ಮಹಿಳಾ ಅತಿಥಿ ಉಪನ್ಯಾಸಕರಿಗೆ 90 ದಿನಗಳ (ಮೂರು ತಿಂಗಳು) ಮಾತೃತ್ವ ರಜೆಯನ್ನು ಕೊಡುವ ಘೋಷಣೆ ಮಾಡಲಾಗಿದೆ. ಇದು ಉತ್ತಮ ನಿರ್ಧಾರ. ಆದರೆ ಆ ರಜೆ ವೇತನ ಸಹಿತವೋ ಅಥವಾ ವೇತನ ರಹಿತವೋ ಎಂಬ ಸ್ಪಷ್ಟನೆ ಇಲ್ಲ ಎಂದ ಮಹಿಳಾಪರ ಹೋರಾಟಗಾರರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು (ಮಾರ್ಚ್ 6) 2026-27ನೇ ಸಾಲಿನ ಬಜೆಟ್ ಅನ್ನು ಮಂಡಿಸಿದ್ದಾರೆ. 2025-26ನೇ ಸಾಲಿನ ಬಜೆಟ್ ಗಾತ್ರ 3,95,307 ಕೋಟಿ ರೂ.ಗಳಷ್ಟಿದ್ದು ಈ ಬಾರಿಯ ಬಜೆಟ್ ಗಾತ್ರ 4,48,004 ಕೋಟಿ ರೂಪಾಯಿ ಆಗಿದೆ. ಕಳೆದ ಬಜೆಟ್‌ಗೆ ಹೋಲಿಸಿದರೆ ಈ ಹಣಕಾಸು ವರ್ಷದಲ್ಲಿ ಬಜೆಟ್ ಗಾತ್ರ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ.
ಬಜೆಟ್ ಹಂಚಿಕೆಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಅಧಿಕ ಒತ್ತು ನೀಡಲಾಗಿದ್ದು, ಉಳಿದೆಲ್ಲ ಕ್ಷೇತ್ರಗಳಿಗಿಂತ ಅಧಿಕ ನಿಧಿಯನ್ನು ಶಿಕ್ಷಣಕ್ಕೆ ಮೀಸಲಿಡಲಾಗಿದೆ. ಉಳಿದಂತೆ ಗ್ಯಾರಂಟಿ ಯೋಜನೆಗಳ ಹಂಚಿಕೆ ಭಾಗವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಅಧಿಕ ಅನುದಾನ ಹಂಚಿಕೆಯಾಗಿದೆ. ಗ್ಯಾರಂಟಿ ಯೋಜನೆಗಳು ಜಾರಿಯಾದಾಗಿನಿಂದ, ಫೆಬ್ರವರಿ 2026ರವರೆಗೆ ಒಟ್ಟು ₹1,21,598 ಕೋಟಿಗಳನ್ನು ವೆಚ್ಚ ಮಾಡಲಾಗಿದ್ದು ಈ ಹಣಕಾಸು ವರ್ಷದಲ್ಲಿ ಈ ಬಜೆಟ್‌ನಲ್ಲಿ ₹51,599 ಕೋಟಿ ಅನುದಾನವನ್ನು ಮೀಸಲಿಟ್ಟಿದೆ. ಗೃಹಲಕ್ಷ್ಮಿ ಯೋಜನೆಗಾಗಿ ಅತಿ ಹೆಚ್ಚು ಅಂದರೆ ₹28,608 ಕೋಟಿ ಮೀಸಲಿಡಲಾಗಿದೆ.
