೂವಕ್ಕಲ್ ಸಮಾವೇಶದಲ್ಲಿದ್ದರು.





