ಸಕ್ಕರೆ ಕಾರ್ಖಾನೆ ಮಾಲೀಕರೆಲ್ಲ ಒಟ್ಟಾಗಿ ಮಾಧ್ಯಮಗಳ ಮುಂದೆ ಸತ್ಯ ಹೇಳಿ. ಈ ಸಮಸ್ಯೆ ಸೃಷ್ಟಿ ಆಗಿರುವುದು, ನೀವುಗಳು ಸಮಸ್ಯೆಯಲ್ಲಿ ಇರುವುದು ಕೇಂದ್ರ ಸರ್ಕಾರದ ಕಾರಣದಿಂದ ಎನ್ನುವುದನ್ನು ಬಹಿರಂಗ ಪಡಿಸಿ. ಕೇಂದ್ರಕ್ಕೂ ಪತ್ರ ಬರೆಯಿರಿ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಅವರು ಸಭೆಯಲ್ಲಿ ಗಟ್ಟಿಯಾಗಿ ಆಗ್ರಹಿಸಿದರು.
‘ಪ್ರತಿ ಟನ್ ಕಬ್ಬಿಗೆ ₹3,500 ದರ ನೀಡುವುದು ಅಸಾಧ್ಯ, ರೈತರ ಬೇಡಿಕೆ ತಕ್ಕಂತೆ ಹಣ ಕೊಡುವುದು ನಮಗೆ ಕಷ್ಟ ಆಗುತ್ತದೆ. ರಾಜ್ಯ ಸರ್ಕಾರ ನಮಗೆ ನೆರವು ನೀಡಲಿ’ ಎಂದು ಸಕ್ಕರೆ ಕಾರ್ಖಾನೆ ಮಾಲೀಕರು ಒಕ್ಕೊರಲಿನಿಂದ ಹೇಳಿದಾಗ ಸಚಿವ ಶಿವಾನಂದ ಪಾಟೀಲ್ ಅವರು ಮೇಲಿನಂತೆ ಉತ್ತರಿಸಿದರು.
“ಸಕ್ಕರೆ ಕಾರ್ಖಾನೆಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸಮಾಲೋಚನೆ ನಡೆಸಿ ಪರಿಹಾರ ಒದಗಿಸಲು ರಾಜ್ಯ ಸರ್ಕಾರ ಸಿದ್ದವಿದೆ. ಪ್ರಸ್ತುತ ಕಬ್ಬು ಬೆಳೆಗಾರರು ಬೀದಿಗಿಳಿದಿದ್ದಾರೆ. ಬೆಳಗಾವಿ ಜಿಲ್ಲಾಧಿಕಾರಿ 3200 ರೂ. ನಿಗದಿಪಡಿಸಿದ್ದು, (ಕಟಾವು ಮತ್ತು ಸಾಗಾಟ ಹೊರತುಪಡಿಸಿ) ಇದಕ್ಕೆ ಕಾರ್ಖಾನೆಗಳು ಒಪ್ಪಿಕೊಂಡರೆ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬಹುದಾಗಿದೆ. ಆಯಾ ಪ್ರದೇಶದ ಇಳುವರಿ ರಿಕವರಿ ಪ್ರಮಾಣದ ಆಧಾರದಲ್ಲಿ ದರವನ್ನು ಹೆಚ್ಚಳ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಿ” ಎಂದು ಸಿಎಂ ಸಿದ್ದರಾಮಯ್ಯ ಸೂಚಿಸಿದರು.
“ಸಹಕಾರಿ ರಂಗದ ಇಐಡಿ ಪ್ಯಾರಿ ಶುಗರ್ ಕಾರ್ಖಾನೆಯವರು ಕಬ್ಬು ಬೆಳೆಗಾರರಿಗೆ ಪ್ರಸ್ತುತ ರೂ.3211ಪಾವತಿಸುತ್ತಿದೆ. ಇದೇ ಮಾದರಿಯಲ್ಲಿ ಉಳಿದ ಕಾರ್ಖಾನೆಗಳಿಗೆ ಯಾಕೆ ಪಾವತಿ ಸಾಧ್ಯವಿಲ್ಲ? ಸಕ್ಕರೆ ಕಾರ್ಖಾನೆಗಳ ಸಮಸ್ಯೆಗಳನ್ನು ಆಲಿಸಲು ಸರ್ಕಾರ ಬದ್ಧವಾಗಿದೆ. ಈ ಹಿನ್ನೆಲೆಯಲ್ಲಿಯೇ, ಸಕ್ಕರೆ ಎಂಎಸ್ಪಿ ರೂ.41ಕ್ಕೆ ನಿಗದಿಪಡಿಸಲು ಕೋರಿ ಪ್ರಧಾನಿಯವರಿಗೆ ಈಗಾಗಲೇ ಪತ್ರ ಬರೆಯಲಾಗಿದ್ದು, ಅವರು ಸಮಯ ನೀಡಿದರೆ ನಾಳೆಯೇ ನಿಯೋಗ ಕರೆದುಕೊಂಡು ಹೋಗಲು ಸಿದ್ದರಿದ್ದೇವೆ” ಎಂದು ಸಿಎಂ ಹೇಳಿದರು.
“ಅವಧಿಗಿಂತ ಮೊದಲು ಕಬ್ಬು ಕಟಾವು ಮಾಡದಿರುವುದು ಸೇರಿದಂತೆ ಕಬ್ಬಿನ ಇಳವರಿ ರಿಕವರಿ ಹೆಚ್ಚಳ ಮಾಡಲು ಕ್ರಮ ಕೈಗೊಳ್ಳುವ ಕುರಿತು ರೈತರಿಗೆ ಜಾಗೃತಿ ಮೂಡಿಸುವುದು ಸಕ್ಕರೆ ಕಾರ್ಖಾನೆಗಳ ಜವಾಬ್ದಾರಿಯಾಗಿದೆ. ಮಹಾರಾಷ್ಟ್ರದ ಮುಖ್ಯಮಂತ್ರಿ ಫಡ್ನವೀಸ್ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು, “MSP ದರ ಹೆಚ್ಚಿಸುವಂತೆ ಒತ್ತಾಯಿಸಿದ” ಪತ್ರ ಪ್ರದರ್ಶಿಸಿದ ಮುಖ್ಯಮಂತ್ರಿಗಳು, ಈ ಪತ್ರದಂತೆ ಪ್ರಧಾನಿಯವರು MSP ಹೆಚ್ಚಿಸಲು ಒತ್ತಾಯಿಸೋಣ” ಎಂದರು.