ಇದನ್ನು ಓದಿದ್ದೀರಾ? ಅಂಕಿ-ಅಂಶಗಳಾಚೆಗಿನ ಅಂತಃಕರಣ: ಸಾಹಿತ್ಯದ ಆಶಯದಲ್ಲಿ 2026-27ರ ಆಯವ್ಯಯ
ಬಜೆಟ್ ಬಗ್ಗೆ ಈ ದಿನ ಡಾಟ್ ಕಾಮ್‌ಗೆ ಪ್ರತಿಕ್ರಿಯಿಸಿದ ಲಿಂಗತ್ವ ಅಲ್ಪಸಂಖ್ಯಾತರ ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ, “ಲಿಂಗತ್ವ ಅಲ್ಪಸಂಖ್ಯಾತ ಸಮುದಾಯಕ್ಕೆ ಬೇಕಾಗಿದ್ದು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಸಾಂಸ್ಕೃತಿಕ, ಸಾಂಪ್ರದಾಯಿಕ ಹಕ್ಕುಗಳ ರಕ್ಷಣೆ ಹಾಗೂ ಲಿಂಗತ್ವ ಅಲ್ಪಸಂಖ್ಯಾತರ ಅಭಿವೃದ್ಧಿ ಮಂಡಳಿಯೇ ಹೊರತು 45 ಸಾವಿರ ರೂಪಾಯಿಗಳಲ್ಲ. ಅತಿ ಶೋಷಿತ ಮತ್ತು ಹಿಂದುಳಿದ ವರ್ಗದ ಸಮುದಾಯದವರಾದ ನಮ್ಮನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದು ಹಾಗೂ ಪ್ರಸ್ತುತ ಕಾಲಮಾನಕ್ಕೆ ಬೇಕಾಗಿರುವುದನ್ನು ನೀಡದೆ ಇನ್ನಷ್ಟು ಅಂಚಿಗೆ ತಳ್ಳಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿರು.

ಇನ್ನು ಈ ದಿನ ಡಾಟ್ ಕಾಮ್‌ಗೆ ಪ್ರತಿಕ್ರಿಯಿಸಿದ ಮಹಿಳಾಪರ ಹೋರಾಟಗಾರ್ತಿ ಕೆ ಎಸ್ ವಿಮಲಾ, “ಈ ಬಜೆಟ್ ಊರೆಲ್ಲ ಸುತ್ತಿಕೊಂಡು ಬಂದಿದೆ. ಯಾವ ಕ್ಷೇತ್ರಕ್ಕೆ ಎಷ್ಟು ಬೇಕಾಗಿದೆಯೋ ಅಷ್ಟು ಅನುದಾನ ನೀಡಲಾಗಿಲ್ಲ. ಯಾವಾಗಲೂ ಹೇಳುವಂತೆ ಸದಾಶಯದ ಬಜೆಟ್. ಆದರೆ ಗ್ಯಾರಂಟಿ ಯೋಜನೆಗೆ ₹1,21,598 ಕೋಟಿ ಖರ್ಚಾಗಿದೆ. ಆದರೆ ಈ ಬಾರಿ ಅರ್ಧಕ್ಕಿಂತ ಕಡಿಮೆ ಹಣವನ್ನು ಮೀಸಲಿಡಲಾಗಿದೆ. ಕಳೆದ ಬಾರಿಯ ನಿಧಿ ಉಳಿದಿದೆಯೇ ಎಂಬ ಬಗ್ಗೆ ಆಳವಾದ ಅಧ್ಯಯನ ಮಾಡಬೇಕಾಗಿದೆ” ಎಂದು ಹೇಳಿದರು.
“ಕಳೆದ ಬಾರಿ ಎಸ್‌ಸಿ/ಎಸ್‌ಟಿ ಕಲ್ಯಾಟಕ್ಕಾಗಿ ಮೀಸಲಿಟ್ಟ ವಿಶೇಷ ಘಟಕ ಯೋಜನೆಯ ಹಣವನ್ನು ಗ್ಯಾರಂಟಿ ಯೋಜನೆಗೆ ವರ್ಗಾವಣೆ ಮಾಡಿದೆ ಎಂಬ ತಕರಾರು ಇತ್ತು. ಈ ರೀತಿ ಮಾಡಬಾರದು ಎಂದು ದಲಿತ ಪರವಾದವರು ಧ್ವನಿ ಎತ್ತಿದ್ದರು. ಕಳೆದ ಬಾರಿ ಗ್ಯಾರಂಟಿ ಯೋಜನೆಗೆ ₹1,21,598 ಕೋಟಿ ಖರ್ಚಾಗಿರುವಾಗ ಈ ವರ್ಷವೂ ಅಷ್ಟೇ ಬೇಕಾಗುತ್ತದೆ ಎಂಬ ಅಂದಾಜು ಇರಬೇಕು ಅಲ್ಲವೇ” ಎಂದು ಪ್ರಶ್ನಿಸಿದರು.
