ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ರಾಜ್ಯ ಸರ್ಕಾರ ಮುಂದಾಗಿದೆ. ವಿದ್ಯುನ್ಮಾನ ಮತಯಂತ್ರಗಳ (EVM) ಬದಲಿಗೆ ಹಳೆಯ ‘ಬ್ಯಾಲೆಟ್ ಪೇಪರ್’ ಪದ್ಧತಿಯನ್ನು ಮರುಪರಿಚಯಿಸುವ ಮಹತ್ವದ ವಿಧೇಯಕವನ್ನು ವಿಧಾನಸಭೆಯಲ್ಲಿ ಅಂಗೀಕರಿಸಿದೆ. ಪ್ರತಿಪಕ್ಷಗಳ ತೀವ್ರ ವಿರೋಧ ಮತ್ತು ಸಭಾತ್ಯಾಗದ ನಡುವೆಯೇ ‘ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ-2026’ಕ್ಕೆ ಧ್ವನಿಮತದ ಒಪ್ಪಿಗೆ ಸಿಕ್ಕಿದೆ.
ಮಸೂದೆಯ ಪ್ರಕಾರ, ಇನ್ನು ಮುಂದೆ ನಡೆಯಲಿರುವ ಗ್ರಾಮ ಪಂಚಾಯತಿ, ತಾಲೂಕು ಪಂಚಾಯತಿ ಹಾಗೂ ಜಿಲ್ಲಾ ಪಂಚಾಯತಿ ಚುನಾವಣೆಗಳಲ್ಲಿ ಇವಿಎಂಗಳ ಬದಲಿಗೆ ಮತಪತ್ರಗಳನ್ನೇ ಬಳಸಲಾಗುತ್ತದೆ. ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದು ಮತ್ತು ಮತದಾರರಲ್ಲಿ ವಿಶ್ವಾಸಾರ್ಹತೆ ಮೂಡಿಸುವುದು ಮುಖ್ಯ ಗುರಿಯಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ.
ಸದನದಲ್ಲಿ ವಿಧೇಯಕ ಮಂಡಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, “ಸಂವಿಧಾನದ ಆಶಯದಂತೆ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಈ ಬದಲಾವಣೆ ಅಗತ್ಯ. ಇವಿಎಂಗಳ ಬಗ್ಗೆ ಜನರಲ್ಲಿ ಅನುಮಾನಗಳು ವ್ಯಕ್ತವಾಗುತ್ತಿವೆ. ಚುನಾವಣಾ ಆಯೋಗವು ತಜ್ಞರ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡುತ್ತಿಲ್ಲ. ಪಾರದರ್ಶಕತೆ ತರಲು ನಾವು ಈ ಹೆಜ್ಜೆ ಇಟ್ಟಿದ್ದೇವೆ” ಎಂದು ವಿವರಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಬಿಜೆಪಿ ಅಸ್ತ್ರಕ್ಕೆ ಟಿಎಂಸಿ ಪ್ರತ್ಯಸ್ತ್ರ; ಸುವೇಂದು ಎದುರು ಸ್ಪರ್ಧಿಸಿರುವ ‘ಪಬಿತ್ರ ಕರ್’ ಯಾರು ಗೊತ್ತೆ?
ಸರ್ಕಾರದ ಈ ನಿರ್ಧಾರವನ್ನು ಟೀಕಿಸಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್, “ಇದು ತುಘಲಕ್ ದರ್ಬಾರ್. ಇವಿಎಂ ಪರಿಚಯಿಸಿದ್ದೇ ಕಾಂಗ್ರೆಸ್, ಈಗ ಅವರೇ ಅದನ್ನು ವಿರೋಧಿಸುತ್ತಿರುವುದು ಹಾಸ್ಯಾಸ್ಪದ” ಎಂದು ಹೇಳಿದ್ದಾರೆ.
ಬಿಜೆಪಿ ಸದಸ್ಯ ವಿ. ಸುನೀಲ್ ಕುಮಾರ್, “ಇದರ ಹಿಂದೆ ದೊಡ್ಡ ಹುನ್ನಾರವಿದೆ. ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಳ್ಳಲು ಸರ್ಕಾರ ಈ ತಿದ್ದುಪಡಿ ತಂದಿದೆ” ಎಂದು ಆರೋಪಿಸಿದ್ದಾರೆ.
ಚರ್ಚೆಯ ವೇಳೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಮಾತಿನ ಚಕಮಕಿ ತಾರಕಕ್ಕೇರಿತು. ಅಸಮಾಧಾನಗೊಂಡ ಆರ್. ಅಶೋಕ್ ಅವರು ವಿಧೇಯಕದ ಪ್ರತಿಯನ್ನು ಹರಿದು ಹಾಕಿದರು. ಬಳಿಕ, ಬಿಜೆಪಿ ಸದಸ್ಯರು ಸದನದಿಂದ ಸಭಾತ್ಯಾಗ ಮಾಡಿದರು. ಪ್ರತಿಪಕ್ಷಗಳ ಅನುಪಸ್ಥಿತಿಯಲ್ಲೇ ಮಸೂದೆಯನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಯಿತು. ಹೆಚ್ಚುವರಿ ವೆಚ್ಚದ ಬಗ್ಗೆ ಪೂರಕ ಬಜೆಟ್‌ನಲ್ಲಿ ಮಾಹಿತಿ ನೀಡುವುದಾಗಿ ಸರ್ಕಾರ ಸ್ಪಷ್ಟಪಡಿಸಿದೆ.




