ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವ ಹಿನ್ನೆಲೆ ಕರಾವಳಿ ರಾಜ್ಯಗಳು ಮತ್ತು ಕರ್ನಾಟಕದಲ್ಲಿ ಭಾರೀ ಮಳೆಯಾಗಲಿದೆ. ರಾಜ್ಯದ 11 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಯೆಲ್ಲೋ ಅಲರ್ಟ್ ಘೋಷಿಸಿದೆ.
ರಾಜ್ಯದ ದಕ್ಷಿಣ ಒಳನಾಡು, ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ಮಳೆಯಾಗಲಿದೆ ಎಂದು ಹೇಳಿದೆ. ಚಾಮರಾಜನಗರ, ರಾಮನಗರ, ಮಂಡ್ಯ, ಮೈಸೂರು, ಕೊಡಗು, ಹಾಸನ, ಚಿಕ್ಕಮಗಳೂರು, ವಿಜಯಪುರ, ಬೀದರ್, ಕಲಬುರಗಿ, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದೆ.
ಮಂಗಳವಾರ ಕೂಡ ಕೊಡಗು ಮತ್ತು ವಿಜಯಪುರ ಸೇರಿದಂತೆ ಹಲವು ಭಾಗಗಳಲ್ಲಿ ಮಳೆಯಾಗಿದೆ. ವಿಜಯಪುರ ಜಿಲ್ಲೆಯ ತಿಕೋಟಾ ಹಾಗೂ ಚಡಚಣ ತಾಲೂಕುಗಳಲ್ಲಿ ಬಿರುಗಾಳಿ ಸಹಿತ ಮಳೆಯಾಗಿದೆ. ಅಕಾಲಿಕ ಮಳೆಯಿಂದಾಗಿ ದ್ರಾಕ್ಷಿ ಬೆಳೆಗಳಿಗೆ ಹಾನಿಯಾಗಿದೆ ಎಂಧು ವರದಿಯಾಗಿದೆ.
ಇನ್ನು, ಉತ್ತರ ಕರ್ನಾಟಕ ಭಾಗದ ಕೆಲವು ಜಿಲ್ಲಗಳಲ್ಲಿ ತಾಪಮಾನವೂ ಹೆಚ್ಚಾಗಿದೆ. ಮಾರ್ಚ್ ತಿಂಗಳಿನಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ 45 ಡಿಗ್ರಿ ಸೆಲ್ಸಿಯಸ್‌ವರೆಗೆ ತಾಪಮಾನ ಏರಿಕೆಯಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿಯೂ ತಾಪಮಾನವು 40 ಡಿಗ್ರಿವರೆಗೆ ಹೆಚ್ಚಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.