“ಗ್ಯಾರಂಟಿ ಯೋಜನೆಗಳ ಸಂಪನ್ಮೂಲ ಕ್ರೋಢೀಕರಣ ಎಲ್ಲಿಂದ ಮಾಡಲಾಗುತ್ತದೆ ಎಂಬುದನ್ನೂ ತಿಳಿಸಬೇಕು. ಇತ್ತೀಚೆಗೆ ಅರ್ಹರಿಗೆ ಮಾತ್ರ ಗ್ಯಾರಂಟಿ ಯೋಜನೆ ಎನ್ನಲು ಆರಂಭಿಸಿದ್ದಾರೆ. ಜತೆಗೆ ಶಕ್ತಿ ಯೋಜನೆಗೆ ಸ್ಮಾರ್ಟ್ ಕಾರ್ಡ್ ಮಾಡುತ್ತೇವೆ ಎಂದು ಹೇಳಲು ಆರಂಭಿಸಿದ್ದಾರೆ. ಇಂತಹ ಘೋಷಣೆಗಳ ಮೂಲಕ ಫಲಾನುಭವಿಗಳ ಸಂಖ್ಯೆಯನ್ನು ಕಡಿಮೆ ಮಾಡುವ ಆಲೋಚನೆ ಏನಾದರೂ ಇದೆಯಾ? ಅದರ ಭಾಗವಾಗಿ ಕಡಿಮೆ ಹಣವನ್ನು ಮೀಸಲಿಡಲಾಗಿದೆಯೇ ಎಂಬ ಪ್ರಶ್ನೆಯೂ ಇದೆ” ಎಂದು ಅನುಮಾನ ವ್ಯಕ್ತಪಡಿಸಿದರು.

“ಅಷ್ಟಕ್ಕೂ ₹1,21,598 ಕೋಟಿ ದೊಡ್ಡ ಮೊತ್ತವೇನಲ್ಲ. ಗ್ಯಾರಂಟಿಗೆ ನೀಡಿದ ಹಣ ನಮ್ಮ ಆರ್ಥಿಕತೆಗೆಯೇ ಸಹಕಾರಿ ಎಂಬುದು ಪ್ರಜ್ಞಾವಂತ ಆರ್ಥಿಕ ತಜ್ಞರುಗಳು ಹೇಳುವ ಮಾತು. ನಮ್ಮ ರಾಜ್ಯದ ವಿರೋಧ ಪಕ್ಷದವರು ಮಾತ್ರವೇ ತುಂಬ ಸಡಿಲ ನಾಲಗೆಯಲ್ಲಿ ಮಾತನಾಡಬಹುದೇ ಹೊರತು ವಾಸ್ತವದಲ್ಲಿ ಈ ತರಹದ ಯೋಜನೆಗಳ ಹಣ ವಾಪಸ್ ಆರ್ಥಿಕತೆಗೆ ಬರುವಂತದ್ದು. ಜನರ ಖರೀದಿ ದರ ಹೆಚ್ಚಾಗುತ್ತದೆ” ಎಂದು ತಿಳಿಸಿದರು.
