ಚುನಾವಣಾ ಆಯೋಗವು ತೀವ್ರ ಪರಿಶೀಲನೆ ಮಾಡಲಿ, ಸಂಕ್ಷಿಪ್ತ ಪರಿಶೀಲನೆ ಮಾಡಲಿ – ಇಂತಹ ಪರಿಷ್ಕರಣೆಯಲ್ಲಿ ಆಯೋಗದ ಉದ್ದೇಶ ‘ಯಾವುದೇ ಅರ್ಹ ಮತದಾರ ಮತದಾರ ಪಟ್ಟಿಯಿಂದ ಹೊರಗುಳಿಯಬಾರದು’ ಎಂಬುದಾಗಿತ್ತು. ಮತಪಟ್ಟಿಯಿಂದ ಹೊರಗಿರುವವರನ್ನು ಗುರುತಿಸಿ, ಮತದಾರ ಪಟ್ಟಿಗೆ ಸೇರಿಸಿ, ಮತದಾನದ ಹಕ್ಕನ್ನು ಕೊಡುವ ಕೆಲಸವನ್ನು ಆಯೋಗ ಮಾಡುತ್ತಿತ್ತು. ಆದರೆ, ಈಗ ಎಸ್‌ಐಆರ್‌ನಲ್ಲಿ ಅರ್ಹ ಮತದಾರರನ್ನು ಮತಪಟ್ಟಿಯಿಂದ ಹೊರಗಿಡುವುದಕ್ಕೆ ಮುಂದಾಗಿದೆ ಎಂದು ಜಾಗೃತ ಕರ್ನಾಟಕದ ನಾಯಕ ಬಿ.ಸಿ ಬಸವರಾಜ್ ಆರೋಪಿಸಿದರು.
ಜಾಗೃತ ಕರ್ನಾಟಕ ಸಂಘಟನೆಯು ಬೆಂಗಳೂರಿನಲ್ಲಿ ಆಯೋಜಿಸಿದ್ದ ‘ಎಸ್‌ಐಆರ್: 13 ರಾಜ್ಯಗಳಲ್ಲಿ ಏನಾಗಿದೆ? ಕರ್ನಾಟಕದಲ್ಲಿ ಏನು ಮಾಡಬೇಕಿದೆ?’ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. “ಎಸ್‌ಐಆರ್ ಅಪಾಯದ ಕುರಿತು ಮೊಟ್ಟಮೊದಲ ಬಾರಿಗೆ ಯೋಗೇಂದ್ರ ಯಾದವ್ ಎಚ್ಚರಿಸಿದರು. ಸುಪ್ರೀಂ ಕೋರ್ಟ್‌ನಲ್ಲಿಯೂ ಎಸ್‌ಐಆರ್‌ಅನ್ನು ಪ್ರಶ್ನಿಸಿದರು. ಬಿಹಾರದಲ್ಲಿ ಸತ್ತಿದ್ದಾರೆಂದು ಹೇಳಿಕೊಂಡು ಬದುಕಿದ್ದವರನ್ನೇ ಮತಪಟ್ಟಿಯಿಂದ ಹೊರಹಾಕಲಾಗಿದ್ದವರನ್ನು ಸುಪ್ರೀಂ ಕೋರ್ಟ್ ಮುಂದೆ ನಿಲ್ಲಿಸಿ, ಎಸ್‌ಐಆರ್‌ನ ನೈತಿಕತೆಯನ್ನು ಪ್ರಶ್ನಿಸಿದರು. ಬಳಿಕ, ವಿಪಕ್ಷಗಳು ಎಚ್ಚೆತ್ತುಕೊಂಡವು. ಇಷ್ಟೆಲ್ಲ ಆಗಿಯೂ ಕೂಡ ಬಿಹಾರದಲ್ಲಿ 60 ಲಕ್ಷಕ್ಕೂ ಹೆಚ್ಚು ಮತದಾರರನ್ನು ಮತಪಟ್ಟಿಯಿಂದ ಹೊರಹಾಕಲಾಗಿದೆ” ಎಂದು ವಿವರಿಸಿದರು.
