ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಮಾರ್ಚ್ 6) 2026-27ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದು, ವಿವಿಧ ಇಲಾಖೆಗಳಿಗೆ ಒಟ್ಟಾರೆಯಾಗಿ 4,48,004 ಕೋಟಿ ರೂಪಾಯಿಯ ಬಜೆಟ್ ಹಂಚಿಕೆ ಮಾಡಲಾಗಿದೆ.
ಅರಣ್ಯ ಇಲಾಖೆಯಲ್ಲಿನ ವಿವಿಧ ವೃಂದಗಳಲ್ಲಿನ 2,000 ಹುದ್ದೆಗಳನ್ನು 2026-27ನೇ ಆರ್ಥಿಕ ವರ್ಷದಲ್ಲಿ ಭರ್ತಿ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಹಾಗೆಯೇ ವೃಕ್ಷಮಾತೆ ʻಸಾಲುಮರದ ತಿಮ್ಮಕ್ಕʼ ಅವರ ಸ್ಮರಣಾರ್ಥ ಹುಲಿಕಲ್-ಕುದೂರು ಹತ್ತಿರ ಸ್ಮಾರಕವನ್ನು ನಿರ್ಮಿಸಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ರಾಜ್ಯ ಬಜೆಟ್ | ಯಾವ ವಲಯಕ್ಕೆ ಎಷ್ಟು ಅನುದಾನ?
ಇನ್ನು “ಮಾನವ-ವನ್ಯ ಪ್ರಾಣಿ ಸಂಘರ್ಷ ನಿವಾರಣೆಯು ಅತೀ ಮುಖ್ಯವಾದ ಕಾರ್ಯವಾಗಿರುವುದರಿಂದ ಕಳೆದ ಮೂರು ವರ್ಷಗಳಲ್ಲಿ ಬೆಳೆ ಹಾನಿ, ಜಾನುವಾರು ನಷ್ಟ, ಮಾನವ ಪ್ರಾಣ ಹಾನಿ ಇತ್ಯಾದಿ ಪರಿಹಾರ ನೀಡಲಾಗಿದೆ. ಹೊಸದಾಗಿ ಮೂರು ಆನೆ ಕಾರ್ಯಪಡೆಗಳು ಮತ್ತು ಒಂದು ಹೊಸ ಚಿರತೆ ಕಾರ್ಯಪಡೆಯ ರಚನೆ ಮಾಡಲಾಗಿದೆ. ಕಾರ್ಯಪಡೆಗಳಿಗಾಗಿ ಹೊಸದಾಗಿ 358 ಹುದ್ದೆಗಳನ್ನು ಸೃಷ್ಟಿಸಲಾಗಿದೆ. ರೈಲ್ವೆ ಬ್ಯಾರಿಕೇಡ್, ಟ್ರೆಂಚಿಂಗ್, ಸೋಲಾರ್ ಫೆನ್ಸಿಂಗ್ ಇತರೆ ರಕ್ಷಣಾ ಕಾರ್ಯ ಮಾಡಲಾಗಿದೆ. ಇದಕ್ಕಾಗಿ 1,044 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ” ಎಂದು ಸಿಎಂ ಹೇಳಿದ್ದಾರೆ.
ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ
- ಮಾನವ–ವನ್ಯಪ್ರಾಣಿ ಸಂಘರ್ಷವನ್ನು ಕಡಿಮೆ ಮಾಡುವ ಉದ್ದೇಶದಿಂದ ʻಕರ್ನಾಟಕ ಮಾನವ–ವನ್ಯಪ್ರಾಣಿ ಸಂಘರ್ಷ ನಿವಾರಣಾ ಕಾರ್ಯತಂತ್ರ ಯೋಜನೆʼಯನ್ನು ಅನುಷ್ಠಾನಗೊಳಿಸಲು ಮುಂದಿನ ಐದು ವರ್ಷದಲ್ಲಿ 1,500 ಕೋಟಿ ರೂ.ಗಳ ವೆಚ್ಚದಲ್ಲಿ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗುವುದು. ಇದಕ್ಕಾಗಿ ಪ್ರಸಕ್ತ ಸಾಲಿನಲ್ಲಿ 269 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ.