ಪ್ರವಾಸೋದ್ಯಮಕ್ಕೆ ಬಜೆಟ್ ಹಂಚಿಕೆ ಬಗ್ಗೆಯೂ ಈ ದಿನ ಡಾಟ್ ಕಾಮ್ ಜತೆ ಮಾತನಾಡಿದ ಕೆ ಎಸ್ ವಿಮಲಾ, “ಕರಾವಳಿ ಜಿಲ್ಲೆಗಳ ಪ್ರವಾಸೋದ್ಯಮವನ್ನು ಉತ್ತೇಜಿಸಲು ‘ಸಮಗ್ರ ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆ’ ರೂಪಿಸುತ್ತೇವೆ ಎಂದು ಸರ್ಕಾರ ಹೇಳಿದೆ. ಇದು ಸಂತೋಷ, ಪ್ರವಾಸೋದ್ಯಮ ಅಭಿವೃದ್ಧಿಯಾಗಬೇಕು. ಆದರೆ ಈಗಾಗಲೇ ಕರಾವಳಿ ತೀರದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಮಾಡಲು ಹೋಗಿ ಸಮುದ್ರ ತೀರದಲ್ಲಿ ಬೇರೆ ಬೇರೆ ಜೀವನೋಪಾಯಗಳನ್ನು ಕಟ್ಟಿಕೊಂಡಿರುವವರಿಗೆ ತೊಂದರೆ ಆಗಿದೆ ಎಂಬ ತಕರಾರು ಇದೆ. ಮತ್ತೆ ಅದೇ ಮಾದರಿಯನ್ನು ಮುಂದುವರೆಸಿದ್ದಾರೆ. ಜತೆಗೆ ಆರೋಗ್ಯ, ಶಿಕ್ಷಣ ಎಲ್ಲೇ ಆದರೂ ಸರ್ಕಾರಿ-ಖಾಸಗಿ ಸಹಭಾಗಿತ್ವ ಅನ್ನುವುದನ್ನೇ ಪ್ರಸ್ತಾಪಿಸುತ್ತಿದ್ದಾರೆ. ಆದರೆ ಇದರಿಂದ ಸರ್ಕಾರ ಖರ್ಚು ಮಾಡಿ, ಖಾಸಗಿಯವರು ಲಾಭ ಪಡೆಯುವುದು ಎಂಬುದು ಈಗಾಗಲೇ ಅನುಭವಕ್ಕೆ ಬಂದಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಮನರೇಗಾವನ್ನು ತೆಗೆದು ಕೇಂದ್ರ ಸರ್ಕಾರ ವಿಜಿ ರಾಮ್ ಜಿ ಅನ್ನು ತಂದಿದೆ. ಅದರ ಪ್ರಕಾರ ರಾಜ್ಯ ಸರ್ಕಾರ ಶೇ.40ರಷ್ಟು ಕೊಡಬೇಕಾಗಿದೆ. ಹಾಗಿದ್ದರೂ ಕಳೆದ ವರ್ಷಕ್ಕಿಂತ ಕಡಿಮೆ ಬಜೆಟ್ ಅನ್ನು ಇಡಲಾಗಿದೆ. ವಿಜಿ ರಾಮ್ ಜಿ ಅನ್ನು ವಿರೋಧಿಸಿ ಮನರೇಗಾ ಬಲಪಡಿಸಲು ವಿಶೇಷ ಅಧಿವೇಶನವನ್ನು ಕರೆದ ಆಶಯ ಬಜೆಟ್‌ನಲ್ಲಿ ಕಣ್ಣಿಗೆ ಕಾಣುತ್ತಿಲ್ಲ” ಎಂದು ಹೇಳಿದರು.
“ಇದರ ಜತೆಗೆ ಸಕಾರಾತ್ಮಕ ಅಂಶಗಳೂ ಇವೆ. ಮಹಿಳಾ ಅತಿಥಿ ಉಪನ್ಯಾಸಕರಿಗೆ 90 ದಿನಗಳ (ಮೂರು ತಿಂಗಳು) ಮಾತೃತ್ವ ರಜೆಯನ್ನು ಕೊಡುವ ಘೋಷಣೆ ಮಾಡಲಾಗಿದೆ. ಇದು ಉತ್ತಮ ನಿರ್ಧಾರ. ಆದರೆ ಆ ರಜೆ ವೇತನ ಸಹಿತವೋ ಅಥವಾ ವೇತನ ರಹಿತವೋ ಎಂಬ ಸ್ಪಷ್ಟನೆ ಇಲ್ಲ. ಹಾಗೆಯೇ ಅತಿಥಿ ಉಪನ್ಯಾಸಕರಿಗೆ ರಜೆ ನೀಡಿದಾಗ ಪರ್ಯಾಯ ವ್ಯವಸ್ಥೆ ಏನು ಮಾಡುತ್ತಾರೆ? ಎಂಬ ಮೊದಲಾದ ಸ್ಪಷ್ಟೀಕರಣ ನೀಡಲೇಬೇಕಾದ ವಿಷಯಗಳಿವೆ” ಎಂದರು.
