ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುವ ಚಳಿಗಾಲ ಅಧಿವೇಶನ ಬಗ್ಗೆ ಗಂಭೀರ ತಕರಾರು ಎತ್ತಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗುರುವಾರ ಮಾತನಾಡಿದರು.
ಇಂದಿನ ವಿಧಾನಸಭಾ ಅಧಿವೇಶನದ ಮಧ್ಯಾಹ್ನದ ಕಲಾಪದಲ್ಲಿ ಉತ್ತರ ಕರ್ನಾಟಕ ಸಮಸ್ಯೆ ವಿಷಯದ ಬಗ್ಗೆ ಯತ್ನಾಳ್ ಮಾತನಾಡಿ, “ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಾಣದ ಆಶಯವೇ ಈಡೇರಿಲ್ಲ. ಪ್ರತಿ ವರ್ಷ ಹೀಗೆ ಚರ್ಚೆ ನಡೆಸಿ, ಕೋಟಿ ಕೋಟಿ ಖರ್ಚು ಲೆಕ್ಕ ತೋರಿಸಿ ಹೋಗುತ್ತೇವೆ. ಈ ಕಾಟಾಚಾರಕ್ಕೆ ಈ ಅಧಿವೇಶನ ಬೇಕಾ” ಎಂದು ಸದನದಲ್ಲೇ ಪ್ರಶ್ನಿಸಿದರು.
ಉತ್ತರ ಕರ್ನಾಟಕಕ್ಕೆ ಸಂಬಂಧಿಸಿದ ಇಲಾಖೆಗಳ ಸ್ಥಳಾಂತರ ಈವರೆಗೂ ಆಗಿಲ್ಲ. ಅಧಿಕಾರಿಗಳು ಬೆಂಗಳೂರು ಬಿಟ್ಟು ಇಲ್ಲಿಗೆ ಬರುವುದಿಲ್ಲ. ಈ ಭಾಗದ ಬಗ್ಗೆ ಸರ್ಕಾರ ನಿಜಕ್ಕೂ ಕಾಳಜಿ ಹೊಂದಿದ್ದರೆ ಒಂದು ಸಚಿವ ಸಂಪುಟ ಬೆಂಗಳೂರಲ್ಲಿ ನಡೆಸಲಿ, ಮತ್ತೊಂದು ಸಚಿವ ಸಂಪುಟ ಸಭೆ ಬೆಳಗಾವಿಯಲ್ಲಿ ನಡೆಸಲಿ. ಅದು ಬಿಟ್ಟು ಸುಮ್ಮನೇ ಕಾಟಾಚಾರಕ್ಕೆ ಅಧಿವೇಶನ ನಡೆಸುವುದು ಬೇಡ” ಎಂದು ಕಡ್ಡಿಮುರಿದಂತೆ ಹೇಳಿದರು.
“ಇನ್ನು ಸಿದ್ದರಾಮಯ್ಯ ಅವರು ಸಕ್ಕರೆ ಕಾರ್ಖಾನೆಗಳ ಬಗ್ಗೆ ಬಹಳ ಹಗುರವಾಗಿ ಮಾತನಾಡಿದ್ದಾರೆ. ಮೊನ್ನೆ ನಡೆದ ಕಬ್ಬು ಹೋರಾಟಗಾರರ ಹಿಂದೆ ಒಂದು ರಾಜಕೀಯ ಗ್ಯಾಂಗ್ ಇದೆ. ತಾಕತ್ತಿನ ಬಗ್ಗೆ ಮಾತನಾಡುವ ಕೆಲವು ಹೋರಾಟಗಾರರು ತಾವೇ ಸಕ್ಕರೆ ಕಾರ್ಖಾನೆ ನಡೆಸಿ ಈ ದರವನ್ನು ಕೊಡಲಿ. ಮಾಧ್ಯಮಗಳಲ್ಲಿ ಸಕ್ಕರೆ ಕಾರ್ಖಾನೆಗಳ ಸಮಸ್ಯೆಯೇ ಗೊತ್ತಿಲ್ಲದೇ ಬಾಯಿಗೆ ಬಂದಂತೆ ಮಾತನಾಡುತ್ತಾರೆ” ಎಂದು ಆಕ್ರೋಶ ಹೊರಹಾಕಿದರು.
“ಮೆಕ್ಕೆಜೋಳದ ದರ ಕುಸಿತ ಕಂಡಿದೆ. ರಾಜ್ಯ ಸರ್ಕಾರದವರು ಕೇಂದ್ರ ಮೇಲೆ ಆರೋಪ ಮಾಡುತ್ತಾರೆ. ಇಲ್ಲಿ ಎರಡೂ ಸರ್ಕಾರಗಳ ಜವಾಬ್ದಾರಿ ಇದೆ. ಸರಿಯಾದ ಮನವಿ ಮಾಡಿ ಕೇಂದ್ರದಿಂದ ಅನುದಾನ ಪಡೆಯಲಿ. ರೈತರು ಅಮಾಯಕರು. ಅವರ ಕಷ್ಟಪಟ್ಟು ಬೆಳೆದ ಬೆಳೆಯನ್ನು ಹೇಗೆಗೋ ಖರೀದಿಸುವುದು ಸೂಕ್ತವಲ್ಲ” ಎಂದರು.
ಶುಕ್ರವಾರ ಇಲ್ಲವೇ ಸೋಮವಾರ ಸಿಎಂ ಸಿದ್ದರಾಮಯ್ಯ ಅವರು ಉತ್ತರ ಕರ್ನಾಟಕ ಸಮಸ್ಯೆಗಳ ಕುರಿತು ಪ್ರಶ್ನೆಗಳಿಗೆ ಉತ್ತರ ನೀಡಲಿದ್ದಾರೆ.