- ಉದ್ಯಾನ ನಗರಿ ಬೆಂಗಳೂರಿನ ಹೆಸರಘಟ್ಟ ಹುಲ್ಲುಗಾವಲಿನ ಒಟ್ಟು 5,676 ಎಕರೆ ವಿಸ್ತೀರ್ಣದ ಪ್ರದೇಶವನ್ನು ʻಗ್ರೇಟರ್ ಹೆಸರಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲುʼ ಎಂದು ಘೋಷಿಸಿದ್ದು, ಈ ಪ್ರದೇಶದ ಆವಾಸಸ್ಥಾನ ಸಂರಕ್ಷಣೆ ಮತ್ತು ಅಭಿವೃದ್ಧಿಯನ್ನು ಕೈಗೊಳ್ಳಲಾಗುವುದು.
- ಬೆಂಗಳೂರು ಹೊರವಲಯದ ವಸತಿ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುವ ಚಿರತೆಗಳನ್ನು ಸೆರೆಹಿಡಿಯಲ್ಪಟ್ಟ ಸಂದರ್ಭಗಳಲ್ಲಿ ಅವುಗಳ ಪುನರ್ವಸತಿಗಾಗಿ ಬನ್ನೇರುಘಟ್ಟದಲ್ಲಿ ಐದು ಕೋಟಿ ರೂ.ಗಳ ವೆಚ್ಚದಲ್ಲಿ ಚಿರತೆ ಪುನರ್ವಸತಿ ಕೇಂದ್ರವನ್ನು ಸ್ಥಾಪಿಸಲಾಗುವುದು.
- ಮೈಸೂರು ಮೃಗಾಲಯ ಹಾಗೂ ಬನ್ನೇರುಘಟ್ಟ ಉದ್ಯಾನವನದ ಕಡೆಗೆ ಪ್ರವಾಸಿಗರನ್ನು ಆಕರ್ಷಿಸಲು ಹಾಗೂ ಪ್ರವಾಸಿಗರ ಅನುಕೂಲತೆಗಾಗಿ PPP ಮಾದರಿಯಲ್ಲಿ ಪ್ರಕೃತಿ ನಿರೂಪಣಾ ಕೇಂದ್ರವನ್ನು ಸ್ಥಾಪನೆ ಮಾಡಲಾಗುವುದು.
- ರಾಷ್ಟ್ರೀಯ ಅರಣ್ಯ ನೀತಿಯಂತೆ ರಾಜ್ಯದ ಶೇ.10 ಕ್ಕಿಂತ ಕಡಿಮೆ ಅರಣ್ಯ ಹೊದಿಕೆ ಹೊಂದಿರುವ ಕಲ್ಯಾಣ ಕರ್ನಾಟಕ ಜಿಲ್ಲೆಗಳು ಸೇರಿದಂತೆ ವಿವಿಧ ಜಿಲ್ಲೆಗಳಿಗೆ ವಿಶೇಷ ಆದ್ಯತೆ ನೀಡಿ, 75,000 ಹೆಕ್ಟೇರ್ ಪ್ರದೇಶದಲ್ಲಿ ಅರಣ್ಯೀಕರಣ ಕಾರ್ಯಗಳನ್ನು ಕೈಗೊಳ್ಳಲಾಗುವುದು. ಇದಕ್ಕಾಗಿ KKRDB ವತಿಯಿಂದ 50 ಕೋಟಿ ರೂ. ಸೇರಿದಂತೆ ಒಟ್ಟು 150 ಕೋಟಿ ರೂ. ಅನುದಾನವನ್ನು ಮೀಸಲಿರಿಸಲಾಗುವುದು.
- ಬೆಂಗಳೂರು ಉತ್ತರ ತಾಲ್ಲೂಕಿನ ಮಾದಪ್ಪನಹಳ್ಳಿಯ 153 ಎಕರೆ ಪ್ರದೇಶವನ್ನು ಶ್ವಾಸತಾಣವನ್ನಾಗಿ ಪರಿವರ್ತಿಸಿ, ʻಸಾಂಸ್ಕೃತಿಕ ನಾಯಕ ಬಸವಣ್ಣ ಜೈವಿಕ ವೈವಿಧ್ಯ ಉದ್ಯಾನʼವನ್ನು ನಿರ್ಮಿಸಲಾಗುವುದು.
- ವಾಯು ಗುಣಮಟ್ಟ ಮಾಪನ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ 15 ಹೊಸ ನಿರಂತರ ಪರಿವೇಷ್ಠಿಕ ವಾಯು ಗುಣಮಟ್ಟ ಮಾಪನ ಕೇಂದ್ರಗಳನ್ನು ಸ್ಥಾಪಿಸಲಾಗುವುದು.