“ಬಜೆಟ್ ಸಾಲದಿಂದ ಕೂಡಿದೆ. ಈಗಾಗಲೇ ಸಾಲದ ಹೊರೆ ಹೆಚ್ಚಿದೆ. ಹೀಗಿರುವಾಗ ಸಂಪನ್ಮೂಲ ಕ್ರೋಢೀಕರಣಕ್ಕೆ ಏನು ಮಾಡುತ್ತಾರೆ ಎನ್ನುವುದು ಕೂಡಾ ಮುಖ್ಯ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಕೊಟ್ಟಿರುವುದೂ ಕಡಿಮೆಯಾಗಿದೆ. ಒಟ್ಟಾರೆಯಾಗಿ ಸದಾಶಯದ ಬಜೆಟ್. ಆದರೆ ಜಾರಿಯ ಹಂತದಲ್ಲಿ ಏನಾಗುತ್ತದೆ ಎಂಬುದು ತುಂಬ ಮುಖ್ಯ. ಹಲವು ಕಡೆ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಗಳು, ಸೆಂಟರ್‌ಗಳನ್ನು ಘೋಷಣೆ ಮಾಡಿದ್ದಾರೆ. ಅದು ಸ್ಥಾಪನೆಯಾಗಲಿದೆಯೇ ಎಂಬುದು 100 ಮಿಲಿಯನ್ ಡಾಲರ್ ಪ್ರಶ್ನೆ. ಇದೂ ಖಾಸಗಿ ಸಹಭಾಗಿತ್ವದಲ್ಲಿ ಆಗಬಾರದು ಎಂಬುದು ನಮ್ಮ ಆಗ್ರಹ. ಸರ್ಕಾರ ಈ ನಿಟ್ಟಿನಲ್ಲಿ ಗಮನ ನೀಡಬೇಕು” ಎಂದು ಒತ್ತಾಯಿಸಿದರು.
ಇನ್ನು ಬಜೆಟ್ ಬಗ್ಗೆ ಈ ದಿನ ಡಾಟ್ ಕಾಮ್‌ಗೆ ಪ್ರತಿಕ್ರಿಯಿಸಿದ ಶಿಕ್ಷಣ ತಜ್ಞ ಮತ್ತು ಚಿಂತಕ ಬಿ. ಶ್ರೀಪಾದ ಭಟ್, “ಬಜೆಟ್ ವಿಶೇಷವಾಗಿಲ್ಲ, ಹೊಸ ಕನಸುಗಳೂ ಇಲ್ಲ, ಹೊಸ ಅಭಿವೃದ್ಧಿ ಯೋಜನೆಗಳೂ ಇಲ್ಲ. ಮಾಮೂಲಿಯಾಗಿ, ಸಾದಾರಣ ಬಜೆಟ್ ಅಷ್ಟೇ. ಕಳೆದ ವರ್ಷದ ಬಜೆಟ್ ಗಾತ್ರಕ್ಕಿಂತ ಈ ಬಾರಿಯ ಬಜೆಟ್ ಗಾತ್ರ ಅಧಿಕವಾಗಿದೆ. ಆದರೆ ನಾವು ಪ್ರತಿ ಬಜೆಟ್ ಸಂದರ್ಭದಲ್ಲಿಯೂ ಕೇಳಬೇಕಾಗಿರುವುದು ಪರಿಷ್ಕೃತ ಅಂದಾಜು (Revised estimate). ಕಳೆದ ಬಜೆಟ್‌ನಲ್ಲಿ ಘೋಷಿಸಿದ ಯೋಜನೆಗಳು ಈ ಜಾರಿಯಾಗಿದೆಯೇ ಎಂಬುದು ಮುಖ್ಯ. ರೋಹಿತ್ ವೇಮುಲಾ ಕಾಯ್ದೆ ಜಾರಿಗೊಳಿಸುವುದಾಗಿ ಹೇಳಿರುವುದು ಸ್ವಾಗತಾರ್ಹ” ಎಂದು ಹೇಳಿದರು.