“ಎಸ್‌ಐಆರ್ ಕುರಿತ ಸಾಮಾಜಿಕ ಜಾಲತಾಣದಲ್ಲಿನ ಚರ್ಚೆಗಳಲ್ಲಿ ಕೆಲವರು ನೆಗೆಟಿವ್ ಕಮೆಂಟ್‌ಮಾಡುವುದನ್ನೂ ನಾವು ನೋಡಿದ್ದೇವೆ. ‘ಕರ್ನಾಟಕದಲ್ಲಿ 6 ಲಕ್ಷ ಬಾಂಗ್ಲಾದೇಶಿಗರಿದ್ದಾರೆ, ಅವರನ್ನು ಎಸ್‌ಐಆರ್ ಮುಲಕ ಹೊರಹಾಕಬಹುದು’ ಎಂಬ ವಾದಗಳನ್ನೂ ಗಮನಿಸಿದ್ದೇವೆ. ‘ಎಸ್‌ಐಆರ್ ಅಕ್ರಮ ಬಾಂಗ್ಲಾದೇಶಿಗರನ್ನು ಗುರುತಿಸುವುದಕ್ಕಾಗಿಯೇ ನಡೆಯುತ್ತಿದೆ’ ಎಂದು ಅಮಿತ್ ಶಾ ಸೇರಿದಂತೆ ಹಲವರು ವಾದಿಸುತ್ತಿದ್ದಾರೆ. ಆದರೆ, ಬಿಹಾರದಲ್ಲಿ ಕೇವಲ ಇಬ್ಬರನ್ನು ಮಾತ್ರವೇ ಬಾಂಗ್ಲಾದೇಶಿಗರು ಎಂದು ಗುರುತಿಸಲಾಗಿದೆ. ಹಾಗಾಗಿ, ಬಿಜೆಪಿ ಮತ್ತು ಚುನಾವಣಾ ಆಯೋಗ ಹೇಳುತ್ತಿರುವುದು ಸುಳ್ಳು ಎಂಬುದು ಸ್ಪಷ್ಟವಾಗಿ ಎಲ್ಲರಿಗೂ ಅರ್ಥವಾಗಿದೆ. ಆದರೂ, ಬಿಹಾರದಲ್ಲಿ 60 ಲಕ್ಷ ಭಾರತೀಯ ಮತದಾರರನ್ನು ಹೊರಹಾಕಿದ್ದಾರೆ” ಎಂದು ಆರೋಪಿಸಿದರು.
ಈ ಲೇಖನ ಓದಿದ್ದೀರಾ?: ಇಸ್ರೇಲ್-ಅಮೆರಿಕಕ್ಕೆ ಪ್ರತಿರೋಧವೊಡ್ಡಿ ಯುದ್ಧದಲ್ಲಿ ಇರಾನ್ ಮೇಲುಗೈ ಸಾಧಿಸುತ್ತಿದೆಯೇ?
“ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಅತ್ಯಂತ ಪ್ರಬಲವಾಗಿದೆ. ನೆಲಮಟ್ಟದಲ್ಲಿ ದೊಡ್ಡ ಮಟ್ಟದ ನೆಟ್‌ವರ್ಕ್‌ಅನ್ನು ಹೊಂದಿದೆ. ಬೂತ್ ಮಟ್ಟದಲ್ಲಿಯೂ ಟಿಎಂಸಿಯ ಸಕ್ರಿಯ ಕಾರ್ಯಕರ್ತರಿದ್ದಾರೆ. ಸರ್ಕಾರಿ ನೌಕರರೂ ಕೂಡ ಕೇಂದ್ರ ಸರ್ಕಾರದ ನೀತಿ-ನಿರೂಪಣೆ ಹಾಗೂ ಎಸ್‌ಐಆರ್ ವಿರುದ್ಧ ಬಲವಾಗಿ ಕೆಲಸ ಮಾಡಿದ್ದಾರೆ. ಯಾರೊಬ್ಬ ಅರ್ಹ ಮತದಾರರೂ ಮತದಾನದಿಂದ ವಂಚಿತರಾಗಬಾರದೆಂದು ಶ್ರಮಿಸಿದ್ದಾರೆ. ಆದ್ದರಿಂದಲೇ, ಬಿಹಾರಕ್ಕೆ ಹೋಲಿಸಿದರೆ ಬಂಗಾಳದಲ್ಲಿ ಹೆಚ್ಚಿನ ಮತದಾರರು ಮತಪಟ್ಟಿಯಲ್ಲಿ ಉಳಿಯಲು ಸಾಧ್ಯವಾಗಿದೆ. ಆದರೂ, ತಾಂತ್ರಿಕ ದೋಷದ (ಹೆಸರುಗಳಲ್ಲಿನ ಸ್ಪೆಲ್ಲಿಂಗ್ ತಪ್ಪುಗಳು) ಹೆಸರಿನಲ್ಲಿ 60 ಲಕ್ಷ ಮತದಾರರನ್ನು ‘ವಿಚಾರಣಾಧೀನ’ವೆಂದು ಗುರುತಿಸಿದೆ. ನೋಟಿಸ್‌ಗಳನ್ನು ಕಳಿಸಿದೆ” ಎಂದು ದೂರಿದರು. “ಚುನಾವಣಾ ಆಯೋಗದ ಧೋರಣೆ ಯಾವ ಮಟ್ಟಿಗಿದೆ ಎಂದರೆ, ಭಾರತಕ್ಕೆ ಹೆಮ್ಮೆ ತಂದುಕೊಟ್ಟ ನೊಬೈಲ್ ಪ್ರಶಸ್ತಿ ಪುರಷ್ಕೃತ ಅಮರ್ಥ್ಯ ಸೇನ್ ಅವರಿಗೂ ನೋಟಿಸ್ ಕಳಿಸಿದೆ. ಆಯೋಗದ ಧೋರಣೆಯ ವಿರುದ್ಧ ಸ್ವತಃ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೇ ಕಪ್ಪು ಕೋಟು ಧರಿಸಿ, ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಾಡಬೇಕಾಯಿತು” ಎಂದರು.
“ತಮಿಳುನಾಡಿನಲ್ಲಿಯೂ ಡಿಎಂಕೆ ಪ್ರಬಲವಾಗಿದೆ. ಆದರೂ, ಅಲ್ಲಿ 70 ಲಕ್ಷಕ್ಕಿಂತ ಹೆಚ್ಚು ಜನರನ್ನು ಮತಪಟ್ಟಿಯಿಂದ ಡಿಲೀಟ್ ಮಾಡಲಾಗಿದೆ. ಅಲ್ಲಿ, ಸಾಕಷ್ಟು ಮಂದಿಯ ಅರ್ಜಿಯನ್ನೇ ತುಂಬಲಾಗಿಲ್ಲ ಎಂಬುದು ಕಂಡುಬಂದಿದೆ. ಇದೆಲ್ಲದರ ನಡುವೆ, ಕರ್ನಾಟಕದಲ್ಲಿಯೂ ಮುಂದಿನ ತಿಂಗಳು ಎಸ್‌ಐಆರ್ ಆರಂಭವಾಗುತ್ತಿದೆ. ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್, ಕರ್ನಾಟಕದಲ್ಲಿ ಒಬ್ಬನೇ ಒಬ್ಬ ಅರ್ಹ ಮತದಾರನ ಹೆಸರು ಮತಪಟ್ಟಿಯಿಂದ ಡಿಲೀಟ್ ಆಗದೇ ಇರುವಂತೆ ನೋಡಿಕೊಳ್ಳಬೇಕಿದೆ. ಈ ಜವಾಬ್ದಾರಿ ನಮ್ಮೆಲರ ಮೇಲೂ ಇದೆ” ಎಂದು ತಿಳಿಸಿದರು.




