ಕರ್ನಾಟಕದಾದ್ಯಂತ ಮಹಿಳಾ ನೇತೃತ್ವದ ಸ್ವಸಹಾಯ ಗುಂಪುಗಳಿಗೆ (ಎಸ್‌ಹೆಚ್‌ಜಿ) ಡಿಜಿಟಲ್ ಮಾರ್ಕೆಟಿಂಗ್ ಮತ್ತು ಆನ್‌ಲೈನ್ ಮಾರಾಟ ಕೌಶಲ್ಯಗಳನ್ನು ಬಲಪಡಿಸಲು ರಾಷ್ಟ್ರೀಯ ಜೀವನೋಪಾಯ ಮಿಷನ್ (ಎನ್‌ಎಲ್‌ಎಂ) ಮತ್ತು ಬಹುರಾಷ್ಟ್ರೀಯ ಕಂಪನಿ ವಾಲ್‌ಮಾರ್ಟ್ ವೃದ್ಧಿ ನಡುವೆ ಮೂರು ವರ್ಷಗಳ ಸಹಯೋಗ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ಈ ಸಹಯೋಗದಡಿ ವಾಲ್‌ಮಾರ್ಟ್ ವೃದ್ಧಿ—ತನ್ನ ಕಾರ್ಯಕ್ರಮ ಪಾಲುದಾರ ಐಡಿಯಾಸ್ ಟು ಇಂಪ್ಯಾಕ್ಟ್ ಫೌಂಡೇಶನ್ ಮೂಲಕ—ಎಸ್‌ಹೆಚ್‌ಜಿ ಗಳಿಗೆ ಉಚಿತ ಡಿಜಿಟಲ್ ತರಬೇತಿ, ವ್ಯಾಪಾರ ಸಾಧನಗಳು ಮತ್ತು ಮಾರ್ಗದರ್ಶನ ಒದಗಿಸಲಿದೆ. ಇದರಿಂದ ರಾಜ್ಯದ 5,000ಕ್ಕೂ ಹೆಚ್ಚು ಎಸ್‌ಹೆಚ್‌ಜಿಗಳು ತಮ್ಮ ಉತ್ಪನ್ನಗಳನ್ನು ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಬೆಳವಣಿಗೆ ಸಾಧಿಸಲಿವೆ.
ಇದುವರೆಗೆ ಎಸ್‌ಹೆಚ್‌ಜಿಗಳ ಮಾರಾಟ ಸರ್ಕಾರ ಆಯೋಜಿಸುವ ಮೇಳಗಳಿಗೆ ಮಾತ್ರ ಸೀಮಿತವಾಗಿತ್ತು. ಈಗ ವಾಲ್‌ಮಾರ್ಟ್ ವೃದ್ಧಿ ಸಹಕಾರದಿಂದ ಡಿಜಿಟಲ್ ಸಾಕ್ಷರತೆ, ಇ-ಕಾಮರ್ಸ್ ಮತ್ತು ಮಾರ್ಕೆಟಿಂಗ್ ತರಬೇತಿ ಪಡೆದು ಫ್ಲಿಪ್‌ಕಾರ್ಟ್ ಮೂಲಕ ನೇರ ಮಾರಾಟ ಮಾಡಬಹುದು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಅಲೆಮಾರಿಗಳ ಛಲಕ್ಕೊಂದು ಸಲಾಂ; ಮಾತು ತಪ್ಪದಿರಲಿ ಸರ್ಕಾರ
ಕೌಶಲ್ಯಾಭಿವೃದ್ಧಿ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಆರ್. ಪಾಟೀಲ್ ಮತ್ತು ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಮುಂದಾಳತ್ವದಲ್ಲಿ ಮಂಗಳವಾರ ಬೆಂಗಳೂರಿನಲ್ಲಿ ಎನ್‌ಎಲ್‌ಎಂ ನಿರ್ದೇಶಕ ಆರ್. ಸ್ನೇಹಲ್, ವಾಲ್‌ಮಾರ್ಟ್ ವೃದ್ಧಿ ಪರವಾಗಿ ಪರೂಲ್ ಸೋನಿ ಮತ್ತು ಸಂತೋಷ್ ವಾಘ್ ಒಪ್ಪಂದಕ್ಕೆ ಸಹಿ ಹಾಕಿದರು.
“ಈ ಉಪಕ್ರಮ ಎಸ್‌ಹೆಚ್‌ಜಿ ವ್ಯವಸ್ಥೆಯನ್ನು ಪರಿವರ್ತಿಸುವ ಸಾಮರ್ಥ್ಯ ಹೊಂದಿದೆ. ಸಾವಿರಾರು ಮಹಿಳೆಯರಿಗೆ ಹೊಸ ಮಾರುಕಟ್ಟೆ ಮತ್ತು ಉತ್ತಮ ಆದಾಯ ಒದಗಿಸಲಿದೆ. ಡಿಜಿಟಲ್ ಮಾರ್ಕೆಟಿಂಗ್ ಕೊರತೆ ದೂರಾಗಲಿದೆ,” ಎಂದು ಡಾ. ಶರಣಪ್ರಕಾಶ್ ಆರ್. ಪಾಟೀಲ್ ಹೇಳಿದರು.
“ಕರ್ನಾಟಕದ ಎಸ್‌ಹೆಚ್‌ಜಿ ಉತ್ಪನ್ನಗಳಿಗೆ ಜಾಗತಿಕ ಗೋಚರತೆ ದೊರೆಯಲಿದೆ. ವರ್ಷಕ್ಕೆ ಎರಡು ಬಾರಿ ಮಾತ್ರ ಮಾರಾಟವಾಗುತ್ತಿತ್ತು; ಈಗ ವರ್ಷಪೂರ್ತಿ ಮಾರಾಟ ಸಾಧ್ಯ. ಸ್ಥಳೀಯ ಪ್ರತಿಭೆಗೆ ವಾಲ್‌ಮಾರ್ಟ್ ವೃದ್ಧಿ ತಜ್ಞತೆ ಬೇಕಾಗಿತ್ತು,” ಎಂದು ಡಾ. ಶಾಲಿನಿ ರಜನೀಶ್ ತಿಳಿಸಿದರು.
ಮುಖ್ಯ ಕಾರ್ಯದರ್ಶಿಯವರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೆಚ್ಚು ಜನ ಸಂಚಾರದ ಸ್ಥಳದಲ್ಲಿ ವಿಶೇಷ ಎಸ್‌ಹೆಚ್‌ಜಿ ಉತ್ಪನ್ನ ಕೇಂದ್ರ ಸ್ಥಾಪನೆ ಯೋಜನೆ ಪ್ರಕಟಿಸಿದರು.