“ರಾಜಸ್ವ ಸ್ವೀಕೃತಿ (Revenue Receipts) ನಲ್ಲಿ ಸಾಲವೂ ಸೇರುತ್ತದೆ. ಇವರ ಪ್ರಕಾರ ಸಾಲವೂ ಕಂದಾಯ ಆಗಿದೆ. ಇದು ವಿಚಿತ್ರ. ಈ ಬಾರಿ ಬಜೆಟ್‌ನಲ್ಲಿ 3.15 ಲಕ್ಷ ಕೋಟಿ ರೂ. ಎಂದು ಹೇಳಿದ್ದಾರೆ. ಅದರಲ್ಲಿ ಸಾಲವೇ 1.32 ಲಕ್ಷ ಕೋಟಿ ರೂ. ಇದೆ. ಇದು ವೈರುಧ್ಯ. ಸಾಲ ಯಾವತ್ತೂ ರೆವೆನ್ಯೂ ಆಗಲ್ಲ. ಆದರೆ ಇಲ್ಲಿ ರೆವೆನ್ಯೂ ಎಂದು ತೋರಿಸಲಾಗುತ್ತಿದೆ. ಬಂಡವಾಳ ವೆಚ್ಚ 74,682 ಕೋಟಿ ಎಂದು ತೋರಿಸಿದ್ದಾರೆ. ಅಂದರೆ ರಸ್ತೆ, ಕಾಮಗಾರಿ, ಮೂಲಭೂತ ಸೌಕರ್ಯ ಮೊದಲಾದವು. ಇವೆಲ್ಲವೂ ಯಾವುದೇ ರೀತಿಯಲ್ಲಿ ಅಭಿವೃದ್ಧಿಗೆ ಲಾಭವಿಲ್ಲ. ಜನ ಸಾಮಾನ್ಯರ ಬದುಕಿಗೂ ಖರ್ಚಾಗಲ್ಲ. ಉದ್ಯೋಗ ಸೃಷ್ಟಿ ಮಾಡಲಾಗುತ್ತದೆ ಎಂದು ಹೇಳುತ್ತಾರೆ. ಆದರೆ ಈವರೆಗೂ ಉದ್ಯೋಗ ಸೃಷ್ಟಿಯಾಗಿರುವುದು ನಾವು ನೋಡಿಲ್ಲ. ಹೀಗಾಗಿ ಈ ಬಜೆಟ್‌ನಿಂದ ಯಾವುದೇ ರೀತಿಯ ನಿರೀಕ್ಷೆ ಮಾಡುವುದರಲ್ಲಿ ಅರ್ಥವಿಲ್ಲ. ಸ್ವತಃ ಸಿದ್ಧರಾಮಯ್ಯ ಅವರಿಗೂ ನಿರೀಕ್ಷೆ ಇದ್ದಂತೆ ಕಾಣಿಸುತ್ತಿಲ್ಲ” ಎಂದು ಹೇಳಿದರು.
ಇನ್ನು ಕಾರ್ಮಿಕ ಮುಖಂಡೆ ಎಸ್. ವರಲಕ್ಷ್ಮಿ ಈ ದಿನ ಡಾಟ್ ಕಾಮ್ ಜತೆ ಮಾತನಾಡಿ, “ಕಾರ್ಮಿಕರ ಹಿತದೃಷ್ಟಿಯಿಂದ ನೋಡಿದರೆ ನಮಗೆ ಬಜೆಟ್ ಪೂರಕವಾಗಿಲ್ಲ. ಕಾಯಕ ಭಾಗ್ಯಗೆ ಹಣ ಮೀಸಲಿಟ್ಟಿರುವುದಾಗಿ ಹೇಳುತ್ತಾರೆ, ವಸತಿ ಶಾಲೆಗಳನ್ನು ತೆರೆಯುವುದಾಗಿ ಹೇಳುತ್ತಾರೆ. ಅವೆಲ್ಲವೂ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಹಣ. ವಿಶೇಷವಾಗಿ ಬಜೆಟ್ ಇಟ್ಟಿಲ್ಲ. ಅಸಂಘಟಿತ ಕ್ಷೇತ್ರದ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಮಂಡಳಿ ಮಾಡಿದ್ದಾರೆ. ಕಲ್ಯಾಣ ಮಂಡಳಿಗಳನ್ನು ಮಾಡಿದ್ದಾರೆ. ಆದರೆ ಅದಕ್ಕೆ ಬೇಕಾದ ನಿಧಿ ನೀಡಿಲ್ಲ. ಆ ನಿಧಿ ನೀಡಬೇಕು ಎಂಬುದು ನಮ್ಮ ಮುಖ್ಯ ಬೇಡಿಕೆ” ಎಂದು ಹೇಳಿದರು.

“ಕನಿಷ್ಠ ವೇತನವನ್ನು ನವೆಂಬರ್ ತಿಂಗಳಲ್ಲಿ ಮಂಡಳಿ ಶಿಫಾರಸು ಮಾಡಿದೆ. ಆದರೆ ಅದನ್ನು ಬಜೆಟ್‌ನಲ್ಲಿ ಘೋಷಿಸಿಲ್ಲ. ಪ್ರಮುಖವಾಗಿ ಕರ್ನಾಟಕ ಲೇಬರ್ ಕಾನ್ಫೆರೆನ್ಸ್ ಮಾಡಬೇಕು ಎಂಬುದು ನಮ್ಮ ಆಗ್ರಹ. ಅದರ ರಚನೆಯೂ ಆಗಿಲ್ಲ. ಗುತ್ತಿಗೆ ಕಾರ್ಮಿಕ ಪದ್ಧತಿಯನ್ನು ತೆಗೆದುಹಾಕುವುದಾಗಿ ಚುನಾವಣಾ ಭರವಸೆ ನೀಡಿದ್ದರು. ಆದರೆ ಅದನ್ನೂ ಮಾಡಿಲ್ಲ” ಎಂದರು.
“ಅಂಗನವಾಡಿ ಕಾರ್ಯಕರ್ತರಿಗೆ 15 ಸಾವಿರ ರೂ., ಸಹಾಯಕಿಗೆ 10 ಸಾವಿರ ರೂ., ಬಿಸಿಯೂಟ ಕಾರ್ಮಿಕರಿಗೆ 7 ಸಾವಿರ ರೂ., ಆಶಾ ಕಾರ್ಮಿಕರಿಗೆ 10 ಸಾವಿರ ರೂ.,ಗೆ ಏರಿಸುವುದಾಗಿ ಹೇಳಿದ್ದರು. ಆದರೆ ಹೋದ ಬಾರಿ ಒಂದು ಸಾವಿರ ನೀಡಿರುವುದು ಬಿಟ್ಟು ಬೇರೆ ಏನೂ ಮಾಡಿಲ್ಲ. ಆಶಾ ಕಾರ್ಯಕರ್ತರಿಗೆ ಘೋಷಣೆ ಮಾಡಿರುವುದನ್ನು ಇನ್ನೂ ಜಾರಿ ಮಾಡಿಲ್ಲ” ಎಂದು ಹೇಳಿದರು.
“ನಾವು ಸೀರೆ ನೀಡಿ ಎಂದು ಕೇಳಿಲ್ಲ, ಅದು ನಮ್ಮ ಆದ್ಯತೆಯೂ ಅಲ್ಲ. ನಾವು ಕೇಳುವುದು ಗೌರವಧನ ಹೆಚ್ಚಳ ಮಾಡಿ. ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಿ, ಅದಕ್ಕೆ ಬೇಕಾದ ಬಜೆಟ್ ನೀಡಬೇಕು ಎಂದು. ಇಎಸ್‌ಐ ಆಸ್ಪತ್ರೆಗಳು ವಿಸ್ತರಣೆಯಾಗಬೇಕೆಂದು ಹೇಳಿದ್ದೇವೆ. ಆದರೆ ಆ ತರಹದ ಯವುದೇ ಪ್ರಸ್ತಾಪ ಬಜೆಟ್‌ನಲ್ಲಿ ಆಗಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಬಜೆಟ್‌ಗೂ ಮುನ್ನ ಕಾರ್ಮಿಕರ ಸಭೆಯನ್ನೂ ನಡೆಸಿಲ್ಲ. ರೈತರು, ದಲಿತರು, ಬೇರೆ ಬೇರೆ ವಿಭಾಗಗಳ ಸಭೆಯನ್ನು ನಡೆಸಿದರು. ಆದರೆ ಕಾರ್ಮಿಕರ ಸಭೆ ನಡೆಸಿಲ್ಲ. ಕಾರ್ಮಿಕರನ್ನು ಪರಿಗಣನೆಯೇ ಮಾಡಿಲ್ಲ. ರೈತರು, ಕಾರ್ಮಿಕರು, ಮಹಿಳೆಯರು, ದಲಿತರ ಪರವಾಗಿ ಮುಂದಾಲೋಚನೆ ಇಟ್ಟುಕೊಂಡಿದ್ದೇವೆ ಎಂದು ಬರೀ ಬಾಯಿ ಮಾತಲ್ಲಿ ಹೇಳಿದ್ದಾರೆ. ಆದರೆ ಬಜೆಟ್‌ನಲ್ಲಿ ಅದು ಕಾಣಿಸುತ್ತಿಲ್ಲ. ಮಹಿಳಾ ಮತ್ತು ಮಕ್ಕಳ ಇಲಾಖೆಗೆ ಹೆಚ್ಚುವರಿ ಹಣವನ್ನು ನೀಡಿಲ್ಲ” ಎಂದರು.

ಈದಿನಕ್ಕೆ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‌ಐ) ರಾಜ್ಯಾಧ್ಯಕ್ಷೆ ಲವಿತ್ರ ವಸ್ತ್ರದ ಮಾತನಾಡಿ,”ಉದ್ಯೋಗ ಸೃಷ್ಟಿ ಮಾಡದ – ಯುವ ನೀತಿಯ ಬಗ್ಗೆ ಸ್ಪಷ್ಟ ಕಣ್ಣೋಟವಿಲ್ಲದ ಯುವಜನ ವಿರೋಧಿ ಬಜೆಟ್ ಇದಾಗಿದೆ. ರಾಜ್ಯದ ದೊಡ್ಡ ಮಾನವ ಸಂಪನ್ಮೂಲವಾಗಿರುವ ಯುವಜನರಿಗೆ ಉದ್ಯೋಗ ಸೃಷ್ಟಿಸಿ, ಉದಯೋಗದ ಭದ್ರತೆ ನೀಡದೆ ಯುವಜನರಲ್ಲಿ ನಿರಾಸೆ ಮೂಡಿಸಿದೆ. 15 ಸಾವಿರ ಬೋಧಕ ಹುದ್ದೆಗಳು ಒಳಗೊಂಡತೆ 56,432 ಹುದ್ದೆಗಳನ್ನು ಹಿಂದಿನ ವರ್ಷಗಳಲ್ಲೇ ಭರ್ತಿ ಮಾಡಬೇಕಿತ್ತು. ಈ ಬಾರಿ ಬಜೆಟ್‌ನಲ್ಲಿ ಅದನ್ನು ಸೇರಿಸಿ ಅದೇ ದೊಡ್ಡ ಸಾಧನೆಯಂತೆ ತೋರಿಸುತ್ತಿರುವುದು ಉದ್ಯೋಗದ ನಿರೀಕ್ಷೆಯಲ್ಲಿರುವ ಯುವಜನರಿಗೆ ಅಣಕಿಸುವಂತಿದೆ. ಉದ್ಯೋಗ ಸೃಷ್ಟಿಯ ಭಾಗವಾಗಿದ್ದ ಮನರೇಗಾಕ್ಕೆ ಕಳೆದ ಬಾರಿಗಿಂತ 176 ಕೋಟಿ ಕಡಿಮೆ ಬಜೆಟ್ ನೀಡಿರುವುದು ಖಂಡನೀಯ” ಎಂದು ತಿಳಿಸಿದರು.





